ಬಂಟ್ವಾಳ

ಮನೆಯಂಗಣದಿಂದ ವಿದ್ಯಾಂಗಣಕ್ಕೆ ತೆರಳಿದ ಮಕ್ಕಳಿಗೆ ಸ್ವಾಗತ

ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳೂ ಸೇರಿದಂತೆ ಬಂಟ್ವಾಳ ತಾಲೂಕಿನ ಒಟ್ಟು 388 ಶಾಲೆಗಳಲ್ಲಿ ಮನೆಯಂಗಣದಿಂದ ವಿದ್ಯಾಂಗಣಕ್ಕೆ ಎಂಬ ಸ್ಲೋಗನ್ ಜೊತೆಗೆ ವಿಶಿಷ್ಟವಾಗಿ ಶಾಲಾ ಪ್ರಾರಂಭೊತ್ಸವವನ್ನು ಆಚರಿಸಲಾಯಿತು.

ತಾಲೂಕು ಮಟ್ಟದ ಕಾರ್ಯಕ್ರಮವು ಸಾರ್ವಜನಿಕ ಶಿಕ್ಷಣ ಇಲಾಖೆ, ದ.ಕ. ಜಿ.ಪಂ., ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಹಿ.ಪ್ರಾ.ಶಾಲೆ ಕೆದ್ದಳಿಕೆ ಸಹಯೋಗದಲ್ಲಿ ನಡೆಯಿತು.

ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸುವ ಮೂಲಕ ಕೆದ್ದಳಿಕೆ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.

ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳು ಶಿಕ್ಷಣ ವಂಚಿತರಾಗಬಾರದು.ಪ್ರತಿ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದ ಅವರು ಜಿಲ್ಲೆಯಾದ್ಯಂತ ಇಂದು ಶಾಲಾ ಪ್ರಾರಂಭೋತ್ಸವ ನಡೆಯುತ್ತಿದ್ದು ಇದನ್ನು ತಾಲೂಕು ಮಟ್ಟದಲ್ಲಿ ವಿಶಿಷ್ಟವಾಗಿ ಆಚರಿಸುವ ಮೂಲಕ ಶೈಕ್ಷಣಿಕ ಜಾಗೃತಿ ಮೂಡಿಸುವ ಇಲ್ಲಿನ ಕಾರ್ಯಕ್ರಮ ಇತರೆಡೆಗಳಿಗೆ ಮಾದರಿಯಾಗಿದೆ. ಶೈಕ್ಷಣಿಕ ಪ್ರಗತಿಗಾಗಿ ಮತ್ತು ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿ ನಲ್ಲಿ ಸರಕಾರ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು  ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಗುವ ಮೂಲಕ ಸದೃಢ ದೇಶವನ್ನು ಕಟ್ಟುವಂತಾಗಬೇಕು ಎಂದು ಹೇಳಿದರು.

ಮಕ್ಕಳಿಗೆ ಫಲ ಪುಷ್ಪ-ಹಾರಾರ್ಪಣೆ,ಆರತಿ ಬೆಳಗಿಸುವಿಕೆ ,ಸಿಹಿ ತಿಂಡಿ ವಿತರಣೆ,ಶಾಲಾ ದೇಗುಲಕ್ಕೆ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮಗಳೊಂದಿಗೆ ಕೆದ್ದಳಿಕೆ ಶಾಲಾ ಪ್ರಾರಂಭೋತ್ಸವ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು. ವಾದ್ಯ-ಬ್ಯಾಂಡ್‌ಗಳ ನಿನಾದ, ವಿವಿಧ ವೇಷ ಭೂಷಣಗಳ ಕುಣಿತ, ವಿವಿಧ ಘೋಷಣೆಗಳ ಆಕರ್ಷಣೆಯೊಂದಿಗೆ ನೂತನವಾಗಿ ಒಂದನೇ ತರಗತಿಗೆ ಸೇರ್ಪಡೆಗೊಂಡ ಮಕ್ಕಳನ್ನು ಮೆರವಣಿಗೆ ಮೂಲಕ ಶಾಲೆಗೆ ಕರೆತರಲಾಯಿತು. ಇದೇ ವೇಳೆ ಹೊರೆ ಕಾಣಿಕೆ ಉಗ್ರಾಣವನ್ನು ಚಂದ್ರಹಾಸ ಕರ್ಕೇರ ಅವರು ಉದ್ಘಾಟಿಸಿದರು.

ದಿಬ್ಬಣ ಮೆರವಣಿಗೆಯಲ್ಲಿ ಬಂದ ಮಕ್ಕಳನ್ನು ಶಾಲಾ ಬಳಿ ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಪನ್ನೀರು ಸಿಂಪಡಿಸಿ , ಹೂ ಹಾಕಿ ಸ್ವಾಗತಿಸಿದರು. ಬಳಿಕ  ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಹಣ್ಣು ಹಂಪಲು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಊರವರಿಂದ ಶಾಲೆಗೆ ಹೊರೆಕಾಣಿಕೆ ನೀಡಲಾಯಿತು. ತರಕಾರಿಗಳು, ಅಕ್ಕಿ, ತೆಂಗಿನಕಾಯಿ ಮೊದಲಾದ ಹೊರೆಕಾಣಿಕೆ ಶಾಲೆಗೆ ಸಮರ್ಪಣೆಯಾಯಿತು.

ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ ಅವರು ಮಾತನಾಡಿ ತಾಲೂಕಿನಾದ್ಯಂತ ಶಾಲಾ ಪ್ರಾರಂಭೊತ್ಸವವನ್ನು ವಿಶಿಷ್ಠವಾಗಿ ಆಚರಿಸಲಾಗುತ್ತಿದೆ.ಸರಕಾರ ಸರಕಾರಿ ಶಾಲೆಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದ್ದು ಪೋಷಕರು ಮತ್ತು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್,ಬಂಟ್ವಾಳ ತಾ.ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ತಾ.ಪಂ.ಸ್ಥಾಯಿ ಸಮಿತಿ ಸದಸ್ಯೆ ಧನಲಕ್ಷಿ  ಬಂಗೇರ,ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೊ, ಬೂಡ ಆಧ್ಯಕ್ಷ ಸದಾಶಿವ ಬಂಗೇರ.ತ.ಪಂ.ಸದಸ್ಯೆ ಬೇಬಿ ಕೃಷ್ಣಪ್ಪ, ಶಿಕ್ಷಣ ಸಂಪನ್ಮೂಲಾಧಿಕಾರಿ ರಾಜೇಶ್, ಶಿಕ್ಷಣ ಸಂಯೋಜಕ ಶ್ರೀಕಾಂತ್ ಅವರು ಶುಭ ಹಾರೈಸಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ಕಾವಳಕಟ್ಟೆ, ಮಾಜಿ ಅಧ್ಯಕ್ಷ ದಿವಾಕರ ದಾಸ್, ಗ್ರಾ.ಪಂ. ಅಧ್ಯಕ್ಷ ಸಂತೋಷ್ ಪೂಂಜ, ಉಪಾಧ್ಯಕ್ಷೆ ಚಂದ್ರಾವತಿ,ಸದಸ್ಯರಾದ ಮೋಹನ ಆಚಾರ್ಯ, ಸತೀಶ್ ಪಡಂತ್ರಬೆಟ್ಟು ,ಶಾಲಾ ಶಿಕ್ಷಕ ವೃಂದ,ಶಾಲಾಭಿವೃದ್ಧಿ ಸಮಿತಿ  ಸದಸ್ಯರು,ಪೋಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಲೇಖನ ಪುಸ್ತಕಗಳನ್ನು ವಿತರಿಸಲಾಯಿತು. ಇದೇ ವೇಳೆ ಕಾವಳಮೂಡೂರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸರಕಾರದಿಂದ ಉಚಿತವಾಗಿ ಕೊಡ ಮಾಡಿದ ಸೈಕಲ್‌ಗಳನ್ನು ವಿತರಿಸಲಾಯಿತು. ಎಸ್ಸೆಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಶಾಲಾ ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 

ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಅವರು ಸ್ವಾಗತಿಸಿದರು. ಮುಖ್ಯ ಶಿಕ್ಷಕ ರಮೇಶ ನಾಯಕ್ ರಾಯಿ ಅವರು ಪ್ರಸ್ತಾವಿಸಿದರು. ಶಾಲಾ ಸಂಪನ್ಮೂಲ ವ್ಯಕ್ತಿ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಚಂದಪ್ಪ ವಂದಿಸಿದರು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