ಜೂನ್ ಕಾಲಿಡುವ ಮೊದಲೇ ಮಳೆ ಕಾಲಿಟ್ಟಿದೆ. ಅಕೃತವಾಗಿ ಮುಂಗಾರು ಪ್ರವೇಶ ಆಗುವ ಮುನ್ನವೇ ಇಳೆ ತಂಪಾಗುತ್ತಿದೆ. ಅದರ ಜೊತೆಗೇ ವಿಪರೀತ ಸೆಖೆ, ಉರಿಬಿಸಿಲು. ಹೀಗೆ ಸಣ್ಣಪುಟ್ಟ ತಲೆನೋವು, ಜ್ವರ ಶೀತದಂಥ ಕಾಯಿಲೆಗಳೂ ಆರಂಭವಾಗಿದೆ. ಅದರೊಂದಿಗೆ ದವಾಖಾನೆಯ ಬಾಗಿಲು ತಟ್ಟುವ ಮಂದಿಯೂ ಒಂದೊಂದಾಗಿ ಜಾಸ್ತಿಯಾಗತೊಡಗಿದ್ದಾರೆ.
ತಾಲೂಕಿನ ವಿವಿಧೆಡೆ ಕಟ್ಟಡ ಸಹಿತ ಕಾಮಗಾರಿಗಳು ನಡೆಯುತ್ತಿವೆ. ಕೆಲವೆಡೆ ರಸ್ತೆ ಪಕ್ಕ ಹೊಂಡಗಳು ಚರಂಡಿ ಸಮಸ್ಯೆಗಳು ಕಾಣಿಸುತ್ತವೆ. ಅಲ್ಲಿ ನೀರು ನಿಲ್ಲುತ್ತವೆ. ಖಾಲಿ ಜಾಗ ಇದ್ದ ಕೂಡಲೇ ಅಲ್ಲಿ ಕಸ ಎಸೆಯಲಾಗುತ್ತದೆ. ಇದು ಸೊಳ್ಳೆ ಸಂತಾನೋತ್ಪತ್ತಿಗೆ ಹೇಳಿ ಮಾಡಿಸಿದಂತಾಗುತ್ತದೆ.
ಈ ರೀತಿಯ ಸಮಸ್ಯೆ ಉಲ್ಬಣ ಆಗದಂತೆ ತಡೆಯಬೇಕಾದವರು ಯಾರು? ಕೇವಲ ಸ್ಥಳೀಯಾಡಳಿತವಷ್ಟೇ ಅಲ್ಲ, ಸಾರ್ವಜನಿಕರೂ ನದಿಗೆ ಕಸ ಎಸೆಯುವುದು, ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯುವ ಪರಿಪಾಠವನ್ನು ನಿಲ್ಲಿಸಬೇಕಾಗುತ್ತದೆ.
ಪ್ರತಿ ತಾಲೂಕಿಗೆ ಪ್ರಾಕೃತಿಕ ವಿಕೋಪ ಎದುರಿಸಲು 30 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ನಿಧಾನವಾಗಿ ಮುಂಗಾರು ಮಳೆಯ ಸಂಭಾವ್ಯ ಅಪಾಯಗಳನ್ನು ಎದುರಿಸಲು ಸಮಸ್ಯೆಗಳ ನಡುವೆಯೇ ಸಿಬ್ಬಂದಿಯ ತೀವ್ರ ಕೊರತೆಯೊಂದಿಗೆ ತಾಲೂಕಿನ ವಿವಿಧ ಇಲಾಖೆಗಳು ಮುಂಗಾರು ಎದುರಿಸಲು ತಮ್ಮದೇ ರೀತಿಯಲ್ಲಿ ಸಜ್ಜಾಗುತ್ತಿವೆ. ಈಗಾಗಲೇ ತಹಶೀಲ್ದಾರ್ ಮಟ್ಟದಲ್ಲಿ ಸಭೆ ನಡೆದಿದೆ. ಮುಂಗಾರು ಮಳೆ ಎದುರಿಸುವುದು ಎಂದರೆ ರಸ್ತೆ ರಿಪೇರಿ, ಟ್ರೀ ಕಟ್ಟಿಂಗ್, ದೋಣಿ ರೆಡಿ ಮಾಡುವುದು, ಪ್ರವಾಹ ಬಂದರೆ ಏನು ಮಾಡುವುದು ಎಂಬ ಬಗ್ಗೆ ಚಿಂತೆ ಮಾಡುವುದಷ್ಟೇ ಅಲ್ಲ, ಮಳೆಗಾಲದಲ್ಲಿ ಸಂಭಾವ್ಯ ಸಾಂಕ್ರಾಮಿಕ ರೋಗಗಳು ಬಂದರೆ ಅದನ್ನು ನಿಯಂತ್ರಿಸುವ ಬಗೆ ಹೇಗೆ ಮತ್ತು ಅವುಗಳು ಉಂಟಾಗಲು ಏನು ಕಾರಣ ಎಂಬುದನ್ನು ಅರಿತು ಚಿವುಟಿ ಹಾಕಬೇಕಾಗುತ್ತದೆ.
