ವಿಶೇಷ ವರದಿ

ರಜೆಯ ಸವಿಯನ್ನು ಹೆಚ್ಚಿಸಿದ ಬೇಸಗೆ ಶಿಬಿರ

ಮಕ್ಕಳ ತಂಡಗಳು ಮೂರು, ಒಂದು ನೀರುದೋಸೆ, ಮತ್ತೊಂದು ತುಪ್ಪ ದೋಸೆ, ಮತ್ತೊಂದು ಮಸಾಲೆದೋಸೆ.. ನಾಟಕ ಅಭಿನಯದಲ್ಲಿ ಯಾರು ಚತುರರು ಎಂಬ ಕುತೂಹಲ. ಎರಡೇ ದಿನ ಪ್ರಾಕ್ಟೀಸ್…

ಜನಪದ ಕಥೆ ಆಧರಿಸಿದ ರಾಜ ಮತ್ತು ಮಾಲಿ ನಾಟಕದ ಪ್ರದರ್ಶನವಿದು. ವೇದಿಕೆ ಸಿದ್ಧಗೊಂಡದ್ದು ಬಿ.ಸಿ.ರೋಡಿನ ಸ್ತ್ರೀಶಕ್ತಿ ಭವನದಲ್ಲಿ. ನಿರ್ದೇಶಕ ಮೌನೇಶ ವಿಶ್ವಕರ್ಮ.ಶನಿವಾರ ಬೆಳಗ್ಗೆ ಈ ಪ್ರದರ್ಶನ ನಡೆದಾಗ ಎಲ್ಲ ತಂಡಗಳಿಗೂ ಸೂಪರ್ ಎಂಬ ಶಹಭಾಸ್ ಗಿರಿ.

pic: kishore peraje

ಮೊಬೈಲ್ ಹಿಡಿದರೆ ಮಕ್ಕಳನ್ನು ಹಿಡಿಯುವವರಿಲ್ಲ ಎಂಬ ಪೋಷಕರು, ಹೆತ್ತವರ ಗೋಳು ಇದ್ದದ್ದೇ. ಇದನ್ನು ನೀಗಿಸಲೆಂದೇ ಬೇಸಗೆ ಶಿಬಿರಗಳು, ಸಮ್ಮರ್ ಕ್ಯಾಂಪ್ ಹೆಸರಲ್ಲಿ ಸಾವಿರಾರು ರೂ. ಫೀಸು ನೀಡಿ ಮಕ್ಕಳನ್ನು ಕಳುಹಿಸುವುದೂ ಸಾಮಾನ್ಯವಾಗಿದೆ. ಇಂಥ ಸನ್ನಿವೇಶದಲ್ಲಿ ತಾಲೂಕಿನ ವಿವಿಧೆಡೆಯ ಮಕ್ಕಳನ್ನು ಒಂದೆಡೆ ಸೇರಿಸಿ, ಹತ್ತು ದಿನ ಆಟ, ನೃತ್ಯ, ಪಾಠಗಳನ್ನು ಕಲಿಸಿ, ನಾಟಕ ಮಾಡಿಸಿ, ಮುಖವಾಡ ತಯಾರಿಸಿ ರಜೆಯ ಸವಿಯ ಜೊತೆಗೆ ಸವಿಯೂಟ ಉಣಿಸಿ ಖುಷಿಯಿಂದ ಮಕ್ಕಳನ್ನು ಕಳುಹಿಸಿಕೊಡುವ ಕೆಲಸವನ್ನು ಸರಕಾರದ ಇಲಾಖೆಯೇ ಮಾಡಿತು.. ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಕಾರಿ ಕಚೇರಿ ರೋಟರಿ ಕ್ಲಬ್ ಬಂಟ್ವಾಳದ ಸಹಯೋಗ ಪಡೆದುಕೊಂಡು ಬಿ.ಸಿ.ರೋಡಿನ ಸ್ತ್ರೀಶಕ್ತಿ ಭವನದಲ್ಲಿ ಹತ್ತು ದಿನಗಳ ಕಾಲ ರಜಾಶಿಬಿರವನ್ನು ಉಚಿತವಾಗಿಯೇ ನಡೆಸಿತು.

ಬಂಟ್ವಾಳ ತಾಲೂಕಿನ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು ೫೪ ಮಕ್ಕಳು ಇದರಲ್ಲಿ ಪಾಲ್ಗೊಂಡರು.

ಆಶಾ ಯಾದವ್ ಮಕ್ಕಳಿಗೆ ಸಮೂಹ ನೃತ್ಯ ಹೇಳಿಕೊಟ್ಟರೆ, ಪುತ್ತೂರಿನ ಸಾಧನಾ ಸಂಗೀತ ವಿದ್ಯಾಲಯದ ಸುಮನಾ ನಂದಿನಿ ಸಮೂಹ ಗಾನ ಕಲಿಸಿದರು. ಶಿಕ್ಷಕಿ ಕ್ಯಾಥರೀನ್ ಕರಕುಶಲ ಕಲೆಯನ್ನು ಸುಲಭದಲ್ಲಿ ಮಾಡುವ ವಿಧಾನವನ್ನು ಕಲಿಸಿದರೆ ಚಿತ್ರಕಲಾ ಶಿಕ್ಷಕಿ ಜಯಂತಿ ಬಣ್ಣಗಳನ್ನು ಹೇಗೆ ಸರಿಯಾಗಿ ಬಳಸುವುದು ಎಂಬ ಪಾಠ ಮಾಡಿ, ಮಕ್ಕಳನ್ನೂ ಬಣ್ಣಗಳ ಲೋಕದಲ್ಲಿ ತೇಲಾಡಿಸಿದರು. ಕಾಸರಗೋಡಿನ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಅಶೋಕ್ ಕುಮಾರ್ ಕಾಸರಗೋಡು ಕಥೆ ಬರೆಯುವುದು, ಕವನ ರಚನೆ, ಬರವಣಿಗೆಯ ಕಲೆ ಕುರಿತು ಮಕ್ಕಳಿಗೆ ಮನದಟ್ಟು ಮಾಡಿದರು. ರಂಗಕರ್ಮಿ ಮೌನೇಶ ವಿಶ್ವಕರ್ಮ ರಂಗದ ಆಟಗಳ ಮೂಲಕ ನಡೆಸಿದರು. ಮಕ್ಕಳಿಗೆ ಆಟ ಕುಣಿತ ಉಲ್ಲಾಸವನ್ನು ನೀಡಿತಲ್ಲದೇ ಶಿಬಿರದ ಇತರ ಮಕ್ಕಳೊಂದಿಗೆ ಹೊಂದಿಕೊಳ್ಳಲು ಸಹಕಾರಿಯಾಯಿತು. ಅನಿತಾ ಮುರಳೀಕೃಷ್ಣ ಅವರಿಂದ ಮಕ್ಕಳು ಯೋಗಾಭ್ಯಾಸ ಕಲಿತರು,

ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಕಾರಿ ಮಲ್ಲಿಕಾ ಮಾರ್ಗದರ್ಶನದಲ್ಲಿ ಹಿರಿಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ ಶಿಬಿರದ ನೇತೃತ್ವ ವಹಿಸಿದ್ದರು. ಸಮಾರೋಪ ಸಮೃರಂಭದಲ್ಲಿ ಮಕ್ಕಳು ತಾವು ತಯಾರಿಸಿದ ಕ್ರಾಫ್ಟ್ ವರ್ಕ್‌ಗಳು, ಮುಖವಾಡಗಳು, ಕಥೆ, ಕವನ, ಚಿತ್ರಗಳನ್ನು ಪ್ರದರ್ಶಿಸಿದರು. ಸಮಾರೋಪದ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ವಹಿಸಿದ್ದರೆ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಕಾರಂತ, ನಿಯೋಜಿತ ಅಧ್ಯಕ್ಷ ಸಂಜೀವ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಇವರ ಮುಂದೆ ಮಕ್ಕಳು ತಾವು ಕಲಿತ ನಾಟಕವನ್ನು ಯಾವ ಸೀನಿಯರ್ ಕಲಾವಿದರಿಗೂ ಕಮ್ಮಿ ಇಲ್ಲದಂತೆ ಪ್ರದರ್ಶಿಸಿದ್ದು ವಿಶೇಷ.

for video click:

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts