ಸರಕಾರ ಎಲ್.ಕೆ.ಜಿ ಆರಂಭಿಸುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಮಕ್ಕಳನ್ನು ದಡ್ಡಲಕಾಡು ಸರಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸಕ್ಕೆ ಕಳುಹಿಸುವುದಾಗಿ ಪೋಷಕರು ತೀರ್ಮಾನಿಸಿದ್ದಾರೆ.
ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಯಿಂದ ಆಂಗ್ಲ ಭಾಷೆ ಕಲಿಕೆ ನಿಷೇಧಗೊಳಿಸಬೇಕು ಎನ್ನುವ ಶಿಕ್ಷಣ ಇಲಾಖೆ ಆದೇಶದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಕೆಲವು ಶಾಲೆಗಳಲ್ಲಿ ಶಾಲಾ ಆರಂಭೋತ್ಸವ ಉತ್ಸಾಹ ಕಳೆದುಕೊಂಡಿತ್ತು.
ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಎಲ್‌ಕೆಜಿ, ಯುಕೆಜಿಗೆ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ದಾಖಲಾತಿಗೊಳಿಸಿರುವ ದಡ್ಡಲಕಾಡು ಶಾಲೆಯಲ್ಲಿ ಶಾಲಾ ಆರಂಭೋತ್ಸವ ನಡೆದಿದ್ದರೂ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಲ್ಲಿ ಸಂಭ್ರಮವಿರಲಿಲ್ಲ. ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತಾದರೂ ಪೋಷಕರಲ್ಲಿ ಆತಂಕ ಮನೆ ಮಾಡಿತ್ತು. ಆದರೂ ಶಿಕ್ಷಣ ಇಲಾಖೆಯ ಈ ದ್ವಂದ್ವ ನೀತಿಯ ವಿರುದ್ದ ಸಂಘಟಿತರಾಗಿರುವ ವಿದ್ಯಾರ್ಥಿಗಳ ಪೋಷಕರು ಮಹತ್ವದ ತೀರ್ಮಾನ ಕೈಗೊಂಡಿದ್ದು ಶಾಲೆಯಲ್ಲಿ ಆಂಗ್ಲ ಭಾಷೆ ಕಲಿಕೆ ಇರಲಿ ಅಥವಾ ಇಲ್ಲದೇ ಇರಲಿ ಇದೇ ಶಾಲೆಯಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಮುಂದುವರೆಸುವುದಾಗಿ ತಿಳಿಸಿದರು.
ಶಾಲೆಯನ್ನು ದತ್ತು ಸ್ವೀಕರಿಸಿರುವ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಮಾತನಾಡಿ ಶಾಲೆ ಆರಂಭೊತ್ಸವ ವಿಜ್ರಂಭಣೆಯಿಂದ ನಡೆಯಬೇಕಿತ್ತು. ೨ ವರ್ಷದಿಂದ ಈ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಹಾಗೂ ಆಂಗ್ಲ ಭಾಷೆ ಕಲಿಕೆ ಆರಂಭಿಸಲು ಶಿಕ್ಷಣ ಇಲಾಖೆಯೇ ಅನುಮತಿ ನೀಡಿ ಏಕಾಏಕಿ ರದ್ದುಗೊಳಿಸಿದೆ. ಇಂದು ಆರುನೂರು ವಿದ್ಯಾರ್ಥಿಗಳ ಪೋಷಕರು ಬಂದು ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡರೂ ಯಾರಲ್ಲೂ ಸಂಭ್ರಮವಿಲ್ಲ. ರಾಜ್ಯ ಉಚ್ಛ ನ್ಯಾಯಾಲಯದ ತೀರ್ಪನ್ನು ಕಾಯಲಾಗುತ್ತಿದ್ದು ಪರವಾದ ತೀರ್ಪು ಬಂದರೆ ಎಲ್‌ಕೆಜಿ, ಯುಕೆಜಿ ಹಾಗೂ ಆಂಗ್ಲಭಾಷೆ ಕಲಿಕೆ ಯಥಾ ಸ್ಥಿತಿಯಲ್ಲಿ ಮುಂದುವರಿಯಲಿದೆ, ವಿರುದ್ದವಾಗಿ ಬಂದರೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಮುಂದುವರೆಸುತ್ತೇವೆ, ಯಾವುದೇ ಕಾರಣಕ್ಕೂ ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ದಾಖಲಾತಿ ಮಾಡುವುದಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ಭರವಸೆ ನೀಡಿರುವುದಾಗಿ ತಿಳಿಸಿದರು.
ದಡ್ಡಲಕಾಡು ಶಾಲೆಯಲ್ಲಿ ೩೩ ಇದ್ದ ಮಕ್ಕಳ ಸಂಖ್ಯೆ ಇಂದು ಆರುನೂರಕ್ಕೇರಿದೆ. ಸರಕಾರಿ ಶಾಲೆಯನ್ನು ಉಳಿಸುವ ಇಂತಹ ಕಾರ್ಯಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಬೇಕಾಗಿಲ್ಲ. ಸರಕಾರಿ ಶಾಲೆ ಉಳಿಸಲು ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ತಿಳಿಸಿದರು. ಶಾಲಾ ಆರಂಭೋತ್ಸವಕ್ಕೆ ಮುನ್ನ ಕರೆಂಕಿ ಶ್ರೀ ದುರ್ಗಾ ಪರಮೇಶ್ವರೀ ದೇವಿ ದೇವಸ್ಥಾನದಲ್ಲಿ ವಿದ್ಯಾರ್ಥಿಗಳ ಪೋಷಕರು ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಸದಸ್ಯರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.