ರೀ ಕನಕಾಂಗೀ, ದಿನಾ ಮಗಳನ್ನು ಕರ್ಕೊಂಡು ಎಲ್ಲಿಗೆ ಹೋಗ್ತಾ ಇರ್ತೀರಾ ನೀವು? ರಜಾ ಅಲ್ವಾ ಅವಳಿಗೆ? ಈಗಲೂ ಕ್ಲಾಸ್ ಇದೆಯಾ?
ಅಯ್ಯೋ ಇಲ್ಲಾರೀ ಸರೋಜಮ್ಮಾ. ಶಾಲೆಗೆ ರಜೆ ಸಿಕ್ಕಿದೆ. ಮನೆಯಲ್ಲಿ ಕೂತುಕೊಂಡ್ರೆ ಇಡೀ ದಿನ ಟಿ ವಿ , ಕಂಪ್ಯೂಟರ್, ಮೊಬೈಲ್ ಇಷ್ಟೇ ಆಯ್ತು ಅವ್ಳದ್ದು. ಅದಕ್ಕೆ ರಜದಲ್ಲಿ ಕಲಿಯುವಂತ ಕ್ಲಾಸ್ ಏನಾದ್ರು ಇದೆಯಾ ಅಂತ ದಿನಾ ಅಲೆಯೋದೇ ಆಗಿದೆ ನೋಡಿ.. ನಿಮ್ಗೆ ಏನಾದ್ರೂ ಗೊತ್ತಿದ್ರೆ ಹೇಳಿ.
ಇಡೀ ವರ್ಷ ಕ್ಲಾಸ್ ಇರುತ್ತಲ್ವಾ.. ರಜದಲ್ಲಿಯಾದರೂ ಅವರಿಗೆ ಬೇಕಾದ್ದು ಮಾಡಲಿ ಅಂತ ತಾನೇ ರಜಾ ಕೊಡೋದು, ಈಗ್ಲೂ ಕ್ಲಾಸಿಗೆ ಹಾಕ್ತೀನಿ ಅಂತೀರಲ್ಲ ನೀವು.. ಏನನ್ಬೇಕು ನಿಮಗೆ.
ಸುಮ್ನಿರಿ, ನೀವು ಹೀಗೆ ಹೇಳೋದು ಎಲ್ಲಿಯಾದ್ರೂ ಅವಳ ಕಿವಿಗೆ ಬಿದ್ರೆ ಮುಗಿದೇ ಹೋಯ್ತು. ಮನೆ ಬಿಟ್ಟು ಅಲ್ಲಾಡೋದಿಲ್ಲ ಆಮೇಲೆ.
ನಾನು ಹೇಳಿದ್ದು ಕ್ಲಾಸ್ ಅಂತ ಹೊರಗೇ ಹೋಗ್ಬೇಕಾ? ಮನೆಯಲ್ಲಿ ಕಲಿಯುವ ಸಂಗತಿ ಎಷ್ಟಿದೆ ಗೊತ್ತಾ. ರಜಾ ದಿನಗಳಲ್ಲಿ ಮಕ್ಕಳನ್ನು ಮತ್ತೆ ಹೊರಗಿನ ಕ್ಲಾಸುಗಳಿಗೆ ಅಟ್ಟುವ ಬದಲು ಮನೆಯಲ್ಲಿ ಅವರಿಗೆ ವ್ಯವಹಾರ ಜ್ಞಾನ ಕಲಿಸಬಹುದಲ್ಲ..
ಅಂದ್ರೇ.. ಹೇಗೆ? ನೀವು ಹೇಳಿದ್ದು ಅರ್ಥ ಆಗ್ಲಿಲ್ಲ..
ನೋಡಿ ಕನಕಾಂಗಿ, ನಾವೇನು ಅಂದ್ಕೊಳ್ತೀವಿ ಅಂದ್ರೆ ರಜಾ ದಿನಗಳಲ್ಲಿ ಮನೆಯ ಹೊರಗೆ ಹೋಗಿ ಏನಾದ್ರು ಕ್ಲಾಸುಗಳಿಗೆ ಸೇರಿ ಎರಡು ತಿಂಗಳು ಕಳೆದು ಮತ್ತೆ ಬರುವ ವರ್ಷಕ್ಕಾಗುವಾಗ ಅದನ್ನು ಮರೆತು ಮತ್ತೇನೋ ಕ್ಲಾಸುಗಳಿಗೆ ಹೋಗೋದನ್ನು ರಜೆಯ ಸದುಪಯೋಗ ಅಂದುಕೊಳ್ತೀವಿ. ಅಲ್ಲಿಯೂ ಆಸಕ್ತಿ ಇದ್ದರೆ ಕಲಿಯುವ ವಿಷಯಗಳಿಗೆ ಇಲ್ಲ ಅಂತ ಹೇಳ್ತಿಲ್ಲ. ಆದ್ರೆ ಮನೆಯಲ್ಲಿ ಟಿ ವಿ ನೋಡ್ತಾರೆ ಅನ್ನೋ ಕಾರಣಕ್ಕೆ ಅವ್ರನ್ನು ದೂಡೋದು ಸರಿ ಅಲ್ಲ..
