ವಾಹನ ಓಡಿಸುವವರು ಇದನ್ನು ಓದಬೇಡಿ ಎಂಬ ಎಚ್ಚರಿಕೆ ಮೊದಲೇ ಕೊಡುತ್ತೇನೆ.

  • ಡಾ.ಅಜಕ್ಕಳ ಗಿರೀಶ ಭಟ್ಟ
  • ಅಂಕಣ: ಗಿರಿಲಹರಿ

ಜಗತ್ತಿನಲ್ಲಿ ಇಲ್ಲದವುಗಳನ್ನು ಮಾನವನ ಮನಸ್ಸು ಸೃಷ್ಟಿ ಮಾಡುತ್ತದೆ ಅಥವಾ ಪರಿಕಲ್ಪಿಸುತ್ತದೆ. ಉದಾಹರಣೆಗೆ ಕಾಲ ಎಂಬುದು. ಕಾಲ ಅಂತನ್ನುವುದು ಇಲ್ಲ ಅನ್ನುತ್ತಾರೆ. ಘಟನೆಗಳೋ ಬದಲಾವಣೆಗಳೋ ಅನುಭವಕ್ಕೆ ಬರುವುದನ್ನೇ ಕಾಲ ಎಂಬುದರ ಮೂಲಕ ನಾವು ಸೂಚಿಸುತ್ತೇವಂತೆ. ಹಾಗೆಯೇ ಇಲ್ಲದಿದ್ದರೂ ಇರುವಂಥದ್ದು ಇನ್ನೊಂದೆಂದರೆ ಮನಸ್ಸು. ನಮ್ಮ ಮನಸ್ಸೇ ಅದು ಇಲ್ಲದಿದ್ದರೂ ಅದನ್ನು ಸೃಷ್ಟಿ ಮಾಡಿಟ್ಟಿದೆ ಅನಿಸುತ್ತದೆ. ಆ ಮನಸ್ಸನ್ನು ಬಲ್ಲವರು ಮರ್ಕಟ ಅಂದಿದ್ದಾರೆ. ನಾವು ಸರಳವಾಗಿ ಮಂಗ ಅನ್ನಬಹುದು. ನನ್ನ ಮನಸ್ಸು ಮಂಗನಾಗುವ ಹಲವು ಸನ್ನಿವೇಶಗಳು ಈಗ ನನ್ನ ಮನಸ್ಸಿಗೆ ಬರುತ್ತಿವೆ. ಅಂಥ ಒಂದು ಸಂದರ್ಭ ನನ್ನ ಸ್ಕೂಟರು ಸವಾರಿಗೆ ಸಂಬಂಧಿಸಿದ್ದು. ನೀವು ವಾಹನ ಓಡಿಸುವವರಾದರೆ ಆ ಮಂಗಬುದ್ಧಿ ನಿಮಗೂ ಬರುವುದು ಬೇಡ ಅನ್ನುವ ಕಾರಣಕ್ಕೆ ಓದಬೇಡಿ ಅಂತ ಎಚ್ಚರಿಸಿದ್ದು!

