ಆರೋಪ, ಪ್ರತ್ಯಾರೋಪ ಬೇಡ, ಒಟ್ಟಾಗಿ ಕುಳಿತು ಯೋಚಿಸಬೇಕಾದ ವಿಷ್ಯವಿದು..
ನಸುಕು ಹರಿಯುವ ಮೊದಲೇ ವಾಕಿಂಗ್ ಮಾಡುವವರ ಕೈಯಲ್ಲೊಂದು ತೊಟ್ಟೆ. ಏನಿದು ಹಾಲು ತರಲೇ ಎಂದು ಕೇಳಬೇಡಿ. ವಾಕಿಂಗ್ ಮಾಡಿ ಮುಗಿಸಿ ಮನೆಗೆ ಬರುವುದರ ಒಳಗೆ ಕಸ ಎಸೆದು ಹೋಗಬೇಕು. ಮತ್ತೆ ಪುರುಸೊತ್ತು ಯಾರಿಗುಂಟು ಮಾರಾಯ್ರೆ….
ಮಹಾರಸ್ತೆ. ನೋಡಲು ಅಷ್ಟೊಂದು ಸುಂದರ. ನಡುವೆ ಡಿವೈಡರ್. ಎರಡೂ ಬದಿಯಲ್ಲ ಚಿತ್ರನಟಿಯ ಕೆನ್ನೆಯಂತಿರುವ ರಸ್ತೆಗಳು. ಸುಮಾರು ಹದಿನೈದು ಲಕ್ಷ ರೂಪಾಯಿ ಬೆಲೆಬಾಳುವ ಚೆಂದದ ಕಾರೊಂದು ಪ್ರತಿದಿನ ಅದೇ ದಾರಿಯಲ್ಲಿ ಸಾಗುತ್ತದೆ. ವೇಗವಾಗಿ ಸಾಗುವ ಕಾರು ಆ ಜಾಗದಲ್ಲಿ ನಿಧಾನವಾಗುತ್ತದೆ. ಕಾರೊಳಗಿಂದ ಸುಂದರ ಕೈಯೊಂದು ಹೊರಬರುತ್ತದೆ. ರಪ್ಪನೆ ಆ ಕೈಯಲ್ಲಿರುವ ತೊಟ್ಟೆ ರಸ್ತೆ ಪಕ್ಕ ಬೀಳುತ್ತದೆ.
ಇದೇನು ಎಂದು ವಿಸ್ಮಯವೇ? ಏನೂ ಅಲ್ಲ, ಐವತ್ತೋ, ನೂರೋ ರೂಪಾಯಿ ಉಳಿಸುವ ಸಣ್ಣ ಉಳಿತಾಯ ಯೋಜನೆ!!!.
ನಿಮ್ಮ ಮನೆಬಾಗಿಲಿಗೆ ಆಡಳಿತ ಬಂದು ನಾವು ಕಸ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರೂ ನಾವು ಅವರ ಕೈಗೆ ತ್ಯಾಜ್ಯ ಕೊಡಲು ಹಿಂದೆಮುಂದೆ ನೋಡುತ್ತೇವೆ. ನಮ್ಮ ಉದಾಸೀನದ ಫಲವಾಗಿ ತ್ಯಾಜ್ಯ ಹೆಕ್ಕುವವರೂ ಬರುವುದನ್ನು ನಿಲ್ಲಿಸುತ್ತಾರೆ. ಹಾಗೆ ಮಾಡಿದ ಕಾರಣ ಪ್ರಾಮಾಣಿಕವಾಗಿ ಮನೆ ಮುಂದೆ ತ್ಯಾಜ್ಯದ ಕಟ್ಟು ಹಿಡಿದವರೂ ಕಸ ಸಂಗ್ರಹಕ್ಕೆ ಬಾರದವರ ಮೇಲೆ ಹಿಡಿ ಶಾಪ ಹಾಕುತ್ತಾರೆ.
ಪೇಟೆಯಲ್ಲೆಲ್ಲ ಬ್ಯಾನರ್, ಬಂಟಿಂಗ್ ಗಳು ತುಂಬಿ ತುಳುಕುತ್ತವೆ. ಶ್ರದ್ಧಾಂಜಲಿಯೂ, ಅಭಿನಂದನೆಯೂ ಒಂದೇ ರೀತಿ ಇರುತ್ತದೆ. ಯಾವುದೋ ಒಂದು ಘಳಿಗೆಯಲ್ಲಿ ಅದು ರಸ್ತೆ ಮೇಲೆ ಬೀಳುತ್ತದೆ. ಅದನ್ನು ಎತ್ತುವವರು ಯಾರು ಎಂಬ ಪ್ರಶ್ನೆಯನ್ನು ಹಿಡಿದುಕೊಂಡು ಕಾಲಹರಣ ನಡೆಯುತ್ತದೆ.
ಬಂಟ್ವಾಳವಷ್ಟೇ ಅಲ್ಲ ಸಣ್ಣಪುಟ್ಟ ನಗರ, ಪಟ್ಟಣಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ದೃಶ್ಯಾವಳಿಗಳು ಇವು.
ಇನ್ನು ಬಂಟ್ವಾಳಕ್ಕೆ ಬರೋಣ.
ನಮ್ಮ ಪುರಸಭೆಯ ತೊಟ್ಟಿಗಳಲ್ಲಿ ಕಸ ತುಂಬಿ ತುಳುಕುವುದಂತೂ ಸತ್ಯ. ಅದನ್ನು ಟೆಂಪೋಗಳಲ್ಲಿ ಹೇರಿಕೊಂಡು ಹೋಗುವುದೂ ಸತ್ಯ. ನಾಗರಿಕರು ಮತ್ತೆ ಅದೇ ಜಾಗದಲ್ಲಿ ಕಸ ಎಸೆಯೋದೂ ಪರಮಸತ್ಯ!!
ದಶಕಗಳ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಇನ್ನೂ ದೊರಕಿಲ್ಲ ಮುಕ್ತಿ.
ಬಜೆಟ್ ಪೂರ್ವ ಸಭೆಗಳಲ್ಲಿ ಸಿಸಿ ಕ್ಯಾಮರಾ ಪ್ರಸ್ತಾಪ ಕೇಳಿಬಂತು. ಆದರೆ ಅದನ್ನು ಮಾನಿಟರ್ ಮಾಡುವುದು ದೊಡ್ಡ ತಲೆನೋವು ಎಂದು ಆ ಪ್ರಸ್ತಾಪವನ್ನು ತಳ್ಳಿಹಾಕಲಾಯಿತು. ಮನೆ ಮನೆಗೆ ಬಕೆಟ್ ಕೊಡುವ ಯೋಜನೆಗೆ ಸಾರ್ವಜನಿಕರ ಸ್ಪಂದನೆ ಅಷ್ಟೊಂದು ಸಕಾರಾತ್ಮಕವಾಗಿ ದೊರಕಲಿಲ್ಲ. ಕಸ ಸಂಗ್ರಹಕ್ಕೆ ಜನರು ಬರುವುದೇ ಇಲ್ಲ ಎಂಬ ಕಂಪ್ಲೈಂಟುಗಳು ಬಂದವು. ಪುರಸಭೆ ಮೀಟಿಂಗ್ ಗಳ ಅರ್ಧಾಂಶವನ್ನು ಕಸದ ವಿಲೇವಾರಿ ವಿಚಾರವೇ ನುಂಗಿ ಹಾಕಿತು. ಕೊನೆಗೂ ಕಂಚಿನಡ್ಕಪದವಿನಲ್ಲಿ ತ್ಯಾಜ್ಯ ಶುದ್ಧೀಕರಣ ಘಟಕ ನಿರ್ಮಿಸುವ ಕುರಿತು ಸ್ಥಳೀಯ ಪಂಚಾಯಿತಿ ಮನವೊಲಿಸುವ ಕುರಿತು ಮಾತುಕತೆಗಳು ನಡೆದವು. ಆರೋಪ, ಪ್ರತ್ಯಾರೋಪಗಳು ಕೇಳಿಬಂದವೇ ವಿನ: ತಾರ್ಕಿಕ ಅಂತ್ಯ ದೊರಕಲಿಲ್ಲ.
