ಬಂಟ್ವಾಳ

ಆಟೋ ಚಾಲಕ ಹತ್ಯೆ, ಪೊಲೀಸರಿಂದ ತೀವ್ರ ತನಿಖೆ, ಬಂದ್

ಕಳ್ಳಿಗೆ ಗ್ರಾಮದ ಬೆಂಜನಪದವಿನ ಕರಾವಳಿಸೈಟ್ ಬಳಿ ಆಟೋ ಚಾಲಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪೊಳಲಿ ಸಮೀಪ ಅಮ್ಮುಂಜೆ ನಿವಾಸಿ ಅಶ್ರಫ್(35) ಹತ್ಯೆಗೊಳಗಾದ ವ್ಯಕ್ತಿ. ಸ್ಥಳೀಯ ನಿವಾಸಿ ಶೀನಪ್ಪ ಪೂಜಾರಿ ಎಂಬವರನ್ನು ಕರೆದುಕೊಂಡು ಬೀಡಿ ಸಂಗ್ರಹಕ್ಕೆಂದು ಹೋಗಿ ಬರುತ್ತಿದ್ದ ಸಂದರ್ಭ ಬೈಕಿನಲ್ಲಿ ಬಂದ ಐದರಿಂದ ಆರು ಮಂದಿ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿ ಈ ಕೃತ್ಯ ಎಸಗಿದ್ದಾರೆ. ತಲೆಯ ಭಾಗಕ್ಕೆ ತೀವ್ರ ಗಾಯಗಳೊಂದಿಗೆ ಅಶ್ರಫ್ ಸ್ಥಳದಲ್ಲೇ ಮೃತಪಟ್ಟರು.


ಶೀನಪ್ಪ ಪೂಜಾರಿ ಅವರ ಬೀಡಿ ಸಂಗ್ರಹ ಕಾರ್ಯಕ್ಕೆ ಪ್ರತಿನಿತ್ಯವೂ ಅಶ್ರಫ್ ತೆರಳುತ್ತಿದ್ದು, ಬುಧವಾರ 11.30ರ ಹೊತ್ತಿಗೆ ಬೀಡಿ ಸಂಗ್ರಹಿಸಿ ಮನೆ ಸಮೀಪ ಮರಳುತ್ತಿದ್ದ ಸಂದರ್ಭ ದುಷ್ಕರ್ಮಿಗಳು ಅಡ್ಡಗಟ್ಟಿ ತಳವಾರು ದಾಳಿ ನಡೆಸಿದ್ದಾರೆ. ಈ ಸಂದರ್ಭ ಅಶ್ರಫ್ ತಪ್ಪಿಸಿಕೊಳ್ಳುವ ಭರದಲ್ಲಿ ಶೀನಪ್ಪ ಪೂಜಾರಿ ಮನೆಯೊಳಗೆ ಓಡಿದ್ದು, ಆರೋಪಿಗಳು ಬೆನ್ನಟ್ಟಿ ಹತ್ಯೆಗೈದಿದ್ದಾರೆ.

ಇದಾದ ಬಳಿಕ ಹಲವೆಡೆ ಕಲ್ಲು ತೂರಾಟ, ಬಂದ್ ನಡೆಸುವ ಯತ್ನವೂ ನಡೆಯಿತು. ಕಲ್ಲಡ್ಕ, ಕೈಕಂಬ, ಫರಂಗಿಪೇಟೆ, ಬಿ.ಸಿ.ರೋಡ್ ಗಳಲ್ಲೂ ಆತಂಕದ ಸ್ಥಿತಿ ನಿರ್ಮಾಣವಾಯಿತು.

ಮೃತಪಟ್ಟ ಅಶ್ರಫ್, ಎಸ್ಡಿಪಿಐ ಅಮ್ಮುಂಜೆ ವಲಯ ಅಧ್ಯಕ್ಷರೂ ಆಗಿದ್ದರು. ಬೆಳಗ್ಗೆ ಪಕ್ಷದ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಕಲಾಯಿಯಲ್ಲಿ ಧ್ವಜಾರೋಹಣ ನೆರವೇರಿಸಿ, ಶ್ರಮದಾನದಲ್ಲಿ ಭಾಗವಹಿಸಿ ಬಳಿಕ ಆಟೋ ಮೂಲಕ ಬೀಡಿ ಸಂಗ್ರಹಕ್ಕೆ ತೆರಳಿದ್ದರು.
ಸುಳಿವು ಲಭ್ಯ :
ಆರೋಪಿಗಳ ಪತ್ತೆಗಾಗಿ ಐದು ತಂಡವನ್ನು ರಚಿಸಲಾಗಿದ್ದು, ಆರೋಪಿಗಳ ಬಗ್ಗೆ ಮಹತ್ವದ ಸುಳಿವನ್ನು ಸಂಗ್ರಹಿಸಲಾಗಿದೆ. ಒಂದು ತಂಡವನ್ನು ಈಗಾಗಲೇ ಆರೋಪಿಗಳ ಬಂಧನಕ್ಕೆ ಕಳುಹಿಸಲಾಗಿದೆ. ಆರೋಪಿಗಳು ಶೀಘ್ರ ಬಂಧಿಸಲಾಗುವುದು. ಆರೋಪಿ ಎಷ್ಟೇ ದೊಡ್ಡವನಾಗಿರಲಿ, ಯಾವುದೇ ಸಂಘಟನೆಗೆ ಸೇರಿರಲಿ ಅವನನ್ನು ಕಾನೂನಿನಡಿ ಬಂಧಿಸಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಐಜಿಪಿ ಹರಿಶೇಖರನ್ ಸುದ್ದಿಗಾರರಿಗೆ ತಿಳಿಸಿದರು.
ಐಜಿಪಿ ಹರಿಶೇಖರನ್ ಸೇರಿದಂತೆ ಎಸ್ಪಿ ಭೂಷಣ್ ಜಿ.ಬೊರಸೆ, ಡಿವೈಎಸ್ಪಿ ರವೀಶ್, ಗುಪ್ತಚರ ಇಲಾಖೆ ಡಿವೈಎಸ್ಪಿ ರಾಮರಾವ್, ಇನ್ಸ್ಪೆಕ್ಟರ್ ಮಂಜಯ್ಯ, ಎಸ್ ಐ ರಕ್ಷಿತ್ ಹೆಚ್ಚುವರಿ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಹತೋಟಿಗೆ ತಂದರು. ಈ ನಡುವೆ ಕೆಲ ಮನೆಗಳಿಗೆ ಕಲ್ಲು ತೂರಿದ ಘಟನೆಯೂ ನಡೆದಿದೆ.
ಜಿಲ್ಲಾಧಿಕಾರಿ ಭೇಟಿ:
ಕಲ್ಲಡ್ಕದಲ್ಲೂ ಆತಂಕದ ಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಕಲ್ಲಡ್ಕ ಪರಿಸರಕ್ಕೆ ಭೇಟಿ ನೀಡಿ ಅವಲೋಕನ ನಡೆಸಿದರು. ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಪೊಲೀಸ್ ಐಜಿ ಹರಿಶೇಖರನ್, ಎಸ್ಪಿ ಭೂಷಣ್ ಜಿ. ಬೊರಸೆ ಉಪಸ್ಥಿತರಿದ್ದರು.
ಸೆ.144 ಮುಂದುವರಿಕೆ:
ಈ ಘಟನೆ ಬಳಿಕ ಸೆ.144ರನ್ವಯ ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಈ ಕುರಿತು ಪೊಲೀಸರೇ ತಮ್ಮ ವಾಹನದಲ್ಲಿ ಘೋಷಣೆಗಳನ್ನು ಕೂಗುತ್ತಿದ್ದುದು ಕಂಡುಬಂತು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts