ರಾಜ್ಯದಲ್ಲಿರುವ ಅಲ್ಪಸಂಖ್ಯಾತರು ಶೈಕ್ಷಣಿಕ ಅರ್ಹತೆಯನ್ನೂ ಗಳಿಸಬೇಕು ಎಂಬ ಉದ್ದೇಶದೊಂದಿಗೆ ಶೈಕ್ಷಣಿಕ ಅರಿವು ಯೋಜನೆಯೊಂದನ್ನು ರಾಜ್ಯ ಸರಕಾರ ರೂಪಿಸಿದೆ ಎಂದು ಗೃಹಸಚಿವ ಜಿ.ಪರಮೇಶ್ವರ್ ಹೇಳಿದರು.
ಬಂಟ್ವಾಳ ಶ್ರೀ ಧರ್ಮಸ್ಥಳ ಮಹಾಲಿಂಗೇಶ್ವರ ಕಲ್ಯಾಣಮಂಟಪದಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಮಟ್ಟದಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ವತಿಯಿಂದ ನೀಡುವ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬಜೆಟ್ ನಲ್ಲಿ 2450 ಕೋಟಿ ರೂಪಾಯಿ ಮೀಸಲಿಟ್ಟಿದೆ. ಶೈಕ್ಷಣಿಕ ಅರಿವು ಯೋಜನೆಯಡಿ 100 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ ಎಂದು ಹೇಳಿದರು.
1.35 ಕೋಟಿ ಮೊತ್ತ ಸವಲತ್ತು: ರೈ
ಈ ಸಂದರ್ಭ ಸವಲತ್ತು ವಿತರಿಸಿ ಮಾತನಾಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಾಲಸೌಲಭ್ಯ ಮಂಜೂರಾತಿ ಆದೇಶ ಪ್ರತಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದ್ದು ಒಟ್ಟು 1.35 ಕೋಟಿ ಮೊತ್ತದ ಸವಲತ್ತು ವಿತರಿಸಲಾಗಿದೆ ಎಂದರು.
ಸ್ವಾವಲಂಬನಾ ಯೋಜನೆಯಡಿ 15 ಫಲಾನುಭವಿಗಳಿಗೆ 8.37 ಲಕ್ಷ ರೂ, ಶ್ರಮಶಕ್ತಿ ಯೋಜನೆಯಡಿ 97 ಫಲಾನುಭವಿಗಳಿಗೆ 24.25 ಕೋಟಿ ರೂ, ಕ್ರಿಶ್ಚಿಯನ್ 97 ಫಲಾನುಭವಿಗಳಿಗೆ 23.5 ಲಕ್ಷ ರೂ, ಕ್ರಿಶ್ಚಿಯನ್ ಫಲಾನುಭವಿಗಳಿಗೆ ಕಿರುಸಾಲ 14 ಮಂದಿಗೆ 1.4 ಲಕ್ಷ ರೂ, ಇತರ 211 ಫಲಾನುಭವಿಗಳಿಗೆ ಕಿರುಸಾಲ 21.10 ಲಕ್ಷ ರೂ, ಗಂಗಾ ಕಲ್ಯಾಣ ಯೋಜನೆಯಡಿ 38 ಫಲಾನುಭವಿಗಳಿಗೆ 57 ಲಕ್ಷ ರೂ ಹೀಗೆ ಒಟ್ಟು 469 ಫಲಾನುಭವಿಗಳಿಗೆ 1.35 ಕೋಟಿ ರೂಪಾಯಿ ವಿತರಿಸಲಾಗಿದೆ ಎಂದು ರೈ ಹೇಳಿದರು.
ವಿಧಾನಪರಿಷತ್ತು ಮುಖ್ಯ ಸಚೇತಕ ಐವನ್ ಡಿಸೋಜ, ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಎ.ಗಫೂರ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಜಿಪಂ ಸದಸ್ಯರಾದ ಎಂ.ಎಸ್.ಮಹಮ್ಮದ್, ಮಂಜುಳಾ ಮಾವೆ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಪುರಸಭಾ ಸದಸ್ಯ ಮಹಮ್ಮದ್ ಶರೀಫ್, ಜೈನ್ ಸಮಾಜ ಅಧ್ಯಕ್ಷ ನೇಮಿರಾಜ ಆರಿಗ, ರಿಯಾಜ್ ಬಂಟ್ವಾಳ, ಶಬೀರ್ ಸಿದ್ದಕಟ್ಟೆ, ಮೊಹಮ್ಮದ್ ನಂದಾವರ ಮೊದಲಾದವರು ಉಪಸ್ಥಿತರಿದ್ದರು. ಸುಭಾಶ್ಚಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು. ಅಲ್ಪಸಂಖ್ಯಾತ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹಮ್ಮದ್ ಸಫ್ವಾನ್ ಸ್ವಾಗತಿಸಿ ವಂದಿಸಿದರು.