www.bantwalnews.com report
ಪುರಸಭೆ ಮಂಡಿಸಿದ ಬಜೆಟ್ ನಲ್ಲಿ ಲೋಪದೋಷಗಳು ಇವೆ ಎಂಬ ಕುರಿತು ಸಲ್ಲಿಸಿದ ದೂರಿನನ್ವಯ ನಡೆಸಿದ ತನಿಖೆಯಲ್ಲಿ ವ್ಯತ್ಯಾಸ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಭೆಗೆ ಆಗಮಿಸಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿ ಸದಸ್ಯ ದೇವದಾಸ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಗುರುವಾರ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಧರಣಿ ಕುಳಿತು ಪ್ರತಿಭಟಿಸಿದರು.
ಒಂದೆಡೆ ಧರಣಿ ನಡೆಯುತ್ತಿದ್ದಂತೆ ಸಭೆ ಮುಂದುವರಿದು ವಂದನಾರ್ಪಣೆಯೂ ನಡೆಯಿತು. ಬಿಜೆಪಿ ಸದಸ್ಯರು ಯೋಜನಾ ನಿರ್ದೇಶಕರು ಆಗಮಿಸಬೇಕು ಎಂದು ಪಟ್ಟುಹಿಡಿದು ಉಪವಾಸ ಕುಳಿತರು. ಸಭೆ ಮುಗಿದರೂ ಧರಣಿ ನಿಲ್ಲಲಿಲ್ಲ.
ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ದೇವದಾಸ ಶೆಟ್ಟಿ, ಪುರಸಭೆ ಮಂಡಿಸಿದ ಬಜೆಟ್ ನ ಹಣಕಾಸಿನ ಅಂಕಿ ಅಂಶದಲ್ಲಿ ಕೋಟ್ಯಂತರ ರೂಪಾಯಿ ವ್ಯತ್ಯಾಸವಾಗಿರುವ ಕುರಿತು ಅನುಮಾನಗಳು ಇದ್ದು, ಈ ಕುರಿತು ತಾನು ನೀಡಿದ ದೂರಿನ ತನಿಖೆ ಪುತ್ತೂರಿನ ಲೆಕ್ಕಾಧಿಕಾರಿಯವರಿಂದ ಆಗಿದೆ. ಇದರಲ್ಲಿ ಲೋಪದೋಷಗಳು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಯೋಜನಾ ನಿರ್ದೇಶಕರು ಆಗಮಿಸಿ ಸ್ಪಷ್ಟ ವಿವರಣೆ ನೀಡಬೇಕು. ಸಭೆಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಯೋಜನಾ ನಿರ್ದೇಶಕರು ತತ್ ಕ್ಷಣ ಬರಲು ಅಸಾಧ್ಯ. ವಿಶೇಷ ಸಭೆ ಕರೆಯೋಣ ಎಂದು ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ತಿಳಿಸಿದರು.
ಧರಣಿ ನಡೆಸುವುದು ಬೇಡ ಎಂದು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್ ಸಹಿತ ಹಲವರು ವಿನಂತಿಸಿದರೂ ದೇವದಾಸ ಶೆಟ್ಟಿ ಸ್ಥಳದಿಂದ ಕದಲಲಿಲ್ಲ. ಬಿಜೆಪಿಯ ಇತರ ಎಲ್ಲ ಸದಸ್ಯರಾದ ಸುಗುಣಾ ಕಿಣಿ, ಗೋವಿಂದ ಪ್ರಭು, ಭಾಸ್ಕರ್, ಸಂಧ್ಯಾ ನಾಯ್ಕ್ ಅವರೂ ದೇವದಾಸ ಶೆಟ್ಟಿ ಅವರ ಜೊತೆಗೂಡಿದರು.
