ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಹತ್ಯೆಗೆ ಸಂಬಂಧಿಸಿ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆಯೇ?
ಮಿತ್ತನಡ್ಕ ಮುಗುಳಿ ರಸ್ತೆ ಬದಿ ಸೋಮವಾರ ಎರಡು ಬೈಕ್, ಎರಡು ತಲವಾರು, ಬಟ್ಟೆಬರೆ ಪತ್ತೆಯಾಗಿದ್ದು ಈ ಅನುಮಾನಗಳಿಗೆ ಕಾರಣವಾಗಿದೆ.
ಈಗಾಗಲೇ ಕೊಲೆಗೆ ಸಂಬಂಧಿಸಿ ತೀವ್ರಗತಿಯಲ್ಲಿ ರಾತ್ರಿ ಹಗಲೆನ್ನದೆ ತನಿಖೆ ನಡೆಸುತ್ತಿರುವ ಪೊಲೀಸರು ಒಂದೆರಡು ದಿನಗಳಲ್ಲೇ ಪ್ರಕರಣ ಬೇಧಿಸುವುದಾಗಿ ಹೇಳಿದ್ದಾರೆ.
ಏನು ಕಂಡುಬಂದಿತ್ತು:ಕರ್ನಾಟಕ-ಕೇರಳ ಗಡಿಭಾಗದ ಮುಗುಳಿ ಎಂಬಲ್ಲಿಯ ಉಪ್ಪಳ ರಸ್ತೆ ಬದಿಯಲ್ಲಿ ಇಂದು ಬೆಳಗ್ಗೆ ಸ್ಥಳೀಯರು ನಡೆದು ಹೋಗುತ್ತಿದ್ದ ವೇಳೆ ಹಳೆಯ ಎರಡು ಪಲ್ಸರ್ ಬೈಕ್‌ಗಳು ಬಿದ್ದ ಸ್ಥಿತಿಯಲ್ಲಿ ಕಂಡುಬಂದಿವೆ. ಬೈಕ್ ಪಕ್ಕದಲ್ಲಿ ಎರಡು ತಲವಾರ್ ಹಾಗೂ ನಾಲ್ಕು ಜೋಡಿ ಪ್ಯಾಂಟ್ ಹಾಗೂ ಶರ್ಟ್‌ಗಳು ಪತ್ತೆಯಾಗಿವೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಸ್ತುಗಳನ್ನು ವಶಕ್ಕೆ ಪಡೆದು ಜಲೀಲ್ ಕೊಲೆಗೆ ಸಂಬಂಧಿಸಿದ ವಸ್ತುಗಳೇ ಎಂಬುದರ ಬಗ್ಗೆ ತನಿಖೆ ಕೈಗೆತ್ತಿಕೊಂ ಡಿದ್ದಾರೆ.
ಇದು ಯಾವುದು?
ರಸ್ತೆ ಬದಿಯಲ್ಲಿ ಬೈಕುಗಳು ಪತ್ತೆಯಾಗಿವೆ. ಹತ್ಯೆಯಾದ ದಿನದಿಂದ ಸೋಮವಾರದವರೆಗೆ ಇದು ಎಲ್ಲಿ ಇತ್ತು, ಯಾರಿಗು ಯಾಕೆ ಇಷ್ಟು ದಿನ ಕಾಣಿಸಲಿಲ್ಲ ಎಂಬುದೂ ನಿಗೂಢ. ಸ್ಥಳದಲ್ಲಿ ಕಂಡುಬಂದ ತಲವಾರು, ಬಟ್ಟೆಬರೆಗಳೂ ಇರಿಸಿದಂತಿವೆ ಎಂಬ ಕಾರಣದಿಂದ ತನಿಖೆಯ ದಿಕ್ಕುತಪ್ಪಿಸಲು ಇವನ್ನು ಹಾಕಿರಬಹುದೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪತ್ತೆಯಾದ ಎರಡು ಬೈಕುಗಳ ಪೈಕಿ ಒಂದು ಕಳವಾದ ಬೈಕು ಆಗಿರಬಹುದೇ ಎಂಬ ಪರಿಶೀಲನೆ ನಡೆಸುತ್ತಿದ್ದಾರೆ. ವಿಟ್ಲ ಪೊಲೀಸರು ಅನಾಥ ವಸ್ತುಗಳು ಪತ್ತೆ ಎಂಬ ಕಾಲಂನಡಿ ಪ್ರಕರಣ ದಾಖಲಿಕೊಂಡಿದ್ದಾರೆ.