ಕವರ್ ಸ್ಟೋರಿ

WALK ಸ್ವಾತಂತ್ರ್ಯವೇ ಇಲ್ಲ!

  • ಹರೀಶ ಮಾಂಬಾಡಿ

ಇದು ಬೆಂಗಳೂರಿನ ಫುಟ್ ಪಾತ್. ಬಿ.ಸಿ.ರೋಡಿಗೂ ಬೇಕು ಫುಟ್ ಪಾತ್.

ಹೈಟೆಕ್ ಯುಗವಷ್ಟೇ….. ವಾಕ್ ಸ್ವಾತಂತ್ರ್ಯವೇ ಇಲ್ಲ!

ಹೀಗಂದರೆ ಕಡ್ಡಿಯನ್ನು ಗುಡ್ಡ ಮಾಡಿ ಹೇಳ್ತೀರಿ ಅನ್ನಬಹುದು.

ನಾವು ಅಭಿವೃದ್ಧಿ ಮಾಡ್ತೇವೆ, ನಿಮಗೆ ಅದೆಲ್ಲ ಕಣ್ಣಿಗೆ ಕಾಣೋದೇ ಇಲ್ವಾ ಸಣ್ಣಪುಟ್ಟ ವಿಚಾರಗಳನ್ನು ದೊಡ್ಡದು ಮಾಡ್ತೀರಿ ಎಂಬುದು ಸಾಮಾನ್ಯವಾಗಿ ಎಲ್ಲ ರಾಜಕೀಯ ಪಕ್ಷಗಳ ನಾಯಕರ ಅಭಿಪ್ರಾಯ. ಆದರೆ ನಡೆದುಕೊಂಡು ಹೋಗುವುದು ಸಣ್ಣ ವಿಚಾರವೇ ಅಲ್ಲ ಎಂಬುದು ನಡೆಯುವವರಿಗಷ್ಟೇ ಗೊತ್ತು.

ದೆಹಲಿ, ಬೆಂಗಳೂರಷ್ಟೇ ಅಲ್ಲ ಇಡೀ ಭಾರತದಲ್ಲಿ ವಾಹನ ಸಂಚಾರ ಮಾಡುವವರಿಗೆ ಪೂರಕವಾದ ವ್ಯವಸ್ಥೆಗಳು ನಿರ್ಮಾಣವಾಗುತ್ತಿವೆಯಷ್ಟೇ ಹೊರತು, ನಡೆದುಕೊಂಡು ಹೋಗುವವರು ಜೀವ ಕೈಯಲ್ಲಿ ಹಿಡಿದುಕೊಂಡೇ ಹೋಗಬೇಕಾದ ಪರಿಸ್ಥಿತಿ.

ಯಾವುದೇ ಹೈವೇ ಇರಲಿ, ಪಟ್ಟಣ, ಮಹಾನಗರದ ಬೀದಿಯೇ ಇರಲಿ. ಅಲ್ಲೊಂದು ಫುಟ್ ಪಾತ್ (ಅರ್ಥಾತ್ ನಡೆಯುವವರಿಗೊಂದು ಸ್ಥಳ) ಇರಬೇಕು. ರಸ್ತೆ ನಿರ್ಮಿಸುವ ಗುತ್ತಿಗೆದಾರ ಫುಟ್ ಪಾತ್ ಮಾಡುತ್ತಾನೆ. ಬಿಲ್ ಪಾಸಾದ ಬಳಿಕ ಫುಟ್ ಪಾತ್ ನಿರ್ವಹಣೆಯನ್ನು ಮಾಡುವವರು ಯಾರು ಎಂಬ ಗೊಂದಲವೇ ಕೆಲ ಕಾಲ ಇರುತ್ತದೆ. ಅದೇ ಹೊತ್ತಿನಲ್ಲಿ ರಸ್ತೆ ಮತ್ತು ಅಂಗಡಿ ಮುಂಗಟ್ಟುಗಳಿಗೆ ಮಧ್ಯೆ ಇರುವ ಫುಟ್ ಪಾತ್ ನಲ್ಲಿ ಯಾವುದಾದರೂ ಪೈಪ್ ಲೈನ್ ಹಾಕುವವರೋ, ಕೇಬಲ್ ಹಾಕುವವರೋ ಅಗೆಯಲು ಆರಂಭಿಸುತ್ತಾರೆ. ಅದೆಲ್ಲ ಇಲ್ಲ ಎಂದಾದರೆ ಅದೇ ಫುಟ್ ಪಾತ್ ಅಂಗಡಿಗೆ ಬರುವ ಗ್ರಾಹಕರ ಪಾರ್ಕಿಂಗ್ ಜಾಗವಾಗುತ್ತದೆ ಅಥವಾ ಹರಟೆ ಹೊಡೆಯಲು ನಿಲ್ಲುವ ಜಾಗವಾಗುತ್ತದೆ. ಇವೆಲ್ಲದರ ಮಧ್ಯೆ ನಡೆದುಕೊಂಡು ಹೋಗುವವವನು ಯಾರನ್ನಾದರೂ ಡಿಕ್ಕಿ ಹೊಡೆದೇ ಹೋಗಬೇಕು. ಅಪ್ಪಿ ತಪ್ಪಿ ಇವ್ಯಾವುದೂ ಜಂಜಾಟಗಳು ಇಲ್ಲ ಎಂದಾದರೆ ಅದೇ ಫುಟ್ ಪಾತ್ ನಲ್ಲಿ ವ್ಯಾಪಾರ ಆರಂಭಗೊಳ್ಳುತ್ತದೆ. ದೂರು ನೀಡಿದರೆ ಬಡವರ ಹೊಟ್ಟೆ ಮೇಲೆ ಹೊಡೆಯಬೇಡಿರಿ ಎಂದು ಒಂದಷ್ಟು ಜನ ಬಂದು ಗದರಿಸುತ್ತಾರೆ. ಅಲ್ಲಿಗೆ ಬಡಪಾಯಿ ನಡೆದುಕೊಂಡು ಹೋಗುವಾತ ಕಕ್ಕಾಬಿಕ್ಕಿ. ಹೀಗಾಗಿಯೇ ನೋಡಿ ಪಾದಚಾರಿ ಸಾವು ಸುದ್ದಿಗಳ ಸಂಖ್ಯೆ ಇಂದು ಜಾಸ್ತಿ .

ದೊಡ್ಡ ದೊಡ್ಡ ಫ್ಲೈಓವರ್ ನಿರ್ಮಾಣವಾಗುತ್ತದೆ. ಇದು ರಸ್ತೆಯಲ್ಲಿ ಸುಗಮ ವಾಹನ ಸಂಚಾರಕ್ಕಷ್ಟೇ ಸೀಮಿತ. ಪಾದಚಾರಿಗಳು ರಸ್ತೆಯ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹೋಗಬೇಕಾದರೆ ಏನು ಮಾಡಬೇಕು ? ಯಾರಾದರೂ ಹೀಗೆ ಕೇಳಿದರೆ ನಿಮಗ್ಯಾಕ್ರೀ ಚಿಂತೆ, ಏನು ನಮಗೆ ಅಷ್ಟೂ ಗೊತ್ತಿಲ್ಲವೇ , ಮಾಡ್ತೇವೆ ಬಿಡ್ರೀ ಎಂಬ ಉತ್ತರ ಸಿಗುತ್ತದೆ. ಹೀಗಾಗಿ ಪಾದಚಾರಿಗಳ ಗತಿ ದೇವರಿಗೇ ಪ್ರೀತಿ.

ಹಿಂದೆಲ್ಲ ನಡೆಯುವವರ ಸಂಖ್ಯೆ ಜಾಸ್ತಿ ಇತ್ತು. ಈಗ ದ್ವಿಚಕ್ರವಾಹನಗಳ ಸಂಚಾರಿಗಳು ಜಾಸ್ತಿ. ಹಾಗಾಗಿಯೇ ಏನೋ ಫುಟ್ ಪಾತ್ ಬೇಡ ಎಂದು ನಮ್ಮನ್ನಾಳುವವರು ನಿರ್ಧರಿಸಿದ್ದಾರೆ ಎಂಬ ಜೋಕ್ ಕಟು ಸತ್ಯವಾಗಿದೆಯೇ?

