ಬಂಟ್ವಾಳ

ಬೋರ್ ವೆಲ್ ಬದಲು ನೈಸರ್ಗಿಕ ಮೂಲಗಳಿಗೆ ನೀಡಿ ಆದ್ಯತೆ

 

ನೀರು ಮಿತವ್ಯಯ ಬಳಕೆಗೆ ಆದ್ಯತೆ ನೀಡಬೇಕು. ಬೋರ್ ವೆಲ್ ತೋಡುವುದನ್ನು ಕಡಿಮೆ ಮಾಡಬೇಕು, ಅನಿವಾರ್ಯವಾದರೆ ಮಾತ್ರ ಬೋರ್ ವೆಲ್ ಕೊರೆಯಿರಿ ಎಂದು ತಾಪಂ ಇಒ ಸಿಪ್ರಿಯನ್ ಮಿರಾಂದ ಸಲಹೆ ನೀಡಿದರು.

ಬಂಟ್ವಾಳ ತಾಪಂ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ಶಾಸಕರ ಟಾಸ್ಕ್ ಫೋಸ್ ನಿಂದ ಈಗಾಗಲೇ ಹಣ ಬಿಡುಗಡೆ ಆಗಿದೆ. ಕೊಳವೆಬಾವಿ ತೋಡುವುದನ್ನು ಕಡಿಮೆ ಮಾಡಿ, ನೈಸರ್ಗಿಕ ಮೂಲಗಳಿಗೆ ಹೆಚ್ಚು ಆದ್ಯತೆ ನೀಡಿ, ಕಿಂಡಿ ಅಣೆಕಟ್ಟು ರಚನೆ ಕುರಿತು ಗಮನ ಕೊಡಿ ಎಂದು ಹೇಳಿದ ಇಒ, ತುರ್ತು ಸಂದರ್ಭ ಬೇಕಾದರೆ ಗ್ರಾಪಂಗಳು ತಾಪಂ ಸಂಪರ್ಕಿಸಲು ಕೋರಿದರು.

ತುರ್ತು ಸಂದರ್ಭ ಬಂದರೆ ಖಾಸಗಿ ಕೊಳವೆ ಬಾವಿಗಳನ್ನು ಗ್ರಾಮ ಪಂಚಾಯತ್ ಗಳು ಉಪಯೋಗಿಸಬಹುದು ಎಂದು ಸಿಪ್ರಿಯನ್ ಮಿರಾಂದ ಹೇಳಿದರು. ಗ್ರಾಪಂಗಳಲ್ಲಿ ಇರುವ ಬೋರ್ ವೆಲ್ ಬತ್ತಿ ಹೋಗಿದೆ, ತುರ್ತು ಅವಶ್ಯಕತೆ ಇರುವ ಕಾರಣ ಹೊಸದಾಗಿ ಬೋರ್ ವೆಲ್ ತೋಡಲು ಅನುಮತಿ ನೀಡಬೇಕು ಎಂದು ಪಿಲಾತಬೆಟ್ಟು ಗ್ರಾಪಂ ಅಧ್ಯಕ್ಷ ಕೋರಿದ ಮನವಿಗೆ ಉತ್ತರಿಸಿದರು.

ಏಕಾಏಕಿ ಗ್ರಾಪಂನ ಭೂಭಾಗವನ್ನು ಪಟ್ಟಣಕ್ಕೆ ಸೇರಿಸಬೇಡಿ

ಬಂಟ್ವಾಳ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೆ ಏರುವ ಸಂದರ್ಭ, ಹತ್ತಿರದ ಗ್ರಾಮ ಪಂಚಾಯತ್ ಗಳ ಕೆಲ ಭಾಗಗಳನ್ನು ಸೇರ್ಪಡೆಗೊಳಿಸುವುದಕ್ಕೆ ಗ್ರಾಪಂಗಳು ಹಾಗೂ ಆ ಭಾಗಗಳಿಗೆ ಸೇರಿದ ತಾಲೂಕು ಪಂಚಾಯತ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ವಿಷಯ ಪ್ರಸ್ತಾಪಿಸಿದ ತಾಪಂ ಮುಖ್ಯ ಕಾರ್ಯನಿರ್ವಹಣಾಕಾರಿ ಸಿಪ್ರಿಯಾನ್ ಮಿರಾಂಡ, ಬಂಟ್ವಾಳ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರುವ ಸಂದರ್ಭ ಗ್ರಾಮಗಳ ಭೂಭಾಗ ಸೇರ್ಪಡೆ ಕುರಿತು ತಮ್ಮ ಅಭಿಪ್ರಾಯವನ್ನು ತಿಳಿಸಬೇಕು ಎಂದು ತಾಪಂ ಸದಸ್ಯರಲ್ಲಿ ಕೋರಿದರು. ಅಮ್ಟಾಡಿ, ನರಿಕೊಂಬು, ಪಂಜಿಕಲ್ಲು, ಮೂಡುನಡುಗೋಡು, ಗೋಳ್ತಮಜಲು ಹಾಗೂ ನಾವೂರು ಗ್ರಾಮಗಳ ಕೆಲ ಭಾಗಗಳು ಸೇರ್ಪಡೆಯಾಗುತ್ತಿವೆ ಎಂಬ ಮಾಹಿತಿಯನ್ನು ಇಒ ನೀಡಿದರು.

ಈ ಸಂದರ್ಭ ಮಾತನಾಡಿದ ಅಮ್ಟಾಡಿ ತಾಪಂ ಸದಸ್ಯೆ ಮಲ್ಲಿಕಾ ವಿ. ಶೆಟ್ಟಿ ಪುರಸಭೆ ಈ ಕುರಿತು ಗ್ರಾಮದ ಜನರ ವಿಶ್ವಾಸವನ್ನು ತೆಗೆದುಕೊಳ್ಳದೆ ಏಕಾಏಕಿ ಸೇರ್ಪಡೆ ನಡೆಸುವುದು ಸರಿಯಲ್ಲ. ಎರಡು ದಿನಗಳ ಮೊದಲು ನೋಟಿಸ್ ನೀಡಿ, ಗ್ರಾಪಂನಲ್ಲಿ ವಿಶೇಷ ಸಭೆ ಕರೆದರೆ ಅಲ್ಲಿಗೆ ಗ್ರಾಮಸ್ಥರು ಬರುವುದಾದರೂ ಹೇಗೆ ಎಂದರು. ಇದಕ್ಕೆ ದನಿಗೂಡಿಸಿದ ಪಂಜಿಕಲ್ಲು ತಾಪಂ ಸದಸ್ಯೆ ಪದ್ಮಾವತಿ ಬಿ.ಪೂಜಾರಿ ಹಾಗೂ ನರಿಕೊಂಬು ತಾಪಂ ಸದಸ್ಯೆ ಗಾಯತ್ರಿ ರವೀಂದ್ರ ಸಫಲ್ಯ, ತಮ್ಮ ವಿರೋಧವಿರುವುದಾಗಿ ಸ್ಪಷ್ಟಪಡಿಸಿದರು. ದನಿಗೂಡಿಸಿದ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಬಂಟ್ವಾಳದ ಪ್ರಸ್ತಾವಿತ ನಗರಸಭೆಗೆ ನರಿಕೊಂಬು ಗ್ರಾಮಕ್ಕೆ ಆದಾಯ ಬರುವ ಭಾಗಗಳೇ ಸೇರ್ಪಡೆಯಾಗುತ್ತದೆ. ಹೀಗಾದರೆ ಬಳಿಕ ನರಿಕೊಂಬು ಕುಗ್ರಾಮವಾಗಿ ಮಾರ್ಪಾಡಾಗುವ ಸಂಭವ ಇದೆ. ಈ ರೀತಿಯ ಧೋರಣೆ ಸರಿಯಲ್ಲ, ಪುರಸಭೆ ಸೇರ್ಪಡೆ ವಿಚಾರದಲ್ಲಿ ಸರಿಯಾದ ಕ್ರಮವನ್ನು ಅನುಸರಿಸಬೇಕು ಎಂದು ಒತ್ತಾಯಿಸಿದರು.

ಸದಸ್ಯ ಉಸ್ಮಾನ್ ಕರೋಪಾಡಿ ಮತ್ತು ರಮೇಶ್ ಕುಡುಮೇರು ಈ ಕುರಿತು ಪುರಸಭೆ ಸದಸ್ಯರಿಗೆ ಸ್ಪಷ್ಟ ಚಿತ್ರಣವನ್ನು ನೀಡಬೇಕು ಎಂದು ಒತ್ತಾಯಿಸಿದರೆ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿ, ವಿರೋಧ ವ್ಯಕ್ತಪಡಿಸುವ ಬದಲು ನಗರಸಭೆ ಆಗುವುದರಿಂದ ಆಗುವ ಲಾಭ ನಷ್ಟಗಳನ್ನು ಸದಸ್ಯರು ಮನವರಿಕೆ ಮಾಡಿ ಚರ್ಚಿಸುವುದೊಳಿತು ಎಂದು ಸಲಹೆ ನೀಡಿದರು.

ಬರಪೀಡಿತ ತಾಲೂಕು ಎಂದು ಈಗಾಗಲೇ ಸರಕಾರ ಬಂಟ್ವಾಳವನ್ನು ಘೋಷಿಸಿದೆ. ಆದರೆ ಬ್ಯಾಂಕುಗಳು ಸಾಲ ವಸೂಲಾತಿಗೆ ನೋಟಿಸ್ ನೀಡುತ್ತಿದ್ದಾರೆ. ಬರ ಎನ್ನುವುದು ಕೇವಲ ಮಾಧ್ಯಮಗಳಲ್ಲಿ ಬರುವುದೇ ಎಂದು ಪ್ರಶ್ನಿಸಿದ ಉಸ್ಮಾನ್ ಕರೋಪಾಡಿ, ರೈತರಿಗೆ ಬರ ಹಿನ್ನೆಲೆಯಲ್ಲಿ ಪರಿಹಾರ ಇದೆಯೇ ಎಂದು ಪ್ರಶ್ನಿಸಿದರು.

ಈ ಸಂದರ್ಭ ಮಾತನಾಡಿದ ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಬ್ಯಾಂಕುಗಳು ಸಾಲ ವಸೂಲಾತಿಗೆ ನೋಟಿಸ್ ನೀಡುವುದನ್ನು ಆಕ್ಷೇಪಿಸಿದರು.

ಪುಣಚ ಪರಿಸರದದಲ್ಲಿ ಡೆಂಘೆ, ಮಲೇರಿಯಾ, ಇಲಿಜ್ವರದ ಕಾಟ ಇದೆ ಎಂದು ಗ್ರಾಪಂ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ ಹೇಳಿದರು. ಈ ಸಂದರ್ಭ ಉತ್ತರಿಸಿದ ಆರೋಗ್ಯಾಕಾರಿ ದೀಪಾ ಪ್ರಭು, ಐವರಿಗೆ ಡೆಂಘೆ ಪಾಸಿಟಿವ್ ಬಂದಿದ್ದು, ಅವರು ಗುಣಮುಖರಾಗುತ್ತಿದ್ದಾರೆ. ಫಾಗಿಂಗ್ ಕಾರ್ಯಾಚರಣೆ ನಡೆಸಲಾಗಿದೆ. ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ರೋಗ ಹರಡದಂತೆ ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳಿದರು. ಸಾಂಕ್ರಾಮಿಕ ರೋಗ ತಡೆಗಟ್ಟಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದು ದೀಪಾ ಪ್ರಭು ಮನವಿ ಮಾಡಿದರು.

ಬಂಟ್ವಾಳ ತಾಲೂಕಿನ ಹೃದಯಭಾಗ ಬಿ.ಸಿ.ರೋಡ್ ನಲ್ಲಿರುವ ತಾಪಂನ ಹಳೇ ಕಟ್ಟಡವನ್ನು ಕೆಡಹಿ, ಅಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಮಾಡುವ ಪ್ರಸ್ತಾಪವಿದೆ ಎಂದು ಇಒ ಸಿಪ್ರಿಯನ್ ಮಿರಾಂದಾ ಹೇಳಿದರು.

ಸಾರ್ವಜನಿಕರ ಅನುಕೂಲಕ್ಕಾಗಿ ಹಳ್ಳಿಗೊಬ್ಬ ಪೊಲೀಸ್ ಯೋಜನೆಯನ್ನು ಬಂಟ್ವಾಳ ನಗರ ಠಾಣಾಕಾರಿ ರಕ್ಷಿತ್ ನೀಡಿದರು. ಈ ಸಂದರ್ಭ ಮಾತನಾಡಿದ ಪ್ರತಿಭಾ ಶ್ರೀಧರ ಶೆಟ್ಟಿ, ವಿಟ್ಲ ಪೊಲೀಸರು ದೂರು ನೀಡಿದರೂ ಸರಿಯಾದ ಸ್ಪಂದನೆ ನೀಡುತ್ತಿಲ್ಲ ಎಂದು ದೂರಿದರು. ಪೈಪ್ ಕಳವಾಗಿ ದಿನಗಳಾದರೂ ಎಫ್ ಐ ಆರ್ ಮಾಡಲು ವಿಳಂಬಿಸುವ ಕುರಿತು ಅವರು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಎನ್.ಒ.ಸಿ. ಕೊಡದೆ ಕೊಳವೆ ಬಾವಿಗೆ ವಿದ್ಯುತ್ ಕನೆಕ್ಷನ್ ಮಂಜೂರು ಮಾಡುವುದು ಸರಿಯಲ್ಲ ಎಂದು ಇಒ ಸಿಪ್ರಿಯಾನ್ ಮಿರಾಂದ ಮತ್ತು ತಹಶೀಲ್ದಾರ್ ಪುರಂದರ ಹೆಗ್ಡೆ ಮೆಸ್ಕಾಂ ಅಕಾರಿಗಳಿಗೆ ಸೂಚಿಸಿದರು.

ವಿಷಯ ಪ್ರಸ್ತಾಪಿಸಿದ ಕೆದಿಲ ತಾಪಂ ಸದಸ್ಯ ಆದಂ ಕುಂಞ, ಮೆಸ್ಕಾಂ ವಿದ್ಯುತ್ ಸಂಪರ್ಕ ನೀಡುವ ಕುರಿತು ಮಾಹಿತಿ ಬಯಸಿದಾಗ, ನೀರಿನ ಸಮಸ್ಯೆ ಇರುವ ಸಂದರ್ಭ ಕೊಳವೆ ಬಾವಿ ಕೊರೆಯಲಾಗುತ್ತದೆ. ಆದರೆ ಅದಕ್ಕೆ ಗ್ರಾಪಂ ಎನ್.ಒ.ಸಿ. ಅಗತ್ಯ. ಆದರೆ ನಿರಾಕ್ಷೇಪಣಾ ಪತ್ರ ಇಲ್ಲದಾಗ ಮೆಸ್ಕಾಂ ವಿದ್ಯುತ್ ಸಂಪರ್ಕ ನೀಡುವುದು ಸರಿಯಲ್ಲ ಎಂದು ಅಕಾರಿಗೆ ಸೂಚನೆ ನೀಡಿದರು.

ಮೆಸ್ಕಾಂ ಲೈನ್ ಮ್ಯಾನ್‌ಗಳು ಕೆಲಸ ಮಾಡಲು ಹಣ ಕೇಳುತ್ತಾರೆ ಎಂದು ತಾಪಂ ಸದಸ್ಯ ಶಿವಪ್ರಸಾದ ಕನಪ್ಪಾಡಿ ಹೇಳಿದರು. ಈ ಸಂದರ್ಭ ನಿರ್ದಿಷ್ಟ ಹೆಸರು ಹೇಳಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿ ತಿಳಿಸಿದರು.

ಪ್ರತಿಯೊಂದು ಇಲಾಖೆಯ ಚಟುವಟಿಕೆಗಳು ಸಾರ್ವಜನಿಕರಿಗೆ ದೊರಕುವಂತೆ ಮಾಡುವುದು ಅಗತ್ಯವಿದೆ. ಇಲಾಖೆಗಳ ಪ್ರತಿಯೊಂದು ಕಾರ್ಯಕ್ರಮಗಳು ಮಾಧ್ಯಮಗಳ ಮೂಲಕ ಜನರಿಗೆ ದೊರಕಬೇಕು ಎಂಬ ಅಮ್ಮುಂಜೆ ಸದಸ್ಯ ಶಿವಪ್ರಸಾದ್ ಕನಪಾಡಿ ಮನವಿಗೆ ಸ್ಪಂದಿಸಿದ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮತ್ತು ಉಪಾಧ್ಯಕ್ಷ ಅಬ್ಬಾಸ್ ಆಲಿ, ಪ್ರತಿಯೊಂದು ಇಲಾಖೆಗಳ ಮಾಹಿತಿಯೂ ಮಾಧ್ಯಮಗಳ ಮೂಲಕ ಜನರಿಗೆ ತಲುಪಬೇಕು ಎಂದು ಹೇಳಿದರು.

ಅಂಗನವಾಡಿ ಅನುದಾನ ಬಳಕೆ ಕುರಿತು ಸಿಡಿಪಿಒ ಆಡಿದ ಮಾತು ತನಗೆ ನೋವು ತಂದಿದೆ ಎಂದು ಪಿಲಾತಬೆಟ್ಟು ಸದಸ್ಯ ರಮೇಶ ಕುಡ್ಮೇರು ಹೇಳಿದರು. ವಿವಿಧ ವಿಷಯಗಳ ಕುರಿತು ಸದಸ್ಯರಾದ ಸಂಜೀವ ಪೂಜಾರಿ, ಯಶವಂತ ಪೂಜಾರಿ ಮಾತನಾಡಿದರು.

ಗ್ರಾಮಸಭೆಗಳಿಗೆ ಬರುವ ನೋಡಲ್ ಅಧಿಕಾರಿಗಳು ಸರಿಯಾದ ಮಾಹಿತಿಯೊಂದಿಗೆ ಬರಬೇಕು ಹಾಗೂ ಪ್ರತಿ ಗ್ರಾಮಸಭೆಯಲ್ಲೂ ಅಕಾರಿಗಳ ಹಾಜರಾತಿ ಕಡ್ಡಾಯ ಇರಬೇಕು ಎಂದು ಬಾಳೆಪುಣಿ ಸದಸ್ಯ ಹೈದರ್ ಕೈರಂಗಳ ಒತ್ತಾಯಸಿದರು.

ಪೋಡಿಮುಕ್ತ ಗ್ರಾಮ ಘೋಷಣೆ ಏನಾಗಿದೆ, ಈಗ ಅದು ಅರ್ಧ ಬೆಂದ ಪೋಡಿಯಂತಾಗಿದೆ ಎಂದು ಕರೋಪಾಡಿ ಸದಸ್ಯ ಉಸ್ಮಾನ್ ಕರೋಪಾಡಿ ಲೇವಡಿ ಮಾಡಿದರು. ಸರಿಯಾದ ಭೂಮಿಯ ವಿಲೇವಾರಿ ಇದರಡಿ ನಡೆಯುತ್ತಿದೆಯೇ ಎಂದು ಉಸ್ಮಾನ್ ಪ್ರಶ್ನಿಸಿದರು.

ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಇಒ ಸಿಪ್ರಿಯಾನ್ ಮಿರಾಂದ, ತಹಸೀಲ್ದಾರ್ ಪುರಂದರ ಹೆಗ್ಡೆ ಉಪಸ್ಥಿತರಿದ್ದರು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