Heard melodies are sweet, but those unheard are sweeter-
ಕೀಟ್ಸ್ ಕವಿವಾಣಿ.
ಇದೇ ದೊಂದಿಬೆಳಕಿನ ಆಟದ ಸಹಜ ಸೌಂದರ್ಯದ ಗುಟ್ಟು. ಪ್ರೇಕ್ಷಕನನ್ನು ವೀಕ್ಷಣೆಗೆ ಅಣಿಯಾಗಿಸಿ ಕಲಾ-ಭ್ರಮಾಲೋಕಕ್ಕೆ ಒಯ್ಯುವ ಅದ್ವಿತೀಯ ಕಲೆಯ ಪ್ರಸ್ತುತಿ ದೀವಿಟಿಗೆಯ ಯಕ್ಷಗಾನ.
“ಸುತ್ತಲಿನ ಬಾನು, ಕತ್ತಲೆಗಳು ಚಪ್ಪರವಾಗಿರುವಾಗ -ದೀವಿಟಿಗೆಗಳ ಮಂಜು ಬೆಳಕೇ ತುಂಬ ಅನುಕೂಲವೆನಿಸುತ್ತದೆ. ಅದು ನಮ್ಮ ಮನಸ್ಸು ವಾಸ್ತವ ಲೋಕದಿಂದ ‘ನಿಗೂಢ’ ಲೋಕಕ್ಕೆ ಎಳೆದೊಯ್ಯಲು ಹೆಚ್ಚು ಸಹಾಯವಾಗುತ್ತದೆ. ದೇವಾಲಯದ ಗರ್ಭಗುಡಿಯ ಪುಟ್ಟ ಹಣತೆಯ ಬೆಳಕಿಗೆ ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸಲು ಇನ್ನಷ್ಟು ಶಕ್ತಿಇದೆ….” ಇದು ಶಿವರಾಮ ಕಾರಂತರ ” ಬಯಲಾಟ ” ಪುಸ್ತಕದಲ್ಲಿ ಬರುವ ವಾಕ್ಯ. ದಿ.ಜಿ.ಟಿ.ನಾರಾಯಣ ರಾಯರ ಮಾತು ನೋಡಿ: ಋತದ ಪರಿಮುದ್ರೆ ಸರಳತೆ, ಸತ್ಯದ ಪರಿವೇಷ ಸೌಂದರ್ಯ . ಮನಸ್ಸು ನಿಜಾರ್ಥದ ಸೌಂದರ್ಯವನ್ನು ಅನುಭವಿಸಲು ಮತ್ತು ಅದೇ ಆಗಲು ಸರಳತೆಯ ಸಾಕ್ಷಾತ್ಕಾರ ಅಂತರಂಗದಲ್ಲಾಗಬೇಕು. ಇದೆಲ್ಲವನ್ನು ನಾನು ಹೇಳುವುದು ಡಾ.ಡಾ.ರಾಘವ ನಂಬಿಯಾರರ “ದೀವಿಟಿಗೆ” ಗ್ರಂಥವನ್ನು ಅವಲೋಕಿಸುವ ಹಿನ್ನೆಲೆಯಲ್ಲಿ. ನಂಬಿಯಾರರು ಇಲ್ಲಿ ಹೇಳಿರುವುದು ಅವರ ದೀವಿಟಿಗೆ ಯಕ್ಷಗಾನ ಅಭಿಯಾನದ ಪರಿಕಲ್ಪನೆ ಮೂಡಿದ್ದು ಹೇಗೆ ಮತ್ತು ಯಾವ ಆಕಾರ ತಾಳಿತು. ಜತೆ ಜತೆಗೇ ದೀವಿಟಿಗೆ ಯಕ್ಷಗಾನದ ಸೊಗಸು ಏನು. ಯಾವ ರೀತಿ ಮಂದ ಬೆಳಕಿನ ಸೌಂದರ್ಯದಿಂದ ಉಜ್ವಲ ಬೆಳಕಿನ ಮಂದಬೆಳಕಿಗೆ ಇಳಿಯಿತು ಎಂಬುದರ ಬಗೆಗೆ ಅವರ ಅನಿಸಿಕೆಗಳನ್ನು ಬಹಳ ಪರಿಣಾಮಕಾರಿಯಾಗಿ ಹೇಳಿದ್ದಾರೆ. ”
ದೀವಿಟಿಗೆ ಯಕ್ಷಗಾನದ ಸಿದ್ಧತೆ, ಅವರ ತಂಡ “ಯಕ್ಷ ಕೌಮುದಿ ” ನಡೆದ ಹಾದಿ ಹೀಗೆ ವಿವೇಚಿಸಿದ್ದಾರೆ. ಇಲ್ಲೊಂದು ಅವರ ಚಿಂತನೆ ನೋಡಿ ” ಒಂದು ಧಾರ್ಮಿಕ ವಿಧಿಯೆಂದು ಆಟದ ಪ್ರದರ್ಶನವನ್ನು ಕಟ್ಟುನಿಟ್ಟಿನಿಂದ ಇರಿಸಿಕೊಂಡಿದ್ದರೆ ಆಟಕ್ಕೆ ಈ ಅವನತಿ ಬರುತ್ತಿರಲಿಲ್ಲ”.
ಒಟ್ಟು ಎಂಭತ್ತೆಂಟು ಪುಟಗಳ ಈ ಕಿರು ಹೊತ್ತಗೆಯ ಯಕ್ಷಗಾನ ಕ್ಷೇತ್ರದ ಶುದ್ಧ ರೂಪವನ್ನು ಬಯಸುವವರಿಗೆ, ಎಲ್ಲಾ ಕಲಾವಿದರಿಗೆ ಮತ್ತು ಕಲಾಸಕ್ತರಿಗೆ ಗಮನಿಸಬೇಕಾದಂತಹಾದ್ದು.
ಅತ್ರಿ ಬುಕ್ ಸೆಂಟರ್, ಮಂಗಳೂರು ಇವರು ಹೊರತಂದಿರುವ ಈ ಪುಸ್ತಕದ ಬೆಲೆ ಕೇವಲ ಅರವತ್ತು ರೂಪಾಯಿ. ಶ್ರೀ ಜಿ.ಎನ್ ಅಶೋಕವರ್ಧನ ಅವರಲ್ಲಿ ಇದರ ಸಂಗ್ರಹ ಇರಬಹುದು. ಖಂಡಿತಾ ಓದಿ.