ನೃತ್ಯದ ಕುರಿತು ಉಪನ್ಯಾಸ, ಪ್ರದರ್ಶನ ಸಹಿತ ಪ್ರಸ್ತುತಿ
ಪುತ್ತೂರಿನ ಶ್ರೀ ದೇವಿ ನೃತ್ಯಾರಾಧನಾ ಕಲಾಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ದಶಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ನೃತ್ಯ ರಮಣೀಯಂ ಎಂಬ ಉಪನ್ಯಾಸ, ಪ್ರದರ್ಶನ ಸಹಿತವಾದ ನೃತ್ಯ ಪ್ರಸ್ತುತಿ ಭಾನುವಾರ ಏ.16ರಂದು ನಡೆಯಲಿದೆ.
ಪಾಣೆಮಂಗಳೂರಿನ ಎಸ್.ವಿ.ಎಸ್.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಈ ಕಾರ್ಯಕ್ರಮ ದಿನವಿಡೀ ನಡೆಯಲಿದ್ದು, ಈ ಸಂದರ್ಭ ಸನ್ಮಾನ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿದೆ ಎಂದು ಬಿ.ಸಿ.ರೋಡ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಕಲಾ ಕೇಂದ್ರದ ಸಂಚಾಲಕ ಉದಯ ವೆಂಕಟೇಶ್ ಮತ್ತು ನೃತ್ಯ ನಿರ್ದೇಶಕಿ ರೋಹಿಣಿ ಉದಯ್ ಹೇಳಿದರು.
ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ನಡೆಯಲಿದ್ದು, ವಿದುಷಿ ಡಾ.ಶೋಭಿತಾ ಸತೀಶ್ ರಾವ್ ಅವರು ಜೀವನದ ವೈರುಧ್ಯಗಳ ನಡುವೆ ನೃತ್ಯದ ಹೊಂದಾಣಿಕೆ ವಿಷಯದ ಕುರಿತು ಮಾತನಾಡುವರು. ಬೆಳಗ್ಗೆ 11.30ಕ್ಕೆ ವಿದ್ವಾನ್ ಪ್ರಮೋದ್ ಕುಮಾರ್ ಉಳ್ಳಾಲ್ ಅವರ ನೃತ್ಯ ಪ್ರಸ್ತುತಿ ಇರಲಿದೆ. ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟಿಸುವರು. ಪ್ರದರ್ಶಿನಿಯನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಅಂತಾರಾಷ್ಟ್ರೀಯ ಕೂಚಿಪುಡಿ ನೃತ್ಯ ಕಲಾವಿದೆ ವೈಜಯಂತಿ ಕಾಶಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ವಹಿಸುವರು. ಮುಖ್ಯ ಅತಿಥಿಗಳಾಗಿ ಹರಿಕೃಷ್ಣ ಪುನರೂರು, ಸೌಂದರ್ಯ ರಮೇಶ್, ಪಟ್ಲ ಸತೀಶ ಶೆಟ್ಟಿ, ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಎಂ.ಜಿ.ಹೆಗಡೆ, ರಮೇಶ್ ಟಿ, ಎಂ.ಆರ್.ಸತ್ಯನಾರಾಯಣ, ವೆಂಕಟ್ರಾಯ ಶೆಣೈ, ಡಾ.ಶೋಭಿತಾ ಸತೀಶ್ ರಾವ್ ಭಾಗವಹಿಸುವರು. ಈ ಸಂದರ್ಭ ಸನಾತನ ನಾಟ್ಯಾಲಯ ನಿರ್ದೇಶಕಿ ಶಾರದಾ ಮಣಿಶೇಖರ್ ಅವರನ್ನು ಸನ್ಮಾನಿಸಲಾಗುವುದು.
ಸಂಜೆ 5ರಿಂಧ ನೃತ್ಯ ರಮಣೀಯಕಂ ನೃತ್ಯ ಕಾರ್ಯಕ್ರಮ ಹಾಗೂ ರಾತ್ರಿ 8ರಿಂದ ವೈಜಯಂತಿ ಕಾಶಿ ಮತ್ತು ಪ್ರತೀಕ್ಷಾ ಕಾಶಿ ಅವರಿಂದ ಕೂಚಿಪುಡಿ ನೃತ್ಯ ಕಾರ್ಯಕ್ರಮ ನಡೆಯಲಿದೆ. ಅಂತಾರಾಷ್ಟ್ರೀಯ ಮಟ್ಟದ ಕಲಾವಿದೆ ವೈಜಯಂತಿ ಕಾಶಿ ಇದೇ ಪ್ರಥಮ ಬಾರಿಗೆ ಬಂಟ್ವಾಳಕ್ಕೆ ಆಗಮಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಸಂಜೆ 6.30ರಿಂದ ನಡೆಯುವ ಸಮಾರೋಪ ಕಲಾಪದಲ್ಲಿ ಧರ್ಮಸ್ಥಳ ಬಿ.ಭುಜಬಲಿ ಅಧ್ಯಕ್ಷತೆ ವಹಿಸುವರು. ಮಿಫ್ಟ್ ನಿರ್ದೇಶಕ ಎಂ.ಜಿ.ಹೆಗಡೆ, ಸಂಗೀತ ನಿರ್ದೇಶಕ ವಿ.ಮನೋಹರ್, ಉದ್ಯಮಿ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಕಿರುತೆರೆ ನಿರ್ದೇಶಕ ದೇವರಾಜ್, ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ, ಅಪೂರ್ವ ಕಲಾವಿದರು ಅಧ್ಯಕ್ಷ ಉಮೇಶ್ ಎಂ.ಸಾಲಿಯಾನ್ ಭಾಗವಹಿಸುವರು. ಈ ಸಂದರ್ಭ ವೈಜಯಂತಿ ಕಾಶಿ ಅವರನ್ನು ಸನ್ಮಾನಿಸಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಜಯಲಕ್ಷ್ಮೀ ಪ್ರಭು, ಮಂಜು ವಿಟ್ಲ, ರೂಪಕಲಾ, ನಳಿನಿ, ಶ್ಯಾಮಲಾ ಎಂ ಉಪಸ್ಥಿತರಿದ್ದರು.