ಗಿರಿಲಹರಿ

ಎಲ್ಲಿಗೆ ಹೋದರೂ ಅಭ್ಯಾಸ ಬಿಡದು!!

  • ಡಾ. ಅಜಕ್ಕಳ ಗಿರೀಶ ಭಟ್
  • ಅಂಕಣ: ಗಿರಿಲಹರಿ

ಸಾಮಾನ್ಯವಾಗಿ ಕ್ರೀಡಾಪಟುಗಳು ತಮ್ಮ ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳುವ ಕೆಲವು ಅಭ್ಯಾಸಗಳು ಆಗಾಗ ಪತ್ರಿಕೆಗಳಲ್ಲಿ ವರದಿಯಾಗುತ್ತವೆ. ನಮ್ಮ ದೇಶದಲ್ಲಿ ಕ್ರೀಡಾಳುಗಳು ಎಂದರೆ ಮೊದಲು ನೆನಪಿಗೆ ಬರುವುದು ಕ್ರಿಕೆಟ್ ಪಟುಗಳೇ. ಅಷ್ಟರಮಟ್ಟಿನ ಪ್ರಾಧಾನ್ಯ ಅವರಿಗೆ ಸಿಕ್ಕಿಬಿಟ್ಟಿದೆ. ಹಾಗೆ ನೋಡಿದರೆ ಅವರ ಕ್ರೀಡಾಸಾಧನೆಗಳು ಮಾಮೂಲಿ ವರದಿಗಳಾಗುವ ಹೊತ್ತಿನಲ್ಲಿ ಇಂಥ ಮಾಹಿತಿಗಳೇ ನಿಜವಾದ ಆಸಕ್ತಿಯನ್ನು ಓದುಗರಲ್ಲಿ ಹುಟ್ಟಿಸುತ್ತವೆ. ಟಿವಿಯಲ್ಲಿ ಕ್ರಿಕೆಟ್ ನೇರಪ್ರಸಾರ ಮಾಡುವವರಿಗೂ ಇದು ಅಂದಾಜಿಲ್ಲವೇನೋ?! ಯಾಕೆಂದರೆ, ನಾನಾಗುತ್ತಿದ್ದರೆ ಓವರಿನ ಮಧ್ಯದಲ್ಲಿ, ಅಂದರೆ ಎರಡೋ ಮೂರೋ ಬಾಲುಗಳು ಆದ ನಂತರ, ಜಾಹಿರಾತು ಪ್ರಸಾರ ಮಾಡುತ್ತಿದ್ದೆ. ಒಂದು ಓವರು ಮುಕ್ತಾಯವಾದಾಗ ಪ್ರಸಾರ ತಡೆದು ಜಾಹಿರಾತು ಹಾಕಬಾರದು. ಓವರಿನ ಮುಕ್ತಾಯವಾದಾಗ ಅವರು ಹೇಗೆ ಪೇಡುಗಳನ್ನು ಸರಿ ಮಾಡುತ್ತಾರೆ? ಅವರಿಗೆ ನೀರು ಯಾರು ತಂದುಕೊಡುತ್ತಾರೆ? ಅವರು ಏನು ಕುಡಿಯುತ್ತಾರೆ? ಏನಾದರೂ ತಿನ್ನುತ್ತಾರಾ? ಪೆವಿಲಿಯನಿನಲ್ಲಿರುವವರು ಏನೇನು ಮಾಡುತ್ತಿರುತ್ತಾರೆ? ಟೀ ಬ್ರೇಕಿನಲ್ಲಿ ಏನು ತಿನ್ನುತ್ತಾರೆ? ಅವರ ಲಂಚ್ ಅಂದರೆ ಹೇಗಿರುತ್ತದೆ? ಇಂಥವನ್ನೆಲ್ಲ ಟಿವಿಯಲ್ಲಿ ತೋರಿಸಿದರೆ ನೋಡುವವರಿಗೂ ಆಸಕ್ತಿ ಹೆಚ್ಚಬಹುದು.

ಇರಲಿ, ನಾನು ಹೇಳಲು ಹೊರಟದ್ದು ಇಂಥ ಕ್ರಿಕೆಟ್ ಆಟಗಾರರ ಕೆಲವು ರೂಢಿಗತ ಅಭ್ಯಾಸಗಳ ಬಗ್ಗೆ. ಕೆಲವು ದಾಂಡಿಗರು ಮೊದಲು ಎಡಗಾಲಿಗೇ ಷೂ ಹಾಕುವುದಂತೆ. ಇನ್ನು ಕೆಲವರು ಮೊದಲು ಬಲಗಾಲಿಗೇ ಹಾಕುವವರು. ಮತ್ತೆ ಒಬ್ಬರು ಎಡಕಾಲಿಗೇ ಮೊದಲು ಪೇಡ್ ಕಟ್ಟುವವರು. ಒಬ್ಬ ಆಟಗಾರ ಎಡಕಾಲಿಗೆ ಪೇಡು ಕಟ್ಟುವಾಗ ಬಲಗಾಲನ್ನು ಕುರ್ಚಿ ಮೇಲಿಟ್ಟು, ಮತ್ತು ಬಲಗಾಲಿಗೆ ಕಟ್ಟುವಾಗ ಎಡಕಾಲನ್ನು ಕುರ್ಚಿ ಮೇಲಿಟ್ಟೇ ಕಟ್ಟುವುದಂತೆ. ಅದೇಕೆ ಹಾಗೆ ಎಂದು ಕೇಳಬೇಡಿ. ಇಂಥ ಹಲವಾರು (ಮೂಢ) ನಂಬಿಕೆಗಳು ಅವರಿಗಿರುತ್ತವೆ. ನಿಮಗೆ ಮೂಢನಂಬಿಕೆ ಎನ್ನಿಸಬಹುದು. ಆದರೆ ಅವನು ಬಹುಶಃ ಎಂದಾದರೂ ಹಾಗೆ ಕಟ್ಟಿದ ದಿನ ಶತಕ ಹೊಡೆದಿರಲೂಬಹುದು. ಇಂಥ ಕೆಲವು ನಂಬಿಕೆ ಆಚರಣೆಗಳು ನಮಗೆ ಪ್ರತಿಬಾರಿ ಕಾಣಬೇಕೆಂದಿಲ್ಲ. ಯಾಕೆಂದರೆ ಅವುಗಳು ಸಾರ್ವಜನಿಕರ ಎದುರೇ ಆಗಬೇಕೆಂದಿಲ್ಲ. ಆದರೆ ಕ್ರೀಡಾಳುಗಳು ಮೈದಾನದಲ್ಲಿ ತೋರಿಸುವ ಕೆಲವು ಅಭ್ಯಾಸಗಳನ್ನು ನಾವೂ ನೋಡಿ ಅಧ್ಯಯನ ಮಾಡಬಹುದು.

ಸುಮಾರು ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ಆಡುತ್ತಿದ್ದ ಸ್ಫೋಟಕ ಆರಂಭಿಕ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಬ್ಯಾಟಿಂಗ್ ಮಾಡುವಾಗ ಪ್ರತಿ ಎಸೆತದ ನಂತರವೂ ಸ್ಕ್ವೇರ್ ಲೆಗ್ಗಿನ ಕಡೆಗೆ ಹೋಗಿ ದಾಂಡನ್ನು ಮೇಲೆತ್ತಿ ಒಮ್ಮೆ ತಿರುಗಿಸಲಿಕ್ಕಿತ್ತು. ಗಮನಿಸಿ ನೋಡಿದರೆ ಈಗ ಆಡುವವರಲ್ಲೂ ಇಂಥ ಹಲವಾರು ಅಭ್ಯಾಸಗಳು ಪುನರಾವರ್ತನೆ ಆಗುವುದನ್ನು ಕಾಣಬಹುದು. ಉದಾ: ಚಂದರ್ ಪಾಲ್ ಎಂಬ ವಿಂಡೀಸಿನ ದಾಂಡಿಗ ಬೇಲ್ ತೆಗೆದು ಬ್ಯಾಟಿನ ಕೈಯಿಂದ ನೆಲದಲ್ಲಿ ಬಡಿದು ಗಾರ್‍ಡ್ ಗುರುತು ಹಾಕುತ್ತಾನೆ. ಅವನ ಮಗನಿಗೂ ಈಗ ಅದೇ ಅಭ್ಯಾಸವಂತೆ. ಧೋನಿ ಪದೇಪದೇ ತನ್ನ ಹೆಲ್ಮೆಟಿನ ಬೇಲಿಯ ಎಡೆಯಿಂದ ಎಡ ಹೆಬ್ಬೆರಳಲ್ಲಿ ಹುಬ್ಬು ತೀಡುವುದನ್ನು ನೀವು ನೋಡಿರುತ್ತೀರಿ. ಟೆನಿಸ್ ಆಟಗಾರ ರಾಫೆಲ್ ನಡಾಲ್ ಪ್ರತಿ ಸರ್ವಿಸ್ ಮಾಡುವ ಮೊದಲು ತನ್ನ ಎಡಗೈಯಿಂದ ಎಡಕುಂಡೆಯ ಬಳಿ ಚಡ್ಡಿ ಸರಿ ಮಾಡುವುದನ್ನು ಇನ್ನೊಮ್ಮೆ ಅವನು ಆಡುವಾಗ ನೋಡಿ ಆನಂದಿಸಿರಿ.

