ಪಜೀರ್ ಸುದರ್ಶನ ನಗರದ ನಿವಾಸಿ ಕಾರ್ತಿಕ್ ರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಾರ್ತಿಕ್ ಸಹೋದರಿ ಕಾವ್ಯಶ್ರೀ, ಆಕೆಯ ಸ್ನೇಹಿತ ಮತ್ತು ಆತನ ಸಹೋದರನನ್ನು ಬಂಧಿಸಲಾಗಿದೆ. ಶನಿವಾರ ಮಂಗಳೂರು ಸಿಟಿ ಪೊಲೀಸ್ ಕಮೀಷನರ್ ಚಂದ್ರಸೇಖರ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಕೊಣಾಜೆ ಠಾಣಾ ವ್ಯಾಪ್ತಿಯ ಕೊಣಾಜೆ ಗಣೇಶ್ ಮಹಲ್ ಎಂಬಲ್ಲಿ ದಿನಾಂಕ 2016ರ ಅಕ್ಟೋಬರ್ 22 ರಂದು ಬಂಟ್ವಾಳ ತಾಲೂಕು ಪಜೀರು ಗ್ರಾಮದ ಸುದರ್ಶನ ನಗರ ವಾಸಿ ಉಮೇಶ್ ಪಿ ಎಂಬವರ ಮಗ ಕಾರ್ತಿಕ ರಾಜ್ ಎಂಬಾತನನ್ನು ಬೆಳಿಗ್ಗೆ ಸುಮಾರು 5:30 ಗಂಟೆ ವೇಳೆಗೆ ಜಾಗಿಂಗ್ ಹೋಗುತ್ತಿರುವ ಸಮಯದಲ್ಲಿ ಯಾರೋ ದುಷ್ಕರ್ಮಿಗಳು ತಲೆಗೆ ಮಾರಕ ಆಯುಧದಿಂದ ಬಲವಾಗಿ ಹೊಡೆದು ಗಂಭೀರ ಗಾಯಗೊಳಿಸಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು, ಕೊಣಾಜೆ ಪೊಲೀಸರ ಸಹಾಯದಿಂದ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದು, ಈ ಬಗ್ಗೆಕಾರ್ತಿಕ ರಾಜ್ ನ ತಂದೆ ಉಮೇಶ್ ರವರು ನೀಡಿದ ದೂರಿನಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದೂರು ದಾಖಲಾಗಿತ್ತು. ಆದರೆ ಕಾರ್ತಿಕ ರಾಜ್ ಚಿಕಿತ್ಸೆ ಫಲಕಾರಿಯಾಗದೆ 23 ರಂದು ಸಾವನ್ನಪ್ಪಿದ್ದರು.
ಪ್ರಕರಣ ತೀವ್ರ ಕುತೂಹಲ ಕೆರಳಿಸಿದ್ದು, ಸಾಕಷ್ಟು ಅನುಮಾನಗಳಿಗೂ ಕಾರಣವವಾಗಿತ್ತು. ಆರೋಪಿಗಳ ಬಂಧನ ಆಗ್ರಹಿಸಿ ಪ್ರತಿಭಟನೆಯೂ ನಡೆಯಿತು.
ಗಂಭೀರತೆಯನ್ನು ಅರಿತ ಆಯುಕ್ತರು ಪ್ರಕರಣದ ತನಿಖೆಯನ್ನು ಸಿ.ಸಿ.ಆರ್.ಬಿ ಘಟಕದ ಎ.ಸಿ.ಪಿ ವೆಲೆಂಟೈನ್ ಡಿ’ಸೋಜ ಮತ್ತು ತಂಡಕ್ಕೆ ನಡೆಸಲು ಸೂಚಿಸಿದರು. ಮೃತ ಕಾರ್ತಿಕ ರಾಜ್ ನ ತಂಗಿ ಕಾವ್ಯಶ್ರೀ ಹಾಗೂ ಆಕೆಯ ಪರಿಚಿತ ಕುತ್ತಾರ್ನನ ಸಂತೋಷ್ ನಗರ ವಾಸಿ ಗೌತಮ್ ಮತ್ತು ಆತನ ತಮ್ಮ ಗೌರವ್ ಈ ಕೃತ್ಯದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಯಿತು. ಇಬ್ಬರನ್ನು ವಶಕ್ಕೆ ಪಡೆದುಕೊಂಡು ಅವರನ್ನು ಕೂಲಂಕುಷವಾಗಿ ವಿಚಾರಿಸಿದಾಗ, ಕಾವ್ಯಶ್ರೀಯು ಗೌತಮ್ ಬಳಿ ಈತನಲ್ಲಿ ಪದೇ ಪದೇ ತನ್ನ ಅಣ್ಣನಾದ ಕಾರ್ತಿಕ ರಾಜ್ ನ ಕೊಲೆ ಮಾಡಬೇಕೆಂದು ಒತ್ತಾಯಿಸಿ, 5 ಲಕ್ಷ ರೂಪಾಯಿ ಕೊಡುವುದಾಗಿ ಆಮಿಷವೊಡ್ಡಿದ್ದು, ಆತನ ತಮ್ಮ ಗೌರವ್ ಜೊತೆ ಸೇರಿ ಕಾರ್ತಿಕ ರಾಜ್ ನು ಜಾಗಿಂಗ್ ಹೋಗುವಾಗ, ಇಬ್ಬರೂ ಸೇರಿಕೊಂಡು ತಲೆಗೆ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾಗಿ ತಿಳಿದುಬಂದಿದೆ ಎಂದು ಚಂದ್ರಸೇಖರ್ ಹೇಳಿದರು.
ಪತ್ತೆ ಕಾರ್ಯದಲ್ಲಿ ವೆಲೆಂಟೈನ್ ಡಿ’ಸೋಜಾ ಜೊತೆ ದಕ್ಷಿಣ ಉಪ-ವಿಭಾಗದ ಎ.ಸಿ.ಪಿ ಶೃತಿ, ಕೊಣಾಜೆ ಪೊಲೀಸ್ ನಿರೀಕ್ಷಕರಾದ ಅಶೋಕ್, ಸಿಬ್ಬಂದಿಗಳಾದ ಸುನಿಲ್ ಕುಮಾರ್, ದಾಮೋದರ , ರಿಜಿ ವಿ.ಎಂ, ಸುಧೀರ್ ಶೆಟ್ಟಿ , ಮನೋಜ್ ಕುಮಾರ್ ಮತ್ತು ಮಹಮ್ಮದ್ ಇಕ್ಬಾಲ್ ಪಾಲ್ಗೊಂಡಿದ್ದರು.