ಮಾಣಿ ಸಮೀಪದ ಅನಂತಾಡಿ ಮತ್ತು ನೆಟ್ಲಮುಡ್ನೂರು ಗ್ರಾಮಗಳಿಗೆ ಸಂಬಂಧಿಸಿದ ಕರಿಂಕ ಶ್ರೀ ದುರ್ಗಾಪರಮೇಶ್ವರೀ ದೇವಾಲಯವು ಜೀರ್ಣೋದ್ಧಾರಗೊಂಡು ನವೀಕರಣದೊಂದಿಗೆ ಪುನರ್‌ನಿರ್ಮಾಣಗೊಂಡಿದ್ದು ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ಮೇ 7ರಿಂದ ಮೇ 15ರವರೆಗೆ ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರ್ಷೇಂದ್ರ ದೇರಣ್ಣ ಶೆಟ್ಟಿ ಬಾಳಿಕೆ ತಿಳಿಸಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್‌ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೇವಸ್ಥಾನವನ್ನು ನವೀಕರಣ ಮಾಡಬೇಕೆಂದು ಎಲ್ಲಾ ಭಕ್ತಜನರು ಸಂಕಲ್ಪಿಸಿದಂತೆ ನವೀಕರಣ ಪುನರ್ ನಿರ್ಮಾಣ ಮಾಡುವ ನಿರ್ಧಾರವನ್ನು ಕೈಗೊಂಡಂತೆ ಅಷ್ಟಮಂಗಲ ಪ್ರಶ್ನೆಯನ್ನಿಟ್ಟು ಅದರಲ್ಲಿ ಕಂಡುಬಂದಂತಹ ಪರಿಹಾರ ಕಾರ್ಯಗಳು ಹಾಗೂ ನವೀಕರಣ ಪುನರ್ ನಿರ್ಮಾಣ ಕಾರ್ಯಗಳು ನಡೆದಿದೆ ಎಂದರು.
ದಕ್ಷಿಣ ಭಾರತ ವಾಸ್ತುಶಿಲ್ಪ ಶೈಲಿಯಂತೆ ಬರುವ ದೇವಸ್ಥಾನಗಳ ವಾಸ್ತುಶಿಲ್ಪ ಪ್ರಕಾರ ಕ್ಷೇತ್ರದ ಪ್ರಕಾರಗಳಿಗೆ ಅನುಗುಣವಾಗಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ನೂತನ ಎರಡಂತಸ್ತಿನ ಶಿಲಾಮಯ ಗರ್ಭಗುಡಿ,ನಮಸ್ಕಾರ ಮಂಟಪ,ಶ್ರೀ ಮಹಾಗಣಪತಿ ಗುಡಿ,ಶ್ರೀ ಪಿಲಿಚಾಮುಂಡಿ ದೈವದ ಗುಡಿ, ಒಳಪ್ರಾಂಗಣ, ಸುತ್ತುಪೌಳಿ, ಮುಖದ್ವಾರ, ಗೋಪುರ, ಹೊರಪ್ರಾಂಗಣ, ರಾಜಗೋಪುರ, ಪಾಕಶಾಲೆ ನಿರ್ಮಾಣಗೊಳ್ಳುತ್ತಿದೆ. ದೇವಸ್ಥಾನದ ನವೀಕರಣ ಪುನರ್‌ನಿರ್ಮಾಣಕ್ಕೆ ಸುಮಾರು ೨ ಕೋಟಿ ರೂ. ಅಂದಾಜು ವೆಚ್ಚದ ಯೋಜನೆಯನ್ನು ರೂಪಿಸಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ,ಸಂಸದ ನಳಿನ್ ಕುಮಾರ್ ಕಟೀಲು, ಸೋಮಾವತಿ ಎನ್. ರೈ ಉರ್ದಿಲಗುತ್ತು, ರಾಂಪ್ರಸಾದ್ ರೈ ಉರ್ದಿಲಗುತ್ತು, ಭೀಮ ಭಟ್ ಕರಿಂಕ, ಅರವಿಂದ ಪೂಂಜ ಉರ್ದಿಲಗುತ್ತು ಇವರ ಗೌರವಾಧ್ಯಕ್ಷತೆಯಲ್ಲಿ ನೆಟ್ಲಮುಡ್ನೂರು ಹಾಗೂ ಅನಂತಾಡಿ ಎರಡೂ ಗ್ರಾಮದ ಸಮಸ್ತರನ್ನು ಸೇರಿಸಿಕೊಂಡು ಕಾರ್ಯಕಾರಿ ನವೀಕರಣ ಸಮಿತಿಯನ್ನು ಬಿ.ಎಸ್.ಸಂಕಪ್ಪ ರೈ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಿ.ನರೇಂದ್ರ ರೈ ನೇಲ್ತೊಟ್ಟು ಅವರು ಕಾರ್ಯನಿರ್ವಹಿಸುತ್ತಿದ್ದಾರೆ ಜೊತೆಗೆ ಬ್ರಹ್ಮಕಲಶೋತ್ಸವ ಸಮಿತಿಯು ವಿವಿಧ ಉಪಸಮಿತಿಗಳ ಕ್ರಿಯಾಶೀತೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ನರೇಂದ್ರ ರೈ ನೆಲ್ತೊಟ್ಟು, ನವೀಕರಣ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಬಿ.ಎಸ್.ಸಂಕಪ್ಪ ರೈ ಕರಿಂಕ, ವಿವಿಧ ಸಮಿತಿಗಳ ಪ್ರಮುಖರಾದ ಹರೀಶ ಪೂಜಾರಿ ಬಾಕಿಲ, ಡಿ.ತನಿಯಪ್ಪ ಗೌಡ, ಸೇಸಪ್ಪ ಗೌಡ, ಗೋಪಾಲಕೃಷ್ಣ ಉಪಸ್ಥಿತರಿದ್ದರು.
