ಪ.ಗೋ. ಅಂಕಣ

ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 8: ನಾನೂ ಒಂದು ‘ಸಾಕ್ಷಿಯ ಭೂತ’ವಾಗಿದ್ದೆ

ಎಷ್ಟೇ ದುರ್ಬಲವಾದ ಪತ್ರಿಕೆಯಾದರೂ “ವಿಶೇಷ” ಸುದ್ದಿಗಳನ್ನು ಸೃಷ್ಟಿಸುವ ಶಕ್ತಿಯನ್ನು ಉಳಿಸಿಕೊಂಡಿರುತ್ತದೆ.“ಸೃಷ್ಟಿಸಿದ” ಸುದ್ದಿಯೂ ಓದುಗರ ಮೇಲೆ ಪ್ರಭಾವ ಬೀರುವುದರಿಂದ ಸೃಷ್ಟಿಯ ಉದ್ದೇಶವನ್ನು ಪತ್ರಿಕೆ ಸಾಧಿಸಿಕೊಳ್ಳುತ್ತದೆ.
ಸುದ್ದಿಯ ಪ್ರಭಾವ-ಫಲಿತಾಂಶದ ಮೂಲಕ ತನ್ನ “ಹಿಡಿತ”ವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತದೆ.

 

ಸಾಹಿತಿ,ರಾಜಕಾರಿಣಿ,ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಶ್ರೀ. ಎಂ.ವೀರಪ್ಪ ಮೊಯ್ಲಿಯವರ ಜೊತೆ ಸಂವಾದದಲ್ಲಿ ಉದಯವಾಣಿ ವರದಿಗಾರರಾದ ಶ್ರೀ. ಎ. ವಿ. ಮಯ್ಯ, ಸಂಯುಕ್ತ ಕರ್ನಾಟಕ ಮಂಗಳೂರು ಪ್ರತಿನಿಧಿ ಶ್ರೀ. ಪ.ಗೋಪಾಲಕೃಷ್ಣ, ಹೊಸದಿಗಂತ ಪತ್ರಿಕೆಯ ಶ್ರೀ. ಪಲಿಮಾರು ವಸಂತ ನಾಯಕ್ ಮತ್ತು ನವಭಾರತ ಪತ್ರಿಕೆಯ ಶ್ರೀ. ಮಂಜುನಾಥ ಭಟ್.

ವಿಶ್ವಕರ್ನಾಟಕದ ಶಕ್ತಿ-ಪ್ರಭಾವ-ಪ್ರಯತ್ನಗಳ ದರ್ಶನ ಮೊದಲನೆ ( ಮತ್ತು ಕೊನೆಯ ಎಂದೂ ಹೇಳಬಹುದು) ಬಾರಿಗೆ ನನಗಾದ ಸಂದರ್ಭ, ಸ್ವಾರಸ್ಯವಾಗಿತ್ತು.
ಪತ್ರಿಕೆಗಳಿಗೂ ರಾಜಕೀಯಕ್ಕೂ ಇರುವ ಪ್ರೇ“ದ್ವೇಷ ಸಂಬಂಧ” ಹಿನ್ನೆಲೆಯನ್ನು ಅರಿತುಕೊಳ್ಳಲು ಆ ಸಂದರ್ಭವೊಂದು ಒಳ್ಳೆಯ ಅವಕಾಶ ಒದಗಿಸಿತ್ತು.
ಆಗಿನ ಸಮಯ: ರಾಜ್ಯ ಪುನರ್ಘಟನೆಯ ನಂತರ, “ವಿಶಾಲ ಮೈಸೂರು ರಾಜ್ಯವು” ಅಸ್ತಿತ್ವಕ್ಕೆ ಬಂದಿದ್ದ ಕಾಲ.
ಹಳೆ ಮೈಸೂರಿನ ಪ್ರಸಿದ್ಧ ರಾಜಕಾರಣಿ ಮತ್ತು 2 ಕೋಟಿ ರೂ.ದಳ “ದುಂದು”ವೆಚ್ಚದ ವಿಧಾನಸೌಧವನ್ನು ನಿರ್ಮಿಸಿದ ಖ್ಯಾತಿಯ ಕೆಂಗಲ್ ಹನುಮಂತಯ್ಯನವರನ್ನು ಒತ್ತಡ ಬೀರಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಮೂರೇ ಮೂರು ತಿಂಗಳಾದರೂ “ಹೊಸ ಮೈಸೂರಿನ ಮುಖ್ಯಮಂತ್ರಿ” ಎನ್ನಿಸಿಕೊಂಡು ಸೌಧದ ಶೀಗಂಧದ್ವಾರದ ಮೂಲಕ ಸಿ.ಎಂ. ಚೇಂಬರಿನೊಳಗೆ ಪ್ರವೇಶಿಸಬೇಕು” ಎಂಬ ಆಸೆಗೆ ಕಲ್ಲುಚಪ್ಪಡಿ ಎಳೆಯಲಾಗಿತ್ತು.
ನಾಲ್ಕು ಬೇರೆ ಬೇರೆ ರಾಜ್ಯಗಳಿಂದ ಬಂದು ಬೆಂಗಳೂರು ಸೇರಿದ್ದ ಶಾಸಕ ಪ್ರತಿನಿಧಿಗಳು, ಹಳೆ ಮೈಸೂರಿನ ಪ್ರತಿನಿಧಿಗಳೊಂದಿಗೆ ಆಡಳಿತದ ಸೂತ್ರ ಹಿಡಿವ ಸ್ಫರ್ಧೆಗೆ ಸಿದ್ಧವಾಗುತ್ತಿದ್ದರು.
ಒಕ್ಕಲಿಗ- ಲಿಂಗಾಯತರ ವಾದಬೀಜದ ಮೊಳಕೆಯೂ ಒಡೆಯುತ್ತಾ ಇತ್ತು.
ಅಂಥ ಸನ್ನಿವೇಶದಲ್ಲಿ “ಎತ್ತಿನ ಬಾಲವನ್ನು ಮೊದಲು ಹಿಡಿಯಬೇಕು. ಅನಂತರ ಅದನ್ನು ಗೆಲ್ಲಿಸಬೇಕು. ಆ ಮೇಲೆ ಅದರದೇ ಮೇವಿನ ಪಾತ್ರೆಯಲ್ಲಿ ನಮ್ಮ ಬೇಳೆ ಬೇಯಿಸಬೇಕು” -“ಪ್ಲಾನ್” ವಿಶ್ವಕರ್ನಾಟಕದಲ್ಲಿ ಸಿದ್ಧವಾಯಿತು.
ಯೋಜನೆ ರೂಪುಗೊಂಡುದೇ ., ಅದರ ಸುಳಿವನ್ನು ಪಡೆದಿದ್ದ ನನ್ನ ವೃತ್ತಿಮಿತ್ರ- ಬಹುಶಃ ತಮಾಶೆಗೇ ಇರಬೇಕು- ಆ ಸುದ್ಧಿಯನ್ನು ನನಗೆ ದಾಟಿಸಿದ್ದ.
ಆ ದಿನದಿಂದಲೇ ಕಚೇರಿ ವರಿಷ್ಠರ ಮಾತುಕತೆಯಲ್ಲಿ ಏರುಧ್ವನಿ ಇಳಿದ ಕೂಡಲೆ ನನ್ನ ಕಿವಿ ನೆಟ್ಟಗಾಗುತ್ತಿತ್ತು.
ಒಂದೆರಡು ದಿನ, ಅಷ್ಟೆ. ಯೋಜನೆ ಜಾರಿಗೆ ಬಂತು. ಕಿವಿಯ ಕೆಲಸ ತನ್ನಿಂತಾನೇ ನಿಂತುಹೋಯಿತು. ಮತ್ತೆ ದಿನಕ್ಕೊಂದರಂತೆ-
ರಾಜ್ಯದ ವಿವಿಧ ನಗರಗಳಿಂದ ‘ಕಳುಹಿಸಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ‘ವಿಶೇಷ ಪ್ರತಿನಿಧಿಗಳ ವರದಿಗಳು ಯೋಜನೆಯ ರೂಪಚಿತ್ರಣವನ್ನೂ ಸ್ಪಷ್ಟವಾಗಿ ಒದಗಿಸಿದವು.
ಒಂದು ದಿನ ಮಡಿಕೇರಿಯಿಂದ, ಮತ್ತೊಂದು ದಿನ ಹುಬ್ಬಳ್ಳಿಯಿಂದ, ಮೂರನೆ ದಿನ ಬಳ್ಳಾರಿಯಿಂದ, ನಾಲ್ಕನೆ ದಿನ ಮಂಗಳೂರಿನಿಂದ ‘ವಿಶೇಷ ಪ್ರತಿನಿಧಿಗಳು ವರದಿಗಳನ್ನು ಕಳುಹಿಸುತ್ತಿದ್ದರು. ಅವೆಲ್ಲವೂ ಮುಖಪುಟದಲ್ಲೇ ಗಮನ ಸೆಳೆದ ವಿನ್ಯಾಸಗಳಲ್ಲಿ ಪ್ರಕಟವಾಗುತ್ತಿದ್ದವು.
ಆ ಊರುಗಳಿಗೆ ಕಳುಹಿಸಿಕೊಡಲು, ಪ್ರತಿನಿಧಿಗಳಂತೂ ವಿಶ್ವಕರ್ನಾಟಕದಲ್ಲಿ ಇರಲಿಲ್ಲ. ವಿಶೇಷವಾಗಿ ಯಾರನ್ನೇ ಆದರೂ,“ಒಂದು ಅವಕಾಶಕ್ಕಾದರೂ” ನೇಮಿಸಿಕೊಳ್ಳುವ ಚೈತನ್ಯ ಅದಕ್ಕಿರಲಿಲ್ಲ. ಆದ್ದರಿಂದ, ಪ್ರತಿನಿಧಿಗಳ ಮತ್ತು ಅವರ ವರದಿಗಳ ಸೃಷ್ಟಿಕರ್ತಬ್ರಹ್ಮ ಕಚೇರಿ ಕುರ್ಚಿಯ ಪದ್ಮಾಸನಾಸೀನ ಎಂದು ಬೇರೆ ಹೇಳಬೇಕಾಗಿಯೂ ಇಲ್ಲ.
ಪ್ರತಿದಿನದ ವರದಿಯಲ್ಲೂ ಎದ್ದು ಕಾಣುತ್ತಿದ್ದ ಭಾಷೆ, ಶೈಲಿ,ವಿಷಯ ವಿಸ್ತಾರಗಳ ಪ್ರಾದೇಶಿಕ ಭಿನ್ನತೆ-ಬೆರಗು ಹುಟ್ಟಿಸುವಷ್ಟು ವಿಶೇಷವಾಗಿರುತ್ತಿತ್ತು. ಆದರೆ, ಒಳಹೂರಣವು ಪ್ರತಿಪಾದಿಸುತ್ತಿದ್ದ ವಿಷಯ ಒಂದೇ ಆಗಿರುತ್ತಿತ್ತು.
ದಿನದಿನವೂ, ವಿಭಿನ್ನ ರೀತಿಯ ಪ್ರಕಟಣೆಗಳಲ್ಲಿ ಕಂಡುಬರುತ್ತಿದ್ದುದು-
ಶಾಸಕರ ಅನುಯಾಯಿಗಳು, ಶಾಸಕಾಂಗ ಪಕ್ಷದ ತೆರೆಮರೆಯ ಧುರೀಣರು, ಹಿಂದೆ ಅಧಿಕಾರದಲ್ಲಿದ್ದ ಕಾರಣ (ಮುಂದೆಯೂ ಅದು ಸಿಗಬೇಕೆಂದು) ಮೆರೆಯುತ್ತಿದ್ದವರು, ಇತರ ಗಣ್ಯರಂಥವರು ಹಲವರ ಸಂದರ್ಶನಗಳು- ಅಭಿಪ್ರಾಯ ಸಂಗ್ರಹಗಳು. ಎಲ್ಲರನ್ನೂ ಹೆಸರಿಸಿ, ಪ್ರಶ್ನೆ ಕೇಳಿ, ಪಡೆದ ಉತ್ತರಗಳು. ಹಲವು ಕಡೆ ಅವರವರ ಆಡುಮಾತಿನದೇ ಶಬ್ದಪ್ರಯೋಗ.
ಮಡಿಕೇರಿಯ ವರದಿಯಲ್ಲಿ ‘ಕೊಡಗುದೇಶದ ಧೀರಶೈಲಿಯ ಬಳಕೆ. ಹುಬ್ಬಳ್ಳಿಯದರಲ್ಲಿ ‘ಬಾಂಬೇ ಏರಿಯಾದ ಗಡಸು ಭಾಷೆ. ಮಂಗಳೂರು- ಬಳ್ಳಾರಿಗಳ ವರದಿಗಳಲ್ಲೂ ಅಲ್ಲಲ್ಲಿನ ಪ್ರಾದೇಶಿಕ ವೈಶಿಷ್ಟ್ಯಗಳು. ಪ್ರತಿಯೊಂದೆಡೆಯೂ ವಿವರಗಳ ಅಪಾರ ಸಂಗ್ರಹ.
ಎಲ್ಲದರಲ್ಲೂ ತಲೆತೂರುತ್ತಿದ್ದ ಮೂಲಪ್ರಶ್ನೆ ಒಂದೇ ಒಂದು:
“ಮೈಸೂರಿನ ಮುಖ್ಯಮಂತ್ರಿಯಾಗಲು ಯಾರು ಅರ್ಹರು?”
ಉತ್ತರಗಳಲ್ಲಿ ಹಲವಾರು ಸ್ಥಳೀಯ- ಆದರೂ ರಾಜ್ಯಮಟ್ಟದ ಅರ್ಹತೆ ಇರುವ ಪ್ರಮುಖರ ವ್ಯಕ್ತಿತ್ವ ವಿಶ್ಲೇಷಣೆ ಪ್ರಾಸಂಗಿಕವಾಗಿ ಇರುತ್ತಿತ್ತು. ಆದರೆ, ವಿಶ್ಲೇಷಣಾವರದಿಯು ಕೊನೆಯ (ಕ್ಲೈಮ್ಯಾಕ್ಸ್ ಎನ್ನಬೇಕಾದರೆ) ಹಂತಕ್ಕೆ ಬರುವ ಹೊತ್ತಿಗೆ ಮಾತ್ರ-
“ವಿಭಿನ್ನ ಮನೋಭಾವದ ನಾಯಕರನ್ನು ಒಟ್ಟುಗೂಡಿಸಿ, ಹೊಂದಾಣಿಕೆಯಿಂದ ಆಡಳಿತ ನಡೆಸಲು ಸಮರ್ಥರಾದವರೇ ಮುಖ್ಯಮಂತ್ರಿಯಾಗಬೇಕು ” ಎಂಬ ಅಭಿಪ್ರಾಯ ಮೂಡಿಬಂತು ಭರತವಾಕ್ಯವೂ – ದಿನಕ್ಕೊಂದು ರೂಪ ತಳೆದು- ನುಸುಳಿ ಬರುತ್ತಿತ್ತು.