ಇಂದು ಮಹಾನಗರಗಳಲ್ಲಿ ಫ್ಲ್ಯಾಟ್ ಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಬಂಟ್ವಾಳ, ಬಿ.ಸಿ.ರೋಡಿಗೂ ಅಪಾರ್ಟ್ ಮೆಂಟ್ ಗಳು ಕಾಲಿಟ್ಟು ವರ್ಷಗಳೇ ಆಗಿವೆ. ಅಲ್ಲಿನವರೂ ಕೆಲ ಹೊತ್ತು ಪೇಟೆಯಲ್ಲಿ ಅಡ್ಡಾಡಬೇಕಾದರೆ ಅವರಿಗೆ ನಡೆದುಕೊಂಡು ಹೋಗುವ ಪಾತ್ ಬೇಕು.

ಬಿ.ಸಿ.ರೋಡಿನ ಸರ್ವೀಸ್ ರಸ್ತೆ ಎಂಬುದು ಇರುವುದೇ ಪಾದಚಾರಿಗಳು ಹಾಗೂ ತೀರಾ ಲಘು ವಾಹನಗಳು ಸಾಗಲು ಅನುಕೂಲ ಮಾಡಿಕೊಡಲು. ಆದರೆ ಇಲ್ಲಿ ಎಲ್ಲವೂ ಉಲ್ಟಾ. ಘನ ವಾಹನಗಳು ಹಾರ್ನ್ ಹಾಕುತ್ತಾ ಎಲ್ಲರನ್ನೂ ಬೆದರಿಸುತ್ತಾ ಸಾಗಿದರೆ ಸ್ಕೂಟರ್ ಇತ್ಯಾದಿಗಳೆಲ್ಲವೂ ಕಕ್ಕಾಬಿಕ್ಕಿಯಾಗಿಬಿಡುತ್ತವೆ. ರಸ್ತೆ ಬದಿಯ ಅಂಗಡಿಗಳಿಗೆ ವ್ಯಾಪಾರಕ್ಕೆ ಬರುವವರಷ್ಟೇ ಅಲ್ಲ, ಯಾರ್ಯಾರೋ ಅಲ್ಲೇ ತಮ್ಮ ಕಾರು, ಸ್ಕೂಟರ್ ಪಾರ್ಕ್ ಮಾಡಿ ಟ್ರಾಫಿಕ್ ಜಾಮ್ ಗೆ ತಮ್ಮ ಪಾಲು ನೀಡುತ್ತಾರೆ. ಪ್ರಶ್ನಿಸಲು ಹೋದವರನ್ನೇ ಕೇಳಲು ನೀವ್ಯಾರು ಎಂದು ಮರುಪ್ರಶ್ನೆ ಎಸೆದದ್ದೂ ಉಂಟು. ನಾರಾಯಣಗುರು ವೃತ್ತದಿಂದ ಬಿ.ಸಿ.ರೋಡ್ ನ ಮಂಗಳೂರು ಬಸ್ ನಿಲ್ಲುವ ಜಾಗಕ್ಕೆ ಸರ್ವೀಸ್ ರಸ್ತೆಯಲ್ಲಿ ನಡೆದುಕೊಂಡು ಬರಲು ಹಾಗೂ ಪದ್ಮಾ ಕಾಂಪ್ಲೆಕ್ಸ್ ಬದಿಯಿಂದ ಭಾರತ್ ಬ್ಯಾಂಕ್ ವರೆಗಿನ ಜಾಗದಲ್ಲಿ ನಡೆದಾಡಲು ಎಷ್ಟು ಧೈರ್ಯ ಇದ್ದರೂ ಸಾಲದು. ಮೃತ್ಯು ಯಾವ ಕಡೆ ಕಾದು ಕುಳಿತಿರುತ್ತದೆ ಎಂದು ಊಹಿಸಲೂ ಅಸಾಧ್ಯ. ಹೀಗಾಗಿ ಸರ್ವೀಸ್ ರಸ್ತೆ ಬಿ.ಸಿ.ರೋಡಿಗೆ ಸದ್ಯಕ್ಕಂತೂ ಶಾಪ.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts