ಕನಸಿನ ಯೋಜನೆಯಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಈಗಾಗಲೇ ಕರೋಪಾಡಿ, ಸಂಗಬೆಟ್ಟುಗಳಲ್ಲಿ ಪೂರ್ಣಗೊಂಡರೆ, ಮಾಣಿ ಗ್ರಾಮ ಪಂಚಾಯಿತಿ ವಠಾರದಲ್ಲಿ 14.46 ಕೋಟಿ ರೂ ವೆಚ್ಚದ ಯೋಜನೆ ಶಿಲಾನ್ಯಾಸ ಶನಿವಾರ ನೆರವೇರಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮುಡ್ನೂರು, ಕಡೇಶ್ವಾಲ್ಯ ಮತ್ತು ಬರಿಮಾರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಇದಾಗಿದೆ ಎಂದರು. ನರಿಕೊಂಬು ಮತ್ತು ಸರಪಾಡಿಯ ಬಹುಗ್ರಾಮ ಯೋಜನೆಗೆ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು ಎಂದು ಮಾಹಿತಿ ನೀಡಿದರು.
ಆರ್.ಟಿ.ಓ ಕಚೇರಿ ಶೀಘ್ರದಲ್ಲಿ ಆರಂಭಿಸಲಾಗುವುದು. ಸ್ವಂತ ನಿವೇಶನದಲ್ಲಿ ಕಟ್ಟಡ ನಿರ್ಮಾಣಗೊಳ್ಳುವ ಮುನ್ನ ತಾತ್ಕಾಲಿಕವಾಗಿ ಬೇರೊಂದು ಕಟ್ಟಡದಲ್ಲಿ ಆರ್.ಟಿ.ಒ. ಕಚೇರಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ರೈ ಮಾಹಿತಿ ನೀಡಿದರು. ೬೦ ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಒಳಚರಂಡಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದ ಅವರು, ಬಾಳ್ತಿಲದಲ್ಲಿ ಮೊರಾರ್ಜಿ ವಸತಿ ಶಾಲೆಯನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ಸೂಕ್ತ ಕಟ್ಟಡದ ಹುಡುಕಾಟ ಸುತ್ತಮುತ್ತಲಿನ ಜಾಗದಲ್ಲಿ ನಡೆಯುತ್ತಿದೆ. ಅಲ್ಪಸಂಖ್ಯಾತ ಹೆಣ್ಣುಮಕ್ಕಳಿಗೆ ಬೆಂಜನಪದವಿನಲ್ಲಿ ಹಾಸ್ಟೆಲ್ ನಿರ್ಮಿಸಲಾಗುವುದು ಎಂದರು.
70 ಕೋಟಿ ವೆಚ್ಚದ ಕಾಂಕ್ರೀಟ್
ತನ್ನ ಪ್ರಯತ್ನದ ಫಲವಾಗಿ ಬಿ.ಸಿ.ರೋಡ್ ಸರ್ಕಲ್ ನಿಂದ ರಾ.ಹೆ.೭೩ ಜಕ್ರಿಬೆಟ್ಟಿನವರೆಗೆ ೭೦ ಕೋ.ರೂ. ವೆಚ್ಚದಲ್ಲಿ ಹೆದ್ದಾರಿ ಅಗಲಗೊಳಿಸಿ ಚತುಷ್ಪಥ ರಸ್ತೆಯನ್ನಾಗಿಸುವ ಕಾರ್ಯ ಆರಂಭಿಸಲಾಗುವುದು. ಇದಕ್ಕೆ ಈಗಾಗಲೇ ಹಣ ಮಂಜೂರಾಗಿದೆ ಎಂದು ರೈ ಹೇಳಿದರು. ಚಾರ್ಮಾಡಿ ರಸ್ತೆಯಲ್ಲಿ ಮೂರು ಸೇತುವೆ ಒಟ್ಟು ೧೯ ಕೋಟಿ ರೂ ವೆಚ್ಚದಲ್ಲಿ ಮಂಜೂರುಗೊಂಡಿದದು, ಅದರಲ್ಲಿ ಮಣಿಹಳ್ಳವೂ ಸೇರಿದೆ ಎಂದರು.
ಬಸ್ ನಿಲ್ದಾಣ
ಖಾಸಗಿ ಬಸ್ ನಿಲ್ದಾಣವನ್ನೂ ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವುದು. ಇದಕ್ಕಾಗಿ ಸೂಕ್ತ ಜಾಗವನ್ನು ನೋಡಲಾಗಿದೆ.ಮಿನಿ ವಿಧಾನಸೌಧ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಮೆಸ್ಕಾಂ ಕಚೇರಿ ಸಹಿತ ಈಗ ಅಂತಿಮ ಹಂತದಲ್ಲಿರುವ ಪ್ರಮುಖ ಯೋಜನೆ ಉದ್ಘಾಟನೆ ಶೀಘ್ರ ನಡೆಯಲಿದೆ ಎಂದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಆಲಿ, ಜಿಪಂ ಸದಸ್ಯರಾದ ಎಂ.ಎಸ್.ಮಹಮ್ಮದ್, ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಜಿಪಂ ಮಾಜಿ ಸದಸ್ಯ ಮಾಧವ ಮಾವೆ, ಬುಡಾ ಮಾಜಿ ಅಧ್ಯಕ್ಷ ಪಿಯುಸ್ ರೋಡ್ರಿಗಸ್, ಪುರಸಭಾ ನಾಮನಿರ್ದೇಶಿತ ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ ಉಪಸ್ಥಿತರಿದ್ದರು.