ಸಜಿಪನಡು ಗ್ರಾಮದ ಕಂಚಿನಡ್ಕಪದವಿನ 1.35 ಎಕರೆ ಸರಕಾರಿ ಜಮೀನಿನಲ್ಲಿ 45 ಲಕ್ಷ ರೂ. ವೆಚ್ಚದಲ್ಲಿ ’ದೇವಭೂಮಿ’ ಮಾದರಿಯಲ್ಲಿ ನಿರ್ಮಿಸಿರುವ ಸಾರ್ವಜನಿಕ ಹಿಂದೂ ರುದ್ರಭೂಮಿ ಮೇ 18 ರಂದು ಬೆಳಗ್ಗೆ ಲೋಕಾರ್ಪಣೆಗೊಳಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಯಶವಂತ ದೇರಾಜೆ ಹೇಳಿದ್ದಾರೆ.
ಕಂಚಿನಡ್ಕಪದವಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಜಿಪನಡು ಮಾತ್ರವಲ್ಲದೆ ಸಜಿಪಪಡು, ಸಜಿಪಮೂಡ, ಸಜಿಪಮುನ್ನೂರು, ಚೇಳೂರು, ಇರಾ, ಮಂಚಿ ಗ್ರಾಮಗಳಿಗೆ ಸಂಬಂಧಿಸಿದಂತೆ ಹಿಂದೂ ರುದ್ರಭೂಮಿ ಮತ್ತು ಅಭಿವೃದ್ಧಿ ಸಮಿತಿ ರಚಿಸಲಾಗಿದೆ ಎಂದರು.
ಈಗಾಗಲೇ ಧರ್ಮಸ್ಥಳ ಕ್ಷೇತ್ರ ಮತ್ತು ಇನ್ಫೋಸಿಸ್ ಸಂಸ್ಥೆ ವತಿಯಿಂದ ’ಸಿಲಿಕಾನ್ ಬಾಕ್ಸ್’ ನೆರವು ದೊರೆತಿದ್ದು, ಇದರಿಂದಾಗಿ ಸ್ಥಳೀಯ ನಾಗರಿಕರು ರುದ್ರಭೂಮಿ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ. ಆಹಾರ ಸಚಿವ ಯು.ಟಿ.ಖಾದರ್ ಸಹಿತ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಳೀಯ ಸದಸ್ಯ ರವೀಂದ್ರ ಕಂಬಳಿ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸ್ಥಳೀಯ ಸದಸ್ಯೆ ಸವಿತಾ ಇವರ ಅನುದಾನದಲ್ಲಿ ರುದ್ರಭೂಮಿ ಎದುರು ತಡೆಗೋಡೆ ನಿರ್ಮಾಣಗೊಳ್ಳುತ್ತಿದೆ ಎಂದರು.
ಈ ರುದ್ರಭೂಮಿಯನ್ನು ’ದೇವಭೂಮಿ’ಯನ್ನಾಗಿಸಲು12 ಅಡಿ ಎತ್ತರದ ಶಿವನ ವಿಗ್ರಹ, 9 ಅಡಿ ಎತ್ತರದ ಸತ್ಯಹರಿಶ್ಚಂದ್ರನ ವಿಗ್ರಹ, 46 ಅಡಿ ಎತ್ತರಕ್ಕೆ ಬೃಹತ್ ಗಾತ್ರದ ತ್ರಿಶೂಲ ಮಾದರಿ ಸಿಮೆಂಟ್ ಕಲಾಕೃತಿ ರಚಿಸಲಾಗಿದ್ದು, ದ್ವಾರ, ಹೂದೋಟ, ಪ್ರಕೃತಿ ವೀಕ್ಷಣಾ ಕೇಂದ್ರ ನಿರ್ಮಿಸಲಾಗುತ್ತಿದೆ. ಉಚಿತ ಆಂಬುಲೆನ್ಸ್ ಸೇವೆ ಒದಗಿಸಲು ಸಮಿತಿ ಸಿದ್ಧತೆ ನಡೆಸಿದೆ ಎಂದು ಅವರು ವಿವರಿಸಿದರು.
ಮೇ 18ರಂದು ಬೆಳಗ್ಗೆ ನಡೆಯುವ ರುದ್ರಭೂಮಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ. ಕೆ.ಪ್ರಭಾಕರ ಭಟ್ ಮತ್ತಿತರ ಗಣ್ಯರು ಭಾಗವಹಿಸುವರು. ಆ ಪ್ರಯುಕ್ತ ರಾತ್ರಿ ಧಾರ್ಮಿಕ ಸಭೆ, ಸಾರ್ವಜನಿಕ ಅನ್ನಸಂತರ್ಪಣೆ, ಬಪ್ಪನಾಡು ಮೇಳದವರಿಂದ ’ಸತ್ಯ ಹರಿಶ್ಚಂದ್ರ’ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ದೇವದಾಸ ಅಡಪ, ಪ್ರಮುಖರಾದ ಮಹಾಬಲ ರೈ ಬರ್ಕೆಗುತ್ತು, ನಾಗೇಶ ಪೂಜಾರಿ ಕುರಿಯಾಡಿ, ದೀಪಕ್ ಕೊಂಕಣ್‌ತೋಟ, ಭಾಸ್ಕರ್ ಕಂಪದಕೋಡಿ ಮತ್ತಿತರರು ಇದ್ದರು.