ಕರೋಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಲೀಲ್ ಅವರನ್ನು ಗುರುವಾರ ಬೆಳಗ್ಗೆ ದುಷ್ಕರ್ಮಿಗಳು ಗ್ರಾಮ ಪಂಚಾಯಿತಿ ಕಚೇರಿಯಲ್ಲಿಯೇ ತಲವಾರಿನಿಂದ ಇರಿದು ಕೊಲೆಗೈದಿದ್ದಾರೆ.
ಗ್ರಾಮ ಪಂಚಾಯಿತಿ ಕಚೇರಿಗೆ ಎಂದಿನಂತೆ ಬೆಳಗ್ಗೆ ಬಂದಿದ್ದ ವೇಳೆ ಎರಡು ಬೈಕುಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಕೈಯಲ್ಲಿದ್ದ ಮೆಣಸಿನ ಪುಡಿ ಎರಚಿ ಅವರನ್ನು ಮನಸೋ ಇಚ್ಛೆ ತಲವಾರಿನಿಂದ ಕಡಿದಿದ್ದಾರೆ. ಗಂಭೀರ ಗಾಯಗೊಂಡ ಜಲೀಲ್ ಅವರನ್ನು ನಾಟೆಕಲ್ ನ ಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಅವರು ಪತ್ನಿ, ಒಂದು ಗಂಡು ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಗಳೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಕೇರಳದಿಂದ ಬಂದ ದುಷ್ಕರ್ಮಿಗಳು ಮುಖ್ಯ ರಸ್ತೆಯಲ್ಲೇ ಬಂದಿದ್ದು ಹತ್ಯೆ ನಡೆಸಿದ್ದಾರೆ. ಇದೊಂದು ಪೂರ್ವಯೋಜಿತ ಕೃತ್ಯವಾಗಿದ್ದು ಆರೋಪಿಗಳ ಸುಳಿವಿಗಾಗಿ ಬಲೆ ಬೀಸಲಾಗಿದೆ. ಇಪ್ಪತ್ತನಾಲ್ಕು ತಾಸಿನೊಳಗೆ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಐಜಿಪಿ ಹರಿಶೇಖರನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಎಸ್ಪಿ ಭೂಷಣ್ ಜಿ ಬೊರಸೆ, ಡಿವೈಎಸ್ಪಿ ರವೀಶ್ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಬಳಿಕ ಕರೋಪಾಡಿ ಗ್ರಾಮ ಸಹಿತ ಸುತ್ತಮುತ್ತಲಿನ ಪರಿಸರದ ಜನ ಭೀತರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆಗಳು ನಡೆದಿತ್ತು. ಆದರೆ ಪೂರ್ವದ್ವೇಷವೇ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.
ಜಲೀಲ್ ಕರೋಪಾಡಿ ಅವರು ತಾಪಂ ಸದಸ್ಯ ಉಸ್ಮಾನ್ ಕರೋಪಾಡಿ ಅವರ ಪುತ್ರನಾಗಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಕಾಂಗ್ರೆಸ್ ಪಕ್ಷದ ಯುವ ವಿಭಾಗದಲ್ಲೂ ಅವರು ಗುರುತಿಸಿಕೊಂಡಿದ್ದರು. ಉಸ್ಮಾನ್ ಅವರಿಗೆ ಐವರು ಮಕ್ಕಳು. ಜಲೀಲ್ ಸೇರಿ ಒಂದು ಹೆಣ್ಣ ಹಾಗೂ ನಾಲ್ವರು ಗಂಡು ಮಕ್ಕಳು. ಅವರಲ್ಲಿ ಇಬ್ಬರು ವಿದೇಶದಲ್ಲಿದ್ದಾರೆ.