ಹುರುಳಿಯಿಂದ ಏನೇನು ಲಾಭ? ನಷ್ಟ?

  • ಡಾ.ಎ.ಜಿ.ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

ಕೆಲವರಿಗೆ ಹುರುಳಿ ಸಾರು, ಹುರುಳಿ ಹಾಕಿದ ಪಲ್ಯ ಎಂದರೆ ಬಹು ಇಷ್ಟವಾದ ಪದಾರ್ಥ. ಶರೀರದ ಆರೋಗ್ಯಕ್ಕೆ ಸಂಬಂಧಿಸಿದಂತೆ ಹುರುಳಿಯು ಉತ್ತಮ  ಫಲದಾಯಕವಾಗಿದ್ದು ಕೆಲವೊಂದು ಸಂದರ್ಭಗಳಲ್ಲಿ ಅಡ್ಡ ಪರಿಣಾಮವನ್ನು ಸಹ ನೀಡುತ್ತದೆ.

  1. ಹುರುಳಿಯನ್ನು ಹುಡಿಮಾಡಿ ಮೈಗೆ ಉಜ್ಜುವುದರಿಮದ ದೇಹದಲ್ಲಿ ಬೆವರಿನ ಪ್ರವೃತ್ತಿ ಹೆಚ್ಚಾಗುತ್ತದೆ. ಇದರಿಂದ ದೇಹದಲ್ಲಿರುವ ಅಧಿಕವಾದ ಕೊಬ್ಬು ಕರಗುತ್ತದೆ.
  2. ಊತ ಇರುವ ಜಾಗಕ್ಕೆ ಹುರುಳಿಯನ್ನು ಬಿಸಿಮಾಡಿ ಶೇಕ ಕೊಟ್ಟರೆ ಊತ ಹಾಗು ನೋವು ಕಡಿಮೆಯಾಗುತ್ತದೆ.
  3. ಹುರುಳಿಯನ್ನು ಉರಿಸಿ, ಮಸಿಮಾಡಿ ಕೊಬ್ಬರಿ ಎಣ್ಣೆಯಲ್ಲಿ ಕಲಸಿ ಕಣ್ಣಿನ ರೆಪ್ಪೆಗೆ ಕಾಡಿಗೆಯಂತೆ ಹಚ್ಚಿದರೆ,ಕಣ್ಣಿನ ಕುರ ಮುಂತಾದ  ಹಲವಾರು  ಸಮಸ್ಯೆಗಳು ಕಡಿಮೆಯಾಗುತ್ತದೆ.
  4. ಹುರುಳಿಯ ಕಷಾಯ ಕುಡಿಯುವುದರಿಂದ ಹೊಟ್ಟೆಯಲ್ಲಿನ ವಾಯುಸಂಚಾರ(ಗುಡು ಗುಡು ಶಬ್ದ ), ನೋವು, ಕ್ರಿಮಿಬಾಧೆ ಕಡಿಮೆಯಾಗುತ್ತದೆ.
  5. ಬಿಕ್ಕಳಿಕೆ ಇದ್ದಾಗ ಹುರುಳಿ ಬೀಜವನ್ನು ಬೆಂಕಿಯಲ್ಲಿ ಸುಟ್ಟು ,ಅದರ ಹೊಗೆಯನ್ನು ಬಾಯಿಯಲ್ಲಿ ಎಳೆದುಕೊಳ್ಳಬೇಕು.
  6. ಶೀತ, ಕಪಪೂರಿತ ಕೆಮ್ಮು ಹಾಗು ದಮ್ಮು ರೋಗಗಳಲ್ಲಿ ಹುರುಳಿ ಕಷಾಯಕ್ಕೆ ಸ್ವಲ್ಪ ಬೆಲ್ಲ ಹಾಕಿ ಕುಡಿಯಬೇಕು.
  7. ಹೆರಿಗೆಯ ನಂತರ ಗರ್ಭಕೋಶದ ಶುದ್ಧಿಗಾಗಿ ಹುರುಳಿ ಕಷಾಯವನ್ನು ಕುಡಿಯಬೇಕು.
  8. ಮುಟ್ಟಿನ ಸಮಯದಲ್ಲಿ ಸರಿಯಾಗಿ ರಕ್ತಸ್ರಾವ ಆಗದಿದ್ದರೆ ಹುರುಳಿಕಷಾಯವು ಉತ್ತಮ ಫಲಿತಾಂಶವನ್ನು ನೀಡುತ್ತದೆ.
  9. ಹುರುಳಿಗೆ ಮೂತ್ರಕೋಶದ ಕಲ್ಲನ್ನು ಒಡೆಯುವ ಸಾಮಥ್ಯವಿದೆ.ಈ ಸಂದರ್ಭದಲ್ಲಿ ಹುರುಳಿಯನ್ನು ಜಜ್ಜಿ ನೀರಿನಲ್ಲಿ ನೆನೆಹಾಕಿ ನಂತರ ಆ ನೀರನ್ನು ಕುಡಿಯಬೇಕು. ಇದರಿಂದ ಮೂತ್ರದ ಕಲ್ಲು ನಿವಾರಣೆಯಾಗುತ್ತದೆ ಮತ್ತು ಮೂತ್ರ ಪ್ರವೃತ್ತಿ ಸರಿಯಾಗಿ ಆಗುತ್ತದೆ.
  10. ಇದು ಶರೀರದಲ್ಲಿನ ಅಧಿಕವಾದ ಕೊಬ್ಬನ್ನು ಕರಗಿಸುತ್ತದೆ.
  11. ಮಧುಮೇಹದಿಂದ ಬಳಲುತ್ತಿರುವವರು ಹುರುಳಿಯನ್ನು ಸೇವಿಸುವುದರಿಂದ ವ್ಯಾಧಿಯು ಹತೋಟಿಗೆ ಬರಲು ಸಹಕರಿಸುತ್ತದೆ.
  12. ಜ್ವರದ ಸಂದರ್ಭದಲ್ಲಿ ಹುರುಳಿ ಸೇವನೆಯಿಂದ ಶರೀರದ ತಾಪ ಕೆದಿಮೆಯಾಗಿ, ಚೆನ್ನಾಗಿ ಬೆವರುವುದರ ಮೂಲಕ ಜ್ವರ ಕಡಿಮೆಯಾಗುತ್ತದೆ.

ಜಾಗ್ರತೆ :

  • ಅತಿಯಾಗಿ ಹುರುಳಿಯನ್ನು ಸೇವಿಸುವುದರಿಂದ ಶರೀರದಲ್ಲಿ ಪಿತ್ತದ ಅಂಶ ಅಧಿಕವಾಗಿ ಎದೆ ಉರಿ, ಹುಳಿ ತೇಗು, ವಾಕರಿಕೆ ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.

 

Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.