ಸದಾ ವಿವಾದದ ಕೇಂದ್ರಬಿಂದುವಾಗಿರುವ ವಿಟ್ಲ ಖಾಸಗಿ ಬಸ್ ನಿಲ್ದಾಣ ಮತ್ತೆ ಸುದ್ದಿಗೆ ಗ್ರಾಸವಾಗಿದೆ. ಇದೀಗ ಸರಕಾರಿ ಬಸ್ ಚಾಲಕನಿಗೆ ಹಲ್ಲೆ ನಡೆಸಿದ ಪ್ರಕರಣ ಹಾಗೂ ಬಸ್ ಸಂಚಾರ ನಿಲ್ಲಿಸಿ ಪ್ರತಿಭಟನೆಗೆ ಮುಂದಾಗುವ ಮೂಲಕ ಮತ್ತೆ ಪೈಪೋಟಿ ನಡೆದಿದೆ.
ಸರ್ಕಾರಿ ಬಸ್ಸು ವಿಟ್ಲ ಪಟ್ಟಣ ಪಂಚಾಯಿತಿಗೆ ಸೇರಿದ ಹಳೆ ಬಸ್ಸು ನಿಲ್ದಾಣಕ್ಕೆ ಪ್ರವೇಶಿಸಿದೆ ಎಂಬ ಕಾರಣಕ್ಕೆ ಚಾಲಕನಿಗೆ ಹಲ್ಲೆ ನಡೆಸಿದ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ಕಾರಿ ಬಸ್ ಚಾಲಕ ಹನುಮಂತ ಗೌಡರ್ ಹಲ್ಲೆಗೊಳಗಾಗಿದ್ದು, ನಿವಾಹಕ ಶರಣಪ್ಪ ಅವರು ಜತೆಗಿದ್ದರು. ಈ ಬಗ್ಗೆ ತನಿಖೆ ನಡೆಸಿದ ಉಪನಿರೀಕ್ಷಕ ನಾಗರಾಜ್ ಅವರು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆ.ಎಸ್.ಆರ್.ಟಿ.ಸಿ. ಬಿ. ಸಿ. ರೋಡ್ ಘಟಕದ ಮಂಗಳೂರು – ವಿಟ್ಲ – ಪೆರುವಾಯಿ – ಪಕಳಕುಂಜ ಸಂಪರ್ಕಿಸುವ ಬಸ್ಸು ವಿಟ್ಲಕ್ಕೆ ಆಗಮಿಸಿದ್ದು, ಹಳೆ ಬಸ್ ನಿಲ್ದಾಣದ ಮುಂಭಾಗದಲ್ಲಿ ನಿಲ್ಲುವ ಜನರನ್ನು ಹತ್ತಿಸಿಕೊಳ್ಳುವ ನಿಟ್ಟಿನಲ್ಲಿ ಪುತ್ತೂರು ರಸ್ತೆಗೆ ಹೋದ ಚಾಲಕ ಊರಿಗೆ ಹೊಸಬನಾಗಿದ್ದಾನೆ. ಸಮಯ ಮೀರಿದೆ ಎಂದು ಹಳೆ ಬಸ್ಸು ನಿಲ್ದಾಣದ ಬಳಿಯಲ್ಲಿ ತಿರುಗಿಸಲು ಬೇಕಾದ ಸ್ಥಳಾವಕಾಶ ಸಿಕ್ಕಿದ್ದರಿಂದ ಅಲ್ಲೇ ತಿರುಗಿಸಲು ಮುಂದಾಗಿದ್ದನ್ನು ಆಕ್ಷೇಪಿಸಿ ಹಲ್ಲೆ ನಡೆಸಲಾಗಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿದ್ದುದರಿಂದ ಪರಿಸ್ಥಿತಿ ನಿಭಾಯಿಸಿದ್ದಾರೆ. ಆದರೆ ಬಳಿಕ ಖಾಸಗಿ ಬಸ್ ಚಾಲಕರು ಪ್ರಕರಣ ದಾಖಲಿಸಿದ್ದನ್ನು ಹಿಂತೆಗೆಯಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗೆ ಮುಂದಾದರು. ಬಳಿಕ ವೃತ್ತನಿರೀಕ್ಷಕ ಮಂಜಯ್ಯ ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸಿದರು.