ಪಾಣೆಮಂಗಳೂರಿನ ಶ್ರೀ 1008 ಅನಂತನಾಥ ಸ್ವಾಮಿ ಜಿನ ಚೈತ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ಚಾತುರ್ಮಾಸದ ನಿಮಿತ್ತ ಅಗಮಿಸುತ್ತಿರುವ ಮುನಿಶ್ರೀ 108 ವೀರ ಸಾಗರ ಮಹಾರಾಜರ ಮಂಗಲ ಪುರ ಪ್ರವೇಶ ಕಾರ್ಯಕ್ರಮ ಜೂ.25 ರಂದು ನಡೆಯಲಿದೆ ಎಂದು ಚಾತುರ್ಮಾಸ ಸಮಿತಿಯ ಕಾರ್ಯಾಧ್ಯಕ್ಷ ಸುದರ್ಶನ್ ಜೈನ್ ಪಂಜಿಕಲ್ಲು ತಿಳಿಸಿದ್ದಾರೆ.
ಮಂಗಳವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಮಹಾರಾಷ್ಟ್ರದ ದತ್ತವಾಡದಿಂದ ಈಗಾಗಲೇ ವಿಹಾರದ ಮೂಲಕ ಹೊರಟಿರುವ ಮುನಿಶ್ರೀಯವರು ಜೂ.24ರಂದು ಬಂಟ್ವಾಳ ಬಸದಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದರು. 25 ರಂದು ಬೆಳಿಗ್ಗೆ 10.30 ಕ್ಕೆ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವ್ರತ್ತದಲ್ಲಿ ಮೂಡಬಿದ್ರೆ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯರ ನೇತ್ರತ್ವದಲ್ಲಿ ಸಮಾಜದ ಗಣ್ಯರು, ಜನಪ್ರತಿನಿಧಿಗಳು, ಸಮಸ್ತ ಶ್ರಾವಕ ಬಂಧುಗಳ ಸಮಕ್ಷಮದಲ್ಲಿ ಭವ್ಯವಾದ ಮೆರವಣಿಗೆಯ ಮೂಲಕ ಪಾಣೇರು ಶ್ರೀ ಅನಂತನಾಥ ಸ್ವಾಮಿ ಜಿನ ಚೈತಾಲ್ಯಕ್ಕೆ ಕರೆತರಲಾಗುವುದು ಎಂದರು.
ಜುಲೈ 7 ರಿಂದ ಅಕ್ಟೋಬರ್ 19ರವರೆಗೆ ಸುಮಾರು 4 ತಿಂಗಳ ಕಾಲ ಮುನಿಶ್ರೀ ವೀರ ಸಾಗರ ಮಹಾರಾಜರು ಚಾತುರ್ಮಾಸ ವ್ರತಾಚರಣೆಯಲ್ಲಿದ್ದು, ಜು.9 ರಂದು ಕಲಶ ಸ್ಥಾಪನದ ಮಹತ್ಸೋವದ ಮೂಲಕ ಅವರ ಚಾತುರ್ಮಾಸ ಆಚರಣೆ ಆರಂಭವಾಗಲಿದೆ ಎಂದು ಸುದರ್ಶನ್ ಜೈನ್ ವಿವರಿಸಿದರು.
ಚಾತುರ್ಮಾಸದ ಪ್ರತಿದಿನ ಸಂಜೆ ಧಾರ್ಮಿಕ,ಶಿಕ್ಷಣ ಪ್ರತಿ ಭಾನುವಾರ ಸಂಜೆ ಮಂಗಲ ಪ್ರವಚನ ಮತ್ತು ಪೂಜಾ ಆರಾಧನೆಗಳು ನಡೆಯಲಿದೆ ಎಂದ ಅವರು ಮುನಿಶ್ರೀಯವರ ಚಾತುರ್ಮಾಸ ಆಚರಣೆ ಯಶಸ್ವಿಗಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ,ಗೌರವಾಧ್ಯಕ್ಷತೆಯಲ್ಲಿ ಮಂಗಳೂರಿನ ರತ್ನಾಕರ ಜೈನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಸಹಿತ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದ್ದು ,ಭರದ ಸಿದ್ದತೆಯಲ್ಲಿ ತೊಡಗಿದೆ ಎಂದರು.
ಮೂಡಬಿದ್ರೆ ಸೀಮೆಗೊಳಪಟ್ಟ ಸುಮಾರು 400 ವರ್ಷದ ಇತಿಹಾಸ ಹೊಂದಿರುವ ಪಾಣೇರು ಶ್ರೀ ಅನಂತಸ್ವಾಮಿ ಜಿನ ಚೈತ್ಯಾಲಯದ ಚರಿತ್ರೆಯಲ್ಲೆ ಮೊದಲ ಬಾರಿಗೆ ಬಸದಿಯಲ್ಲಿ ಮುನಿಶ್ರೀಯೊಬ್ಬರು ಚಾತುರ್ಮಾಸ ಅಚರಿಸುವುದು ಭಕ್ತ ಭಾವದ ಮಧುರ ಸುಸಂದರ್ಭವಾಗಿದೆ ಜಿಲ್ಲೆಯ ಜೈನ ಸಮುದಾಯದ ಶ್ರಾವಕರು ಇದರ ಸದುಪಯೋಗ ಪಡೆಯುವಂತೆ ಸುದ್ದಿಗೋಷ್ಠಿಯಲ್ಲಿದ್ದ ಸಮಿತಿ ಅಧ್ಯಕ್ಷ ರತ್ನಾಕರ ಜೈನ್ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿಸಮಿತಿ ಪದಾಧಿಕಾರಿಗಳಾದ ಧರಣೇಂದ್ರ ಇಂದ್ರ ಪಾಣೆಮಂಗಳೂರು,ಸುಭಾಶ್ಚಂದ್ರ ಜೈನ್,ಭುವನೇಂದ್ರ ಇಂದ್ರ,ಹರ್ಷರಾಜ್ ಮೊದಲಾದವರಿದ್ದರು.