ವಿಕಲಚೇತನ ಮಕ್ಕಳಿಗೆ ಅಂಗವಿಕಲತೆ, ಗ್ರಹಿಕಾ ಶಕ್ತಿಯ ನೂನ್ಯತೆ ಇರಬಹುದು ಆ ಕಾರಣಕ್ಕೆ ಅವರನ್ನು ದೂರತಳ್ಳುವುದು, ಅವರನ್ನು ಅಡಗಿಸಿಡುವುದು ಮದ್ದಲ್ಲ, ಸಮಾಜದ ಮುಖ್ಯ ವಾಹಿನಿಗೆ ಅವರನ್ನು ತರುವ ನಿಟ್ಟಿನಲ್ಲಿ ಸಮಾಜ ಎಚ್ಚೆತ್ತುಕೊಳ್ಳುವ ಮೊದಲು, ಮಕ್ಕಳ ಹೆತ್ತವರು ಹೆಚ್ಚಿನ ಮುತುವರ್ಜಿವಹಿಸಬೇಕು..
ಆ ಮಾಸ್ತರರು ನನ್ನ ಸ್ನೇಹಿತರು, ಅವರೊಬ್ಬ ಒಳ್ಳೆಯ ಕಲಾವಿದರೂ ಕೂಡ ಹೌದು, ಅವರ ಬಗ್ಗೆ ನನಗೆ ಹೆಮ್ಮೆ ಇತ್ತು, ಅವರು ಸಿಕ್ಕಾಗಲೆಲ್ಲಾ ನಾ ಅವರಿಗೆ ನಮಸ್ತೇ ಕೊಡಲು ಮರೆಯುತ್ತಿಲಿಲ್ಲ. ಆದರೆ ಅವರ ಬಗ್ಗೆ ಕೆಲದಿನಗಳ ಹಿಂದೆ ನಾನು ಕೇಳಿದ ಮಾತು ನಿಜಕ್ಕೂ ಅವರ ಬಗ್ಗೆ ಇದ್ದ ಗೌರವವನ್ನು ಕಡಿಮೆ ಮಾಡಿತು. ಇದನ್ನು ನಿಮ್ಮ ಜೊತೆ ಹೇಳಿಕೊಳ್ಳದಿದ್ದರೆ ನನಗೆ ಸಮಾಧಾನವಿಲ್ಲ.
ವಿಕಲಚೇತನ ಮಕ್ಕಳು ಕೂಡ ಶಿಕ್ಷಣದಿಂದ ವಂಚಿತರಾಗಬಾರದು, ಅವರಿಗೂ ಸಮಾಜದಲ್ಲಿ ಬದುಕುವ ಅವಕಾಶವಿದೆ, ಅವರೂ ಎಲ್ಲರಂತಾಗಬೇಕು ಎಂದು ಸರ್ಕಾರ, ಶಿಕ್ಷಣ ಇಲಾಖೆ ದೊಡ್ಡದೊಡ್ಡದಾಗಿ ಭಾಷಣವನ್ನೂ ಬಿಗಿಯುತ್ತಿದೆ.ಆದರೆ ಇನ್ನು ಅದೆಷ್ಟೋ ವಿಕಲಚೇತನ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅವರಿಗಾಗಿ ಸರ್ಕಾರ ವಿಶೇಷ ಶಾಲೆಗಳನ್ನೇನೋ ತೆರೆದಿದೆ, ಆದರೆ ಅಲ್ಲಿ ಸೇರುವ ಮಕ್ಕಳ ಸಂಖ್ಯೆ ಕೂಡ ಹೆಚ್ಚಿಲ್ಲ. ಈ ನಡುವೆ ಶಿಕ್ಷಣ ಇಲಾಖೆ ಸಮನ್ವಯ ಶಿಕ್ಷಣದ ಹೆಸರಿನಲ್ಲಿ ಅನೇಕ ಸವಲತ್ತುಗಳನ್ನೂ ಮಕ್ಕಳಿಗಾಗಿ ನೀಡುತ್ತಾ ಬಂದಿದೆ. ಸಾಕಷ್ಟು ಸಂಖ್ಯೆಯ ವಿಕಲಚೇತನ ಮಕ್ಕಳು ಅದರ ಉಪಯೋಗ ಪಡೆಯುವಂತಾಗಿದೆ.
ಇಷ್ಟು ಪೀಠಿಕೆ ಇಟ್ಟುಕೊಂಡೇ ಮಕ್ಕಳ ಮಾತು ಆರಂಭವಾಗುತ್ತದೆ ಕೇಳಿ. ಮೇಲೆ ಹೇಳಿದ ಮಾಸ್ತರರ ಮಗನ ಹೆಸರು ಅರವಿಂದ(ಹೆಸರು ಬದಲಾಯಿಸಲಾಗಿದೆ), ಅವನಿಗೆ ಬುದ್ದಿಮಾಂದ್ಯತೆಯ ಸಮಸ್ಯೆಯಿತ್ತು. ಈಗ ೧೮ ವರ್ಷ ಪ್ರಾಯ, ಆದರೆ ಅರವಿಂದ ಶಾಲೆಯ ಮೆಟ್ಟಿಲು ಹತ್ತಿದವನೇ ಅಲ್ಲ.
ಒಳ್ಳೆಯ ಕಲಾವಿದರೂ, ಮಾಸ್ತರರು ಆಗಿದ್ದ ಆ ವ್ಯಕ್ತಿಗೆ ತನ್ನ ಮಗ ಬುದ್ದಿಮಾಂದ್ಯತೆಯಿಂದ ಬಳಲುತ್ತಿದ್ದಾನೆ ಎಂಬುದನ್ನು ಬಹಿರಂಗವಾಗಿ ಹೇಳಿಕೊಳ್ಳಲು ನಾಚಿಕೆಯಂತೆ, ಹಾಗಾಗಿ ಅವನನ್ನು ಮನೆಯ ಒಳಗೇ ಅಡಗಿಸಿಟ್ಟಿದ್ದರು. ಹೊರಗಿನ ಪ್ರಪಂಚವನ್ನು ಅವನಿಗೆ, ಅವನನ್ನು ಹೊರಗಿನ ಪ್ರಪಂಚಕ್ಕೆ ಪರಿಚಯಿಸದೇ ತಮಗೊಬ್ಬ ಅರವಿಂದ ಎಂಬ ಮಗನಿದ್ದಾನೆ ಎಂಬುದನ್ನೂ ಆ ಮಾಸ್ತರ ದಂಪತಿ ಯಾರಲ್ಲೂ ಹೇಳಿಕೊಳ್ಳಲಿಲ್ಲ. ತಮ್ಮ ಪ್ರತಿಷ್ಠೆ, ಗೌರವ , ಮಗನ ದಯನೀಯ ಸ್ಥಿತಿ ಅವರ ಅಡಗಿಸುವಿಕೆಗೆ ಕಾರಣಗಳಾಗಿತ್ತು.
ತುಂಬಾ ವರ್ಷದಿಂದ ಆ ಮಾಸ್ತರರನ್ನು ಹತ್ತಿರದಿಂದ ಕಂಡಿದ್ದ ನನಗೆ, ಅವರಿಗೆ ಅರವಿಂದ ಎಂಬ ಮಗನಿದ್ದಾನೆ ಎಂಬುದು ಗೊತ್ತಿರಲೇ ಇಲ್ಲ. ಮಕ್ಕಳು ಬಗೆಹರಿಸಲಾಗದ ಆರೋಗ್ಯ ಸಮಸ್ಯೆಯಿಂದ ಬಳಲುವಾಗ ಅದನ್ನು ಬೇರೆಯವರಲ್ಲಿ ಹೇಳಿಕೊಳ್ಳಲು ಮುಜುಗರವಾಗುವುದು ಸಹಜ, ಅದರೆ ಆ ಕಾರಣಕ್ಕೆ ಮಕ್ಕಳನ್ನು ಬಂಧಿಸಿಡುವುದು ಸರಿಯೇ ಎಂಬುದಷ್ಟೇ ಈ ಮಾತಿನ ಮೂಲಕ ಕೇಳುವ ಪ್ರಶ್ನೆ.
ಓರ್ವ ಮಾಸ್ತರರಾಗಿ ಅವರು ಅವರ ಬದುಕಿನಲ್ಲಿ ನಡೆದುಕೊಂಡ ಬಗೆ, ಮಗನನ್ನು ಆರೈಕೆ ಮಾಡಿದ ರೀತಿ ಎಷ್ಟೊಂದು ಕ್ರೂರ ಎಂದೆನ್ನಿಸುವುದಿಲ್ಲವೇ..? ನನ್ನ ಮಗನಿಂದಾಗಿ ತನ್ನ ಮಾನ ಹೋದೀತು ಎಂಬ ಚಿಂತೆಯಲ್ಲಿ ಮಗನಿಗಿದ್ದ ಅರ್ಧ ಮಾನಸಿಕತೆಯನ್ನು ಸಂಪೂರ್ಣ ನಾಶಮಾಡಿದರೋ ಏನೋ ಎಂದು ನನಗನ್ನಿಸುತ್ತಿದೆ.
ಮೊನ್ನೆ ಒಬ್ಬ ಕೃಷಿಕವ್ಯಕ್ತಿ ದೂರವಾಣಿ ಬಿಲ್ಲು ಕಟ್ಟಲೆಂದು ಬಂದವರು ನನ್ನ ಸ್ನೇಹಿತರಿಗೆ ಸಿಕ್ಕಿದ್ದರು, ಅವರ ಜೊತೆ ಅವರ 16 ವರ್ಷದ ಮಗನೂ ಬಂದಿದ್ದ, ಅವನೂ ಬುದ್ದಿ ಮಾಂದ್ಯತೆಯಿಂದ ಬಳಲುತ್ತಿದ್ದು ತಂದೆಯ ಜೊತೆ ಖುಷಿಯಲ್ಲೇ ಬಂದಿದ್ದ, ಅವನ ಮುಖದ ಚಹರೆ ಮಾತ್ರ ಮಾನಸಿಕ ಸಮಸ್ಯೆ ಇದೆ ಎನ್ನುತ್ತಿತ್ತು. ಅವನ ತಂದೆಯ ಜೊತೆ ಮಾತಿಗಿಳಿದ ನನ್ನ ಸ್ನೇಹಿತರು, ಆರೋಗ್ಯದ ಸಮಸ್ಯೆಗಳನ್ನು ಕೇಳಿ ತಿಳಿದುಕೊಂಡರು. ಅವನನ್ನು 7 ನೇ ತರಗತಿ ವರೆಗೆ ಶಾಲೆಗೆ ಕಳುಹಿಸಿದ್ದೇನೆ, ಶಾಲೆ ಬಿಟ್ಟ 5 ವರ್ಷವಾಯಿತು ಎಂದರು. ವಿಶೇಷ ಶಾಲೆಗಳ ಬಗ್ಗೆ ಅರಿವಿಲ್ಲದ ಅವರು ಮಗನ ವಿಧ್ಯಾಭ್ಯಾಸವನ್ನು ಅಲ್ಲಿಗೇ ನಿಲ್ಲಿಸಿದ್ದರು. ಬೇರೆ ಶಾಲೆ ಇದೆ ಎಂದಾಗ , ವಿಚಾರಿಸುತ್ತೇನೆ, ಸೇರಿಸುತ್ತೇನೆ ಎಂದರು. ಅವರು ಹೊರಡುವ ಹೊತ್ತಿಗೆ ನನ್ನ ಸ್ನೇಹಿತರು, ನಾನು ಕೇಳಿದ್ದಕ್ಕೆ ಬೇಜಾರ್ ಮಾಡಬೇಡಿ ಎಂದಾಗ, ಅವರಂದರು, ಬೇಜಾರು ಯಾಕೆ, ನಾವು ಮಾಡಿದ್ದಾ..? ಅಂದರು ಅಲ್ಲಿಂದ ತೆರಳಿದರು.
ನಿಜಕ್ಕೂ ವಿಕಲಚೇತನ ಮಕ್ಕಳ ಬಗ್ಗೆ ಹೆತ್ತವರಿಗೆ ಇರುವ ಅಸಹನೆ ಇಂತಹಾ ಮಾತುಗಳಿಂದ ಹೊರಬೀಳುತ್ತಲೇ ಇರುತ್ತದೆ. ಅವರದೇ ಪ್ರಪಂಚದಲ್ಲಿ ಮುಳುಗಿರುವ ಅಂತಹಾ ಮಕ್ಕಳಿಗೆ ಇವೆಲ್ಲವು ಅರ್ಥವಾಗುವುದೇ ಇಲ್ಲ. ಇಲ್ಲಿ ನಾವು ಮನಸ್ಸು ಸರಿಯುಳ್ಳವರು ಪ್ರಜ್ಞಾವಂತರಂತೆ ವರ್ತಿಸದಿದ್ದರೆ ನಮ್ಮ ಮಕ್ಕಳು ಬದುಕಿಡೀ ಕತ್ತಲೆಯನ್ನೇ ಕಾಣಬೇಕಾದೀತು. ವಿಕಲಚೇತನ ಮಕ್ಕಳಿಗೆ ಅಂಗವಿಕತೆ, ಗ್ರಹಿಕಾ ಶಕ್ತಿಯ ನೂನ್ಯತೆ ಇರಬಹುದು ಅದಕ್ಕೆ ಅವರನ್ನು ದೂರತಳ್ಳುವುದು, ಅವರನ್ನು ಅಡಗಿಸಿಡುವುದು ಮದ್ದಲ್ಲ, ಸಮಾಜದ ಮುಖ್ಯ ವಾಹಿನಿಗೆ ಅವರನ್ನು ತರುವ ನಿಟ್ಟಿನಲ್ಲಿ ಸಮಾಜ ಎಚ್ಚೆತ್ತುಕೊಳ್ಳುವ ಮೊದಲು, ಮಕ್ಕಳ ಹೆತ್ತವರು ಹೆಚ್ಚಿನ ಮುತುವರ್ಜಿವಹಿಸಬೇಕು..
ಮೇಲೆ ಹೇಳಿದ ಅರವಿಂದನ ಸ್ಥಿತಿ ಯಾವ ಮಕ್ಕಳಿಗೂ ಬರಬಾರದು, ನಮ್ಮ ಸುತ್ತಮುತ್ತಲೂ ಅದೆಷ್ಟೋ ಹೆತ್ತವರು ತಮ್ಮ ಮಕ್ಕಳನ್ನು ಅಂಗವಿಕಲತೆ, ಬುದ್ದಿಮಾಂದ್ಯತೆಯ ಕಾರಣಕ್ಕೆ ಮನೆಯೊಳಗೇ ಅಡಗಿಸಿಟ್ಟಿರಬಹುದು, ಇಂತಹ ಮನಸ್ಥಿತಿಯುಳ್ಳ ಹೆತ್ತವರಿಗೆ ತಿಳುವಳಿಕೆ ಮೂಡಿಸುವ ಕೆಲಸ ನಾವು-ನೀವು ಮಾಡೋಣ…