ನಿಜವಾಗಿ ಇಂಥ ಅಭ್ಯಾಸಗಳು ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತವೆ.ಅವರವರು ಮಡುವ ಕೆಲಸಗಳಿಗೆ ಹೊಂದಿಕೊಂಡು ಈ ಅಭ್ಯಾಸಗಳು ಇರುತ್ತವೆ. ಆದರೆ ಕೆಲವರ ಕೆಲಸ ನಾಲ್ಕು ಜನರ ಎದುರು ಆಗುತ್ತಿರುತ್ತದೆ. ಅಂಥವರ ಮ್ಯಾನರಿಸಮ್ ಗಳು ಎಲ್ಲರ ಗಮನ ಸೆಳೆಯತ್ತವೆ. ಕೆಲವೊಮ್ಮೆ ಹಾಸ್ಯಕ್ಕೆ ವಸ್ತುವಾಗುತ್ತವೆ. ಅಧ್ಯಾಪಕ ವೃತ್ತಿಯಲ್ಲಿ ಇರುವವರಿಗೆ ಈ ಶಾಪದಿಂದ ವಿಮೋಚನೆಯಿಲ್ಲ. ವಿದ್ಯಾರ್ಥಿಗಳಲ್ಲಿ ಕೇಳಿ ನೋಡಿದರೆ ಪ್ರತಿಯೊಬ್ಬ ಬೋಧಕನ/ಕಿಯ ಮ್ಯಾನರಿಸಮ್ ಬಗ್ಗೆಯೂ ಅವರು ಹೇಳಬಲ್ಲರು. ಪದೇಪದೇ ಕೂದಲು ಸರಿಮಾಡುವುದು, ಪ್ಯಾಂಟು ಮೇಲೆಳೆದುಕೊಳ್ಳುವುದು ಮುಂತಾದ ಆಂಗಿಕ ಚಲನೆಯಂತೆಯೇ ಮತ್ತೆ ಮತ್ತೆ ಪುನರಾವರ್ತಿಸುವ ಪದಗಳು ಕೂಡ ಮಕ್ಕಳಿಗೆ ನಗೆಗೆ ವಸ್ತುವಾಗುತ್ತವೆ. ನಾನು ಇದಕ್ಕೆ ಬೇಕಾದಷ್ಟು ಉದಾಹರಣೆಗಳನ್ನು ನನ್ನ ಅಧ್ಯಾಪಕರದು, ನನ್ನ ಸಹೋದ್ಯೋಗಿಗಳದು ಮತ್ತು ನನ್ನದೂ ಸೇರಿಸಿ ಕೊಡಬಲ್ಲೆ. ನಿಮ್ಮ ಅನುಭವದಲ್ಲಿ ಇಂಥದ್ದು ಹಲವು ಇರಬಹುದಾದ್ದರಿಂದ ನಾನು ಉದಾಹರಣೆಗಳನ್ನು ನೀಡಿ ಇದನ್ನು ಲಂಬಿಸುವುದಿಲ್ಲ. ಒಂದು ಉದಾಹರಣೆಯನ್ನು ಮಾತ್ರ ಹೇಳದೆ ಇರಲಾರೆ. ನಮಗೆ ಕಲಿಸುತ್ತಿದ್ದ ಒಬ್ಬರು ಮೇಡಮ್ ಪ್ರತಿವಾಕ್ಯದಲ್ಲಿ ಒಂದು ಬಾರಿ ಆರ್ ಯು ಫೊಲೋವಿಂಗ್ ಮಿ? ಎಂದು ಸೇರಿಸುತ್ತಿದ್ದರು. ನಮ್ಮ ತರಲೆಸ್ನೇಹಿತರು ಅವರು ಅಷ್ಟು ಕೇಳುತ್ತ ಇದ್ದಾರೆ, ಇವತ್ತು ಸಂಜೆ ಅವರನ್ನು ಫೋಲೋ ಮಾಡೋಣ ಅಂತ ಮಾತಾಡಿಕೊಳ್ಳುವುದಿತ್ತು.

ನಾಲ್ಕು ಜನರಿಗೆ ಕಾಣುವಾಗ ನಾವು ತೋರಿಸುವ ಅಥವಾ ಪುನರಾವರ್ತಿಸುವ ಅಭ್ಯಾಸಗಳು ಹಾಗಿರಲಿ. ನಾವು ನಮ್ಮ ದಿನಚರಿಯನ್ನು ಅವಲೋಕಿಸಿಕೊಂಡರೆ ಪ್ರತಿದಿನವೂ ನಾವು ಅದೇ ಕ್ರಮವನ್ನು ಪಾಲಿಸುತ್ತೇವೆ ಎನ್ನುವುದು ಒಂದಂಶ. ಅಂದರೆ, ಎದ್ದ ತಕ್ಷಣ ಪಾಯಿಖಾನೆಗೆ ಹೋಗುವುದಿರಬಹುದು, ಹಲ್ಲುಜ್ಜುವುದಿರಬಹುದು.

(ಪಾವೆಂ ಅವರು ಅನುವಾದಿಸಿದ ಒಂದು ಸಂಸ್ಕೃತ ಸುಭಾಷಿತದ ಪ್ರಕಾರ,

ಕೇಡಿಗರಿಗೆ ಮೊದಲು ನಮೋ

ಒಳ್ಳಿದರಿಗೆ ಬಳಿಕ

ಮೋರೆ ತೊಳೆಯುವ ಮೊದಲು

ತೊಳೆಯಬೇಕು ತಿಕ)

ದೈನಂದಿನ ಕೆಲಸಗಳನ್ನು ಒಂದಾದನಂತರ ಒಂದನ್ನು ಒಂದೇ ಕ್ರಮದಲ್ಲಿ ಮಾಡುತ್ತೇವೆ ಎನ್ನುವುದಷ್ಟೇ ಅಲ್ಲ. ಕೆಲವು ಕೆಲಸಗಳನ್ನು ಹಿಂದಿನ ದಿನದಂತೆಯೇ ಪುನರಾವರ್ತಿಸುತ್ತೇವೆ ಎಂದು ಗೊತ್ತಾಗುತ್ತದೆ. ಉದಾಹರಣೆಗೆ ಬೆಳಗ್ಗೆ ಎದ್ದು ಬಾತ್ ರೂಮಿಗೆ ಹೋಗುತ್ತೀರಾದರೆ ಯಾವ ಕೈಯಲ್ಲಿ ಬಾಗಿಲನ್ನು ತೆರೆಯುತ್ತೀರಿ? ಒಳಗೆ ಹೋದ ನಂತರ ಬಾಗಿಲು ಹಾಕುತ್ತೀರಾದರೆ ಯಾವ ಕೈಯಲ್ಲಿ ಹೇಗೆ ಹಾಕುತ್ತೀರಿ? ಯಾವ ಕೈಯಲ್ಲಿ ಹೇಗೆ ನಲ್ಲಿ ತಿರುಗಿಸುತ್ತೀರಿ ಅಥವಾ ಚೆಂಬು/ಮಗ್ ಹಿಡಿಯುತ್ತೀರಿ? ಟೂತ್ ಬ್ರಷ್ಷಿಗೆ ಹೇಗೆ ಪೇಸ್ಟ್ ಹಾಕುತ್ತೀರಿ? ಇವೆಲ್ಲ ನಿನ್ನೆಯಂತೆಯೇ ಇಂದೂ ಇರುವುದನ್ನು ಕಾಣುತ್ತೇವೆ. ಅಷ್ಟೇಕೆ? ಸ್ನಾನಕ್ಕೆ ಮೊದಲು ಯಾವ ಬಟ್ಟೆಯಿಂದಾರಂಭಿಸಿ ಕಳಚುತ್ತೀರಿ, ನಿಮ್ಮ ಸ್ನಾನದ ಆರಂಭ, ಮಧ್ಯ, ಅಂತ್ಯವನ್ನು ನೋಡಿಕೊಂಡರೂ, ಮೈಯ ಯಾವಯಾವ ಭಾಗದಿಂದ ಆರಂಭಿಸಿ ಶುಚಿಗೊಳಿಸುತ್ತೀರಿ, ಕೊನೆಗೆ ಯಾವಯಾವ ಭಾಗದಿಂದ ಆರಂಭಿಸಿ ಹೇಗೆ ಹೇಗೆ ಬೈರಾಸಿನಿಂದ ಉಜ್ಜಿಕೊಳ್ಳುತ್ತೀರಿ, ಎಲ್ಲಿ ಕೊನೆಯಾಗುತ್ತೀರಿ? ಎಂಬುದೆಲ್ಲ ನಿನ್ನೆಯದೇ ಪುನರಾವರ್ತನೆ. ಬಟ್ಟೆ ಧರಿಸುವುದೂ ಹಾಗೆಯೇ. ಇದೇ ಬಗೆಯನ್ನು ನೀವು ಅಂಗಿ ಧರಿಸುವವರಾದರೆ ಅಂಗಿಯೊಳಗೆ ಯಾವ ಕೈಯನ್ನು ಮೊದಲು ತೂರಿಸುತ್ತೀರಿ? ಯಾವ ಗುಂಡಿಯನ್ನು ಮೊದಲು ಹಾಕುತ್ತೀರಿ? ಯಾವ ಕಾಲನ್ನು ಮೊದಲು ಪ್ಯಾಂಟಿನೊಳಗೆ ತೂರಿಸುತ್ತೀರಿ? ಎಲ್ಲವೂ ಪೂರ್ವನಿರ್ಧಾರಿತ.