ಅಯ್ಯೋ ಮತ್ತೇನು ಮಾಡು ಅಂತೀರಾ? ಇಡೀ ದಿನ ಮನೆಯೊಳಗೆ ಗಲಾಟೆ ಮಾಡ್ತಾ ಇರ್ತಾರೆ. ತಿನ್ನೋದಕ್ಕೆ ಕೊಡು, ಕುಡಿಯೋದಕ್ಕೆ ಕೊಡು, ಅನ್ನೋದು, ಎಲ್ಲಾ ಟಿ ವಿ ಮುಂದೆ ಕೂತ್ಕೊಂಡು ಹೊತ್ತಲ್ಲದ ಹೊತ್ತಲ್ಲಿ ತಿಂಡಿ ಖಾಲಿ ಮಾಡೋದು. ಊಟದ ಹೊತ್ತಿಗೆ ನಮ್ಗೆ ಹಸಿವಿಲ್ಲ ಅಂತ ಹೇಳಿ ಕೂತ್ಕೊಂಡು ಬಿಡೋದು.. ಇದೇ ಆಗಿದೆ ನಮ್ಮನೆ ಕಥೆ.. ಹೇಗೆ ರಿಪೇರಿ ಮಾಡ್ಲಿ?
ಬೆಳಗ್ಗಿನಿಂದ ಸಂಜೆಯವರೆಗೆ ನಾವು ಮನೆಯಲ್ಲಿ ಏನೇನೋ ಕೆಲಸ ಮಾಡ್ತಾ ಇರ್ತೀವಿ ಅಲ್ವಾ.. ಅದನ್ನೇ ಮಕ್ಕಳಿಗೆ ಮಾಡೋದು ಹೇಗೆ ಅಂತ ಹೇಳಿ ಕೊಡುತ್ತಾ ಹೋದರೆ ರಜಾ ಮುಗಿಯುವಾಗ ಮಕ್ಕಳು ಒಂದೆರಡು ದಿನ ಸ್ವತಂತ್ರವಾಗಿ ಮನೆ ನೋಡಿಕೊಳ್ಳಲು ಕಲಿತಿರುತ್ತಾರೆ. ಈಗ ಹೇಗಿದ್ರೂ ನಮ್ಮ ಮಕ್ಕಳು ತುಂಬಾ ಚಿಕ್ಕವರೇನಲ್ಲ. ಬೆಂಕಿ ನೀರು ಇವುಗಳಿಂದ ಬರುವ ಅಪಾಯದ ಬಗ್ಗೆ ಗೊತ್ತೇ ಇದೆ. ಜಾಗ್ರತೆಯಾಗಿ ಸ್ಟವ್ ಹಚ್ಚೋದು, ತರಕಾರಿ ಕತ್ತರಿಸೋದು, ಮನೆ ಗುಡಿಸಿ ಒರೆಸೋದು, ಅವರವರ ಕೋಣೆಗಳನ್ನು ಕ್ಲೀನ್ ಮಾಡೋದು. ಅವರ ಹಳೇ ಬಟ್ಟೆಗಳಲ್ಲಿ ಕಾಲೊರೆಸು ಮಾಡುವ ಕ್ರಮ ಕಲಿತುಕೊಳ್ಳೋದು, ಹೂಗಿಡಗಳಿಗೆ ನೀರು ಹಾಕೋದು, ಇಂತದ್ದೆಲ್ಲಾ ನಾವು ಅವರಿಗೆ ಮಾಡಿ ಅಂತ ಹೇಳೋದಿಲ್ಲ. ಹಾಗಾಗಿ ಅವರು ಇದನ್ನು ಕಲಿತುಕೊಳ್ಳೋದಿಲ್ಲ. ಅಂಗಡಿಗೆ ಹೋಗಿ ಸಣ್ಣ ಪುಟ್ಟ ಸಾಮಾನುಗಳನ್ನು ಅವರೇ ಕೊಂಡು ತರೋದು, ಬ್ಯಾಂಕಿನ ಸಣ್ಣ ಪುಟ್ಟ ವ್ಯವಹಾರ ಕಲಿಯೋದು ಇದೆಲ್ಲಾ ಬದುಕಿಗೆ ತುಂಬಾ ಉಪಯೋಗ ಬೀಳುತ್ತೆ. ಇಂತದ್ದನ್ನು ಕಷ್ಟ ಪಟ್ಟುಕೊಂಡು ನಾವೇ ಮಾಡ್ಕೋಳ್ತೀವಿ ಹೊರತು ಮಕ್ಕಳು ಕಲಿತುಕೊಳ್ಳಲಿ ಅಂತ ನಮಗೂ ಅನ್ನಿಸೋದಿಲ್ಲ. ಸಣ್ಣ ಪುಟ್ಟ ಅಡುಗೆ ಕೆಲಸ, ಪಾನಕಗಳನ್ನು ಮಾಡೋದು, ಅತಿಥಿಗಳು ಬಂದರೆ ಉಪಚರಿಸೋದು, ಇಂತದ್ದು ಮನೆಯ ಎಲ್ಲಾ ಸದಸ್ಯರಿಗೂ ಮಾಡಲು ಬರಲೇಬೇಕು. ಯಾಕೆ ಇದನ್ನು ಹೇಳ್ತೀನಿ ಅಂದ್ರೆ ಮೊನ್ನೆ ನನ್ನ ಗೆಳತಿಯೊಬ್ಬಳಿಗೆ ಅನಾರೋಗ್ಯದಿಂದಾಗಿ ಒಂದು ವಾರ ಆಸ್ಪತ್ರೆ ಸೇರುವಂತಾಗಿತ್ತು. ಅವಳ ಮಗ ಮತ್ತು ಮಗಳು ಇಬ್ಬರೂ ಕಾಲೇಜು ಓದುವವರೇ. ಅಮ್ಮ ಮನೆಯಲ್ಲಿ ಇಲ್ಲದ ಅಷ್ಟೂ ದಿನ ಹೋಟೆಲ್ಲಿನಿಂದ ಊಟ ತರಿಸಿಕೊಂಡಿದ್ದರು. ಪಾತ್ರೆ ತಟ್ಟೆಗಳನ್ನು ಸಿಂಕಿಗೆ ಹಾಕಿದ್ದರಲ್ಲದೇ ತೊಳೆದಿಟ್ಟಿರಲಿಲ್ಲ. ಮನೆಯನ್ನು ಒಂದಿಷ್ಟೂ ಸ್ವಚ್ಛ ಮಾಡದೇ ಗೊಬ್ಬರದ ಹೊಂಡದ ಹಾಗೇ ಮಾಡಿಟ್ಟಿದ್ರು. ಪಾಪ ಅವಳು ಮನೆಗೆ ಬಂದ ನಂತರ ಅನಾರೋಗ್ಯದ ಸುಸ್ತಿನ ಜೊತೆಗೆ ಮನೆಯ ಅವಾಂತರವನ್ನು ಸರಿ ಪಡಿಸಲು ಒದ್ದಾಡಿ ಸೋತಳು. ಇಂತಹ ಮೂಲಭೂತ ವಿಷಯಗಳನ್ನು ಗಂಡು ಹೆಣ್ಣಿನ ಭೇದವಿಲ್ಲದೇ ಮಕ್ಕಳಿಗೆ ಕಲಿಸದೇ ಇದ್ದದ್ದರಿಂದಾದ ತೊಂದರೆ ಇದು.
ಹೌದು ಅನ್ಸುತ್ತೆ ನೀವು ಹೇಳೋದು.. ಮಗಳೀಗ ಹತ್ತನೆ ತರಗತಿ. ಆದ್ರೂ ಗ್ಯಾಸ್ ಸ್ಟವ್ ಉರಿಸೋದಕ್ಕೆ ಬರೋದಿಲ್ಲ ಅವ್ಳಿಗೆ.. ಬರೋದಿಲ್ಲ ಅನ್ನೋದಕ್ಕಿಂತ ನಾನೇ ಕಲಿಸಿಲ್ಲ ಅನ್ನೋದೇ ಸರಿ ಅನ್ಸುತ್ತೆ. ಏನಾದ್ರು ಹೆಚ್ಚು ಕಮ್ಮಿ ಆದ್ರೆ ಎನ್ನೋ ಭಯ ನನ್ನದು. ನಾವು ಕೆಲಸಗಳನ್ನು ಅಮ್ಮನಿಂದಲೇ ಕಲಿತವರಲ್ವಾ.. ಥಾಂಕ್ಸ್ ಕಣ್ರೀ ಸರೋಜಮ್ಮ.. ಇದನ್ನು ನಾನು ಯೋಚಿಸಿಯೇ ಇರ್ಲಿಲ್ಲ.. ಖಂಡಿತಾ ನಾಳೆಯಿಂದಲೇ ಮಕ್ಕಳಿಗೆ ಮನೆ ಪಾಠ ಶುರು ಮಾಡ್ತೀನಿ..
ರ್ರೀ ಕನಕಾಂಗಿ.. ನಾಳೆಯಿಂದ ಅಲ್ಲ.. ಇಂದಿನಿಂದಲೇ..