ಬಂಟ್ವಾಳ

ಏ.22, 23ರಂದು ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಲೋಕಾರ್ಪಣೆ

ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ (ರಿ) ಇದರ ದಶಮಾನೋತ್ಸವದ ಅಂಗವಾಗಿ  ಕ್ಲಬ್‌ನ ಶಾಲಾ ದತ್ತುಯೋಜನೆಯಡಿ ನಿರ್ಮಾಣಗೊಂಡ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಕಟ್ಟಡ ಎಪ್ರಿಲ್ 22 ಮತ್ತು ಎಪ್ರಿಲ್ 23ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ತಿಳಿಸಿದರು.

ಬುಧವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಸುಮಾರು 1.5 ಕೋಟಿ ರೂಪಾಯಿಗಿಂತಲೂ ಅಧಿಕ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣಗೊಂಡಿದ್ದು ಎರಡು ಅಂತಸ್ತಿನ, 14 ಕೊಠಡಿಗಳ ಸುಸಜ್ಜಿತ ಕಟ್ಟಡ ಇದಾಗಿದೆ.  ಎ. 22ರಂದು ಶನಿವಾರ ಸಂಜೆ 3 ಗಂಟೆಗೆ ಸರಿಯಾಗಿ ಬಿ.ಸಿ.ರೋಡಿನ ಕೈಕಂಬದ ಪೊಳಲಿ ದ್ವಾರದ ಬಳಿಯಿಂದ  ದಡ್ಡಲಕಾಡು ಶಾಲೆಯವರೆಗೆ  ದೇಶಾಧ್ಯಂತ ಏಕರೂಪಶಿಕ್ಷಣ ಜಾರಿಗೆ ಆಗ್ರಹಿಸಿ  ಒಂದೇ ದೇಶ ಒಂದೇ ಶಿಕ್ಷಣ ಎನ್ನುವ ಘೋಷವಾಕ್ಯದಡಿ ವಿಶೇಷ ಅಭಿಯಾನದ ಅಂಗವಾಗಿ ಬೃಹತ್ ವಾಹನ ಜಾಥ ನಡೆಯಲಿದೆ ಎಂದು ತಿಳಿಸಿದರು.

ಅಂದು ಸಂಜೆ 5 ಗಂಟೆಗೆ ದಡ್ಡಲಕಾಡು ವಿದ್ಯಾದೇಗುಲದ ಲೋಕಾರ್ಪಣೆಯಾಗಲಿದೆ. 5.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಣ್ಯ ಸಚಿವ  ಬಿ.ರಮಾನಾಥ ರೈ ವಹಿಸಲಿದ್ದಾರೆ. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಪಬ್ಲಿಕ್ ಟಿ.ವಿಯ ಮುಖ್ಯಸ್ಥ ಎಚ್.ಆರ್.ರಂಗನಾಥ್ ಪ್ರಧಾನ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ರಾಜೀವ ಪ್ರತಾಪ್ ರೂಢಿ, ಅನಂತಕುಮಾರ್, ರಮೇಶ ಜಿಗಜಿಣಗಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲು, ರಾಜ್ಯ ಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ. ಗಣೇಶ್ ಕಾರ್ಣಿಕ್, ಪ್ರತಾಪ್‌ಚಂದ್ರ ಶೆಟ್ಟಿ, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್ ಮೊದಲಾದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಆ ದಿನ ಸಂಜೆ 4.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಂದ  ವಿವಿಧ ವಿನೋದಾವಳಿಗಳು, ವೀರ ಬಬ್ರುವಾಹನ ಕಿರುನಾಟಕ ನಡೆಯಲಿದೆ. ಪುರಷೋತ್ತಮ ಅಂಚನ್ ರಚನೆ ಮತ್ತು ನಿರ್ದೇಶನದ  ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‌ನ ಸದಸ್ಯರೇ ಅಭಿನಯಿಸುವ ಏರ್‌ದಾದಲ ಪನಡ್  ಉಂದು ಸತ್ಯ ಎನ್ನುವ ನಾಟಕ ನಡೆಯಲಿದೆ ಎಂದರು.

ಏ.23 ರಂದು ಭಾನುವಾರ ಅಲ್‌ಕಾರ್ಗೋ ಲಾಜಿಸ್ಟಿಕ್ ಲಿ.ನ  ಮುಖ್ಯಸ್ಥ ನಕ್ರೆ  ಸುರೇಂದ್ರ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಜಿ.ವಿ. ಸನ್ಸ್‌ನ ಸೀತರಾಂ ಪೂಜಾರಿ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಟಿ.ಶಿವಕುಮಾರ್, ರಾಜ್ಯ ಕಬಡ್ಡಿ ಅಸೋಸಿಯೇಷನ್‌ನ   ಉಪಾಧ್ಯಕ್ಷ ಪುರುಷೋತ್ತಮ ಪೂಜಾರಿ ಬಿ.,  ಉದ್ಯಮಿ ಜಿತೇಂದ್ರ ಕೊಟ್ಟಾರಿ, ಜಿ.ಪಂ.ಮಾಜಿ ಸದಸ್ಯೆ  ಸುಲೋಚನಾ ಭಟ್ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  ಆ ದಿನ ಸಂಜೆ 3 ಗಂಟೆಗೆ ಶಾಲಾ ಮಕ್ಕಳಿಂದ ವಿವಿಧ  ವಿನೋದಾವಳಿಗಳು ನಡೆಯಲಿದೆ. ಸಂಜೆ 7.30 ಕ್ಕೆ  ಮಂಗಳೂರಿನ ಸನಾತನ ನಾಟ್ಯಲಯದವರಿಂದ  ಸನಾತನ ರಾಷ್ಟ್ರಾಂಜಲಿ  ನಡೆಯಲಿದೆ, ರಾತ್ರಿ 9 ಕ್ಕೆ ಬೈಲೂರು ಚೈತನ್ಯ ಕಲಾವಿದರಿಂದ  ಸ್ಟಾರ್ ನಾಟಕ ನಡೆಯಲಿದೆ ಎಂದು ವಿವರಿಸಿದರು.

ಎರಡು ಅಂತಸ್ತಿನ ಸುಸಜ್ಜಿತ ಕಟ್ಟಡ, 14 ವಿಶಾಲ ಕೊಠಡಿಗಳು, ನೆಲಕ್ಕೆ ಗ್ರಾನೈಟ್ ಹಾಸು, ಸ್ಮಾರ್ಟ್ ತರಗತಿ, ಬಾಲಕ ಹಾಗೂ ಬಾಲಕಿಯರಿಗೆ ಆಧುನಿಕ ಮಾದರಿಯ ಸುಸಜ್ಜಿತ ಶೌಚಾಲಯ ಹೊಸ ಕಟ್ಟಡದಲ್ಲಿದೆ.

ಕ್ಲಬ್ ವತಿಯಿಂದ ಪ್ರತೀ ತಿಂಗಳು ತಿಂಗಳ ಇರುಳು ಕಾರ್ಯಕ್ರಮದ ಮೂಲಕ ತಾಲೂಕಿನ ವಿವಿಧ ಸರಕಾರಿ ಶಾಲೆಯಲ್ಲಿ ಉಚಿತ ಶ್ರಮದಾನದ ಕೆಲಸವನ್ನು ನಡೆಸಲಾಗುತ್ತಿತ್ತು. ಕ್ಲಬ್ ಸದಸ್ಯರು ಕಲಿತ  ದಡ್ಡಲಕಾಡು  ಶಾಲೆಯಲ್ಲಿಯೇ ಶ್ರಮದಾನ ಕೈಗೊಂಡಾಗ ಶಾಲೆ ಮಕ್ಕಳ ಕೊರತೆಯಿಂದ ಮುಂದಿನ ಒಂದೆರಡು ವರ್ಷಗಳಲ್ಲಿ ಮುಚ್ಚುವ ಭೀತಿ ಎದುರಿಸುತ್ತಿರುವುದು ಕಂಡು ಬಂತು. ಈ ಶಾಲೆಯನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂಬ ಪಣತೊಟ್ಟು  ತಕ್ಷಣ ದೃಡ ನಿರ್ಧಾರ ಕೈಗೊಂಡು ಸದಸ್ಯರು ಶಾಲೆಗೆ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ತೀರ್ಮಾನಿಸಿದರು.   ಮೊದಲ ಹೆಜ್ಜೆಯಾಗಿ ಸಂಘದ ಸದಸ್ಯರು  ಖಾಸಗಿ ಶಾಲೆಗೆ ಹೋಗುತಿದ್ದ ತಮ್ಮ ಮಕ್ಕಳನ್ನು ದಡ್ಡಲಕಾಡು ಸರಕಾರಿಗೆ ಶಾಲೆಗೆ ಸೇರಿಸಿದರು.  ಕ್ರಮೇಣ 33 ಮಕ್ಕಳಿದ್ದ ಶಾಲೆಯಲ್ಲಿ 230 ಮಕ್ಕಳಾದರು. ಗ್ರಾಮದ ಮನೆಗಳಿಗೆ ಹೋಗಿ ಸರಕಾರಿ ಶಾಲೆ ಉಳಿಯಬೇಕಾದರೆ ಎಲ್ಲರೂ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದರು.  ಪೋಷಕರ ಬೇಡಿಕೆಗೆ ಅನುಗುಣವಾಗಿ  ಸರಕಾರಿ ಶಾಲೆ ಉಳಿಸುವ ಅನಿವಾರ್ಯತೆಯಿಂದ ಎಲ್‌ಕೆಜಿ, ಯುಕೆಜಿ  ಸ್ಥಾಪಿಸಿ ಆಂಗ್ಲಭಾಷ ಶಿಕ್ಷಣ ನೀಡಿದರು.  ಹೆಚ್ಚುವರಿ 9 ಶಿಕ್ಷಕರನ್ನು ನೇಮಿಸಿದರು.  ಕ್ಲಬ್ ಮುಖಾಂತರವೇ ಅವರಿಗೆ ವೇತನ ಪಾವತಿಸಿದರು.  ಮಕ್ಕಳ ಅನುಕೂಲಕ್ಕಾಗಿ ಉಚಿತ ಪುಸ್ತಕ, ಸಮವಸ್ತ್ರ ಸೇರಿದಂತೆ ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಯಿತು.  ಶಾಲೆಗೆ ಮಕ್ಕಳ ದಾಖಲಾತಿ ಏರುಗತಿಯಲ್ಲಿದ್ದು  ಮುಂದಿನ ದಿನಗಳಲ್ಲಿ ಮಕ್ಕಳ ಅನುಕೂಲದ ದೃಷ್ಟಿಯಿಂದ ಹೊಸ ಕಟ್ಟಡದ ಅನಿವಾರ್ಯತೆ ಮನಗಂಡು ಹೊಸ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಈಗಾಗಲೇ ಮುಂದಿನ ಸಾಲಿಗೆ 500 ಸಂಖ್ಯೆಗಿಂತಲೂ ಅಧಿಕ ದಾಖಲಾತಿ ನಡೆದಿದೆ.

ಸುದ್ದಿಗೋಷ್ಟಿಯಲ್ಲಿ ದಡ್ಡಲಕಾಡು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪೂವಪ್ಪ ಮೆಂಡನ್, ದುರ್ಗಾ ಫ್ರೆಂಡ್ಸ್ ಕ್ಲಬ್‌ನ ಸದಸ್ಯರಾದ ಆನಂದ ಕೆ.ರಾಮನಗರ, ಪುರುಷೋತ್ತಮ ಅಂಚನ್, ಬಾಲಕೃಷ್ಣ ಜಿ. ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts