“ಒಂದನೇ ತರಗತಿಯಿಂದಲೇ ಇಲ್ಲಿ ಇಂಗ್ಲೀಷ್ ಹೇಳಿಕೊಡಲಾಗುವುದು, ಎಲ್‌ಕೆಜಿ, ಯುಕೆಜಿ ಶಿಕ್ಷಣವೂ ನಮ್ಮಲ್ಲಿಯೂ ಲಭ್ಯ”
ಈ ಘೋಷಣೆಯೊಂದಿಗೆ ಖಾಸಗಿ ಶಾಲೆಗಳಿಗೆ ಹೋಗುವ ಮಕ್ಕಳನ್ನು ತಮ್ಮತ್ತ ಸೆಳೆದು ಸರಕಾರಿ ಶಾಲೆ ಉಳಿಸಲು ಹೊರಟ ಶಾಲಾಭಿವೃದ್ಧಿ ಸಮಿತಿ ಮತ್ತು ಸರಕಾರಿ ಶಾಲೆಗಳನ್ನು ಉಳಿಸುವ ಸಂಘಟನೆಗಳಿಗೆ ಬರಸಿಡಿಲಾಗಿ ಎರಗಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ. ಎಸ್.ಡಿ.ಸಿದ್ದರಾಮಯ್ಯ ಸೂಚನೆ. ಅವರ ಸೂಚನೆಯಂತೆ ಶಿಕ್ಷಣ ಇಲಾಖೆ ಎಲ್.ಕೆ.ಜಿ. ಮತ್ತು ಯು.ಕೆ.ಜಿ.ಯನ್ನು ಸರಕಾರಿ ಶಾಲೆಗಳಲ್ಲಿ ನಡೆಸುವುದನ್ನು ರದ್ದುಗೊಳಿಸಿ ಆದೇಶಿಸಿದೆ.
ಇದೀಗ ಈ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಬಂಟ್ವಾಳ ತಾಲೂಕು ದಡ್ಡಲಕಾಡು ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಈ ಕುರಿತು ಸೋಮವಾರ ಬೃಹತ್ ಪ್ರತಿಭಟನೆಯೂ ನಡೆಯಿತು. ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಪ್ರಗತಿಪರ ಕೃಷಿಕ ರಾಜೇಶ್‌ನಾಕ್ ಉಳಿಪಾಡಿಗುತ್ತು, ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ , ಪುರಸಭಾ ಸದಸ್ಯ ದೇವದಾಸ ಶೆಟ್ಟಿ, ಹರಿಕೃಷ್ಣ ಬಂಟ್ವಾಳ್, ಜಿತೇಂದ್ರ ಕೊಟ್ಟಾರಿ, ಜೆಸಿಐ ಅಧ್ಯಕ್ಷ ಡಾ. ಬಾಲಕೃಷ್ಣ ಅಗ್ರಬೈಲು, ತಾ.ಪಂ.ಸದಸ್ಯ ಗಣೇಶ್ ಸುವರ್ಣ, ವಿಶ್ವ ಹಿಂದೂ ಪರಿಷತ್ ತಾಲೂಕು ಘಟಕ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ನುಳಿಯಾಲುಗುತ್ತು, ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷೆ ಸುಮಿತ್ರ ಯೋಗೀಶ್, ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಗೌಡ, ಸದಸ್ಯ ಪೂವಪ್ಪ ಮೆಂಡನ್, ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ತಾ.ಪಂ.ಮಾಜಿ ಸದಸ್ಯ ಸೋಮಪ್ಪ ಕೋಟ್ಯಾನ್, ದಾಮೋದರ ನೆತ್ತರಕೆರೆ, ಜಿ.ಆನಂದ, ಕೇಶವ ಡಿ, ಮಚ್ಚೇಂದ್ರ ಸಾಲ್ಯಾನ್, ಪುರುಷೋತ್ತಮ ಸಾಲ್ಯಾನ್ ಶಂಭೂರು, ಶರತ್‌ಕುಮಾರ್ , ಸಹಿತ ದುರ್ಗಾ ಫ್ರೆಂಡ್ಸ್ ಕ್ಲಬ್ ಸದಸ್ಯರು, ಶಾಲಾ ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಫ್ಲೈಓವರ್ ಅಡಿಯಲ್ಲಿ ನಡೆದ ಪ್ರತಿಭಟನೆಗೆ ಸ್ಪಂದಿಸಲು ಯಾರೂ ಬಾರದಿದ್ದಾಗ ಹೆದ್ದಾರಿ ತಡೆದು ರಸ್ತೆ ಬ್ಲಾಕ್ ಮಾಡಲಾಯಿತು. ಈ ಸಂದರ್ಭ ಆಗಮಿಸಿದ ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತು ಶಿಕ್ಷಣಾಧಿಕಾರಿ ಕಚೇರಿ ಸಿಬ್ಬಂದಿ ಅವರಿಗೆ ಮನವಿಪತ್ರ ನೀಡಲಾಯಿತು. ಸಮಸ್ಯೆ ಪರಿಹಾರಕ್ಕೆ ಸಂಘಟನೆ ಒಂದು ವಾರದ ಗಡುವನ್ನು ನೀಡಿದೆ. ಬಂಟ್ವಾಳ ನಗರ ಠಾಣಾಧಿಕಾರಿ ರಕ್ಷಿತ್ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.
ಏನು ಸಮಸ್ಯೆ:
ಕನ್ನಡ ಮಾಧ್ಯಮ ಕಲಿಕೆಯ ಬದಲು ಇಂಗ್ಲೀಷ್ ಕಲಿಕೆಗೆ ಒತ್ತು ನೀಡುವ ಕಾರಣ, ಸರಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ. ಬೇಡ ಎಂಬ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಸೂಚನೆ ಹೊರಡಿಸಿದ್ದನ್ನು ಚಾಚೂ ತಪ್ಪದೆ ಪಾಲಿಸಿರುವ ಶಿಕ್ಷಣ ಇಲಾಖೆ, ಮತ್ತೆ ಸರಕಾರಿ ಶಾಲೆಗಳಿಗೆ ಬೀಗ ಜಡಿಯಲು ಪರೋಕ್ಷವಾಗಿ ಕಾರಣವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಊರ ಸರ್ಕಾರಿ ಶಾಲೆಯಲ್ಲಿಯೇ ಎಲ್‌ಕೆಜಿ ಶಿಕ್ಷಣ ಸಿಗುತ್ತದೆ ಎಂದು ಹೊಸದಾಗಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಿರುವ ಮಕ್ಕಳ ಪೋಷಕರು ತಲೆ ಮೇಲೆ ಕೈ ಹೊತ್ತು ಕುಳಿತರೆ, ಮತ್ತೆ ಖಾಸಗಿ ಶಾಲೆಗಳು ಇಂಗ್ಲೀಷ್ ಕಲಿಯಬೇಕಾದರೆ ನಾವು ಅನಿವಾರ್ಯ ಎಂದು ಬೀಗುತ್ತಿದ್ದಾರೆ.
for video link click: