ಬಂಟ್ವಾಳ

ಜಲೀಲ್ ಹೆಸರಲ್ಲಿ ಸ್ಮರಣಾರ್ಹ ಕೆಲಸ ನಡೆಯಲಿ: ರೈ

ಅಬ್ದುಲ್ ಜಲೀಲ್ ಹೆಸರು ಶಾಶ್ವತವಾಗಿ ಉಳಿಯುವಂತಹ ಕೆಲಸ ಆಗಬೇಕು. ಅವರ ಹೆಸರಲ್ಲಿ ಪ್ರತೀವರ್ಷ ಸ್ಮರಣಾರ್ಹ ಕಾರ್ಯ ಪಕ್ಷದ ವತಿಯಿಂದ ನಡೆಯುವಂತಾಗಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ  ಅಬ್ದುಲ್ ಜಲೀಲ್ ಕರೋಪಾಡಿ ಸಂತಾಪ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಗ್ರಾ.ಪಂ. ಉಪಾಧ್ಯಕ್ಷ ಜಲೀಲ್ ಸಾವು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ ಕರೋಪಾಡಿ ಗ್ರಾಮಕ್ಕೆ ದೊಡ್ಡ ನಷ್ಟ. ಅವರು ಒಬ್ಬ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ, ಪ್ರಾಮಾಣಿಕ, ಪಕ್ಷದ ಯಾವುದೇ ತರಬೇತಿ ರಾಜ್ಯ ಮತ್ತು ಹೊರರಾಜ್ಯದಲ್ಲಿ  ಇದ್ದಾಗಲೂ ಅವರ ಉಪಸ್ಥಿತಿ ಇರುತ್ತಿತ್ತು. ಯಾರಾದರೂ ಅವರ ಮೇಲೆ ಅಸಮಾದಾನ ವ್ಯಕ್ತ ಮಾಡಿದರೂ ದುಡುಕಿ ಮಾತಾನಾಡಿದವರಲ್ಲ. ಕಾನೂನಿನಲ್ಲಿ ಆಗದ ಯಾವುದೇ ಕೆಲಸಗಳ ಬಗ್ಗೆ ಜಲೀಲ್ ಒತ್ತಾಯ ಮಾಡಿದವರಲ್ಲ  ಎಂದು ರೈ ಹೇಳಿದರು.

ನನಗೆ ಆರೋಗ್ಯ ವ್ಯತ್ಯಾಸ ಆಗಿದೆ ಎಂದು ತಿಳಿದು ಅವರಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಸಚಿವರು ಬಾರದಿದ್ದರೂ ತೊಂದರೆ ಇಲ್ಲ. ಅವರು ಆರೋಗ್ಯ ಸರಿಯಾಗಲಿ, ಸಚಿವರ ಪರವಾಗಿ ನಾವಿದ್ದೇವೆ. ಇಂತಹ  ವ್ಯಕ್ತಿತ್ವದವರೇ ನಮಗೆ ನಿಜವಾದ ಆಪ್ತರು. ಕರೋಪಾಡಿಯಲ್ಲಿ ನಡೆದ ಅನೇಕ ರಸ್ತೆ ಕಾಮಾಗಾರಿಯನ್ನು ನಿರ್ವಹಿಸಲು ಕಾರಣರಾಗಿದ್ದರು. ನೇತ್ರಾವತಿ ನದಿ ನೀರನ್ನು ಕರೋಪಾಡಿಗೆ ತರಿಸಿಕೊಂಡು ಸಂತಸಪಟ್ಟವರಲ್ಲಿ ಅವರೊಬ್ಬರು. ಅರ್ಹ, ಯೋಗ್ಯ, ಪ್ರಾಮಾಣಿಕ, ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ ಅವರಾಗಿದ್ದರು. ಅವರ ಅಗಲಿಕೆಯ ದು:ಖ ಸಹಿಸಲು ಸಾಧ್ಯವಿಲ್ಲ. ದೇವರ ಅವರ ಆತ್ಮಕ್ಕೆ ಸದ್ಗತಿ ನೀಡಲಿ, ಸಂಸಾರಕ್ಕೆ ದು:ಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ ಮಾತನಾಡಿ ಸಹೋದರ ಅಬ್ದುಲ್ ಜಲೀಲ್ ಉಸಿರೇ ಕಾಂಗ್ರೆಸ್ ಆಗಿತ್ತು. ಯಾವತ್ತೂ ತಾಳ್ಮೆ ಸಹನೆಯಿಂದ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಾ ಪಕ್ಷವನ್ನು ಕಟ್ಟುವ ಜನರ ಪ್ರೀತಿಗಳಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬಕ್ಕೆ ದು:ಖವನ್ನು ಸಹಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಪ್ರಾರ್ಥಿಸಿದರು.

ಸಭೆಯನ್ನು ಉದ್ದೇಶಿಸಿ ಜಿ. ಪಂ.ಸದಸ್ಯ ಎಂ.ಎಸ್. ಮಹಮ್ಮದ್ ಮಾತನಾಡಿ ದಿವಂಗತರು ನಮಗೆ ಬಹಳಷ್ಟು ಆತ್ಮೀಯರು, ಸಹೋದರನಂತೆ ಪ್ರೀತಿಸುತ್ತಿದ್ದರು. ಪಕ್ಷ ಕಟ್ಟುವ ಕೆಲಸದಲ್ಲಿ , ಅಭಿವೃದ್ದಿಯ ಕೆಲಸದಲ್ಲಿ ಯಾವತ್ತೂ ಮುಂದೆ ಇರುತ್ತಿದ್ದರು ಎಂದು ಸಂತಾಪ ಸೂಚಿಸಿದರು.

ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ  ಮಾತನಾಡಿ ಜಲೀಲ್‌ನೊಂದಿಗೆ ನಾನು ನಿರಂತರ ಸಂಪರ್ಕದಲ್ಲಿ ಇದ್ದವನು, ಒಬ್ಬ ಪ್ರಾಮಾಣಿಕ, ಪಕ್ಷದ ಸಂಘಟಕ, ನೇರನಡೆ ನುಡಿಯ ವ್ಯಕ್ತಿತ್ವದವರು, ಪ್ರಾಮಾಣಿಕ ಸೇವಾಕರ್ತರು, ಪಕ್ಷದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ಪಕ್ಷವೇ ಅವರಿಗೆ ಎಲ್ಲವೂ ಆಗಿತ್ತು. ಅವರ ಸಾವು ಪಕ್ಷಕ್ಕೆ ನಮಗೆ ಗ್ರಾಮಕ್ಕೆ ತುಂಬಲಾರದ ನಷ್ಟ ಎಂದರು.

ಸಭೆಯನ್ನು ಉದ್ದೇಶಿಸಿ ಜಿಪಂ ಸದಸ್ಯೆ ಮಂಜುಳ ಮಾವೆ, ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ, ಬುಡಾ ಮಾಜಿ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೆರ ಮಾತನಾಡಿದರು.

ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಬುಡಾ ಅಧ್ಯಕ್ಷ ಸದಾಶಿವ ಬಂಗೇರ,  ಅಲ್ಬರ್ಟ್ ಮಿನೇಜಸ್, ಜನಾರ್ದನ ಚಂಡ್ತಿಮಾರ್, ಧನಲಕ್ಷ್ಪೀ ಸಿ. ಬಂಗೇರ, ಮಾದವ ಮಾವೆ, ಜಯಂತಿ,  ಬೇಬಿ ಕುಂದರ್ ಉಪಸ್ಥಿತರಿದ್ದರು.

ಮಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