ಬಿ.ಸಿ.ರೋಡ್‌ನ ತಾಲೂಕು ಕಚೇರಿ ಹಿಂಭಾಗವೇ ಕಸದ ತೊಟ್ಟಿಯಲ್ಲಿ ಹಾಡಹಗಲೇ ಕಸದ ರಾಶಿ ತುಂಬುತ್ತದೆ. ಪ್ರತಿದಿನ ವಿಲೇವಾರಿ ಮಾಡುವ ವಾಹನ ಬಂದು ಖಾಲಿ ಮಾಡಿದರೂ ಮತ್ತದೇ ಕಸ. ಪೂಂಜಾ ಮೈದಾನದ ಬಳಿ ಬಸ್ ಬೇ ಮಾಡುವ ಜಾಗದ ಪಕ್ಕದಲ್ಲಿರುವ ಕಸದ ತೊಟ್ಟಿ ತುಂಬಾ ಕೊಳೆತ ತ್ಯಾಜ್ಯ. ಬಂಟ್ವಾಳ, ಪಾಣೆಮಂಗಳೂರು ಸಹಿತ ಎಲ್ಲೆಲ್ಲಿ ಕಸ ಎಸೆಯಲು ಖಾಲಿ ಜಾಗ ಸಿಗುತ್ತದೋ ಅಲ್ಲಲ್ಲಿ ಕಸ ಎಸೆಯುವ ಪ್ರವೃತ್ತಿಗೆ ಕಡಿವಾಣವೂ ಬಿದ್ದಿಲ್ಲ. ಸ್ವಚ್ಛ ಬಂಟ್ವಾಳ ಅಭಿಯಾನಕ್ಕೆ ಸಾರ್ವಜನಿಕರಲ್ಲಿ ಜಾಗೃತಿ ಇನ್ನೂ ಮೂಡಿಲ್ಲ ಎಂಬುದು ಒಂದು ವಿಷಯವಾದರೆ ಜನಜಾಗೃತಿಯ ಇದುವರೆಗಿನ ಕಾರ್ಯಕ್ರಮಕ್ಕಿಂತ ಭಿನ್ನವಾಗಿ ಕಸ ಎಸೆದರೆ ಕಟ್ಟುನಿಟ್ಟಿನ ದಂಡ ವಿಸುವ ಕಾರ್ಯವಾಗಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.
ಪುರಸಭೆ ಎಲ್ಲ ವಾರ್ಡುಗಳಲ್ಲಿನ ನಾಗರಿಕರಿಗೆ ಎರಡು ಬಾಲ್ದಿಗಳನ್ನು ವಿತರಿಸಿ, ಅದರಲ್ಲಿ ಹಸಿಕಸ, ಒಣಕಸಕ್ಕೆ ಒಂದೊಂದು ಬಾಲ್ದಿ ಎಂದು ತಿಳಿಸಿ ಕಸ ಸಂಗ್ರಹಕ್ಕೆ ಬರುವವರಿಗೆ ಅದನ್ನು ನೀಡುವಂತೆ ಕೋರಿಕೊಂಡಿತು. ಆದರೆ ಕೆಲವರು ಬಾಲ್ದಿ ಸ್ವೀಕರಿಸಲು ಬರಲೇ ಇಲ್ಲ. ಬಂದರೆ ತ್ಯಾಜ್ಯ ಸಂಗ್ರಹಿಸುವವರು ಬಂದಾಗ ದುಡ್ಡು ಕೊಡಬೇಕಾದೀತು ಎಂಬ ನಿಲುವು ಒಂದಾದರೆ, ಕಸ ವಿಲೇವಾರಿಯವರು ಬಾರದೇ ಇದ್ದರೆ ಬಾಲ್ದಿಯಲ್ಲಿನ ಕಸವನ್ನು ಏನು ಮಾಡುವುದು ಎಂಬ ಗೊಂದಲ ಮತ್ತೊಂದು. ಹೀಗಾಗಿ ಮನೆಯಿಂದ ಹೊರಗೆ ತೊಟ್ಟೆಯಲ್ಲಿ ಕಸವನ್ನು ತೆಗೆದುಕೊಂಡು ಹೋಗಿ ಸಾರ್ವಜನಿಕ ಜಾಗದಲ್ಲಿ ಹಾಕಿದ ತೊಟ್ಟಿಯಲ್ಲಿ ಕಸವನ್ನು ಎಸೆಯುವ ಪ್ರವೃತ್ತಿಯನ್ನೇ ನೀಟ್ ಆಗಿ ಮಾಡತೊಡಗಿದರು. ಇಂಥವರು ಎಸೆದ ಕಸವನ್ನು ಅಷ್ಟೇ ನೀಟ್ ಆಗಿ ವಿಲೇವಾರಿ ಮಾಡಲಾಯಿತು. ಹೀಗೇ ಶಿಸ್ತಿನಿಂದ ಎಲ್ಲ ಸೂಚನೆಗಳನ್ನು ಪಾಲಿಸಿ ಹೊರಗೆ ಕಸ ಎಸೆಯದೆ ಬಾಲ್ದಿಯಲ್ಲಿ ಕಸ ತುಂಬಿಸಿ ಗಾಡಿಗೆ ಕೊಡುವ ನಾಗರಿಕನೂ ಅದನ್ನು ಕೈಬಿಟ್ಟು ಹೊರಗೆ ಎಸೆದರೂ ಏನೂ ಆಗುವುದಿಲ್ಲ ಎಂದರಿತು ಕಸದ ತೊಟ್ಟಿಯ ಪಕ್ಕದಲ್ಲೋ ಅಥವಾ ಖಾಲಿ ಜಾಗದಲ್ಲೋ ಕಸ ಎಸೆಯುವ ಪರಿಪಾಠವನ್ನು ಮತ್ತೆ ಆರಂಭಿಸಿದ್ದಾನೆ.
ಎಷ್ಟು ನೋಟಿಸ್ ನೀಡಿದರೂ, ಮಾಧ್ಯಮಗಳಲ್ಲಿ ಅದೆಷ್ಟು ಬಾರಿ ಎಚ್ಚರಿಸಿದರೂ ನೇತ್ರಾವತಿ ಒಡಲಿಗೆ ತ್ಯಾಜ್ಯ ಬಂದು ಸೇರುವುದು ನಿಂತಿಲ್ಲ. ಕೆಲವು ವಾರಗಳ ಹಿಂದೆಯಷ್ಟೇ ಸುರಿದ ಮಳೆಗೆ ನೇತ್ರಾವತಿ ನೀರು ತ್ಯಾಜ್ಯದಿಂದ ಕಲುಷಿತವಾಗಿ ದೇವಸ್ಥಾನದ ಪೂಜೆಗೂ ಬಳಸಲಾಗದಂಥ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ನೇತ್ರಾವತಿಗೆ ತ್ಯಾಜ್ಯ ಎಸೆಯುವುದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪುರಸಭೆ ಸೂಚಿಸುತ್ತಿದ್ದರೂ ತ್ಯಾಜ್ಯಗಳು ಬಂದು ಬೀಳುತ್ತಿರುವುದು ನಿಂತಿಲ್ಲ.
ಹೀಗೆ ಕಸ ವಿಲೇವಾರಿಗೆ ಶಿಸ್ತು ತರುವ ಒಂದು ಅಧ್ಯಾಯ ಮುಗಿದು ಮತ್ತದೇ ಕಸದ ರಾಶಿಗಳು ಬಿ.ಸಿ.ರೋಡ್, ಬಂಟ್ವಾಳದ ಸುತ್ತಮುತ್ತ ಮೊದಲಿನಂತೆ ಕಾಣಿಸಲು ಆರಂಭಿಸಿವೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಸ್ವಚ್ಛ ಬಂಟ್ವಾಳದ ಕನಸು ಈಡೇರುವುದು ಕಷ್ಟ.
ಇದನ್ನೆಲ್ಲ ಮಾನಿಟರ್ ಮಾಡುವ ಬಂಟ್ವಾಳದ ಪುರಸಭೆಯ ಪರಿಸರ ಇಂಜಿನಿಯರ್ ಪೋಸ್ಟ್ ಇನ್ನೂ ಖಾಲಿ ಇದೆ.