ಕೊನೆಯ ದಿನಗಳವರೆಗೂ, ‘ಸಮರ್ಥ ವ್ಯಕ್ತಿಯ ಹೆಸರನ್ನೇ ಹೇಳದೆ, ವ್ಯಕ್ತಿತ್ವ ಮಾತ್ರವನ್ನಷ್ಟೇ ರೂಪಿಸಿ, ಬೆಳೆಸುತ್ತಿದ್ದ ಕುತೂಹಲವನ್ನು, ಆಯ್ಕೆಗೆ ಎರಡೇ ದಿನಗಳಿರುವಾಗ
“- ಕರ್ನಾಟಕದ ಹೃದಯಭಾಗದಲ್ಲಿ ಹುಟ್ಟಿ ಬೆಳೆದು, ಏಕೀಕೃತ ಕರ್ನಾಟಕಕ್ಕಾಗಿ ಎಳವೆಯಿಂದಲೂ ದುಡಿದ ಅಜಾತಶತ್ರು ಅಪ್ಪಟ ಗಾಂಧೀವಾದಿ. (ಇತ್ಯಾದಿ ಹಲವು ವಿಷೇಷಣಗಳನ್ನು ಒಳಗೊಂಡ) ಮುತ್ಸದ್ಧಿ ರಾಜಕಾರಣಿ. ‘ಸಿದ್ಧವನಹಳ್ಳಿ ನಿಜಲಿಂಗಪ್ಪನವರೇ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗುವ ಪ್ರಬಲ ಸಾಧ್ಯತೆ ಇರುವುದಾಗಿ ಖಚಿತವಾಗಿ ತಿಳಿದುಬಂದಿದೆ” ಎಂದು ತನ್ನ  ‘ವಿಶೇಷ ಸೃಷ್ಟಿ ಅಭಿಯಾನದ ಕೊನೆಯ ದಿನ ವಿಶ್ವಕರ್ನಾಟಕವು ಸಾರಿ, ಮುಗಿಸಿತು.
ಅಂದಿನ ದಿನಗಳಲ್ಲಿ ‘ಡೆಡ್ ಲೈನ್ ಒತ್ತಡದಿಂದ ಅಯಾಚಿತವಾಗಿ ದೊರೆತಿದ್ದ ಬಿಡುವು ನನಗಂತೂ ವಿರಾಮ ಒದಗಿಸಿತ್ತು. ಪ್ರತಿದಿನವೂ ಹೆಚ್ಚಾಗಿ ಮುದ್ರಿಸುತ್ತಿದ್ದ 250 ಪ್ರತಿಗಳನ್ನು ನಗರದಲ್ಲಿ ಹರಡಿದ್ದ ಶಾಸಕರ ವಸತಿಗಳಿಗೆ ಮುಫತ್ತಾಗಿ ಮುಟ್ಟಿಸುವ ವ್ಯವಸ್ಥೆಯಲ್ಲಿ ಪ್ರಸಾರಣಾಧಿಕಾರಿ ಬಸವರಾಜ್ ಒದ್ದಾಡುತ್ತಿರುವುದನ್ನು ನೋಡುತ್ತಾ ಕಾಲಕಳೆಯಲು ಸಾಧ್ಯವಾಗಿತ್ತು.
ವಿಶ್ವಕರ್ನಾಟಕದ ವಿಶೇಷ ಸೃಷ್ಟಿಯ ಬಗ್ಗೆ ಬೆಂಗಳೂರಿನ ಇತರ ಯಾವ ಶಕ್ತಿಶಾಲಿ ಪತ್ರಿಕೆಯೂ ಆಸಕ್ತಿ ತೋರಿಸಿದಂತಿರಲಿಲ್ಲ. ಮುಖ್ಯಮಂತ್ರಿಯ ಆಯ್ಕೆಯೂ ಒಂದು ಸಾಮಾನ್ಯ ವಿಚಾರ ಎಂಬ ಹಾಗೆ ವರದಿ-ವಿಶ್ಲೇಷಣೆಗಳನ್ನು ಪ್ರಕಟಿಸುತ್ತಿದ್ದವು. ಅದಕ್ಕೆ ಅವುಗಳದೇ ಆದ ವಿಶಿಷ್ಟ ಹಿತಾಸಕ್ತಿಗಳೇ ಬಹುಶಃ ಕಾರಣವಾಗಿರಬೇಕು.
