ರಸ್ತೆ ಪಕ್ಕ ಚರಂಡಿ ಹೂಳೆತ್ತದಿದ್ದರೆ ಏನಾಗುತ್ತದೆ ಎಂಬುದಕ್ಕೆ ಇಲ್ಲಿದೆ ಮತ್ತೊಂದು ಉದಾಹರಣೆ. ಇದುವರೆಗೆ ಬಂದ ಮಳೆಗೆ ಪಾಠ ಕಲಿಯದ ಇಲಾಖೆಗಳಿಗೆ ಶಾಕ್ ಟ್ರೀಟ್ಮೆಂಟ್ ನೀಡಲು ಧಾರಾಕಾರ ಮಳೆಯೇ ಬರಬೇಕಾಯಿತು. ಆದರೆ ಇಲ್ಲಿ ತೊಂದರೆ ಅನುಭವಿಸಿದ್ದು ನಾಗರಿಕರು.
ಏನಾಯಿತು:
ಶನಿವಾರ ಬೆಳಗ್ಗಿನಿಂದಲೇ ಬಿ.ಸಿ.ರೋಡ್ ನಲ್ಲಿ ಧಾರಾಕಾರ ಮಳೆ. ಕೈಕಂಬ ಬಳಿ ಬಸ್ ಬೇ ಗೆಂದು ರಸ್ತೆ ಅಗೆದ ಬಳಿಕ ಸಮರ್ಪಕ ಕಾಮಗಾರಿ ನಡೆದೇ ಇರಲಿಲ್ಲ. ಹೀಗಾಗಿ ರಸ್ತೆ ಬದಿ ಅಗೆದ ಮಣ್ಣು ರಾಶಿ ಬಿದ್ದ ಪರಿಣಾಮ, ಮಳೆ ನೀರು ಚರಂಡಿಗೆ ಹರಿದು ಹೋಗಲು ಅವಕಾಶವೇ ಸಿಗಲಿಲ್ಲ. ಹೀಗಾಗಿ ರಸ್ತೆಯೇ ಹೊಳೆಯಾಯಿತು.
ಸುಮಾರು ಒಂದೂವರೆ ತಾಸಿಗೂ ಅಧಿಕ ಕಾಲ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಇದೇ ಹೊತ್ತಿನಲ್ಲಿ ಘನ ವಾಹನಗಳು ಹೋಗುವಾಗ ದ್ವಿಚಕ್ರ ವಾಹನ ಸವಾರರು ಈ ಕೆಸರು ನೀರಿನ ಸ್ನಾನ ಮಾಡಬೇಕಾಯಿತು. ನೋಡನೋಡುತ್ತಿದ್ದಂತೆ ನೀರು ಜಾಸ್ತಿಯಾಗತೊಡಗಿತು. ಬಳಿಕ ಜೆಸಿಬಿ ತರಿಸಿ ರಸ್ತೆ ಬದಿ ರಾಶಿ ಹಾಕಲಾದ ಮಣ್ಣನ್ನು ಪಕ್ಕಕ್ಕೆ ಸರಿಸಿ ನೀರು ಹರಿದು ಹೋಗಲು ವ್ಯವಸ್ಥೆ ಕಲ್ಪಿಸಲಾಯಿತು.
ಇದನ್ನೇ ವಾರದ ಮೊದಲೇ ಮಾಡಬಹುದಿತ್ತಲ್ವೇ ಎಂದು ಗೊಣಗುತ್ತಾ ನಾಗರಿಕರು ಸಂಚಾರ ಮುಂದುವರಿಸಿದರು.
Also Read: