ಕಲ್ಲಡ್ಕ

ಬಂಟ್ವಾಳ ತಾಲೂಕಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ

  • ಮಾಣಿಯಲ್ಲಿ  ಬಹುಗ್ರಾಮ ನೀರು ಸರಬರಾಜು ಯೋಜನೆಗೆ ಶಿಲಾನ್ಯಾಸ
  • ಬಹುವರ್ಷಗಳ ಕನಸು ಸಾಕಾರ ಎಂದು ಹೇಳಿದ ಸಚಿವ ಬಿ.ರಮಾನಾಥ ರೈ
  • 16.46 ಕೋಟಿ ರೂ. ಯೋಜನೆ
  • 25215 ಜನರ ನೀರಿನ ಸಮಸ್ಯೆ ಅನುಲಕ್ಷಿಸಿ ಈ ಕ್ರಮ
  • ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮುಡ್ನೂರು, ಕಡೇಶ್ವಾಲ್ಯ, ಬರಿಮಾರುಗಳಿಗೆ ಲಾಭ
  • ನೇತ್ರಾವತಿಯಿಂದ ನೀರು ಲಿಫ್ಟ್, ಕಡೇಶ್ವಾಲ್ಯದಿಂದ ನೀರು

ಭಾರೀ ನಿರೀಕ್ಷೆಯ 16.46 ಕೋಟಿ ರೂ. ವೆಚ್ಚದ ಮಾಣಿ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಅರಣ್ಯ ಸಚಿವ ಬಿ.ರಮಾನಾಥ ರೈ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು.

www.bantwalnews.com report

ಜಾಹೀರಾತು

ಕ್ಷೇತ್ರದ ಎಲ್ಲರ ಮನೆಬಾಗಿಲಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕೆಂಬುದು ನನ್ನ ಬಹುವರ್ಷದ ಕನಸು, ಇದಕ್ಕಾಗಿ  ಕರೋಪಾಡಿ, ಸರಪಾಡಿ, ಸಂಗಬೆಟ್ಟು , ನರಿಕೊಂಬು , ಮಾಣಿ ಹಾಗೂ ಸಜಿಪಮುನ್ನೂರು ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಯೋಜನೆ ಕುರಿತು ಗಮನ ಹರಿಸಲಾಗಿತ್ತು. ಇದೀಗ ಎರಡು ಯೋಜನೆಗಳು ಕಾರ್ಯಾರಂಭಕ್ಕೆ ಸಿದ್ದವಾಗಿದ್ದು, ಮಾಣಿ ಯೋಜನೆಗೆ ಚಾಲನೆ ದೊರೆತಿದೆ, ಸರಪಾಡಿ ಹಾಗೂ ನರಿಕೊಂಬು ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ದೊರೆತಿದೆ ಎಂದು ಸಚಿವ ಬಿ.ರಮಾನಾಥ ರೈ ಹೇಳಿದರು.

ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮುಡ್ನೂರು, ಕಡೇಶ್ವಾಲ್ಯ ಮತ್ತು ಬರಿಮಾರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಇದು ಶುದ್ದ ನೀರು, ನೀರನ್ನು ಪೋಲು ಮಾಡಬೇಡಿ, ನಿಮಗೆಲ್ಲರಿಗೂ ಜವಾಬ್ದಾರಿಯಿದೆ, ನದಿಯಿಂದ ಶುದ್ಧೀಕರಿಸಿದ ನೀರು, ಇದನ್ನು ಸಮರ್ಪಕವಾಗಿ ಬಳಸಿ ಎಂದು  ಕಿವಿ ಮಾತು ಹೇಳಿದ ರೈ, ಕುಡಿಯುವ ನೀರಿಗಾಗಿ ಯುದ್ಧ ನಡೆಯುವ ದಿನಗಳು ಬಂದರೂ ಕುಡಿಯುವ ನೀರಿನ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿರುವ ಬಂಟ್ವಾಳದಲ್ಲಿ ಕುಡಿಯುವ ನೀರಿಗೆ ಎಂದೂ ಸಹ ಬರ ಬರುವುದಿಲ್ಲ ಮತ್ತು ನೀರಿಗಾಗಿ ಯುದ್ದ ನಡೆಯುವುದಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ  ಮೀನಾಕ್ಷಿ ಶಾಂತಿಗೋಡು, ಬಂಟ್ವಾಳ ತಾ.ಪಂ.ಅಧ್ಯಕ್ಷ  ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ ಶೆಟ್ಟಿ, ಮಮತಾ ಗಟ್ಟಿ, ಪದ್ಮಶೇಖರ್ ಜೈನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಕಾರಿ ಡಾ.ಎಂ.ಆರ್.ರವಿ, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ,  ಕೆಡಿಪಿ ಸದಸ್ಯೆ ಜಯಂತಿ ಪೂಜಾರಿ, ಕೆದಿಲ ತಾ.ಪಂ. ಸದಸ್ಯ ಆದಂ ಕುಂಞ, ಮಾಣಿ ತಾ.ಪಂ.ಸದಸ್ಯೆ ಮಂಜುಳಾ ಕುಶಲ ಎಂ, ವೀರಕಂಭ ತಾ.ಪಂ ಸದಸ್ಯೆ ಗೀತಾ ಚಂದ್ರಶೇಖರ್, ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಮಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ಎಸ್. ಶೆಟ್ಟಿ, ಬರಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ, ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ, ಕಡೇಶ್ವಾಲ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಶೆಟ್ಟಿ, ಅನಂತಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸನತ್ ಕುಮಾರ್ ರೈ, ಗ್ರಾಮೀಣಾಭಿವೃದ್ದಿ ಮತ್ತು ನೈರ್ಮಲ್ಯ ಇಲಾಖೆಯ ಅಧೀಕ್ಷಕ ಅಭಿಯಂತರರಾದ ರಂಗನಾಥ್ ನಾಯಕ್, ಅಧಿಕಾರಿ ಡಿ.ಆರ್ ನಾಯಕ್, ಗುತ್ತಿಗೆದಾರ ಅನಿಲ್ ಕುಮಾರ್ ಶೆಟ್ಟಿ, ತಾ.ಪಂ.ಕಾರ್ಯನಿರ್ವಹಣಾಕಾರಿ ಸಿಪ್ರಿಯನ್ ಮಿರಾಂದ ಉಪಸ್ಥಿತರಿದ್ದರು.

