- ತಾಲೂಕು ಕಂಟ್ರೋಲ್ ರೂಮ್ ನಿರಂತರ ಕಾರ್ಯಾಚರಣೆ – ಅಪರ ಡಿಸಿ ಸೂಚನೆ
- ಅಪಾಯಕಾರಿ ಮರ ಗುರುತಿಸಿ ಅರಣ್ಯ ಇಲಾಖೆಗೆ ಪಟ್ಟಿ ನೀಡಿ
- ಸೋಮವಾರ ನಡೆಯಿತು ಡಿ.ಸಿ. ಕಚೇರಿಯಲ್ಲಿ ಪ್ರಾಕೃತಿಕ ವಿಕೋಪಗಳ ನಿರ್ವಹಣೆ ಸಂಬಂಧಿಸಿ ಅಧಿಕಾರಿಗಳ ಸಭೆ
ಮಳೆ ಧಾರಾಕಾರವಾಗಿ ಸುರಿಯಲು ಆರಂಭಿಸಿ ಕೆಲ ದಿನಗಳಾಗಿದ್ದು, ಹಲವೆಡೆ ಜನರು ಸಂಕಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಸೋಮವಾರ ಜಿಲ್ಲಾಡಳಿತ ಕಚೇರಿಯಲ್ಲಿ ಪ್ರಾಕೃತಿಕ ವಿಕೋಪಗಳ ನಿರ್ವಹಣೆ ಸಂಬಂಧ ಅಧಿಕಾರಿಗಳ ಸಭೆ ನಡೆಸಿತು.
ಈ ಸಂದರ್ಭ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲೆಯಲ್ಲಿ ಮಳೆಗಾಲ ತೀವ್ರಗೊಂಡಿರುವುದರಿಂದ ಎಲ್ಲಾ ತಾಲೂಕು ಕಚೇರಿಗಳಲ್ಲಿ ತೆರೆಯಲಾಗಿರುವ ಕಂಟ್ರೋಲ್ ರೂಂಗಳನ್ನು ನಿರಂತರ ಕಾರ್ಯಾಚರಣೆಯಲ್ಲಿರಿಸಬೇಕು ಎಂದು ಸೂಚನೆ ನೀಡಿದರು.
ಮಳೆ ಮತ್ತಿತರ ಪ್ರಾಕೃತಿಕ ಹಾನಿಗಳ ಸಂಬಂಧ ಸಾರ್ವಜನಿಕರ ಸಮಸ್ಯೆಗಳಿಗೆ ಕಂಟ್ರೋಲ್ ರೂಂಗಳಿಗೆ ಬರುವ ದೂರುಗಳಿಗೆ ಕೂಡಲೇ ಸ್ಪಂದಿಸಬೇಕು.ಕಂಟ್ರೋಲ್ ರೂಂಗೆ ಬರುವ ಎಲ್ಲಾ ದೂರುಗಳನ್ನು ನೋಂದಣಿ ಮಾಡಿ, ರಿಜಿಸ್ಟರ್‍ಗಳನ್ನು ಸಮರ್ಪಕವಾಗಿಡಬೇಕು ಎಂದು ಅವರು ತಿಳಿಸಿದರು.
ನದೀ ಪಾತ್ರದ ಪ್ರದೇಶಗಳು, ಈ ಹಿಂದೆ ನೆರೆ ಕಂಡಿರುವ ಪ್ರದೇಶಗಳ ಮೇಲೆ ನಿಗಾ ಇಡಬೇಕು. ರಸ್ತೆ ಬದಿ ಅಪಾಯಕಾರಿ ಮರಗಳನ್ನು ಗುರುತಿಸಿ ಅರಣ್ಯ ಇಲಾಖೆಗೆ ಪಟ್ಟಿ ನೀಡಬೇಕು. ಮಳೆಯಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಗಿರುವ ರಸ್ತೆಗಳಲ್ಲಿ ಅಡೆತಡೆ ನಿವಾರಣೆಗೆ ಆದ್ಯತೆ ನೀಡಲು ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.
ಅತೀವ ಮಳೆ ಸಂದರ್ಭದಲ್ಲಿ ಶಾಲೆಗಳಿಗೆ ರಜೆ ನಿರ್ಧಾರ ಅಧಿಕಾರವನ್ನು ತಹಶೀಲ್ದಾರ್‍ಗಳಿಗೆ ನೀಡಲಾಗಿದೆ. ಜಿಲ್ಲೆಯ ಪ್ರಮುಖ ಬೀಚ್‍ಗಳಲ್ಲಿ ಹೋಂಗಾರ್ಡ್‍ಗಳ ನಿರಂತರ ಕಾವಲು ಇರಿಸಬೇಕು. ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಹೋಂಗಾರ್ಡ್, ಅಗ್ನಿಶಾಮಕ ದಳಕ್ಕೆ ಅಗತ್ಯ ಪರಿಕರಗಳನ್ನು ಖರೀದಿಸಲು ಈಗಾಗಲೇ ಅನುದಾನ ನೀಡಲಾಗಿದೆ. ಮಳೆ ಹಾನಿ ಪರಿಹಾರಗಳನ್ನು ತ್ವರಿತವಾಗಿ ಮಂಜೂರು ಮಾಡುವಂತೆ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಪಾಳು ಬಿದ್ದಿರುವ ಮತ್ತು ನಿಷ್ಕ್ರಿಯ ಕೊಳವೆಬಾವಿಗಳನ್ನು ಪತ್ತೆ ಹಚ್ಚಲು ಬೋರ್‍ವೆಲ್ ಏಜನ್ಸಿಗಳಿಂದಲೇ ಮಾಹಿತಿ ಪಡೆದು ಸಲ್ಲಿಸಲು ಅವರು ಅಂತರ್ಜಲ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ಸಹಾಯಕ ಆಯುಕ್ತ ರೇಣುಕಾ ಪ್ರಸಾದ್, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.