ಫೆ.18 ರಂದು ಪುರಸಭೆಯ ವಿಶೇಷ ಸಬೆಯಲ್ಲಿ 2017-18 ನೇ ಸಾಲಿಗೆ 61.76 ಲಕ್ಷ ರೂ.ವಿನ ಅಯವ್ಯಯವನ್ನು ಅಧ್ಯಕ್ಷ ರಾಮಕ್ರಷ್ಣ ಆಳ್ವರವರು ಮಂಡಿಸಿದ್ದರು.ಈ ಸಂದರ್ಭ ಬಿಜೆಪಿ ಸದಸ್ಯ ದೇವದಾಸ ಶೆಟ್ಟಿ ಬಜೆಟ್ ಪುಸ್ತಕದಲ್ಲಿ ಉಲ್ಲೇಖಿಸಲಾದಹಾಗೂ ಪ್ರತಿ ತಿಂಗಳ ಸಾಮಾನ್ಯ ಸಭೆಯಲ್ಲಿ ನೀಡಲಾಗುವ ಜಮಾಖರ್ಚಿನ ಲೆಕ್ಕದಲ್ಲೂ ಅಜಗಜಾಂತರ ವ್ಯತ್ಯಾಸವಿರುವುದನ್ನು ಬೊಟ್ಟು ಮಾಡಿ ಸಭೆಯ ಗಮನಸೆಳೆದು ಸ್ಪಷ್ಟನೆ ಬಯಸಿದ್ದರು.
ಮಾಚ೯ ತಿಂಗಳ ಸಭೆಯಲ್ಲೂ ಸದಸ್ಯ ದೇವದಾಸ ಶೆಟ್ಟಿ ಯವರು.ಬಜೆಟ್ ನಲ್ಲಾಗಿರುವ ಲೋಪ ಸರಿಪಡಿಸಿ ಮತ್ತೆ ಮಂಡಿಸುವಂತೆ ಕೋರಿದ್ದರು.
ಆದರೆ ಈ ಸಭೆಯಲ್ಲಿ ಬಜೆಟ್ ಸ್ಥಿರೀಕರಣಗೊಳಿಸಲಾಯಿತು. ಬಿಜೆಪಿ ಸದಸ್ಯರು ಈ ಬಗ್ಗೆ ಜಿಲ್ಲಾಧಿಕಾರಿಯವರಿಗೂ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪುತ್ತೂರು ನಗರಸಭೆಯ ಲೆಕ್ಕಾಧಿಕಾರಿಯವರಿಗೆ ಸೂಚಿಸಿದ್ದರು.ಅದರಂತೆ ಅವರ ತನಿಖೆಯಲ್ಲಿ ಬಜೆಟ್ ಮತ್ತು ತಿಂಗಳ ಜಮಾಖರ್ಚಿನಲ್ಲಿ ವ್ಯತ್ಯಾಸವಿರುವುದು ಸಾಬೀತಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಯೋಜನಾ ನಿರ್ದೇಶಕರಿಗೆ ಸಲ್ಲಿಸಿರುವ ದೂರಿಗೆ ಯಾವುದೇ ಸ್ಪಂದನೆ ಸಿಗದಿರುವ ಹಿನ್ನಲೆಯಲ್ಲಿ ಸದಸ್ಯ ದೇವದಾಸ ಶೆಟ್ಟಿ ಧರಣಿ ಕುಳಿತು ಕೊಳ್ಳಲು ನಿರ್ಧರಿಸಿದರು.
ಪುರಸಭಾ ಮೀಟಿಂಗ್ ಹಾಲ್‌ಗೆ ಎ.ಸಿ.ಅಳವಡಿಸುವ ಬಗ್ಗೆ ಸಭೆ ನಿರ್ಣಯ ಕೈಗೊಂಡಿತು. ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಕುಳಿತವರಿದ್ದಾರೆ. ಹಲವಾರು ಕಡೆ ಸರಕಾರಿ ಭೂಮಿ ಅತಿಕ್ರಮಣಗೊಳ್ಳುತ್ತಿವೆ ಎಂದು ಗಮನ ಸೆಳೆದ ವಾಸು ಪೂಜಾರಿ, ರೆಕಾರ್ಡ್ ರೂಮ್ ಸ್ಥಿತಿ ಶೋಚನೀಯವಾಗಿದ್ದು ಮೊದಲು ಅದನ್ನು ಸರಿಪಡಿಸಿ ಎಂದು ಗಮನ ಸೆಳೆದರು.
ಬಿ.ಸಿ.ರೋಡಿನ ನಾರಾಯಣ ಗುರು ವೃತ್ತದ ಬಳಿ ಇರುವ ಸರಕಾರಿ ಜಾಗದಲ್ಲಿ ಆರ್.ಟಿ.ಒ. ಕಚೇರಿ ಹಾಗೂ ಅರಸು ಭವನ ನಿರ್ಮಿಸಲು ಜಾಗ ಮಂಜೂರುಗೊಳಿಸುವ ಕುರಿತು ತಹಶೀಲ್ದಾರ್ ಬರೆದಿರುವ ಪತ್ರದ ಕುರಿತು ಚರ್ಚೆಗಳಾದವು. ಆ ಜಾಗದಲ್ಲಿ ರಂಗಮಂದಿರ ನಿರ್ಮಿಸುವುದೇ ಸೂಕ್ತ ಎಂದು ಸದಾಶಿವ ಬಂಗೇರ ಹೇಳಿದರು.
ಮಫತ್ ಲಾಲ್ ಲೇಔಟ್ ನಲ್ಲಿ ಅತಿಕ್ರಮಣ ಮಾಡಿದ ಜಾಗವನ್ನು ತೆರವುಗೊಳಿಸಬೇಕು ಎಂದು ಮಹಮ್ಮದ್ ಶರೀಫ್ ಆಗ್ರಹಪಡಿಸಿದರು. ಈ ಸಂದರ್ಭ ವಿಚಾರವನ್ನು ಜಿಲ್ಲಾ ಸರ್ವೆಗೆ ಬರೆಯುವಂತೆ ಸದಾಶಿವ ಬಂಗೇರ ಸೂಚಿಸಿದರು. ಸದಸ್ಯರಾದ ಮೊನೀಶ್ ಆಲಿ, ಇಕ್ಬಾಲ್, ಬಿ.ಮೋಹನ್, ಗಂಗಾಧರ್, ವಸಂತಿ ಚಂದಪ್ಪ, ಚಂಚಲಾಕ್ಷಿ, ಜಗದೀಶ ಕುಂದರ್, ನಾಮನಿರ್ದೇಶಿತ ಸದಸ್ಯ ಲೋಕೇಶ ಸುವರ್ಣ ಮೊದಲಾದವರು ವಿವಿಧ ವಿಷಯಗಳ ಕುರಿತು ಮಾತನಾಡಿದರು.
ಪುರಸಭೆ ಬಜೆಟ್ ಲೋಪದೋಷಗಳ ಕುರಿತು ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲ. ನಾನು ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಬಿ.ಸಿ.ರೋಡಿನಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮದ ವೇಳೆ ಇದನ್ನು ಅವರ ಗಮನ ಸೆಳೆಯುವೆ ಎಂದು ಧರಣಿನಿರತವೇಳೆ ದೇವದಾಸ ಶೆಟ್ಟಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಕಳೆದ ಕೆಲವು ತಿಂಗಳಿಂದ ಪುರಸಭೆ ಮೀಟಿಂಗ್ ಗೆ ಬಂದರೂ ನಾಮನಿರ್ದೇಶಿತ ಸದಸ್ಯರೊಂದಿಗೆ ದೂರ ಕುಳಿತು, ಮೌನವಾಗಿ ಬಂದು ಹೋಗುತ್ತಿದ್ದ ಆಡಳಿತ ಪಕ್ಷದ ಸದಸ್ಯ ಸದಾಶಿವ ಬಂಗೇರ ಅವರು ಗುರುವಾರ ಪೂರ್ಣಪ್ರಮಾಣದಲ್ಲಿ ಸಭೆಯಲ್ಲಿ ಪಾಲ್ಗೊಂಡರು. ಮಾಜಿ ಅಧ್ಯಕ್ಷೆ ವಸಂತಿ ಚಂದಪ್ಪ ಬಳಿ ಅಧ್ಯಕ್ಷ, ಉಪಾಧ್ಯಕ್ಷರ ಎದುರೇ ಕುಳಿತುಕೊಂಡ ಬಂಗೇರ, ಕಲಾಪದ ಚರ್ಚೆಯಲ್ಲಿ ಪಾಲ್ಗೊಂಡರು. ಬುಡಾ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಬಳಿಕ ಸದಾಶಿವ ಬಂಗೇರ ಸಕ್ರಿಯವಾಗಿ ಪಾಲ್ಗೊಂಡ ಮೊದಲ ಸಭೆ ಇದು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)