ಜಿಲ್ಲಾಪಂಚಾಯಿತಿ ಸದಸ್ಯೆ ಮಂಜುಳಾ ಮಾಧವ ಮಾವೆ ಸ್ವಾಗತಿಸಿ, ಪ್ರಸಾವನೆಗೈದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಿರೀಶ್ ಕೆ.ಪಿ ಯೋಜನಾ ವರದಿ ಮಂಡಿಸಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬಂಟ್ವಾಳದ ಸಹಾಯಕ ಇಂಜಿನಿಯರ್ ಪದ್ಮರಾಜ್ ಎನ್.ಗೌಡ ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ  ನಿರೂಪಿಸಿದರು.

ನೇತ್ರಾವತಿ ನದಿ ನೀರೇ ಮೂಲ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಆಯೋಜಿಸಲಾದ ಯೋಜನೆ ಮಾಣಿ ಸುತ್ತಮುತ್ತಲಿನ 50 ಜನವಸತಿ ಪ್ರದೇಶಗಳಿಗೆ ತಲುಪಲಿದೆ.

ಈ ಯೋಜನೆಯ ಒಟ್ಟು ಅಂದಾಜು ಮೊತ್ತ 16.46 ಕೋಟಿ ರೂಗಳಾಗಿದ್ದು, ಮಂಗಳೂರು ಕಾವೂರಿನ ಅಮರ್ ಇನ್ರಾ ಪ್ರಾಜೆಕ್ಟ್ಸ್ ಗುತ್ತಿಗೆ ಕೆಲಸ ನಿರ್ವಹಿಸುವರು. ಪ್ರಯೋಜನ ಪಡೆಯುವ ಒಟ್ಟು ಆರು ಗ್ರಾಮ ಪಂಚಾಯಿತಿ ಹಾಗೂ ಗ್ರಾಮಗಳಾದ(ಮಾಣಿ,  ಪೆರಾಜೆ, ಅನಂತಾಡಿ, ನೆಟ್ಲಮುಡ್ನೂರು, ಕಡೇಶ್ವಾಲ್ಯ, ಬರಿಮಾರುಗಳಲ್ಲಿ 25,215 ಜನಸಂಖ್ಯೆ ಇದೆ.

ಎಲ್ಲ ಜಲಯೋಜನೆಗಳಿಗೆ ಮೂಲ ನೇತ್ರಾವತಿ ನದಿ. ಈ ಯೋಜನೆಯಲ್ಲೂ ನೇತ್ರಾವತಿಯ ನೀರನ್ನೇ ಲಿಫ್ಟ್ ಮಾಡಬೇಕು. ಯೋಜನೆ ಪ್ರಕಾರ ಕಡೇಶ್ವಾಲ್ಯದಿಂದ ನೇತ್ರಾವತಿ ನೀರನ್ನು ಲಿಫ್ಟ್ ಮಾಡಲಾಗುತ್ತದೆ. ಪೆರಾಜೆ ಗ್ರಾಮದ ಗಡಿಯಾರದಲ್ಲಿ ನೀರು ಶುದ್ಧೀಕರಣ ಘಟಕವಿದೆ. 600 ಮೀ. ವ್ಯಾಸದ ಬಾವಿ ಜ್ಯಾಕ್ ವೆಲ್ ನಿರ್ಮಿಸಲಾಗುವುದು.

270 ಎಂಎಲ್ ಡಿ ನೀರು ಶುದ್ಧೀಕರಣ ಘಟಕದ ಸಾಮರ್ಥ್ಯವಿದೆ. ಅಂದರೆ 27,೦೦,೦೦೦ ಲೀಟರ್ ನೀರನ್ನು ಪ್ರತಿದಿನ ಶುದ್ಧಗೊಳಿಸಬಹುದು. 1.5 ಲಕ್ಷ ಲೀಟರ್ ನೀರು ಸಂಗ್ರಹಿಸುವ ನೆಲ ಮಟ್ಟದ ಜಲಸಂಗ್ರಹಾಗಾರ (ಸಂಪ್) ಸೂರಿಕುಮೇರಿನಲ್ಲಿ ನಿರ್ಮಿಸಲಾಗುವುದು. ಪೆರಾಜೆ ಜೋಗಿಬೆಟ್ಟುವಿನಲ್ಲಿ 3.25 ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಣ ಟ್ಯಾಂಕ್ ನಿರ್ಮಿಸಲಾಗುವುದು. ನೆಟ್ಲಮುಡ್ನೂರು ಸಬ್ ಸ್ಟೇಶನ್ ನಿಂದ ದಿನದ ಇಪ್ಪತ್ತನಾಲ್ಕು ತಾಸು ವಿದ್ಯುತ್ ಪೂರೈಕೆ ವ್ಯವಸ್ಥೆ ಯೋಜನೆಗಿದ್ದು, ನೀರು ಪೂರೈಕೆಯಲ್ಲಿ ಯಾವುದೇ ರೀತಿಯ ಅಡಚಣೆ ಉಂಟಾಗದು.

ಹೇಗೆ ನಿರ್ವಹಣೆ

ಈ ಯೋಜನೆ ಕಾಮಗಾರಿ ನಡೆಸಿದ ಗುತ್ತಿಗೆದಾರ ಐದು ವರ್ಷಗಳ ಕಾಲ ನಿರ್ವಹಣೆ ಮಾಡಬೇಕಾಗುತ್ತದೆ. ಅದಲ್ಲದೆ, ಸರಿಯಾಗಿ ನೀರು ವಿತರಣೆಯಾಗುತ್ತದೆಯೋ ಎಂಬುದನ್ನು ನೋಡಿಕೊಳ್ಳಲು ಸರಕಾರದ ನಿರ್ದೇಶನದ ಪ್ರಕಾರ ಕರ್ನಾಟಕ ಪಂಚಾಯತ್ ರಾಜ್ ಅನಿಯಮದ ಪ್ರಕಾರ ಗ್ರಾಮಮಟ್ಟದಲ್ಲಿ ಸಮಿತಿ ರಚಿಸಲಾಗುತ್ತದೆ.  ಇದರಲ್ಲಿ ಗ್ರಾಪಂಗಳ ಅಧ್ಯಕ್ಷರು, ಜಿಲ್ಲೆಯ ಪಂಚಾಯತ್ ಕುಡಿಯುವ ನೀರು ಮತ್ತು ನೈರ್ಮಲ್ಯ ಲಾಖೆಯ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಕಾರಿ, ಪಿಆರ್.ಇ.ಡಿ. ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಂಬಂತ ವಿದ್ಯುತ್ ಸರಬರಾಜು ಕಂಪನಿಯ ಸಹಾಯಕ ಕಾರ್ಯಪಾಲಕ ಅಭಿಯಂತರ, ಎಂ.ವಿ.ಎಸ್. ವ್ಯಾಪ್ತಿಯಲ್ಲಿ ಆರೋಗ್ಯ, ನೈರ್ಮಲ್ಯ, ಶಿಕ್ಷಣ ಹಾಗೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಸರಕಾರೇತರ ಸಂಸ್ಥೆಗಳ ಗರಿಷ್ಠ ಮೂವರು ತಜ್ಞರು, ಟ್ರೀಟ್ ಮೆಂಟ್ ಘಟಕ ಇರುವ ಗ್ರಾಮೀಣ ನೀರು ಸರಬರಾಜು ಉಪವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್,ಪಿಡಿಒ ಹೀಗೆ ಪಾರದರ್ಶಕವಾಗಿ ಸಮಿತಿ ನೀರು ಪೂರೈಕೆಯ ಲೋಪದೋಷಗಳ ನಿವಾರಣೆಗೆ ಕೆಲಸ ಮಾಡಬೇಕು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.