ಆದರೆ, ವಿಶ್ವಕರ್ನಾಟಕದ ಕಾರ್ಯವೈಖರಿಯಂತೂ ಹಲವಾರು ಪತ್ರಿಕೋದ್ಯಮಿಗಳ ವಿರಾಮಧಾಮಗಳಲ್ಲಿ ತೀವ್ರ ಚರ್ಚೆಗೆ ಒಳಗಾಗಿತ್ತು; ಹತ್ತಾರು ಬಗೆಯ ವ್ಯಂಗ್ಯನುಡಿಗಳಿಗೂ ಗ್ರಾಸವಾಗಿತ್ತು ಎಂಬ ವಿವರವನ್ನು ನೋಡಿ- ಕೇಳಿ ಸಂಗ್ರಹಿಸಿ (ಅಂದೇ) ತಿಳಿದುಕೊಂಡಿದ್ದೇವೆ.
ಕೊನೆಗೂ-
ಎಸ್. ನಿಜಲಿಂಗಪ್ಪನವರ ‘ಅವಿರೋಧ ಆಯ್ಕೆ ವಿಧಾನಸೌಧದಿಂದ ಕೂಗಳತೆಯಲ್ಲಿರುವ ರೆಸಿಡೆನ್ಸಿ ಭವನದಲ್ಲಿ ನಡೆಯಿತು. ಅವರ ಕತ್ತಿಗೇಹಾರ ಹಾಕಿ ಕೃತಾರ್ಥರಾದವರ ನೂಕುನುಗ್ಗಲೂ ಅಂದು ಸಾಕಷ್ಟು ಇದ್ದಿತು.
ಹೂಮಾಲೆಗಳ ಹೊರೆಯನ್ನು ಅವರ ಕೆಳಗಿಸಿದ ಮೇಲೆ ಏನಾಗಬೇಕಿತ್ತೋ ‘ಅದು ಕೆಲವರ ಮಟ್ಟಿಗಂತೂ ಆಯಿತು. ಅತಿನಿರೀಕ್ಷೆ ಇರಿಸಿಕೊಂಡಿದ್ದ (ವಿಶ್ವಕರ್ನಾಟಕದ ಅಧಿಪತಿಯಂಥ) ಇತರ ಹಲವರ ಮಟ್ಟಿಗೆ -ಆಗಲಿಲ್ಲ.
ನಿರೀಕ್ಷೆ ದಕ್ಕದೆ ಹೋದ ಮೇಲೆ-
“ವಿಶ್ವಕರ್ನಾಟಕ ಪತ್ರಿಕೆಯ ಮಾಲಿಕವರ್ಗವನ್ನು ಮೊದಲು ಪ್ರಚೋದಿಸಿ, ಅನಂತರ ಕಿಂಚಿತ್ ಮುಂಗಡವನ್ನೂ ನೆಕ್ಕಿಸಿದ ಲೀಡರ್ ಮಹಾಶಯನ ಹೊಳೆ ದಾಟಿದ ಮೇಲೆ ಅಂಬಿಗನು ಮಿಂಡ ಪ್ರವೃತ್ತಿ”ಯ ಬಗ್ಗೆ ಪುಂಖಾನುಪುಂಖವಾಗಿ –
ಮೆಜೆಸ್ಟಿಕ್ ವೃತ್ತದ ಹೋಟೆಲ್ ಅನ್ವರಿಯ ಮಾಳಿಗೆಯಲ್ಲಿ, ಒಂದು ‘ವಾರ್ಮ್ ಯು.ಬಿ.’ ಬಾಟಲ್ ಎದುರಿಗಿಟ್ಟು, ಆಪಾದನೆ ಬೈಗಳುಗಳು ಹೊರಬಂದಾಗ, ನಾನೂ ಒಂದು ‘ಸಾಕ್ಷಿಯ ಭೂತವಾಗಿದ್ದೆ.
‘ಲೀಡರ್ (ಈಗ ಕೆಲವು ವರ್ಷಗಳಿಂದ ‘ಫುಡಾರಿ ಎನ್ನುತ್ತಾರೆ) ಮಹಾಶಯನ ಹೆಸರು ವಾಚ್ಯವಾಗಿ ಹೊರಬಂದ ಹೊತ್ತಿನವರೆಗೂ-
ದೊಡ್ಡದೊಂದು ಹಣದ ಗಂಟಿನ ‘ಬಲಿಯ ನಿರೀಕ್ಷೆಯಲ್ಲಿ ಹಲವಾರು ದಿನಗಳ ಕಾಲ ಅಟ್ಟಹಾಸದಿಂದ ಮೆರೆದಿದ್ದ ಹಿಂಭೂತ ಇಂದೇಕೆ ಇಲ್ಲಿ ಬರಲಿಲ್ಲ? ಬಂದಿದ್ದರೆ ಇನ್ನೂ ನಾಲ್ಕು ಯು.ಬಿ. ಖಾಲಿಯಾಗುತ್ತಿತ್ತು! ಎಂದುಕೊಂಡಾಗಲೂ-
ವಿ.ಕ.ವಂತೂ ಹೇಗೂ ಮುಳುಗಲಿರುವ ಹಡಗು. ಇಂದಿನ ಮಟ್ಟಿಗೆ, ಮುಳುಗುಪಯಣಕ್ಕೆ ಇನ್ನೂ ಸಮಯವಿದೆ ಎಂದು ನಂಬಿರುವ ನೌಕೆಯ ಹಾಗೆ, ಧಕ್ಕೆಯಿಂದ ಸ್ವಲ್ಪವೇ ದೂರದಲ್ಲಿ ತಂಗಿದೆ. ಮುಳುಗುವ  ಮೊದಲೇ ದಡಕ್ಕೆ ನೆಗೆದು ತೂತಾಗದೆ ಇರುವ ಬೇರೆ ಹಡಗನ್ನು ಹೊಕ್ಕರೆ ಹೇಗೆ? ಎಂದು ಯೋಚಿಸುವ ಮರಿ ಇಲಿಯೂ ಆದೆ.
(ಮುಂದಿನ ಭಾಗದಲ್ಲಿ)

2005ರಲ್ಲಿ ಪುಸ್ತಕವಾಗಿ ಪ್ರಕಟಗೊಂಡ ಪದ್ಯಾಣ ಗೋಪಾಲಕೃಷ್ಣ ಅವರ ಅಂಕಣ ಬರಹಗಳ ಮರುಪ್ರಕಟಣೆ ಇದು. ಲೇಖನ ಮತ್ತು ಲೇಖಕರ ಕುರಿತು:

ಪದ್ಯಾಣ ಗೋಪಾಲಕೃಷ್ಣ (1928-1997)

ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪದ್ಯಾಣ ಗೋಪಾಲಕೃಷ್ಣ (1928-1997). ಪ.ಗೋ. ಎಂದೇ ಚಿರಪರಿಚಿತರಾಗಿದ್ದ ಅವರು, ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ ಪ.ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆ.  ಇದು ಪ.ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ ಪ.ಗೋ, ಅವರ ಈ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ ಸಾಹಿತ್ಯಪ್ರೇಮಿ ಪ.ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (ಪ.ರಾಮಚಂದ್ರ). ಲೇಖನಮಾಲೆಯ ಎಂಟನೇ ಕಂತು ಇಲ್ಲಿದೆ.

ಕಳೆದ ವಾರದಲ್ಲಿ ..

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