ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ತರಬೇತಿ ಶಿಬಿರಗಳ ಅಗತ್ಯವಿದ್ದು ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ಹೇಳಿದರು. ಇವರು ಬಂಟ್ವಾಳ ಕೊಡ್ಮಣ್ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಸ್ತಿಕಾ ಕನ್ಸಲ್ಟೆನ್ಸಿ ಸರ್ವಿಸಸ್ ವತಿಯಿಂದ ನಡೆದ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮೇರಮಜಲು ಗ್ರಾ.ಪಂ ಅಧ್ಯಕ್ಷ ಸತೀಶ್ ನಾಯ್ಕ ಮಾತನಾಡಿ ಇಂತಹ ಕಾರ್ಯಕ್ರಮಗಳು ಕೇವಲ ಖಾಸಗಿ ಶಾಲೆಗಳಲ್ಲಿ ಮಾತ್ರ ನಡೆಯುತ್ತಿದ್ದು ಈಗ ಸರ್ಕಾರಿ ಶಾಲೆಯಲ್ಲಿ ಕೂಡ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ ಕೆಲಸ ಎಂದರು.
ಇದೇ ಸಂದರ್ಭ ಹತ್ತನೇ ತರಗತಿಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಜೆ.ಸಿ. ವಲಯ ತರಬೇತುದಾರರಾದ ಅಕ್ಷತ ಗಿರೀಶ್ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ಕಾಂತಪ್ಪ ಶೆಟ್ಟಿ, ಸ್ವಸ್ತಿಕಾ ಸಂಸ್ಥೆಯ ಪರಮೇಶ್ವರ ಮೊಯಿಲಿ, ಜಗದೀಶ್ ಹೊಳ್ಳ, ನರಸಿಂಹ ಹೇರ್ಳೆ, ಶಾಲಾ ಮುಖ್ಯ ಶಿಕ್ಷಕರಾದ ರಾಮಚಂದ್ರ ರಾವ್ ಉಪಸ್ಥಿತರಿದ್ದರು. ಶಿಕ್ಷಕ ಶ್ರೀಧರ ಭಟ್ ಸ್ವಾಗತಿಸಿ, ಸ್ವಸ್ತಿಕಾ ಸಂಸ್ಥೆಯ ಹರಿಕೃಷ್ಣ ಅಡಿಗ ವಂದಿಸಿದರು. ಶಿಕ್ಷಕ ಸಿದ್ಧಿಕ್ ಕಾರ್ಯಕ್ರಮ ನಿರೂಪಿಸಿದರು.