ನಾನು ಸ್ಕೂಟರು ಕೊಂಡದ್ದು 1998ರಲ್ಲಿ. ಆನಂತರದ ಐದಾರು ವರ್ಷಗಳಲ್ಲಿ ಬಂಟ್ವಾಳ- ಮೂಡುಬಿದಿರೆ ರಸ್ತೆಯಲ್ಲಿ ನಾನು ಆಗೀಗ ಸ್ಕೂಟರಿನಲ್ಲಿ ಸಂಚಾರ ಮಾಡುವುದಿತ್ತು. ಮೂಡುಬಿದಿರೆಗೆ ಹೋಗುವ ರಸ್ತೆ ಬದಿಯಲ್ಲಿ, ಅದರಲ್ಲೂ ತಾಕೊಡೆ ಮೊದಲಾದ ಕೆಲವು ಜಾಗಗಳಲ್ಲಿ ಕಾಟು ಮಾವಿನಮರಗಳಿದ್ದವು. ಈಗಲೂ ಕೆಲವಿರಬಹುದೇನೋ. ಮಾವಿನ ಹಣ್ಣಿನ ಸಮಯದಲ್ಲಿ ಈ ಮರಗಳ ಅಡಿಯಲ್ಲಿ ರಸ್ತೆಯಲ್ಲಿ ಹಣ್ಣುಗಳು ಬಿದ್ದಿರುವುದು ಸಾಮಾನ್ಯವಾಗಿತ್ತು. ಆ ರಸ್ತೆ ಸ್ವಲ್ಪ ಅಂಕುಡೊಂಕಾದರೂ ಸಾಮಾನ್ಯವಾಗಿ ಕೆಟ್ಟ ರಸ್ತೆಯಾಗಿರುತ್ತಿದ್ದುದು ಕಡಿಮೆ. ಸ್ಕೂಟರಿನಲ್ಲಿ ಹೋಗುವಾಗ ರಸ್ತೆಯಲ್ಲಿ ಮಾವಿನ ಹಣ್ಣು ಕಂಡರೆ, ಅದೇನೋ ನನ್ನ ಮನವೆಂಬ ಮಂಗ ಜಾಗೃತವಾಗುತ್ತಿತ್ತು. ಸ್ಕೂಟರಿನ ಎದುರಿನ ಚಕ್ರ ಆ ಮಾವಿನಹಣ್ಣಿನ ಮೇಲೆಯೇ ಹೋಗಬೇಕು ನನಗೆ. ಹಾಗೆ ಚಕ್ರ ಹೋದಾಗ ಮಾವಿನ ಗೊರಟು ರಸ್ತೆಯಿಂದಾಚೆಗೆ ರಟ್ಟುವುದನ್ನು ನಾನು ತಿರುಗಿ ನೋಡುತ್ತಿರಲಿಲ್ಲ. ಆದರೂ ಅದು ಹೇಗೆ ರಟ್ಟಿರಬಹುದೆಂಬ ಕಲ್ಪನೆಯನ್ನು ಮಾಡಿಕೊಳ್ಳುತ್ತಲೇ ಮುದಗೊಳ್ಳುತ್ತಲೇ ಮುಂದೆ ಹೋಗುತ್ತಿದ್ದೆ. ಹಾಗೆ ಮುಂದೆ ಹೋಗುವಾಗ ಮುಂದಿನ ಹಣ್ಣು ಕಾಣುತ್ತಿತ್ತು. ಮತ್ತೆ ಯಥಾ ಪ್ರಕಾರ ನನಗರಿವಿಲ್ಲದೇ ಚಕ್ರ ಅದರ ಮೇಲೆ ಹೋಗುತ್ತಿತ್ತು. ಈ ಮಂಗಬುದ್ಧಿ ಎಷ್ಟರಮಟ್ಟಿಗೆ ಅಂದರೆ ಮಾವಿನ ಹಣ್ಣು ರಸ್ತೆಯಲ್ಲಿ ಸಿಗದಿದ್ದರೆ ಗೇರು ಹಣ್ಣು ಕೂಡ ಆಗುತ್ತದೆ. ಅದಕ್ಕೆ ಗೊರಟು ಇಲ್ಲದಿದ್ದರೂ ಬೀಜವಾದರೂ ಇದೆಯಲ್ಲ. ಅದು ಗೊರಟಿನಷ್ಟು ಸುಂದರ ದೃಶ್ಯವಾಗಲಾರದು ಅಂತ ಗೊತ್ತಿದೆ. ಆದರೂ ನಡೆಯುತ್ತದೆ. ಅದೂ ಇಲ್ಲದಿದ್ದರೆ ಮತ್ತೆ ಸೆಗಣಿಯೂ ಆಗುತ್ತದೆ. ಅದು ಮಡ್ ಗಾರ್ಡಿಗೆ ರಟ್ಟಿದರೂ ತೊಂದರೆಯಿಲ್ಲ; ಹೇಗೂ ನಾನು ಸ್ಕೂಟರನ್ನು ತೊಳೆಯತ್ತಿದ್ದುದು ವರ್ಷಕ್ಕೊಮ್ಮೆ , ಆಯುಧಪೂಜೆಗೆ ಮಾತ್ರ.

ಹೀಗೆ ಮಾವಿನ ಗೊರಟು ನನ್ನ ಸ್ಕೂಟರಿನ ಚಕ್ರವನ್ನು ಸೆಳೆಯುವುದೇನೋ ಸರಿ. ಆದರೆ ಅಷ್ಟಕ್ಕೇ ನನ್ನ ಮನಸ್ಸು ಸುಮ್ಮನಾಗಿತ್ತಿರಲಿಲ್ಲ. ಈಗ ನಿಮ್ಮ ಮನಸ್ಸಿಗೆ ಬಂದಿರಬಹುದಾದ ಅಪಾಯದ ಸೂಚನೆ ನನ್ನ ಮನಸ್ಸಿಗೂ ಬರುತ್ತಿತ್ತು. ಹೌದು, ನಾನು ಈ ಗೊರಟು ರಟ್ಟಿಸಲು ರಸ್ತೆಯಲ್ಲಿ ಎಲ್ಲೆಲ್ಲೋ ಬಿದ್ದಿರಬಹುದಾದ ಮಾವಿನಹಣ್ಣಿನತ್ತ ಹೋದರೆ ಎದುರಿಂದಲೋ ಹಿಂದಿನಿಂದಲೋ ಬರುವ ಯಾವುದಾದರೂ ವಾಹನಕ್ಕೆ ಡಿಕ್ಕಿಯಾದರೆ? ಈ ಯೋಚನೆ ಅದೇ ಹೊತ್ತಿಗೆ ನನಗೂ ಬರುತ್ತಿತ್ತು. ಏನೇ ಆದರೂ, ಎಡಬದಿಯಲ್ಲಿ ಹೋಗಬೇಕಾದ ಸ್ಕೂಟರು ಮಾವಿನ ಗೊರಟಿಗಾಗಿ ಬಲಬದಿಗೆ ಹೋದದ್ದರಿಂದ ಅಪಘಾತವಾಯಿತು ಅಂತ ನಾಳೆ ಯಾವ ಪೇಪರಿನಲ್ಲೂ ಬರಲಾರದು ಎಂಬುದು ಮಾತ್ರ ನನ್ನ ಮನಸ್ಸಿನಲ್ಲಿ ಖಾತ್ರಿಯಿತ್ತು. ಮತ್ತೆ ಹೇಳಲಿಕ್ಕಾಗುವುದಿಲ್ಲ; ನನ್ನಂಥದೇ ಮಂಗಮನಸ್ಸಿನ ಪತ್ರಕರ್ತನ್ಯಾರಾದರೂ ಇದ್ದರೆ ಈ ಸಂಭಾವ್ಯತೆಯನ್ನೂ ಊಹಿಸಿ ಅಪಘಾತದ ನಿರ್ದಿಷ್ಟ ಕಾರಣವನ್ನು ಬರೆದರೂ ಬರೆದಾನು ಎನ್ನುವ ಯೋಚನೆ ನನ್ನ ತಲೆಗೆ ಬರುತ್ತಿತ್ತು. ಮುಂದೆ ನಾನು ಕಾರು ಕೊಂಡರೆ ಈ ಗೊರಟು ಹೀಗೆ ಸುಂದರವಾಗಿ ಮಿಥಿಲಾಪಟ್ಟಣದ ಮಂಗಗಳಂತೆ(ಎತ್ತರಕ್ಕಲ್ಲ, ದೂರಕ್ಕೆ) ಹಾರಬಹುದೇ ಎನ್ನುವ ಯೋಚನೆಯೂ ನನಗೆ ಬರುತ್ತಿತ್ತು.(ಮಿಥಿಲಾಪಟ್ಟಣದ ಮಂಗಗಳ ಕಥೆ ಗೊತ್ತಿಲ್ಲದವರು ಯಾರಾದರೂ ಇದ್ದರೆ ಹಿರಿಯರಲ್ಲಿ ಕೇಳಿ. ಕಥೆ ಸ್ವಾರಸ್ಯವಾಗಿದೆ.) ಯಾಕೆಂದರೆ ಕಾರಿನ ಚಕ್ರ ಅಗಲ ನೋಡಿ. ಅದರಡಿಗೆ ಸಿಕ್ಕಿದರೆ, ಅದರಲ್ಲೂ ಚಪ್ಪಟೆಯಾದ ರೇಡಿಯಲ್ ಟಯರಿನ ಅಡಿಗೆ ಸಿಕ್ಕಿದರೆ ಗೊರಟು ತಪ್ಪಿಸಿಕೊಳ್ಳುವುದು ಹೇಗೆ? ಅದಲ್ಲೇ ಬಾಕಿಯಾದೀತು. ಇನ್ನು ಇದರಿಂದಾಗಿ ಇನ್ನೊಂದು ಯೋಚನೆಯೂ ನನ್ನನ್ನು ಕಾಡುತ್ತಿತ್ತು. ನನ್ನ ಈ ಅಭ್ಯಾಸದಿಂದಾಗಿ ಎಲ್ಲಾದರೂ ಸಣ್ಣ ಪುಟ್ಟ ಕಲ್ಲು ರಸ್ತೆ ಮಧ್ಯೆ ಕಂಡಾಗ ಅದರ ಮೇಲೆ ಚಕ್ರ ಹಾಯಿಸಲು ಹೋಗಿ ಪಲ್ಟಿ ಹೊಡೆದರೆ? ಇಂಥ ಆಲೋಚನೆ ಬರುತ್ತಿತ್ತಾದರೂ, ಹಾಗೆ ಮಾತ್ರ ನನ್ನ ಮನವೆಂಬ ಮಂಗ ಇಲ್ಲಿ ತನಕ ನನ್ನನ್ನು ಸೆಳೆದಿಲ್ಲವಾದ್ದರಿಂದ ಈವರೆಗೆ ಬದುಕಿದ್ದೇನೆ.

ಇಂಥ ಹೆದರಿಕೆಯನ್ನು ಹೇಳುವಾಗ ನನ್ನ ಗೆಳೆಯನೊಬ್ಬನ ನೆನಪಾಗುತ್ತದೆ. ಅವನ ಮನವೂ ಒಂಥರಾ ಮಂಗನೇ. ಅವನ ಭೀತಿಯನ್ನು ನನ್ನೊಡನೆ ಅವನು ಚರ್ಚೆ ಮಾಡಿದ್ದುಂಟು. ಅವನ ಹೆದರಿಕೆ ಈ ಮುಂದಿನ ರೀತಿಯದ್ದು. ಎಲ್ಲಾದರೂ ಬಾವಿ ಅಥವಾ ದೊಡ್ಡ ಗುಂಡಿಯ ಬಳಿ ನಿಂತಾಗ, ಅವನಿಗೆ ಅನ್ನಿಸುವುದು ತನ್ನ ಮನಸ್ಸು ಏನೋ ತಿರುಗಿ ತಾನೀಗ ಸಡನ್ನಾಗಿ ಈ ಗುಂಡಿಗೆ ಹಾರಿಬಿಟ್ಟರೆ? ಇನ್ನು ಕೆಲವೊಮ್ಮೆ ಬಸ್ಸಲ್ಲಿ ಹುಡುಗಿಯರೋ ಹೆಂಗಸರೋ ಪಕ್ಕದಲ್ಲಿ ಇದ್ದರೆ, ತನ್ನ ಮನಸ್ಸು ಎಲ್ಲಾದರೂ ಹಠಾತ್ತಾಗಿ ಚಂಚಲವಾಗಿ ಇವಳ ಕೈಹಿಡಿದೆಳೆದರೆ? ಪಾಪ ಅವನು ತುಂಬ ಒಳ್ಳೆಯವನು. ಹಾಗೆಲ್ಲ ಮಾಡುವವನು ಅಲ್ಲವೇ ಅಲ್ಲ. ಬಹುಶಃ ಹಾಗೆ ಮಾಡುವವನು ಅಲ್ಲವಾದ್ದರಿಂದಲೇ ತಾನೆಲ್ಲಾದರೂ ಮಾಡಿಬಿಟ್ಟೇನೇನೋ ಅಂತ ಅವನ ಮನಸ್ಸು ಹೆದರುವುದಿರಲೂಬಹುದು. ಅವನು ಕಾರು ಓಡಿಸುತ್ತಾನೆ. ಆಗ ಅವನ ಮನಸ್ಸಿನ ಭೀತಿಯೇ ಬೇರೆ. ತಾನೆಲ್ಲಾದರೂ ಹಠಾತ್ತಾಗಿ ವಿಚಲಿತನಾಗಿ ಬೇಕೆಂದೇ ಜನಜಂಗುಳಿ ಮೇಲೆ ಕಾರು ಹಾಯಿಸಿದರೆ? ಅಂತ. ಅಯ್ಯೋ ಇಂಥದ್ದೆಲ್ಲ ಆಲೋಚನೆ ಜಾಸ್ತಿಯಾದ್ದರಿಂದ ಆಗುವುದು; ಆಲೋಚನೆ ಮಾಡಿದ್ದು ಹೆಚ್ಚಾದರೆ ಎಲ್ಲರಿಗೂ ಹೀಗಾಗುತ್ತದೆಯಂತೆ ಅಂತ ನಾನು ಸಮಾಧಾನ ಮಾಡಿದ ಮೇಲೆ ಈಗ ನಿರಾಳವಾಗಿದ್ದಾನೆ ಅಂದುಕೊಂಡಿದ್ದೇನೆ. ಇಂಥ ಆಲೋಚನೆ ಮಾಡುವುದನ್ನು ಬಿಟ್ಟಿದ್ದೀಯಾ ಎಂದು ಕೇಳಿದರೆ, ಅವನು ಬಿಟ್ಟದ್ದನ್ನು ಖಾತ್ರಿ ಮಾಡಿಕೊಳ್ಳಲಿಕ್ಕಾಗಿಯೇ ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲು ಆರಂಭಿಸಿದರೆ ಅದೂ ತಾಪತ್ರಯವೇ ಅಂದುಕೊಂಡು ಇತ್ತೀಚೆಗೆ ಕೇಳಲು ಹೋಗಿಲ್ಲ. ಈಚೆಗೆ ಅವನಾಗಿ ಹೇಳಿಕೊಂಡಿಲ್ಲವಾದ್ದರಿಂದ ಬಹುಶಃ ಅಂಥ ಆಲೋಚನೆಗಳು ಅವನಿಗೆ ಬರುತ್ತಿಲ್ಲ ಎಂಬ ನಂಬಿಕೆ ನನ್ನದು.

ಇನ್ನು ನನ್ನ ಮಾವಿನ ಗೊರಟಿನ ಅಥವಾ ಗೇರುಹಣ್ಣಿನ ಮಂಗಬುದ್ಧಿಯನ್ನು ಬಿಡಿಸಲು, ಈಗ ದ್ವಿಪಥ, ಚತುಷ್ಪಥ, ಷಟ್ಪಥ, ಅಷ್ಟಪಥ ರಸ್ತೆಗಳಾಗುತ್ತಿರುವಾಗ, ರಸ್ತೆಬದಿಯ ಮರಗಳೆಲ್ಲ ಉರುಳುತ್ತಿರುವಾಗ, ಯಾವ ಕೌನ್ಸೆಲಿಂಗೂ ಬೇಡವೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕೆಂದಿಲ್ಲ. ಈಗ ರಸ್ತೆಯಲ್ಲಿ ಸೆಗಣಿ ಹಾಕುವಷ್ಟು ದನಕರುಗಳೂ ಇಲ್ಲದೇ ಇರುವುದರಿಂದ ನನ್ನ ಚಕ್ರಕ್ಕೆ ಸೆಗಣಿಗೂ ಗತಿಯಿಲ್ಲದಂತಾಗಿದೆ ಬಿಡಿ.

Dr. Ajakkala Girish Bhat

ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Share
Published by
Dr. Ajakkala Girish Bhat

Recent Posts