ಸರ್ಕಾರಿ ಕಚೇರಿ

ಕೊಳೆರೋಗ ಬಂದೀತು, ಹತೋಟಿಗೆ ತಯಾರಾಗಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಯು ಚುರುಕುಗೊಂಡಿದ್ದು, ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗೆ ಕೊಳೆರೋಗವು ಬಾಧಿಸಿ ಹೆಚ್ಚಿಗೆ ನಷ್ಟವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಈ ರೋಗವನ್ನು ಹತೋಟಿ ಮಾಡಲು ರೈತರುಗಳು ಮುಂಗಾರು ಪ್ರಾರಂಭವಾದಗಲೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇರುತ್ತದೆ. ಇದರ ಭಾಗವಾಗಿ ಎಲ್ಲಾ ರೈತರು ಅಡಿಕೆ ಬೆಳೆಗೆ ಬೋರ್ಡೋ ದ್ರಾವಣವನ್ನು ತಯಾರಿಸಿ ಸಿಂಪರಣೆ ಮಾಡಲು ಕೋರಲಾಗಿರುತ್ತದೆ. ವೈಜ್ಞಾನಿಕವಾಗಿ ಬೋರ್ಡೋದ್ರಾವಣ ತಯಾರಿಕೆ ವಿಧಾನ ಈ ಕೆಳಗಿನಂತಿದೆ.
ಶೇ. 1ರ ಬೋರ್ಡೋ ಮಿಶ್ರಣ ತಯಾರಿಸುವ ವಿಧಾನ (100 ಲೀಟರ್ ದ್ರಾವಣ) ಬೇಕಾಗುವ ಸಾಮಾಗ್ರಿಗಳು:- ಮೈಲುತ್ತುತ್ತು 1 ಕಿ.ಗ್ರಾಂ, ಸುಣ್ಣದ ಹರಳು 1ಕಿ.ಗ್ರಾ, ನೀರು 100 ಲೀಟರ್.
  ತಯಾರಿಕೆ :- ಒಂದು ಪಾತ್ರೆಯಲ್ಲಿ 1 ಕಿ.ಗ್ರಾಂ. ಮೈಲುತ್ತುತ್ತನ್ನು 10 ಲೀಟರ್ ನೀರಿನಲ್ಲಿ ಕರಗಿಸಬೇಕು. ಅದರಂತೆ ಇನ್ನೊಂದು ಪಾತ್ರೆಯಲ್ಲಿ 1 ಕಿ.ಗ್ರಾಂ. ಸುಣ್ಣದ ಹರಳನ್ನು 10 ಲೀಟರ್ ನೀರಿನಲ್ಲಿ ಕರಗಿಸಬೇಕು. ಅನಂತರ ಮೈಲುತುತ್ತು ಹಾಗೂ ಸುಣ್ಣದ ತಿಳಿ ನೀರನ್ನು 80 ಲೀಟರ್ ನೀರು ತುಂಬಿರುವ  ಮೂರನೆಯ ಪಾತ್ರೆಯಲ್ಲಿ ಜೊತೆಯಾಗಿ ಸುರಿಯಬೇಕು. ಈ ರೀತಿ ಸುರಿಯುವಾಗ ದ್ರಾವಣವು ಚೆನ್ನಾಗಿ ಮಿಶ್ರಣವಾಗುವಂತೆ ಮರದ ಕೋಲಿನಿಂದ ತಿರುಗಿಸುತ್ತಿರಬೇಕು. ಈಗ ಈ ಮಿಶ್ರಣವು ಶೆ.1ರ ಬೋರ್ಡೋ ಮಿಶ್ರಣದ 100ಲೀಟರ್ ದ್ರಾವಣವಾಗುತ್ತದೆ. ಈ ಮಿಶ್ರಣವು ಸರಿಯಾಗಿ ತಯಾರಿಯಾಗಿದೆಯೊ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಲಿಟ್ಮಸ್ ಕಾಗದವನ್ನು  ಈ ಮೇಲಿನಂತೆ ತಯಾರಿಸಿದ ದ್ರಾವಣದಲ್ಲಿ ಅದ್ದಿ, ನಂತರ ಲಿಟ್ಮಸ್ ಕಾಗದದ ಬಣ್ಣವನ್ನು ನಿಗಧಿತ ಬಣ್ಣದೊಂದಿಗೆ ಹೊಂದಾಣಿಕೆ ಮಾಡಿ ನೋಡಿ, ತಯಾರಿಸಿರುವ ದ್ರಾವಣವು ಸಮತೋಲನವಾಗಿರುವುದನ್ನು ಖಾತ್ರಿ ಮಾಡಿಕೊಳ್ಳಬೇಕು. ಅಥವಾ ಸ್ಥಳೀಯವಾಗಿ ಒಂದು ಸ್ವಚ್ಛವಾದ ಚಾಕು ಅಥವಾ ಹೊಸ ಬ್ಲೇಡನ್ನು ದ್ರಾವಣದಲ್ಲಿ ಅದ್ದಬೇಕು. ಒಂದುವೇಳೆ ಚಾಕು ಅಥವಾ ಬ್ಲೇಡಿನ ಮೇಲೆ ತಿಳಿ ಕೆಂಪು ಬಣ್ಣ ಕಂಡುಬಂದರೆ ಇನ್ನೂ ಸ್ವಲ್ಪ ಸುಣ್ಣದ ತಿಳಿ ನೀರನ್ನು ಹಾಕಬೇಕು. ಇಂತಹ ಮಿಶ್ರಣವು ತಿಳಿ ನೀಲಿಬಣ್ಣದ್ದಾಗಿರುತ್ತದೆ.
ಈ ರೀತಿ ತಯಾರಿಸಿದ ಹಾಗೂ ದ್ರಾವಣವು ಸಮತೋಲವಾಗಿರುವುದನ್ನು ಖಾತ್ರಿ ಪಡಿಸಿಕೊಂಡ ನಂತರ ಆ ದ್ರಾವಣವನ್ನು ಸುಳಿಯ ಹಾಗೂ ಕಾಯಿಗಳ ಗೊಂಚಲಿನ ಎಲ್ಲಾ ಭಾಗಗಳಲ್ಲಿ ಸಮರ್ಪಕವಾಗಿ ಸಣ್ಣ ಹನಿಗಳ ರೂಪದಲ್ಲಿ ಸಿಂಪರಣೆ ಮಾಡಬೇಕು.
ಈ ರೀತಿಯ ದ್ರಾವಣವನ್ನು ಎಲ್ಲಾ ರೈತರುಗಳು ಮುಂಜಾಗ್ರತೆ ಕ್ರಮವಾಗಿ ಈಗಲೇ ಕಡ್ಡಾಯವಾಗಿ ಸಿಂಪರಣೆ ಮಾಡಬೇಕು. ನಂತರ ಮುಂಗಾರು ಸಮಯದಲ್ಲಿ 2 ರಿಂದ 3 ಬಾರಿ ಕಡ್ಡಾಯವಾಗಿ ಸಿಂಪರಣೆ ಮಾಡುವ ಅವಶ್ಯಕತೆಯಿರುತ್ತದೆ.
 ಬೊರ್ಡೋ ಮಿಶ್ರಣ ತಯಾರಿಸಲು ಯಾವಾಗಲೂ ಮಣ್ಣಿನ ಅಥವಾ ಪ್ಲಾಸ್ಟಿಕ್ ಪಾತ್ರೆಗಳನ್ನು ಮಾತ್ರ ಉಪಯೋಗಿಸಬೇಕು. ಕಬ್ಬಿಣ ಅಥವಾ ಲೋಹದ ಪಾತ್ರೆಗಳನ್ನು ಬಳಸಬಾರದು.
ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ತೋಟಗಾರಿಕೆ ಉಪನಿರ್ದೇಶಕರು ಜಿಲ್ಲಾ ಪಂಚಾಯತ್ ಮಂಗಳೂರು -575002 ದೂ:0824-2412628 ವನ್ನು ಸಂಪರ್ಕಿಸಲು ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