ಸಜೀಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿ ದೇವಭೂಮಿ ಮಾದರಿಯಲ್ಲಿ ನಿರ್ಮಾಣಗೊಂಡ ರುದ್ರಭೂಮಿ ಲೋಕಾರ್ಪಣೆ ಗುರುವಾರ ನಡೆಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ 12 ಅಡಿ ಎತ್ತರದ ಶಿವನ ಮೂರ್ತಿ ಲೋಕಾರ್ಪಣೆ ಮಾಡಿದರೆ, ಜಿಪಂ ಮಾಜಿ ಅಧ್ಯಕ್ಷ ಬರಂಗರೆ ಸದಾನಂದ ಪೂಂಜ ತ್ರಿಶೂಲ ಸ್ತಂಭ, ಜಿಪಂ ಸದಸ್ಯ ರವೀಂದ್ರ ಕಂಬಳಿ ಪ್ರಕೃತಿ ವೀಕ್ಷಣಾ ಕೇಂದ್ರವನ್ನು ಹಾಗೂ ಬಿಜೆಪಿ ನಾಯಕ ರಾಜಗೋಪಾಲ ರೈ ಸತ್ಯಹರಿಶ್ಚಂದ್ರನ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು.
ಈ ಸಂದರ್ಭ ಮಾತನಾಡಿದ ಡಾ. ಭಟ್, ಭಾರತೀಯರು ಸಾವಿಗೆ ಹೆದರುವವರಲ್ಲ. ಹುಟ್ಟಿನಿಂದ ಸಾವಿನವರೆಗಿನ ಸಂಸ್ಕಾರವನ್ನು ಪಡೆಯುತ್ತಾರೆ. ಇದನ್ನು ಉಳಿಸುವ ಕೆಲಸವನ್ನು ಮಾಡಬೇಕು. ಈ ನಿಟ್ಟಿನಲ್ಲಿ ರುದ್ರಭೂಮಿ ದೇವಭೂಮಿಯಂತಾಗಿ ಮಾರ್ಪಾಟಾಗಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸದಾನಂದ ಪೂಂಜ ಮಾತನಾಡಿ, ಹುಟ್ಟಿನಿಂದ ಸಾವಿನವರೆಗಿನ ಜನ್ಮದಲ್ಲಿ ಉತ್ತಮ ಕಾರ್ಯ ನಡೆಸಬೇಕು ಎಂದು ಹೇಳಿದರು. ಜಿಪಂ ಸದಸ್ಯ ರವೀಂದ್ರ ಕಂಬಳಿ 1 ಲಕ್ಷ ರೂ ಅನುದಾನವನ್ನು ಘೋಷಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ರೂವಾರಿ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ, ಸಜೀಪನಡು, ಸಜೀಪಪಡು, ಸಜೀಪಮೂಡ, ಸಜೀಪಮುನ್ನೂರು, ಚೇಳೂರು, ಇರಾ, ಮಂಚಿ ಗ್ರಾಮಗಳಿಗೆ ಸಂಬಂದಿಸಿದಂತೆ ಈ ರುದ್ರಭೂಮಿ ಇದೆ ಎಂದು ಹೇಳಿದರು.
ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮೊಕ್ತೇಸರ ಮುಳ್ಳುಂಜ ವೆಂಕಟೇಶ್ವರ ಭಟ್, ಹಿಂದು ಸಂಘಟನೆಗಳ ಪ್ರಮುಖರಾದ ಶಿವಾನಂದ ಮೆಂಡನ್, ಪ್ರವೀಣ್ ಕುತ್ತಾರ್, ಉದ್ಯಮಿ ಸದಾಶಿವ ಶೆಟ್ಟಿ ತಲೆಮೊಗರು, ನವೀನ್ ಸುವರ್ಣ ಮಿತ್ತಕಟ್ಟ ಉಪಸ್ಥಿತರಿದ್ದರು. ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ದೇವದಾಸ ಅಡಪ ಸ್ವಾಗತಿಸಿದರು. ಪ್ರಮುಖರಾದ ನಾಗೇಶ ಪೂಜಾರಿ ಕುರಿಯಾಡಿ ವಂದಿಸಿದರು. ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
for Video:
also read: