ಅಲ್ರೀ ಕನಕಾಂಗೀ ನಿನ್ನೆ ಇಡೀ ದಿನ ನಿಮ್ಮನೆಯ ಒಳಗಿನಿಂಂದ ನೀರು ಇಳಿಯುವ ಸದ್ದು ಕೇಳಿಸ್ತಾ ಇತ್ತು. ಕರೆದು ಹೇಳೋಣಾ ಅಂದ್ರೆ ನೀವು ಬಾಗಿಲಿಗೆ ಬೀಗ ಹಾಕಿದ್ದು ಕಾಣಿಸಿತು. ಫೋನ್ ನಾಟ್ ರೀಚೇಬಲ್.. ಎಲ್ಲಿ ಮಾಯ ಆಗಿದ್ರೀ? ಮನೆಯೊಳಗೆ ಏನಾದ್ರೂ ಪೈಪ್ ಒಡೆದು ಹೋಗಿದೆಯಾ?
ಹಾಗೇನಿಲ್ಲಾರೀ.. ನಮ್ಮನೆ ಬಾತ್ ರೂಮಿನ ಒಂದು ನಲ್ಲಿಯಲ್ಲಿ ನೀರು ಲೀಕ್ ಆಗ್ತಾ ಇದೆ. ಹೇಗೂ ಮಳೆಗಾಲ ಅಲ್ವಾ..ನೀರಿಗೇನು ತೊಂದ್ರೆ ಅಂತ ಹಾಗೇ ಬಿಟ್ಟಿದ್ದೆ. ಈಗಷ್ಟೇ ಮನೆಗೆ ಬಂದೆವು. ಒಳಗೆ ನೀರೇ ಬರ್ತಿಲ್ಲ ಅಂತ ನೋಡೋದಕ್ಕೆ ಹೊರ್ಗಡೆ ಬಂದೆ ನೋಡಿ ಈಗ..
ಹೇಗೆ ಬರುತ್ತೆ ನೀರು. ನಿಮ್ಮ ಮನೇ ಮೇಲಿನ ಟ್ಯಾಂಕ್ ಖಾಲಿ ಆಗಿರಬಹುದು. ಅಷ್ಟೊಂದು ನೀರು ಸೋರ್ತಾ ಇದ್ರೆ..
ಹೌದು ಕಣ್ರೀ ಈಗೇನು ಮಾಡೋದು ನೀರಿಗೆ. ಇಲ್ಲಿ ನೋಡಿ ಇಂತಹಾ ಮಳೆಯಲ್ಲೂ ಕುಡಿಯಲು ನೀರಿಲ್ಲ ಅನ್ನೋ ಸ್ಥಿತಿ ಆಗ್ಬಿಟ್ತಿದೆ ಈಗ. ಇನ್ನು ಕಾರ್ಪೋರೇಷನ್ ನೀರು ಬರೋದು ನಾಳೆಗೇ ಅಲ್ವಾ.. ಅಲ್ಲಿವರೆಗೆ ಹೇಗ್ರೀ ಇರೋದು?
