ಮೇ 27ರಿಂದ ಜೂನ್ 2, ಜೂನ್ 3ರಿಂದ ಜೂನ್ 9, ಜೂನ್ 10ರಿಂದ ಜೂನ್ 16, ಜೂನ್ 17ರಿಂದ ಜೂನ್ 23, ಜೂನ್ 23ರಿಂದ ಜೂನ್ 29. ಇದು ಬಂಟ್ವಾಳ ತಾಲೂಕಿನಾದ್ಯಂತ ಕಳೆದೊಂದು ತಿಂಗಳು ಸೆ.144ರನ್ವಯ ನಿಷೇಧಾಜ್ಞೆ ವಿಸ್ತರಿಸಿಕೊಂಡ ಪರಿ.
ಈ ಮಧ್ಯೆ ಹಲ್ಲೆ, ಕಲ್ಲೆಸೆತ, ಕೊಲೆ, ದೂರು, ಆರೋಪ, ಪ್ರತ್ಯಾರೋಪ, ದ್ವೇಷ, ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಅಪನಂಬಿಕೆ ಸೃಷ್ಟಿಸುವ ಬೇನಾಮಿ ವಿಚಾರಗಳು ಕಂಡುಬಂದವು. ಒಟ್ಟಾಗಿರಿ, ಸಾಮರಸ್ಯ ಕಾಪಾಡಿ ಎಂಬವರು ಅಪ್ರಸ್ತುತ ಎಂಬಂತಾಯಿತು. ಪರಿಣಾಮ ಗೊತ್ತೇ ಇದೆ. ಒಂದು ತಿಂಗಳಿಂದ ಇಡೀ ಬಂಟ್ವಾಳ ತಾಲೂಕಿನ ವಾಣಿಜ್ಯ ವ್ಯವಹಾರ ಕುಂದಿದೆ. ಜನಸಾಮಾನ್ಯರು ನೋವು ಅನುಭವಿಸುತ್ತಿದ್ದಾರೆ. ಸಂತೋಷ ಅನುಭವಿಸುವವರು ಗಲಭೆ ಸೃಷ್ಟಿಕರ್ತರು ಮತ್ತು ಸಾಮಾಜಿಕ ಜಾಲತಾಣ ದುರ್ಬಳಕೆ ಮಾಡುವವರಷ್ಟೇ ಎಂಬುದು ಜನರಿಗೂ ನಿಧಾನವಾಗಿ ಅರ್ಥವಾಗತೊಡಗಿದೆ. ನಿಷೇಧಾಜ್ಞೆಯ ಬಂಧವನ್ನು ಬಿಡಿಸಬೇಕಾದರೆ ಪರಸ್ಪರ ನಂಬಿಕೆ, ವಿಶ್ವಾಸ ಅಗತ್ಯವಿದೆ. ಎಲ್ಲರೂ ಅದಕ್ಕೆ ಸಿದ್ಧರಾದರೆ, ಬೆರಳೆಣಿಕೆಯಷ್ಟಿರುವ ಮಂದಿಯೂ ಪರಿವರ್ತನೆ ಹೊಂದಬಹುದು.
ರಸ್ತೆ ಸರಿ ಇಲ್ಲದಿದ್ದರೆ, ಕುಡಿಯುವ ನೀರಿಗೆ ತೊಂದರೆ ಆದರೆ, ಯಾರಿಗಾದರೂ ರಕ್ತ ಬೇಕಾದರೆ, ಯಾರಾದರೂ ಸಮಸ್ಯೆಯಿಂದ ಬಳಲುತ್ತಿದ್ದರೆ ನಮ್ಮ ಸಂದೇಶ ಹರಡಲಿ, ಅವರ ಕಷ್ಟಗಳಿಗೆ ಸ್ಪಂದಿಸುವ ಬೆಳಕಾಗೋಣ, ಪ್ರಚೋದನಕಾರಿ ಸಂದೇಶಗಳ ರವಾನೆಗಳಿಗಿಂತ ಅದು ಒಳ್ಳೆಯದಲ್ವೇ.