ಇತಿಹಾಸ:
ನಿಸರ್ಗ ರಮಣೀಯ ಪ್ರದೇಶದಲ್ಲಿರುವ ಈ ದೇವಸ್ಥಾನ ಹಲವು ಶತಮಾನಗಳ ಇತಿಹಾಸ ಹೊಂದಿದೆ. ಆದಿಶಂಕರಾಚಾರ್ಯರಿಂದ ಪೂಜಿಸಲ್ಪಟ್ಟ ಶ್ರೀ ದೇವಿ ದುರ್ಗಾಪರಮೇಶ್ವರಿ ಎನ್ನುವ ನಂಬಿಕೆ ಹೊಂದಿದ ದೇವರು ಮೂಲತಃ ಉದ್ಭವಲಿಂಗ ಸ್ವರೂಪಿಯಾಗಿದ್ದು ಶ್ರೀ ದೇವಿ ವಿಗ್ರಹವನ್ನು ಸ್ಥಾಪಿಸಲಾಗಿದೆ.
ಶ್ರೀ ಕ್ಷೇತ್ರ ಕರಿಂಕದಲ್ಲಿ ಸಾನಿಧ್ಯ ಹೊಂದಿರುವ ಕಾರಣೀಕದ ಶ್ರೀ ದೇವಿ ಮತ್ತು ಶ್ರೀ ಮಹಾಗಣಪತಿ ದೇವರಿಂದೊಡಗೂಡಿ ಇರುವ ಸಾನಿಧ್ಯಗಳು ಎಲ್ಲಾ ಆಸ್ತಿಕ ಭಕ್ತಜನರ ಆರಾಧ್ಯದೇವರಾಗಿದೆ. ಇಲ್ಲಿ ಭಕ್ತಿ,ಶ್ರದ್ಧೆಗಳಿಂದ ಯಾರು ಸಾನಿಧ್ಯ ಶಕ್ತಿಗಳನ್ನು ಆರಾಧಿಸಿಕೊಂಡು ಬರುತ್ತಾರೋ,ಸೇವಾಕೈಂಕರ್ಯವನ್ನು ಶುದ್ಧಚಿತ್ತದಿಂದ ಮಾಡುತ್ತಾರೋ ಅವರಿಗೆ ಅವರವರ ಇಷ್ಟಾರ್ಥ ಸಿದ್ಧಿಯಾಗುವುದು. ಸಂತಾನ ಪ್ರಾಪ್ತಿಯ ಅನುಗ್ರಹದ ಪ್ರಾರ್ಥನೆಯು ಈ ಕ್ಷೇತ್ರದ ವೈಶಿಷ್ಟ ವಾಗಿರುತ್ತದೆ.
ಪುರಾತನ ಧರ್ಮ-ಸಂಸ್ಕೃತಿ-ಪರಂಪರೆಯನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಕ್ಷೇತ್ರ ಪದ್ಧತಿಯಂತೆ ನಡೆಯುವ ಪೂಜೆ,ಸೇವೆ,ವೈದಿಕ ಕ್ರಿಯಾಭಾಗಗಳು ಶಾಸ್ತ್ರೋಕ್ತವಾಗಿ ಉದಯಾಸ್ತಮಾನದ ಕಾಲದಲ್ಲಿ ನಡೆಯುತ್ತಿದ್ದು, ದೇವಸ್ಥಾನದಲ್ಲಿ ನಡೆದುಬರುವಂತಹ ಉತ್ಸವಾದಿಗಳು ಕಾಲಕಾಲಕ್ಕೆ ಬರುವ ಪರ್ವಕಾಲಗಳಲ್ಲಿ ಯಥಾವತ್ತಾಗಿ ಇಲ್ಲಿಯ ತುಳುನಾಡ ವೈಭವದ ಪರಂಪರೆಯನ್ನು ಒಂದುಗೂಡಿಸಿಕೊಂಡು ಊರ,ಪರವೂರ ಭಕ್ತ ಜನರ ಸಹಕಾರದೊಂದಿಗೆ ಪಾರಂಪರಿಕ ಸಂಪ್ರದಾಯದಂತೆ ನಡೆಯುತ್ತಿದೆ.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)