ಪ.ಗೋ. ಅಂಕಣ

ವಿಶೇಷಸೃಷ್ಟಿಗಳ ಲೋಕದಲ್ಲಿ -ಅಂಕಣ 3 : ‘ಇದಕ್ಕೊಂದು ಹೆಡ್ಡಿಂಗ್ ಕೊಡಿ ವೆಂಕಣ್ಣ’

ಪದ್ಯಾಣ ಗೋಪಾಲಕೃಷ್ಣ (1928-1997)

ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪದ್ಯಾಣ ಗೋಪಾಲಕೃಷ್ಣ (1928-1997). ಪ.ಗೋ. ಎಂದೇ ಚಿರಪರಿಚಿತರಾಗಿದ್ದ ಅವರು, ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ ಪ.ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆ.  ಇದು ಪ.ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ ಪ.ಗೋ, ಅವರ ಈ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ  ಪ.ಗೋ ಅವರ ಪುತ್ರ ಸಾಹಿತ್ಯಪ್ರೇಮಿ ಪದ್ಯಾಣ ರಾಮಚಂದ್ರ. (ಪ.ರಾಮಚಂದ್ರ).

ವಿಶೇಷ ಸೃಷ್ಟಿಗಳ ಲೋಕದಲ್ಲಿ ತೃತೀಯ ಕಂತು ಇಲ್ಲಿದೆ…

ಇದಕ್ಕೊಂದು ಹೆಡ್ಡಿಂಗ್  ಕೊಡಿ ವೆಂಕಣ್ಣ

ಯಾವುದಾದರೂ ಉದ್ಯೋಗವನ್ನು ಗಳಿಸಿಕೊಳ್ಳಬೇಕಾದರೆ, ಆ ಉದ್ಯೋಗದ ಬಗ್ಗೆ ಕೆಲವು ಮೂಲಭೂತ ತಿಳುವಳಿಕೆಯನ್ನು ಪಡೆದಿರಬೇಕಾಗುತ್ತದೆ ಎಂಬ ಸಾಮಾನ್ಯ ಜ್ಞಾನದ ಅಗತ್ಯವೂ ಅದುವರೆಗಿನ ನನ್ನ ಜೀವನ ಕ್ರಮದಿಂದಾಗಿ-ಪತ್ರಿಕೋದ್ಯಮವನ್ನು ಪ್ರವೇಶಿಸಿದಾಗ ನನಗೆ ಗೊತ್ತಿರಲಿಲ್ಲ.ಮೊದಲೇ ತಿಳಿದುಕೊಳ್ಳಬೇಕಾದ್ದನ್ನು ಕೆಲಸಕ್ಕೆ ಸೇರಿಕೊಂಡ ನಂತರ ತಿಳಿದುಕೊಂಡದಾಯಿತು.6

ಅದುವರೆಗಿನ ಧೋರಣೆ ಸರಿಯಾದುದಲ್ಲವೆಂದು ವಿಶ್ವಕರ್ನಾಟಕದಲ್ಲೇ ಮನವರಿಕೆಯಾಯಿತು. ಆ ಪತ್ರಿಕಾಸಂಸ್ಥೆಯ ಆಗಿನ ಸ್ಥಿತಿಗತಿಯನ್ನೂ ಮೊದಲು ಅದಕ್ಕೆ ಜನ್ಮವಿತ್ತು ಬೆಳೆಸಿದವರೇ ಅನಂತರ ಅದನ್ನು ತೊರೆದು ಹೋಗಬೇಕಾಗಿ ಬಂದ ಪರಿಸ್ಥಿತಿಯನ್ನೂ ಆಗೀಗ ಆಡಳಿತ ವಿಭಾಗದ ಸಹೋದ್ಯೋಗಿಗಳ ಲೋಕಾಭಿರಾಮಕ್ಕೆ ಕಿವಿಗೊಡುತ್ತಿದ್ದ ಕಾರಣ ತಿಳಿದುಕೊಳ್ಳತೊಡಗಿದೆ.

ಸ್ವೊರ್ಡ್ ಕಟ್ ಯುವಕ ಪ.ಗೋ (1970ರ ಸಂಗ್ರಹ)

ಅದರೊಂದಿಗೇ, ಕನ್ನಡ ಪತ್ರಿಕೆಯಲ್ಲಿ ಉಪಸಂಪಾದಕ (ಜೊತೆಗೆ ಅನುವಾದಕ)ನಾಗಿ ಬದುಕಬೇಕಾದರೆ ಏನೆಲ್ಲವನ್ನೂ ತಿಳಿದಿರಬೇಕೆಂಬ ಅರಿವೂ ಮೂಡತೊಡಗಿತು.

ಆಗ, ಸ್ವಾತಂತ್ರ್ಯ ದೊರೆತು ಎಂಟು ವರ್ಷಗಳು ಸಂದಿದ್ದರೂ, ಜೀವತೆತ್ತಾದರೂ ಹೋರಾಟವನ್ನೇ ಮುಂದುವರಿಸುವ ಗುಂಗಿನಲ್ಲೇ ಉಳಿದಿದ್ದ ಹಲವು ಪತ್ರಕರ್ತರು ಬದುಕಿ ಉಳಿದಿದ್ದರು. ಯಾವ ವಿಧಾನದಲ್ಲೇ ಆಗಲಿ, ಅಂಥವರನ್ನು ಉಪಯೋಗಿಸಿಕೊಂಡು ತಮ್ಮ ಸಂಪತ್ತು-ಪ್ರಭಾವಶಕ್ತಿಗಳನ್ನು ಹೆಚ್ಚಿಸಿಕೊಳ್ಳಬೇಕೆಂದು ಬಯಸುವ ದಂಧಾಪತಿಗಳೂ ತಲೆಯೆತ್ತತೊಡಗಿದ್ದರು,

ಉಳಿದು ಇದ್ದವರಿಗೆ, ವೃತ್ತಿಪರ ಶಿಕ್ಷಣದ ಅವಶ್ಯಕತೆ ಇದ್ದಿರಲಿಲ್ಲ. ಮುಂದಿನವರಿಗೆ ಅದನ್ನು ಕೊಡಿಸಬೇಕಾಗುವುದೆಂದು ಅವರು ಯೋಚಿಸಲೂ ಇಲ್ಲ, ಪತ್ರಿಕೆಗಳ ಒಡೆಯರಾಗಲು ಹಾತೊರೆಯುತ್ತಿದ್ದ ಹಣವಂತರಂತೂ- ‘ಪೇಪರ್ ಕೆಲ್ಸ ಅದೇನು ಮಹಾ? ಕಾಸೆಸೆದ್ರೆ ಕೈ ನೆಕ್ಕೋ…. ಮಕ್ಕಳು ಎಷ್ಟೂ ಸಿಗ್ತಾವೆ’-ಎಂದೇ ಭಾವಿಸಿದ್ದರು.

ಮೈಸೂರು ರಾಜ್ಯದಲ್ಲಿ (ಆಗಿನ ಏಕಮಾತ್ರ) ವಿಶ್ವವಿದ್ಯಾಲಯದಲ್ಲಿ ನಾಡಿಗ ಕೃಷ್ಣಮೂರ್ತಿಯವರ ಹಿರಿತನದಲ್ಲಿ ಪತ್ರಿಕೋದ್ಯಮ ವಿಭಾಗವು ಆಗಿನ್ನೂ ಆರಂಭವಾಗಿತ್ತಷ್ಟೆ. ಪದವಿ ಪಡೆಯಬಯಸುವ ವಿದ್ಯಾರ್ಥಿಗಳಿಗಾಗಿ ವಿಭಾಗವು ಹುಡುಕಾಟ ಆರಂಭಿಸಿತ್ತು, ಬೇರೆ ಯಾವ ಕೋರ್ಸಿಗೂ ಅವಕಾಶ ಸಿಗದೆ ಹೇಗೇದರೂ ಒಂದು ಡಿಗ್ರಿ ಸಿಗಬೇಕು ಎನ್ನುವ ವಿದ್ಯಾರ್ಥಿಗಳ ಸೇರ್ಪಡೆಯೂ ಸಾಮಾನ್ಯವಾಗತೊಡಗಿತ್ತು.

ಪತ್ರಿಕೋದ್ಯಮ ತರಗತಿಗಳಿಗೆ- ವಾರಾನ್ನ ಪದ್ಧತಿಗೆ ಮೊರೆ ಹೊಕ್ಕಾದರೂ -ಸೇರಿಕೊಳ್ಳಲೆ ಎಂದು ಒಮ್ಮೆ ಮೂಡಿದ ಆಸೆ, ಹೈಸ್ಕೂಲ್ ಮೆಟ್ಟಿಲನ್ನೂ ಹತ್ತಿರದ ನನಗೆ ಪ್ರವೇಶ ಸಿಗಲಾರದೆಂಬ ವಾಸ್ತವತೆಯ ಅರಿವಾಗಿ, ಕೂಡಲೇ ಮಾಯವಾಯಿತು.

ವಸ್ತುಸ್ಥಿತಿ ಹಾಗಿರುವಾಗ, ‘ಡಿ.ಸಿ.ಟಿ.ಸಿ.’ -‘ಲೀಡ್ ಇಂಟ್ರೊ’ – ‘ಬಾಕ್ಸು ಬಿಟ್ಟು’ -‘ಮಾಸ್ಟ್ ಹೆಡ್’ ‘ಇಂಪ್ರಿಂಟ್’ ಇತ್ಯಾದಿಗಳೆಂದರೆ ಏನು ಹೇಗೆಂಬ ಪ್ರಶ್ನೆಗಳೇ ಮುತ್ತಿಕೊಂಡರೂ, ನಾವು ದ.ಕ.ದಲ್ಲಿ ಕೇಳುತ್ತಿದ್ದ ಹಾಗೆ “ ಅಂದಾಜಿಗೆ ಗುಂಡು ಹೊಡೆಯುವ” ವಿಧಾನವನ್ನೇ ಅನುಸರಿಸಿ (ಅದೆಷ್ಟೋ ಬಾರಿ ಬೇರೆಡೆ ನೋಡಿದುದನ್ನು ಅನುಸರಿಸಿ) ಪಾರಾಗುತ್ತಿದ್ದೆ. ಇಂಗ್ಲಿಷ್ ಪತ್ರಿಕೆಗಳಿಂದ ಸುದ್ದಿ ಕದಿಯುವಾಗಲಂತೂ- ಅಲ್ಲಿ ಹೇಗಿತ್ತೋ ಇಲ್ಲೂ ಹಾಗೇ, ಭಾಷೆ ಮಾತ್ರ ಕನ್ನಡ-ಎಂಬ ನೊಣಂ ಪ್ರತಿ ವಿಧಾನ ಸುಲಭವಾಗಿ ಒಗ್ಗಿಹೋಗಿತ್ತು.

ಅಷ್ಟೆಲ್ಲ ಕಷ್ಟವೇಕೆ ? ಕಛೇರಿಯಲ್ಲಿದ್ದ ಇತರ ಅನುಭವಿಗಳನ್ನು ಕೇಳಿ ತಿಳಿಯಬಹುದಿತ್ತಲ್ಲ? ಎಂಬ ಪ್ರಶ್ನೆ ಇಲ್ಲಿ ಬರುವುದು ಸಹಜ, ಕೇಳಲೂ ಬಹುದಿತ್ತು. ಹೇಳುವವರು ಯಾರಾದರೂ ಅಲ್ಲಿ ಇರುತ್ತಿದ್ದರೆ. ದೊಡ್ಡವರು ಮೂವರಿಗೂ ನನ್ನ ತರಬೇತಿಗೆ ವ್ಯಯಿಸುವಷ್ಟು ಸಮಯ ಸಿಗುತ್ತಿರಲಿಲ್ಲ, ಆನಂದ ರೇಣು,ವೆಂಕಣ್ಣ, ನಾಗಯ್ಯ ಇವರು ಮೂವರೂ( ಆಮೇಲೆ ನನಗೆ ತಿಳಿದ ಹಾಗೆ ) ತಮ್ಮ ಮುಂದಿನ ಭದ್ರತೆಗಾಗಿ ದಾರಿ ಹುಡುಕಬೇಕಾಗಿದ್ದ ಕಾರಣ, ಕಛೇರಿಯಲ್ಲಿ ಅವರಿಗೆ ಬೇಕಾದಷ್ಟು ಹೊತ್ತು ಮಾತ್ರವೇ ಇರುತ್ತಿದ್ದರು. ನಾಗಯ್ಯನವರಂತೂ ವರದಿಗಾರನ ಹೊಣೆಯನ್ನೂ ಹೊತ್ತಿದ್ದು (ಉದ್ಯೋಗ ಬದಲಾವಣೆಯ ಅವಕಾಶಕ್ಕೂ ಸೇರಿದಂತೆ) ಹೊರಗಿನ ಆಸೆಗಳನ್ನೇ ಹೆಚ್ಚಾಗಿ ಹಚ್ಚಿಕೊಳ್ಳುತ್ತಿದ್ದರು. ಬಿದ್ದುಹೋಗುವವರು ಮೂವರಾದರೆ ಇದ್ದವರು ಯಾರು ಎಂಬ ಸ್ಥಿತಿ ನನ್ನದಾಗಿತ್ತು.

ಯಾರ ಸಹಾಯ ಸಿಕ್ಕರೂ ಕೈಚಾಚುವ ಪರಿಸ್ಥಿತಿಯಲ್ಲಿ ನಾನಿದ್ದೆ. ಡಿ.ಸಿ. ಎಂದರೆ ಡಬ್ಬಲ್ ಕಾಲಂ, ಟಿ.ಸಿ. ಎಂದರೆ ಮೂರು ಕಾಲಂ ಎಂದರ್ಥ ಎಂಬ ವಿನ್ಯಾಸನಾಮಗಳನ್ನು ಆಗ ತಿಳಿಸಿಕೊಟ್ಟ ಮುಖ್ಯ ಕಂಪಾಸಿಟರ್ ಕೃಷ್ಣಯ್ಯನವರನ್ನು ಕೃತಜ್ಞತೆಯಿಂದ ನೆನೆದ ಹಾಗೇ, ಸಂಪಾದಕೀಯ ಕಾರ್ಯದ ವಿವರಗಳನ್ನೆಲ್ಲ ತಿಳಿಸುವ ಇಂಗ್ಲಿಷ್ ಪಠ್ಯಪುಸ್ತಕವೊಂದನ್ನು ಎರವಲಿತ್ತ ಹೇಮದಳ ರಾಮದಾಸರನ್ನೂ (ಈಗಲೂ) ನೆನೆಸಿಕೊಳ್ಳುತ್ತಿದ್ದೇನೆ. ಹಾಗೆಯೇ, ಸುದ್ದಿಗಳ ಶೀರ್ಷಿಕೆಗಳಿಗೆ ಬೇಕಾಗುವ ಅಚ್ಚುಮೊಳೆಗಳ ಗಾತ್ರ, ಒಂದು ಸಾಲಿನಲ್ಲಿ ಅವು ಅಡಕವಾಗಬೇಕಾದರೆ ಹಾಕಬೇಕಾದ ಲೆಕ್ಕ ಇವುಗಳನ್ನು ಹೇಳಿಕೊಟ್ಟ ನನ್ನ ಸಮವಯಸ್ಕ ಶ್ರೀನಿವಾಸ(ಶೀನಿ) ಕೂಡಾ ನೆನಪಾಗುತ್ತಾನೆ.

ಅಂದಹಾಗೆ, ಯಾವುದೇ ಬರಹಕ್ಕಾದರೂ ಶೀರ್ಷಿಕೆ ಕೊಡಲು ಮೊದಲಿನಿಂದಲೂ ಅಂಜುತ್ತಿದ್ದು ‘ಇದಕ್ಕೊಂದು ಹೆಡ್ಡಿಂಗ್  ಕೊಡಿ ವೆಂಕಣ್ಣ’ ಎಂದೆನ್ನುತ್ತಿದ್ದ ನನ್ನ ಅಳುಕನ್ನು “ ನೀವೇ ಕೊಡಿ ಧೈರ್ಯವಾಗಿ, ಬೇರೆಯವರು ನಿಮ್ಮ ತಲೆಬರಹ ಬರಿಯೋದು ಇನ್ನು ಅಗತ್ಯವಿಲ್ಲ” ವೆಂದು, ಮೊದಲನೆ ವಾರದಲ್ಲೇ ಅವರು ನಿವಾರಿಸಿದ್ದ ಕಾರಣ, ಬರಿಯ ಕಿರುಸುದ್ದಿಗಳಿಗೆ ಮಾತ್ರವೇ ಅಲ್ಲದೆ, ನಾಲ್ಕು ಕಾಲಮ್ ಗಳ ವಾರ್ತೆಗಳಿಗೂ ‘ತಲೆ’ ತಲೆಕೊಡುವ ಅಭ್ಯಾಸ ಬಂದೊದಗಿತ್ತು. ಕ್ರಮೇಣ ಹೆಚ್ಚಾಗುತ್ತಿದ್ದ ಪ್ರಮುಖರ ಅನುಪಸ್ಥಿತಿಯಿಂದಾಗಿ ಎಷ್ಟೋ ಬಾರಿ ಅದು ಅನಿವಾರ್ಯವೂ ಆಗುತ್ತಿತ್ತು. ಅಂಥ ಸಂದರ್ಭಗಳಲ್ಲಿ ಸಾಧ್ಯವಾದಷ್ಟೂ ಬೇರೆ ಪತ್ರಿಕೆಗಳ ಕಾಪಿ ಹೊಡೆಯುತ್ತಿದ್ದೆ.

ಆದ್ದರಿಂದ ಒಂದು ದಿನ -‘ಏನ್ರೀ, ನಿಮ್ಮ ಎಡಿಟರ್ ಬೇಕಾದ್ರೆ ನಮ್ಮ ಆಫೀಸಿಗೆ ದಿನಾ ರಾತ್ರಿಬಂದು ಹೋಗ್ಲಿ, ನಾವು ಬರ್ದದ್ದು ಒಂದು ಎಕ್ಸ್ ಟ್ರಾ ಕಾಪಿ ಅವರಿಗೂ ಕೊಡೋಣ, ಅರ್ಧ ಛಾರ್ಜಿಗೆ’ -ಎಂಬ ವ್ಯಂಗ್ಯ ನುಡಿ ದೂರವಾಣಿಯಲ್ಲಿ ಕೇಳಿಸಿಕೊಂಡ ನಂತರ -ಕರೆ ಮಾಡಿದವರು ಮೊದಲು ವಿಶ್ವಕರ್ನಾಟಕದಲ್ಲಿ ಇದ್ದು ಅನಂತರ ಆ ಪಮುಖ ಪತ್ರಿಕೆಯನ್ನು ಸೇರಿಕೊಂದವರೆಂಬ ಸುಳಿವೂ ಇದ್ದುದರಿಂದ- ಕಾಪಿ ಮಾಡುವ ನನ್ನ ಅಭ್ಯಾಸವನ್ನು ಬಿಟ್ಟುಬಿಡಲು ನಿರ್ಧರಿಸಿದೆ.

ಆ ನಿರ್ಧಾರದ ಪ್ರಾಯೋಗಿಕ ಪರೀಕ್ಷೆಯ ದಿನವೂ ಬೇಗನೆ ಕೂಡಿ ಬಂತು. ಅಂದು… ಮಾತಿನಂತೆ ಮುರುಘೇಂದ್ರ ದೇವ್ ಹಿಂದಿನ ದಿನದ ವೇತನ ಬಟವಾಡೆ ಮಾಡಿರಲಿಲ್ಲವಾದ (ಪ್ರಬಲ) ಕಾರಣ ತ್ರಿಮೂರ್ತಿಗಳು ಕಛೇರಿಗೆ ಬರಲೇ ಇಲ್ಲ. ಅವರು ಬರುವುದಿಲ್ಲವೆಂಬ ಮುನ್ಸೂಚನೆ ಉಳಿದ ವಿಭಾಗಗಳವರಿಗೆ ಸಿಕ್ಕಿತ್ತೊ ಏನೊ – ಇತರ ವಿಭಾಗಪ್ರಮುಖರೆಲ್ಲರ ದರ್ಶನ ಸಂಪಾದಕೀಯ ಶಾಖೆಯಲ್ಲೇ ಬೆಳಿಗ್ಗೆ ನನಗಾಯಿತು.

ರಾಜಾ ಸಿಂಗರಂತೂ ಕಾಫಿ ತರಿಸಲು ವ್ಯವಸ್ಥೆ ಮಾಡುವುದರಿಂದಲೇ ನನ್ನ ಸ್ವಾಗತವನ್ನಾರಂಭಿಸಿದರು. “ ನೋಡಮ್ಮಾ ( ಆ ಲಿಂಗಾತೀತ ಪ್ರೀತಿಯ ಸಂಭೋದನೆ ನನಗಂತೂ ಹೊಸದು) ಈವತ್ತಿನ ಪೇಪರ್ ನಿನ್ನ ಮೇಲೇನೇ ಡಿಪೆಂಡ್ ಆಗಿದೆ. ಹ್ಯಾಗಾದ್ರೂ ಎಡಿಷನ್ ಹೊರಗೆ ಬರೋ ಹಾಗ್ಮಾಡು. ನಿಂಗ್ಬೇಕಾದ ಫೆಸಿಲಿಟೀಸ್ ಮಾಡಿಕೊಡ್ತೇವೆ” ಎಂದಾಗ, ಮತ್ತೆ ನನ್ನ ಗಣಕಗುರು ಶೀನಿಯೂ ಅದಕ್ಕೆ ದನಿಗೂಡಿಸಿದಾಗ, ಒಮ್ಮೆ ಬ್ಲಾಕ್ ಶೀಪ್ ಆಗಿಹೋಗುವ ಭಯದಿಂದ ಕಂಪಿಸಿದರೂ- ಏನಾದರಾಗಲಿ, ನನ್ನದಂತೂ ಪುಕ್ಕಟೆ ಸೇವೆ ತಾನೆ! ಎಂಬ ಭಂಡ ಧೈರ್ಯದಿಂದ ಸಮ್ಮತಿಯಿತ್ತೆ.

ಮುಂಜಾನೆಯ ಪತ್ರಿಕೆಗಳ ಸುದ್ದಿಗಳನ್ನು ಕತ್ತರಿಸಿ, ಮಿಶ್ರಮಾಡಿ, ತಲೆಬರಹಗಳನ್ನು ಕೊಟ್ಟು ಮೊಳೆ ಜೋಡಿಸಲು ಕಾಯುತ್ತಿದ್ದ ನಾಲ್ವರಿಗೂ ಹಂಚಲು ಬೇಕಾಗಿದ್ದ ಅರ್ಧ ಗಂಟೆಯಲ್ಲ ಹತ್ತು ಬಾರಿ ಬಾಗಿಲ ಕಡೆಗೆ ಕಣ್ಣು ಹಾಯಿಸಿದ್ದೆ- ಹೇಳಿಕೊಳ್ಳಲಾರದ ಭಯದಿಂದ. ಆ ನಂತರದ ಇಂಗ್ಲಿಷ್ ಪತ್ರಿಕೆಗಳ ನ್ಯೂಸ್ ಲಿಫ್ಟ್ ಅಂತೂ ನನ್ನದೇ ಸಾಮ್ರಾಜ್ಯ. ಭಯವೇನೂ ಇರಲಿಲ್ಲ. ಕೊನೆಯದಾದ ಮೈಯಿನ್ ಲೀಡಿಗೆ ಅಗತ್ಯವಾಗಿದ್ದ (ಪ್ಲೇಟ್ ಊಟದ ಮೌಲ್ಯ) ಆರು ಆಣೆಗಳನ್ನು ವಸೂಲು ಮಾಡಿ, ನನ್ನ ಎಂದಿನ ಹೋಟೆಲಿಗೆ ಹೊಕ್ಕು ಆಹಾರದೊಂದಿಗೆ ಆಕಾಶವಾಣಿಯು ದಯಪಾಲಿಸಿದ್ದ ಅಂದು ಮಧ್ಯಾಹ್ನದ ಪ್ರಮುಖ ವಾರ್ತೆಯನ್ನೂ ಅರಗಿಸಿಕೊಂಡು ಬಂದೆ. ಕೂಡಲೆ ಗೀಚಿಕೊಟ್ಟು ನಿಟ್ಟುಸಿರಿಟ್ಟೆ.

ಪತ್ರಿಕೆಯ ಮುದ್ರಿಪ್ರತಿಗಳ ಕಟ್ಟುಗಳು ಹೊರಗೆ ಹೊರಡಲು ಆರಂಭವಾದ ಹೊತ್ತಿಗೆ ಕಳ್ಳನೋಟ ಬೀರುತ್ತಾ ಕಛೇರಿಗೆ ಬಂದ ಮುರುಘೇಂದ್ರರನ್ನು ನೋಡಿದಾಗ ಹುಟ್ಟೂರಿನಲ್ಲಿ ಆಗಾಗ ಕೇಳಿಸಿಕೊಂಡಿದ್ದು ‘ಕಣ್ಣೋಜಿ’ ಎಂಬ ಗುಣವಾಚಕ ಕೂಡಲೆ ನೆನಪಾಯಿತು. ಆ ವ್ಯಕ್ತಿಯ  ಕಾರ್ಯಸಾಧಕತನಕ್ಕೆ ಒತ್ತಡದಲ್ಲೇ ಆದರೂ ಇಂಬುಗೊಟ್ಟಿದ ನನ್ನ ಬಗ್ಗೆಯೂ ಹೇಸಿಗೆ ಎನಿಸಿತು.

ಆ ವ್ಯಕ್ತಿ ತನ್ನ ಕೋಣೆಬಿಟ್ಟು ಹೊರಟುಹೋದ ಮೇಲೆ ಒಳಗೆ ಬಂದ ಸೀನಿ- ನಾನು ಮರುದಿನ ಪತ್ರಿಕೆಗಾಗಿ ಹೊರಗಿಂದ ಬಂದಿದ್ದ ಗ್ರಾಮಾಂತರ ಸುದ್ದಿಗಳನ್ನು ಸಿದ್ಧಪಡಿಸುತ್ತಿದ್ದಾಗ- ನನ್ನನ್ನು ಮೆಲ್ಲನೆ ಮಾತಿಗೆಳೆದು ಪತ್ರಿಕೆಯ ಆಗಿನ ದುಸ್ಥಿತಿಯ ಹಿನ್ನಲೆಯನ್ನು ವಿವರವಾಗಿ ತಿಳಿಸಿದ.

ಅವನ ಮೆಲುದನಿಯ ಮಾತು ಕೇಳುತ್ತಿದ್ದಂತೆ ಕೈಯೇನೋ ಯಾಂತ್ರಿಕವಾಗಿ ತನ್ನ ಕೆಲಸ ನಡೆಸಿತ್ತು. ಕಿವಿ ಮಾತ್ರ ಚುರುಕಾಗಿತ್ತು. ಧ್ವನಿಯೂ ಮನಮುಟ್ಟುತ್ತಿತ್ತು.

(ಮುಂದಿನ ಭಾಗದಲ್ಲಿ)

last week:

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