ಕುಡಿಯೋದಕ್ಕೆ ಬೇಕಿದ್ರೆ ನಮ್ಮನೆಯಿಂದ ನೀರು ಕೊಡ್ತೀನಿ. ಉಳಿದ ಕೆಲಸಗಳಿಗೆ ನೀರಿಲ್ಲ ಅಂತ ಯಾಕೆ ಮಂಡೆಬಿಸಿ ಮಾಡ್ತೀರಾ? ತಾರಸಿಯಿಂದ ಇಳೀತಾ ಇರೋ ನೀರು ಅಷ್ಟೊಂದು ಬರ್ತಾ ಇದೆ. ಅದರ ಕೆಳಗೆ ದೊಡ್ಡ ಡ್ರಮ್ಮೋ, ಪಾತ್ರೆಯೋ ಕೊಡವೋ ಇಟ್ರಾಯ್ತು. ಮನೆ ಕೆಲಸಕ್ಕೆ ಬೇಕಾದಷ್ಟು ನೀರು ಅಲ್ಲೇ ಸಿಗಲ್ವಾ.. ನಾನಂತೂ ಮಳೆ ಶುರು ಆಗಿ ತಾರಸಿಯ ಕಸ ಕೊಳೆ ಎಲ್ಲಾ ಕೊಚ್ಚಿ ಹೋದ ನಂತರ ನೀರು ಬೀಳೋ ಜಾಗದಲ್ಲಿ ಒಂದು ದೊಡ್ಡ ಡ್ರಮ್ ಇಟ್ಟೇ ಇರ್ತೀನಿ. ಮಳೆಗಾಳಿಗೆ ಆಗಾಗ ಕರೆಂಟ್ ಕೈ ಕೊಟ್ಟು ನೀರು ಇಲ್ಲಾ ಅಂದಾಗಲೆಲ್ಲಾ ಈ ನೀರು ಬಳಕೆಗೆ ಸಿಗುತ್ತೆ. ಕುಡಿಯುವ ನೀರಿಗಾಗಿ ಕೂಡಾ ಮಳೆ ನೀರನ್ನು ಸಂಗ್ರಹಿಸಬಹುದಲ್ವಾ..
ಹೌದಲ್ವಾ.. ನಿಲ್ಲಿ ಈಗಲೇ ಡ್ರಮ್ ಇಟ್ಟು ಬರ್ತೀನಿ..
ಹಾಂ.. ಹಾಗೇ ನಿಮ್ಮ ನಲ್ಲಿ ಬೇಗ ರಿಪೇರಿ ಮಾಡಿಸಿ. ನೀರು ಇದೆ ಎಂದು ಪೋಲು ಮಾಡುವುದು ಅಪರಾಧವೇ.
ಇವತ್ತೇ. .. ಅಲ್ಲಲ್ಲಾ.. ಈಗಲೇ ಅದನ್ನು ಬದಲಾಯಿಸ್ತೇನೆ.. ಸರೋಜಮ್ಮಾ.. ನನ್ನ ಕಣ್ಣು ತೆರೆಸಿದಿರಿ. ಬೇಸಿಗೆ ಇಡೀ ನೀರಿಗಾಗಿ ಹಾಹಾಕಾರ ಇರುವಾಗ ಮಾತ್ರ ನೀರಿನ ಚಿಂತನೆ ಮಾಡ್ಬೇಕು ಅನ್ನೋದಷ್ಟೇ ನನ್ನ ಅಭಿಪ್ರಾಯವಾಗಿತ್ತು. ಆದರೆ ಈ ಮಳೆಗಾಲ ಮುಂದಿನ ಬೇಸಿಗೆಯನ್ನು ಸುಖದಾಯಕ ಮಾಡಬಹುದು ಎನ್ನೋ ಕಲ್ಪನೆ ನನ್ನಲ್ಲಿರಲಿಲ್ಲ. ದುಡ್ಡಿನಂತೆ ನೀರೂ ಕೂಡಾ.. ಹಿಡಿತದಲ್ಲೇ ಖರ್ಚು ಮಾಡಬೇಕಲ್ವಾ..
ಮಳೆಗಾಲದ ಒಂದೊಂದು ಹನಿ ನೀರಿನ ಸದ್ಬಳಕೆ, ನೀರಿಂಗಿಸುವಿಕೆ, ನೀರಿನ ಶೇಖರಣೆ, ಅಥವಾ ಇನ್ನಾವುದೇ ರೂಪದಲ್ಲಾದರೂ ಸ್ವಾಗತ. ಇದು ಮುಂದಿನ ಬೇಸಿಗೆಯ ಬಿಸಿಯನ್ನು ಕಡಿಮೆಗೊಳಿಸುವಲ್ಲಿ ಸಹಕಾರಿ. ನೀವೇನಂತೀರಾ..