ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನಿಂತಿದ್ದ ಹತ್ತಾರು ಮಂದಿಯ ಪೈಕಿಯಲ್ಲಿ ಆ ಮೂವರು ಭಿನ್ನವಾಗಿ ಅತ್ತಿತ್ತ ನೋಡುತ್ತಿದ್ದರು. ನಡವಳಿಕೆ ಅನುಮಾನಾಸ್ಪದವಾಗಿತ್ತು. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗುಡಲೂರು ವಾಸಿಗಳಾದ ತಮಿಳ್ ಸೆಲ್ವಿ ಅಲಿಯಾಸ್ ಲಕ್ಷ್ಮಿ, ಶಾಂತಕುಮಾರ್ ಮತ್ತು ಚಂದ್ರಕುಮಾರ್ ಅಲಿಯಾಸ್ ಕುಮಾರ್ ಎಂಬ ಈ ಮೂವರ ಕೈಯಲ್ಲಿದ್ದ ಎರಡು ಬ್ಯಾಗುಗಳಲ್ಲಿದ್ದುದು ಗಾಂಜಾ ಎಂಬ ಅನುಮಾನ ಹಾಗೂ ಖಚಿತ ಮಾಹಿತಿಯನ್ವಯ ಪೊಲೀಸರು ಮಂಗಳವಾರ ಬಸ್ ನಿಲ್ದಾಣದಲ್ಲಿ ಅವರನ್ನು ಸಿಬ್ಬಂದಿಗಳ ಸಹಾಯದಿಂದ ವಶಕ್ಕೆ ತೆಗೆದುಕೊಂಡರು. ಈ ಸಂದರ್ಭ ಪತ್ತೆಯಾದದ್ದು ಇವು.
2 kg ತೂಕದ 10 ಪೊಟ್ಟಣಗಳ ಗಾಂಜಾ, ಮೂರು ಮೊಬೈಲ್, 1100 ರೂ. ನಗದು. ಗಾಂಜಾದ ಮೌಲ್ಯ 4 ಲಕ್ಷ ರೂ.
ಖಚಿತ ವರ್ತಮಾನದಂತೆ ಹಾಗೂ ಮೇಲಧಿಕಾರಿಗಳ ನಿರ್ದೇಶನದಂತೆ ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್, ಡಿಸಿಐಬಿ ನಿರೀಕ್ಷಕ ಅಮಾನುಲ್ಲಾ ಮತ್ತು ಸಿಬ್ಬಂದಿ ದಾಳಿಯನ್ನು ನಡೆಸಿ, ತನಿಖೆ ನಡೆಸಿದಾಗ ಆರೋಪಿಗಳು ವಿಜಯವಾಡದಿಂದ ಗಾಂಜಾ ಖರೀದಿಸಿ ನಂತರ ತಮಿಳುನಾಡಿನ ಗುಡಲೂರುವಿನಿಂದ ಕಾರ್ಕಳಕ್ಕೆ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಪಿಎಸ್ಐ ರಾಮಾನಾಯ್ಕ, ಕೊರಗಪ್ಪ, ಸಿಬ್ಬಂಧಿಗಳಾದ ತಾರಾನಾಥ, ಲಕ್ಮಣ್, ಪಳನಿ ವೇಲು, ಉದಯ ರೈ, ಸಂಜೀವ ಪುರುಷ, ಇಕ್ಬಾಲ್, ವಾಸು, ವಿಜಯ ಗೌಡ, ಸೀತಾರಾಮ ಗೌಡ, ಸತ್ಯಪ್ರಕಾಶ, ವಿಶ್ವನಾಥ ನಾಯಕ್ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಎಸ್ಪಿ ಭೂಷಣ್ ಬೊರಸೆ ತಂಡವನ್ನು ಶ್ಲಾಘಿಸಿದ್ದು ಬಹುಮಾನವನ್ನೂ ಘೋಷಿಸಿದ್ದಾರೆ.