• ಡಾ.ಎ.ಜಿ.ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

ಸಾಧಾರಣವಾಗಿ ಬೆಳ್ಳುಳ್ಳಿ ಇಲ್ಲದ ಅಡಿಗೆ ಮನೆ ಇರಲಾರದು. ಬೆಳ್ಳುಳ್ಳಿಯ ವಾಸನೆ ಮತ್ತು ರುಚಿಯನ್ನು  ಅತಿಯಾಗಿ ಇಷ್ಟ ಪಡುವವರೂ ಇದ್ದಾರೆ ,ಹಾಗೆಯೇ ದ್ವೇಷಿಸುವವರೂ ಇದ್ದಾರೆ.ಆದರೆ ಬೆಳ್ಳುಳ್ಳಿಯ ಔಷಧೀಯ ಗುಣಗಳನ್ನು ನೋಡುವಾಗ ಇದನ್ನು  ವೈದ್ಯಕೀಯ ಕ್ಷೇತ್ರದ ಸಂಜೀವಿನಿ ಎಂದರೂ ತಪ್ಪಾಗಲಾರದು.

ಆಭ್ಯಂತರ ಉಪಯೋಗಗಳು:

  1. ಬೆಳ್ಳುಳ್ಳಿಯನ್ನು ಜಜ್ಜಿ ಹಾಲಿಗೆ ಹಾಕಿ ಕುದಿಸಿ ಕುಡಿಯುವುದರಿಂದ ಹೃದಯದ ರೋಗವು ವಾಸಿಯಾಗುತ್ತದೆ ಮತ್ತು ಹೃದಯಕ್ಕೆ ಬಲವನ್ನು ನೀಡುತ್ತದೆ.
  2. ಪಕ್ಷವಾತ,ಸೊಂಟನೋವು ,ಸಂಧುನೋವು ಇತ್ಯಾದಿಗಳ ಬಾಧೆ ಇದ್ದವರು 2 ರಿಂದ 3 ಬೆಳ್ಳುಳ್ಳಿ ಬೀಜವನ್ನು ತುಪ್ಪದಲ್ಲಿ ಹುರಿದು ತಿನ್ನಬೇಕು.
  3. ಕಣ್ಣಿನ ದೃಷ್ಟಿ ದುರ್ಬಲತೆ ಇದ್ದವರು ಬೆಳ್ಳುಳ್ಳಿಯನ್ನು ಜಜ್ಜಿ ರಸ ತೆಗೆದು ಬೆಳಗ್ಗೆ ಖಾಲಿ ಹೊಟ್ಟೆಗೆ 5 ರಿಂದ 10 ಮಿ.ಲೀ ಯಷ್ಟು ಕುಡಿಯಬೇಕು.
  4. ಮೆದುಳಿನ ಬಲಹೀನತೆ ಇದ್ದಾಗ ಬೆಳ್ಳುಳ್ಳಿಯನ್ನು ಜಜ್ಜಿ ಜೇನು ತುಪ್ಪದಲ್ಲಿ ಮಿಶ್ರ ಮಾಡಿ ಬೆಳಗ್ಗೆ ಸೇವಿಸಬೇಕು.
  5. ಬೆಳ್ಳುಳ್ಳಿಯನ್ನು ತುಪ್ಪದಲ್ಲಿ ಹುರಿದು ತಿನ್ನುವುದರಿಂದ ಅರುಚಿ, ಅಜೀರ್ಣ,ಕ್ರಿಮಿಬಾಧೆ, ಹೊಟ್ಟೆ ಉಬ್ಬರಿಸುವಿಕೆ ಇತ್ಯಾದಿಗಳು ಕಡಿಮೆಯಾಗುತ್ತದೆ.
  6. ನಿಯಮಿತವಾಗಿ ಬೆಳ್ಳುಳ್ಳಿಯನ್ನು ಉಪಯೋಗಿಸುವುದರಿಂದ ರಕ್ತ ರಹಿತವಾದ ಮೂಲವ್ಯಾಧಿಯು ಕಡಿಮೆಯಾಗುತ್ತದೆ.
  7. ಮೂತ್ರ ವಿಸರ್ಜಿಸುವಾಗ ನೋವು ಕಂಡು ಬಂದರೆ ಬೆಳ್ಳುಳ್ಳಿಯನ್ನು ತುಪ್ಪದಲ್ಲಿ ಹುರಿದು ತಿನ್ನಬೇಕು.
  8. ಬೆಳ್ಳುಳ್ಳಿಯನ್ನು ನಿತ್ಯ ಬಳಸುವುದರಿಂದ ಶರೀರದ ಅಧಿಕವಾದ ಕೊಬ್ಬು ನಿವಾರಣೆಯಾಗುತ್ತದೆ ಮತ್ತು ಶರೀರದ ಅಧಿಕ ಭಾರವನ್ನು ಕಡಿಮೆ ಮಾಡುತ್ತದೆ.
  9. ಮುಟ್ಟಿನ ಸಮಯದಲ್ಲಿ ಹೊಟ್ಟೆನೋವು ಇದ್ದರೆ ಮತ್ತು ಸರಿಯಾಗಿ ರಕ್ತಸ್ರಾವ ಆಗದಿದ್ದರೆ ಬೆಳ್ಳುಳ್ಳಿಯನ್ನು ತುಪ್ಪದಲ್ಲಿ ಹುರಿದು ತಿನ್ನಬೇಕು.
  10. ಬಹುಕಾಲೀನ ಕೆಮ್ಮು ಹಾಗು ದಮ್ಮಿನ ಸಮಸ್ಯೆಯಿದ್ದಾಗ ಬೆಳ್ಳುಳ್ಳಿಯನ್ನು ತುಪ್ಪದ ಜೊತೆ ಸೇವಿಸಬೇಕು.
  11. ಬೆಳ್ಳುಳ್ಳಿಯು ತನ್ನ ತೀಕ್ಷ್ನಗಂಧದಿಂದಾಗಿ ಬಾಯಿಯಲ್ಲಿನ ಕಪದ ದುರ್ಗಂಧವನ್ನು ಹೋಗಲಾಡಿಸುತ್ತದೆ ಮತ್ತು ಗಂಟಲನ್ನು ಶುದ್ಧೀಕರಿಸುತ್ತದೆ.
  12. ಕ್ಷಯ ರೋಗದಿಂದ ಬಳತ್ತಿರುವವರು ಬೆಳ್ಳುಳ್ಳಿಯ ಹಾಲು ಕಷಾಯ ಕುಡಿಯುವುದರಿಂದ ಶ್ವಾಸಕೋಶಕ್ಕೆ ಉತ್ತಮ ಬಲ ಬರುತ್ತದೆ ಮತ್ತು ಕ್ಷಯ ರೋಗ ನಿವಾರಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
  13. ಜ್ವರದಿಂದ ಬಳಲುತ್ತಿರುವವರು ಬೆಳ್ಳುಳ್ಳಿಯನ್ನು ಸೇವಿಸಿದರೆ ಬೆವರುವುದರ ಮೂಲಕ ಜ್ವರದ ತಾಪವನ್ನು ಕಡಿಮೆ ಮಾಡುತ್ತದೆ.
  14. ಬಿದ್ದು ಮೂಳೆ ಮುರಿತ್ತಕ್ಕೊಳಗಾದರೆ ಬೆಳ್ಳುಳ್ಳಿಯ ಹಾಲು ಕಷಾಯ ಕುಡಿಯುವುದರಿಂದ ಬೇಗನೆ ಮುರಿದ ಮೂಳೆಯು ಕೂಡಿಕೊಳ್ಳುತ್ತದೆ.
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.