ಆದರೆ ದಕ್ಷಿಣ ಕನ್ನಡದ ಭೌಗೋಳಿಕ ಲಕ್ಷಣ ರೋಗ ಹರಡುವ ಸೊಳ್ಳೆ ಉತ್ಪತ್ತಿಗೆ ಹೇಳಿ ಮಾಡಿಸಿದಂತಿರುತ್ತದೆ. ವಿಶೇಷವಾಗಿ ಹಳ್ಳಿಗಳ ತೋಟಗಳು ಹಾಗೂ ಹುಲ್ಲುಗಾವಲು ಪ್ರದೇಶಗಳು, ಗಿಡಗಂಟಿಗಳು ಇರುವ ಜಾಗಗಳಲ್ಲಿ ನೀರು ನಿಲ್ಲುವುದು ಸಾಮಾನ್ಯ. ಹಾಗೂ ಅದನ್ನು ನಿವಾರಿಸುವುದೂ ಹೇಳಿದಷ್ಟು ಸುಲಭ ಅಲ್ಲ.
ಈ ಬಾರಿಯೂ ಹಾಗಾಯಿತು.
ಜೂನ್ ತಿಂಗಳು ಬರುವ ಒಂದು ತಿಂಗಳು ಮೊದಲೇ ಬಂಟ್ವಾಳ ತಾಲೂಕಿಗೆ ಡೆಂಘೆ ಕಾಲಿಟ್ಟಿತು. ಸಕಾಲದಲ್ಲಿ ಆರೋಗ್ಯ ಇಲಾಖೆ ಎಚ್ಚೆತ್ತ ಕಾರಣ ಬಂದಷ್ಟೇ ವೇಗದಲ್ಲಿ ರೋಗ ನಿಯಂತ್ರಣದಲ್ಲಿದೆ.
ಕಳೆದ ವರ್ಷ ತಾಲೂಕಿನ ಅಮ್ಟಾಡಿ ಗ್ರಾಮದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಡೆಂಘೆ ಪ್ರಕರಣ ವರದಿಯಾಗಿತ್ತು. ಇದು ಬಂಟ್ವಾಳ ಪೇಟೆಗೆ ಹತ್ತಿರವಿರುವ ಗ್ರಾಮವಾಗಿದು, ತಾಲೂಕು ಕೇಂದ್ರದ ಕೆಲ ಭಾಗಗಳಾದ ಬಿ.ಸಿ.ರೋಡ್ ನ ಜನವಸತಿ ಪ್ರದೇಶಗಳಲ್ಲೂ ಡೆಂಘೆ ಪ್ರಕರಣ ಕಂಡುಬಂದಿತ್ತು. ಅಮ್ಟಾಡಿ ಹೊರತುಪಡಿಸಿದರೆ, ಕಲ್ಲಡ್ಕ ಸಮೀಪ ನೆಟ್ಲ ಪ್ರದೇಶದಲ್ಲಿ ಡೆಂಘೆ ಬಾಸಿತ್ತು.
ಆದರೆ ಈ ವರ್ಷ ಆರಂಭದಲ್ಲೇ ಡೆಂಘೆ ಅವತರಿಸಿದ್ದು ಪುಣಚದಲ್ಲಿ. ಹೀಗಾಗಿ ತಾಲೂಕು ಆರೋಗ್ಯ ಇಲಾಖೆ ಅದನ್ನು ಚಿವುಟಿ ಹಾಕಲು ಸನ್ನದ್ಧವಾಯಿತು. ವಿಶೇಷ ತಂಡವನ್ನೇ ಅಲ್ಲಿಗೆ ಕಳುಹಿಸಿದ ಪರಿಣಾಮ, ಈಗ ಸಂಪೂರ್ಣ ನಿಯಂತ್ರಣದಲ್ಲಿದೆ ಎನ್ನುತ್ತಾರೆ ತಾಲೂಕು ಆರೋಗ್ಯಾಕಾರಿ ಡಾ. ದೀಪಾ ಪ್ರಭು.
ತಾಲೂಕಿನ ಪುಣಚ ಗ್ರಾಮದಲ್ಲಿ ಏ.13ರಂದು ಕೆಲವರಲ್ಲಿ ಡೆಂಘೆ ಕಾಯಿಲೆಯ ಶಂಕೆ ವ್ಯಕ್ತವಾಯಿತು. ಹಾಗೆ ಸುಮಾರು ಒಂದು ತಿಂಗಳಲ್ಲಿ 36 ಶಂಕಿತ ಡೆಂಘೆ ಪ್ರಕರಣಗಳು ಅದೇ ಗ್ರಾಮದಲ್ಲಿ ದಾಖಲಾದವು. ಹಲವು ವೈದ್ಯಕೀಯ ಪರೀಕ್ಷೆಗಳ ಬಳಿಕ ಇವುಗಳಲ್ಲಿ ಎರಡು ಪ್ರಕರಣವಷ್ಟೇ ಡೆಂಘೆ ಉಳಿದದ್ದೆಲ್ಲ ಜ್ವರದ ಇನ್ನೊಂದು ರೂಪ ಎಂದು ಖಾತ್ರಿಯಾಯಿತು.
ಪುಣಚಕ್ಕೆ ವಿಶೇಷ ತಂಡವನ್ನು ರಚಿಸಿ, ಹೆಲ್ತ್ ಇನ್ಸ್ ಪೆಕ್ಟರ್, ಲ್ಯಾಬ್ ಟೆಕ್ನೀಶಿಯನ್ ಗಳನ್ನು ಕಳುಹಿಸಲಾಗಿದೆ. ಸೊಳ್ಳೆ ಉತ್ಪತ್ತಿ ತಾಣ ಗುರುತಿಸುವುದು ಅವುಗಳನ್ನು ನಾಶ ಮಾಡುವ ಕಾರ್ಯ ನೆರವೇರಿಸಲಾಗಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಮಾಹಿತಿ ಕರಪತ್ರಗಳನ್ನು ನೀಡಲಾಗುತ್ತಿದೆ ಹೀಗಾಗಿ ಪುಣಚದಲ್ಲಿ ನಿಯಂತ್ರಣ ಸಾಧ್ಯವಾಯಿತು. ಅದೇ ರೀತಿ ತಾಲೂಕಿನ ಇತರ ಭಾಗದಲ್ಲೂ ಮುಂಗಾರು ಸಂದರ್ಭ ಜನರ ಆರೋಗ್ಯದ ಗಂಭೀರ ಸಮಸ್ಯೆಯ ಕುರಿತು ಪೂರ್ವಸಿದ್ಧತೆಗಳನ್ನು ಇಲಾಖೆ ಮಾಡಿಕೊಂಡಿದೆ ಎನ್ನುತ್ತಾರೆ ಡಾ.ಪ್ರಭು.
ಆರೋಗ್ಯ ಸಹಾಯಕರು, ಆಶಾ, ಅಂಗನವಾಡಿ ಕಾರ್ಯಕರ್ತರ ಸಭೆ ನಡೆಸಿ, ಸೊಳ್ಳೆ ಉತ್ಪತ್ತಿ ತಾಣಗಳ ಗುರುತಿಸಿ, ನಾಶಪಡಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಚುನಾಯಿತ ಪ್ರತಿನಿಗಳು ಸಂಘ, ಸಂಸ್ಥೆಗಳ ಸಹಭಾಗಿತ್ವದಲ್ಲಿ ಡೆಂಘೆ, ಮಲೇರಿಯಾ ಜಾಗೃತಿ, ಮಾಹಿತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಎಲ್ಲ ಉಪಕೇಂದ್ರಗಳಲ್ಲಿ ಗ್ರಾಮ ನೈರ್ಮಲ್ಯ ಸಮಿತಿ ಅನುದಾನ ಬಳಸಿ ಎರಡು ಸುತ್ತಿನ ಲಾರ್ವ ಸಮೀಕ್ಷೆ ನಡೆಸಲಾಗುತ್ತದೆ. ಆರೋಗ್ಯ ಇಲಾಖೆಯಲ್ಲಿ 9 ಫಾಗಿಂಗ್ ಮೆಷೀನ್ ಇದೆ. ಸಾಕಷ್ಟು ಔಷಗಳೂ ಇವೆ. ಹೀಗಾಗಿ ಭೀತಿ ಬೇಡ ಎನ್ನುತ್ತಾರೆ ವೈದ್ಯಾಕಾರಿ.
ಎಷ್ಟಿದೆ ಪಿಎಚ್ ಸಿ?
ಇಡೀ ಬಂಟ್ವಾಳ ತಾಲೂಕಿನಲ್ಲಿ ಒಟ್ಟು ೧೭ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇವುಗಳೊಂದಿಗೆ ಎರಡು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಒಂದು ತಾಲೂಕು ಸರಕಾರಿ ಆಸ್ಪತ್ರೆ ಇದೆ. ಆದರೆ ಇದನ್ನು ಸಂಪೂರ್ಣವಾಗಿ ನಿರ್ವಹಿಸಲು ಸಿಬ್ಬಂದಿಯ ಕೊರತೆಯೂ ಇದೆ. ಪುರುಷ ಆರೋಗ್ಯ ಸಹಾಯಕರ ಸಂಖ್ಯೆ ೫೧ ಇರಬೇಕಾಗಿತ್ತು. ಆದರೆ ಈಗ ಕಾರ್ಯನಿರ್ವಹಿಸುವವರು ಕೇವಲ ಐವರು. ಉಳಿದ ಹುದ್ದೆಗಳು ಖಾಲಿ ಇವೆ.
ಮಳೆಗಾಲ ಸಂದರ್ಭ ಸಾಂಕ್ರಾಮಿಕ ರೋಗ ಅಥವಾ ಆರೋಗ್ಯ ಸಮಸ್ಯೆ ಇದ್ದರೆ ಕರೆ ಮಾಡಿ ಹೆಲ್ಪ್ ಲೈನ್: 08255-230662
ಮುನ್ನೆಚ್ಚರಿಕೆ ಇರಲಿ:
ನೀರು ಸಂಗ್ರಹಿಸುವಾಗ ಭದ್ರವಾದ ಮುಚ್ಚಳ ಅಳವಡಿಸಿ ಅಥವ ಒಂದು ಸಲ ನೀರು ಖಾಲಿ ಮಾಡಿ ತಿಕ್ಕಿ ತೊಳೆದು ಒಣಗಿಸಿ, ಬಳಿಕ ನೀರು ತುಂಬಿಸಿ. ನೀರು ಚಿಪ್ಪು, ಗೆರಟೆ, ಟಯರ್, ಬಾಟಲಿ ಇತ್ಯಾದಿ ಘನತ್ಯಾಜ್ಯಗಳಲ್ಲಿ ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಿ. ಬಾವಿಗಳಲ್ಲಿ ಗಪ್ಪಿ, ಗಂಬೂಶಿಯಾ ಮೀನು ಸಾಕಿ. ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಯಾವುದೇ ಜ್ವರವಿದ್ದರೂ ಹತ್ತಿರದ ಸರಕಾರಿ ಆಸ್ಪತ್ರೆ, ಆರೋಗ್ಯ ಸಹಾಯಕರನ್ನು ಭೇಟಿ ಮಾಡಿರಿ.
ಮಲೇರಿಯಾ
ಮಲೇರಿಯಾ ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಮನ್ ಆಗಿದೆ. ಆದರೆ ಬಂಟ್ವಾಳದಲ್ಲಿ ಕಡಿಮೆ. ಹೆಣ್ಣು ಅನೋಫಿಲಿಸ್ ಸೊಳ್ಳೆ ಕಡಿತದಿಂದಾಗಿ ಈ ಜ್ವರ ಹಬ್ಬುತ್ತದೆ. ಹೆಚ್ಚಾಗಿ ನೀರು ನಿಂತಿರುವ ಸ್ಥಳಗಳು ಸೊಳ್ಳೆಗಳ ಆವಾಸ ಸ್ಥಾನವಾಗಿರುತ್ತದೆ. ಮಲೇರಿಯಾ ಜ್ವರ ಸಾಮಾನ್ಯ ಜ್ವರದಂತೆಯೇ ಕಾಣಿಸಿಕೊಳ್ಳಬಹುದು. ಆದರೆ ಬಳಿಕ ಮೈಕೈ ನೋವು, ತಲೆನೋವು, ತೀವ್ರ ಸುಸ್ತು ಇತ್ಯಾದಿಗಳು ಇರುತ್ತವೆ. ಹೀಗಾಗಿ ಕೂಡಲೇ ವೈದ್ಯರ ತಪಾಸಣೆ ಅಗತ್ಯ. ಮಲೇರಿಯಾ ರೋಗಾಣು ಕೇವಲ ಅನಾಫಿಲಿಸ್ ಹೆಣ್ಣು ಸೊಳ್ಳೆಗಳ ಮೂಲಕ ಮಾತ್ರ ಹರಡುತ್ತವೆ. ಸೊಳ್ಳೆ ಕಡಿತವಾಗದಂತೆ ನೆಟ್ ಹಾಕುವುದು, ಮೈ ಪೂರ್ತಿ ಬಟ್ಟೆ ತೊಟ್ಟುಕೊಳ್ಳುವುದು ಮಾಡಬೇಕು. ಮನೆ ಸುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು.
ಡೆಂಘೆ
ಈಡಿಸ್ ಈಜಿಪ್ಟಿ ಎಂಬ ಸೊಳ್ಳೆ ಕಚ್ಚುವುದರಿಂದ ಡೆಂಘೆ ಜ್ವರ ಹಬ್ಬುತ್ತದೆ. ಈ ಸೊಳ್ಳೆ ಹಗಲಲ್ಲೇ ಕಚ್ಚುತ್ತದೆ. ಈ ಕಾರಣಕ್ಕಾಗಿ ಜ್ವರ ವೇಗವಾಗಿ ಹರಡುತ್ತದೆ. ಮೈ ಕೈ ನೋವು, ಬೆನ್ನು ನೋವು, ವಾಂತಿ-ಭೇದಿ, ನಿಶ್ಯಕ್ತಿಗಳು ಕಾಡುತ್ತವೆ. ಕಣ್ಣು ಕೆಂಪಾದ ಲಕ್ಷಣ, ವಾಂತಿ ಇತ್ಯಾದಿ ಆದರೆ ಕೂಡಲೇ ವೈದ್ಯರನ್ನು ಕಾಣಬೇಕು. ಜ್ವರ ತಗುಲಿ ಹೆಚ್ಚಾದರೆ, ರಕ್ತದ ಕಣಗಳು ಕಡಿಮೆಯಾಗುತ್ತದೆ. ಬಿಳಿ ರಕ್ತಕಣ ಕಡಿಮೆಯಾಗಿ ರೋಗ ನಿರೋಧಕ ಶಕ್ತಿ ಕುಂದುತ್ತದೆ. ಹೀಗಾಗಿ ನಿರ್ಲಕ್ಷ್ಯ ಸರಿಯಲ್ಲ.