ಸ್ನಾನದ ಕೋಣೆ ಮಾತ್ರ ಅಂತಲ್ಲ, ಊಟದ ಕೋಣೆಗೆ ಹೋದರೆ ಅಲ್ಲೂ ಹಾಗೆಯೇ. ದೇವರ ಕೋಣೆಗೆ ಹೋದರೆ, ಅಲ್ಲೂ ನಿತ್ಯದ ಅಭ್ಯಾಸ ಮತ್ತೆ ಪುನರಾವರ್ತನೆ. ಅಭ್ಯಾಸವೇ ಮನುಷ್ನನ್ನು ಪರಿಪೂರ್ಣಗೊಳಿಸುತ್ತದಂತೆ. ಪ್ರ್ಯಾಕ್ಟೀಸ್ ಮೇಕ್ಸ್ ಮ್ಯಾನ್ ಪರ್ಫೆಕ್ಟ್ ಅಂತ ಒಂದು ಗಾದೆ ಮಾತು. ಇಲ್ಲಿ ಮ್ಯಾನ್ ಅಂತ ಇದ್ದರೂ ಕೇವಲ ಪುರುಷರು ಮಾತ್ರ ಹೀಗೆ ಬೆಳಗಿನ ನಿತ್ಯಕರ್ಮದಿಂದಾರಂಭಿಸಿ ರಾತ್ರಿ ಮಲಗುವವರೆಗೆ ಪುನರಾವರ್ತನೆ ಮಾಡುತ್ತಾರೆಂದು ಭಾವಿಸಬಾರದು. ಇದು ಮಹಿಳೆಯರಿಗೂ ಅನ್ವಯಿಸುತ್ತದೆ. ಆದರೆ ಮಹಿಳೆಯರು ಪುನರಾವರ್ತನೆಯ ಅಭ್ಯಾಸದಿಂದಲೂ ಪರ್ಫೆಕ್ಟ್ ಆಗುವ ಗ್ಯಾರೆಂಟಿ ಇಲ್ಲದ್ದರಿಂದ ಕೇವಲ ಮ್ಯಾನ್ ಮಾತ್ರ ಪರ್ಪೆಕ್ಟ್ ಅಂದಿರಬೇಕು!?

Dr. Ajakkala Girish Bhat

ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Share
Published by
Dr. Ajakkala Girish Bhat

Recent Posts