ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ಹಾಗೂ ಸಮಿತಿ ಪದಾಧಿಕಾರಿಗಳಾದ ಎನ್.ಕೆ.ಇದಿನಬ್ಬ ಮತ್ತು ಸುದೇಶ ಮಯ್ಯ, ಇದು ಆಯುಕ್ತರ ಅಜ್ಞಾನವನ್ನು ಪ್ರದರ್ಶಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.
ದ.ಕ.ಜಿಲ್ಲಾಧಿಕಾರಿಗಳಿಂದ ನೇಮಕಗೊಂಡಿರುವವರನ್ನು ತುಂಬೆ ಡ್ಯಾಂ ಸಂತ್ರಸ್ತ ರೈತರ ಸಾಧಕ – ಬಾಧಕ ಸಭೆಗೆ ಆಹ್ವಾನಿಸದೇ ಇರುವ ಕುರಿತು ಜಿಲ್ಲಾಧಿಕಾರಿ ಮೂಲಕ ಆಕ್ಷೇಪ ವ್ಯಕ್ತಪಡಿಸಿದಾಗ, ಜಿಲ್ಲಾಧಿಕಾರಿ ಮನಪಾ ಆಯುಕ್ತರಿಗೆ ಲಿಖಿತ ಪತ್ರ ಬರೆದು, ಕೂಡಲೇ ಅರ್ಜಿದಾರರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದು, ಅದಕ್ಕೆ ಇದುವರೆಗೂ ಉತ್ತರ ಬಂದಿಲ್ಲ. ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ಮೂಲಕ ಮನಪಾ ಸಿದ್ಧಪಡಿಸಿದ ಮುಳುಗಡೆ ಭೂಮಿಯ ಮಾಹಿತಿಯಲ್ಲಿ ಮೇಲಿನ ವ್ಯಕ್ತಿಗಳು ಉಲ್ಲೇಖಗೊಂಡಿದ್ದು, ಹೈಕೋರ್ಟಿಗೆ ಕೂಡ ಈ ಕುರಿತು ಲಿಖಿತ ಮಾಹಿತಿ ನೀಡಿದ್ದಾರೆ. ಪ್ರಸ್ತುತ 488 ಎಕ್ರೆ ಮುಳುಗಡೆ ಆಗುವುದು ಎಂದು ತಿಳಿಸಲಾಗಿದ್ದು, ಮುಳುಗಡೆ ಭೂಮಿಯ ಮಾಹಿತಿಯನ್ನು ಜಿಲ್ಲಾಧಿಕಾರಿ ಸೂಚಿಸಿದ್ದರೂ ಈವರೆಗೆ ರೈತರಿಗೆ ನೀಡಲಾಗಿಲ್ಲ. ರೈತರ ಹಿತಾಸಕ್ತಿ ಕಾಪಾಡಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ಸಮಿತಿ ಲಿಖಿತ ಹೇಳಿಕೆಯಲ್ಲಿ ತಿಳಿಸಿದೆ.
ತುಂಬೆ ಹೊಸ ವೆಂಟೆಡ್ ಡ್ಯಾಂ ನಿರ್ಮಾಣದಿಂದ ಜಮೀನು ಮುಳುಗಡೆಯಾಗಲಿರುವ ಸಂತ್ರಸ್ತ ರೈತರಿಗೆ ಪರಿಹಾರ ಒದಗಿಸಲು ಹೋರಾಟ ನಡೆಸುತ್ತಿರುವವರು ಯಾರೂ ರೈತರಲ್ಲಿ ಎಂದು ಮನಪಾ ಆಯುಕ್ತ ನಝೀರ್ ಗುರುವಾರ ವಿಧಾನಪರಿಷತ್ತು ಮುಖ್ಯ ಸಚೇತಕ ಐವನ್ ಡಿಸೋಜ ಭೇಟಿ ವೇಳೆ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಮಂಗಳೂರಿಗೆ ನೀರಿನ ಸಮಸ್ಯೆ ತಲೆದೋರಿದಾಗ ತುಂಬೆಗೆ ಬರುವ ಅಧಿಕಾರಿಗಳು, ಜನಪ್ರತಿನಿಧಿಗಳು ರೈತರೊಂದಿಗೆ ಎಷ್ಟು ಸಭೆ ನಡೆಸಿದ್ದೀರಿ? ಎಷ್ಟು ಮಂದಿಗೆ ನೆಲ ಬಾಡಿಗೆ ನೀಡಿದ್ದೀರಿ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಪರಿಹಾರಕ್ಕೆ ಸಂಬಂಧಿಸಿ ನಾಲ್ಕು ಸಭೆ ನಡೆಸಲಾಗಿದೆ. ಈಗಾಗಲೇ ಎಲ್ಲ ರೈತರಿಗೆ ನೆಲ ಬಾಡಿಗೆ ನೀಡಲಾಗಿದೆ. ಆದರೆ ಸಂತ್ರಸ್ತ ರೈತರಿಗೆ ಪರಿಹಾರಕ್ಕಾಗಿ ಹೋರಾಟ ನಡೆಸುವವರು ಯಾರೂ ರೈತರಲ್ಲ. ಅವರೆಲ್ಲರೂ ಬರೀ ಹೋರಾಟಗಾರರು ಮಾತ್ರವಾಗಿದ್ದಾರೆ ಎಂದು ಹೇಳಿದ್ದಕ್ಕೆ ಪ್ರತಿಯಾಗಿ ತುಂಬೆ ಡ್ಯಾಂ ಸಂತ್ರಸ್ತ ಹೋರಾಟ ಸಮಿತಿ ಈ ಹೇಳಿಕೆ ನೀಡಿದೆ.