ಅನಿಕತೆ

ನೀರಿಟ್ಟರೆ ಸಾಕು, ದೂರದ ಪುಟ್ಟ ಅತಿಥಿಗಳು ಮನೆಬಾಗಿಲಿಗೆ

  • ಅನಿತಾ ನರೇಶ್ ಮಂಚಿ
  • www.bantwalnews.com
  • ಅನಿಕತೆ

‘ಅದೇನು ಸರೋಜಮ್ಮಾ ಸಂಜೆಯಾಗ್ತಾ ಇದ್ದ ಹಾಗೆ ನೀವು ದಿನಾ ನಿಮ್ಮನೆ ಹಿತ್ತಲಲ್ಲಿ ಏನೋ ಹುಡುಕಾಟ ನಡೆಸಿರೋ ತರ ಕಾಣಿಸ್ತಾ ಇದೆಯಲ್ಲ.. ನಿನ್ನೆಯೂ ನಿಮ್ಮನ್ನು ಗಮನಿಸಿದೆ. ’

Pic: Ram Naresh Manchi

‘ಅರ್ರೇ.. ನೀವೂ ನೋಡ್ಬಿಟ್ರಾ.. ನಮ್ಮನೆಗೆ ಒಬ್ಬ ವಿಶೇಷ ಅತಿಥಿ ಬಂದಿದ್ದಾರೆ. ಅವರ ಉಪಚಾರ ಮಾಡ್ತಾ ಇದ್ದೆ ಅಷ್ಟೇ..’

‘ಹೌದಾ.. ಯಾರದು? ಎಲ್ಲಿಂದ ಬಂದಿದ್ದಾರೆ?’

‘ಅವ್ರು ದೂರದ ಹಿಮಾಲಯದಿಂದ ಬಂದಿದ್ದಾರೆ.. ಕಳೆದ ವರ್ಷವೂ ಬಂದಿದ್ರು.. ಒಂದ್ನಾಲಕ್ಕು ತಿಂಗಳು ಇಲ್ಲೇ ಇದ್ದು ಹೋಗಿದ್ರು. ಈ ವರ್ಷ ಮತ್ತೆ ಬಂದಿದ್ದಾರೆ. ’

‘ಹೌದಾ.. ಅದ್ಯಾರು ನಾಲ್ಕು ತಿಂಗಳು ನಿಮ್ಮನೆಯಲ್ಲಿದ್ರೂ ನನ್ನ ಕಣ್ಣಿಗೆ ಬೀಳದವರು. ನಾನು ನೋಡಿದಂತೆ ನಿಮ್ಮನೆಲಿ ಯಾರೂ ಇರ್ಲಿಲ್ಲ..  ಯಾರಾದ್ರೂ ಸಿದ್ದಿ ಮಾಡಿದ ಸಾಧು ಸಂತರಾ? ಕಣ್ಣಿಗೆ ಕಾಣದಂತೆ ಇರ್ತಾರಾ ಹೇಗೆ ? ಏನು ನೀವು ಒಗಟಿನಂತೆ ಮಾತಾಡ್ತೀರಾ.. ಸ್ವಲ್ಪ ಬಿಡಿಸಿ ಹೇಳ್ಬಿಡಿ’

‘ಸರಿ ಬಿಡಿ ನಿಮ್ಮಿಂದೇನು ಮುಚ್ಚುಮರೆ.. ಹೇಳಿಯೇ ಬಿಡ್ತೀನಿ.. ನಮ್ಮನೆ ಹಿತ್ತಲಲ್ಲೆಲ್ಲಾ ಹಕ್ಕಿಗಳಿಗೆ ಅಂತ ನೀರಿಟ್ಟಿರ್ತೀನಲ್ಲ. ಅದನ್ನು ಕುಡಿಯಲು ಎಲ್ಲೆಲ್ಲಿಂದ ಹಕ್ಕಿಗಳು ಬರ್ತವೆ ತಾನೇ..’

‘ಹುಂ.. ನಾನೂ ಇಟ್ಟಿದ್ದೇನಲ್ಲ.. ಅಲ್ಲೂ ಬರ್ತವೆ. ಅದ್ರಲ್ಲೇನಿದೆ ವಿಶೇಷ..?’

Pic: Ram Naresh Manchi

‘ವಿಶೇಷ ಇಲ್ಲ ಅಂದ್ರೆ ಏನೂ ಇಲ್ಲ. ಇದೆ ಅಂದ್ರೆ ಇದೆ.. ’

‘ಅಯ್ಯೋ ನಿಮ್ಮಾತು ನಂಗೆ ಅರ್ಥಾನೇ ಆಗ್ತಿಲ್ಲ.. ಮತ್ತೆ ಒಗಟಾಗಿಯೇ ಮಾತಾಡ್ತೀರಿ.’

‘ಇಲ್ಲಾರೀ ಹಾಗೇನಿಲ್ಲ.. ನಿಮ್ಗೆ ಗೊತ್ತು ತಾನೇ ಹಕ್ಕಿಗಳು ತುಂಬಾ ಬಿಸಿಲಿರುವಾಗ ತಣ್ಣನೆ ನೀರಲ್ಲಿ ಸ್ನಾನ ಮಾಡೋದಕ್ಕೆ ಅಂತ  ಮನೆ ಹಿಂದೆ ಅಲೀತಾ ಇರ್ತವೆ. ನಾನೀಗ ಅವುಗಳಲ್ಲಿ ಸುಮಾರು ಹಕ್ಕಿಗಳನ್ನು ಗುರುತಿಸಿ ಹೆಸರು ಹೇಳಬಲ್ಲೆ. ಕೆಲವು ಹಕ್ಕಿಗಳ ಸ್ವರದಿಂದಲೇ ಅದು ಇಂತ ಹಕ್ಕಿ ಅಂತ ಗುರುತು ಹಿಡಿಯಬಲ್ಲೆ..’

‘ಹೌದಾ.. ನಂಗು ಕೆಲವು ಮಾಮೂಲಿ ಹಕ್ಕಿಗಳ ಹೆಸರು ಗೊತ್ತಿದೆ. ಆದ್ರೆ ಅದಕ್ಕು ನಿಮ್ಮ ಅತಿಥಿಗೂ ಏನು ಸಂಬಂಧ?’

‘ಈ ಅತಿಥಿಯೂ ಹಕ್ಕಿಯೇ ಕಣ್ರೀ.. ಅಷ್ಟು ದೂರದಿಂದ ನಮ್ಮೂರಿಗೆ ಬಂದಿದೆ. ’

‘ಓಹ್.. ಹೌದಾ.. ಯಾವ ಹಕ್ಕಿಯದು..ನಂಗೂ ನೋಡ್ಬೇಕು.. ಎಲ್ಲಿದೆ? ’

‘ಅದು ಇಂಡಿಯನ್ ಪಿಟ್ಟ ಅನ್ನೋ ಹಕ್ಕಿ.. ನವರಂಗದ ಹಕ್ಕಿ ಅಂತಾನೂ ಕರೀತಾರೆ.. ನಿಜಕ್ಕೂ ಅದರ ಮೈಯಲ್ಲಿ ನವ ರಂಗುಗಳು ಇದೆ ಕಣ್ರ್ರೀ.. ತುಂಬಾ ಸುಂದರವಾದ ಹಕ್ಕಿ. ಅಲ್ಲಿ ಚಳಿ ಪ್ರಾರಂಭ ಆಗೋ ಹೊತ್ತಿಗೆ ಆಹಾರಕ್ಕಾಗಿ ಈ ಕಡೆ ವಲಸೆ ಬರುತ್ತೆ.. ಹೆಚ್ಚಾಗಿ ಒಂಟಿ ಒಂಟಿಯಾಗೇ ಇರೋ ಈ ಹಕ್ಕಿಗಳು ಇಡೀ ದಿನ ಆಹಾರ ಹುಡುಕುತ್ತಾ ಇರುತ್ತವೆ. ಅದರಲ್ಲೂ ಹೆಚ್ಚಾಗಿ ಬೆಳಗಿನ ಮತ್ತು ಸಂಜೆಯ ಹೊತ್ತಿಗೆ ಇಲ್ಲಿ ಕಾಣಿಸಿಕೊಳ್ಳುತ್ತದೆ. ಪುಟ್ಟ ಹಕ್ಕಿಯಾದ ಕಾರಣ ಶತ್ರುಗಳಿಂದ ರಕ್ಷಿಸಿಕೊಳ್ಳಲು ಈ ಸಮಯವನ್ನು ಆಯ್ಕೆ ಮಾಡುತ್ತೋ ಏನೋ.. ಎರೆಹುಳ, ಬಸವನ ಹುಳ, ಪುಟ್ಟ ಕೀಟಗಳು ಎಲ್ಲವನ್ನೂ ಸ್ವಾಹಾ ಮಾಡುತ್ತವೆ..ಅದರ ಅಂದ ಚೆಂದವನ್ನು ನಾವಾಗಿ ನೋಡದೇ ವರ್ಣನೆಯಿಂದ ತಿಳಿದುಕೊಳ್ಳೋದು ಕಷ್ಟ ಕಣ್ರೀ..’

‘ಓಹ್.. ಇದಂತೂ ನನಗೆ ಹೊಸ ವಿಷಯವೇ.. ನಾನು ಇಷ್ಟರವರೆಗೆ ನೋಡಿಲ್ಲ. ನಮ್ಮೂರಲ್ಲೇ ಇರುವ  ಹಕ್ಕಿಗಳು ಬರುತ್ತವೆ, ನೀರು ಕುಡಿಯುತ್ತವೆ ಹಾರಿ ಹೋಗುತ್ತವೆ ಅಂತ ಅವುಗಳನ್ನು ಸೂಕ್ಷ್ಮವಾಗಿ ನೋಡುವ, ಗುರುತಿಸುವ ಆನಂದವನ್ನು ಪಡೆದೇ ಇಲ್ಲ ಅನ್ಸುತ್ತೆ.. ’

‘ಹುಂ.. ನಾವುಗಳು ಕಣ್ಣು ಬಿಟ್ಟು ನೋಡಿದಷ್ಟೂ ಪ್ರಕೃತಿಯಲ್ಲಿನ ವಿವಿಧ ಜೀವ ಜಂತುಗಳನ್ನು ನೋಡುವ ಭಾಗ್ಯ ನಮ್ಮದಾಗುವುದಂತೂ ಸತ್ಯ.. ಅದೂ ವಲಸೆ ಹಕ್ಕಿಗಳು ತಾವು ಒಮ್ಮೆ ಹೋದ ಜಾಗವನ್ನು ಗುರುತಿಟ್ಟುಕೊಂಡು ಮರಳಿ ಅದೇ ಜಾಗಕ್ಕೆ ಹೋಗುತ್ತವಲ್ಲಾ.. ಅದಂತೂ ಅದ್ಭುತವೇ.. ನನಗೀಗ ಈ ಹಕ್ಕಿ ಬರುವುದು ಎಂದರೆ ತವರಿಗೆ ಮರಳಿದ ಮಗಳಂತೆ ಭಾಸವಾಗುತ್ತದೆ. ಇದ್ದಷ್ಟು ದಿನ ಅದನ್ನು ನೋಡುವುದೇ ಸಂತಸ. ಅದು ಮರಳಿ ಹೋದ ಮೆಲೆ ಮತ್ಯಾವಾಗ ಭೇಟಿ ಎಂದು ಕಾಯುವುದೂ ಕೂಡಾ ಉಲ್ಲಾಸ ತರುವ ವಿಷಯವೇ.. ಮಾತು ಮಾತಿನಲ್ಲಿ ಹಕ್ಕಿ ಮರೆತವಲ್ಲಾ.. ನೋಡಿ ಅಲ್ಲಿ.. ಎಷ್ಟು ಚೆನ್ನಾಗಿ ಕುಳಿತಿದೆ ಎಂದು..’

‘ನಿಜಕ್ಕೂ ಇದು ತುಂಬಾ ಸುಂದರ ಹಕ್ಕಿ.. ನಾನು ಈ ಮನೆ ಮಗಳನ್ನು ಗುರುತಿಟ್ಟುಕೊಳ್ತೀನಿ .. ಇನ್ನೊಮ್ಮೆ ಇದರ ಹಾದಿ ಕಾಯುವ ನಿಮ್ಮೊಂದಿಗೆ ನಾನೂ ಇದ್ದೀನಿ ಸರೋಜಮ್ಮಾ..’

 

Anitha Naresh Manchi

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಂಚಿಯ ರಾಮ ನರೇಶ್ ಮಂಚಿ ಅವರ ಪತ್ನಿ ಅನಿತಾ ನರೇಶ್ ಮಂಚಿ, ಕನ್ನಡದ ಪ್ರಸಿದ್ಧ ಲೇಖಕಿ. ಕೊಡೆ ಕೊಡೆ ನನ್ನಕೊಡೆ ಕಾಲೇಜು ಪಠ್ಯವಾಗಿದೆ. ಎರಡು ಲಘು ಬರಹ ಸಂಕಲನ, ಮೂರು ಕಥಾಸಂಕಲನ ಬಿಡುಗಡೆಗೊಂಡಿವೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಕಥೆ, ಲೇಖನಗಳು ಪ್ರಕಟಗೊಂಡಿವೆ. ಅವರ ಕಥೆಗಳು ಬೇರೆ ಭಾಷೆಗೂ ಅನುವಾದಗೊಂಡಿವೆ. ವಿಜಯವಾಣಿ ದಿನಪತ್ರಿಕೆಯಲ್ಲಿ ಅಂಕಣ ಬರೆಯುವ ಅನಿತಾ ಅವರಿಗೆ ಮಂಗಳೂರಿನ ಕನ್ನಡ ರತ್ನ ಪ್ರಶಸ್ತಿ. ಕೊಡಗಿನ ಗೌರಮ್ಮ ಪ್ರಶಸ್ತಿ, ಅಕ್ಷರ ಶ್ರೀ ಪ್ರಶಸ್ತಿ ದೊರಕಿವೆ.

Share
Published by
Anitha Naresh Manchi