ಸಾಹಿತ್ಯ ಮತ್ತು ಆಧ್ಯಾತ್ಮ ಚಿಂತನೆಗಳು ಜೊತೆಯಾಗಿ ಸಾಗಬೇಕು ಎಂದು ಪೊಳಲಿ ಶ್ರೀರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಹೇಳಿದರು.
ಬಿ.ಸಿ.ರೋಡಿನ ಕ್ಷೇತ್ರ ಶಿಕ್ಷಣಾಧಿಕಾರಿ ಸಮಾರಂಭದಲ್ಲಿ ನಡೆದ ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡದ ಕಲ್ಹಣ ನಿರ್ಪಾಜೆ ಭೀಮ ಭಟ್ಟ ಟ್ರಸ್ಟ್, ನೀರ್ಪಾಜೆ ಭೀಮ ಭಟ್ ಅಭಿಮಾನಿ ಬಳಗ ಬಂಟ್ವಾಳ ತಾಲೂಕು ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಪುಂಡಿಕಾ ಗಣಪಯ್ಯ ಭಟ್, ನಿರ್ಪಾಜೆ ಭೀಮ ಭಟ್ಟರು ಸಂಸ್ಕೃತದ ಮಹಾಕಾವ್ಯ ಕಲ್ಹಣನ ರಾಜತರಂಗಿಣಿಯನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಇತಿಹಾಸ ಮತ್ತು ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದರು. ಭೀಮ ಭಟ್ಟರು ಪತ್ರಕರ್ತನಾಗಿ, ಸಾಹಿತಿಯಾಗಿ, ಸಹಕಾರಿಯಾಗಿ, ರಾಜಕೀಯ ಮುಂದಾಳಾಗಿ ಸಾಮಾಜಿಕವಾಗಿ ಗುರುತಿಸಲ್ಪಟ್ಟವರು. ಅವರ ಹೆಸರಲ್ಲಿ ಗುರುತಿಸಲ್ಪಟ್ಟ ಕಾಶ್ಮೀರ ಪಂಡಿತ ಕಲ್ಹಣನ ಹೆಸರಲ್ಲಿ ನೀಡುತ್ತಿರುವ ಏಕೈಕ ಪ್ರಶಸ್ತಿ ಇದಾಗಿದೆ ಎಂದರು.
ಕನ್ನಡದ ಕಲ್ಹಣ ಪ್ರಶಸ್ತಿ ಸ್ವೀಕರಿಸಿದ ಗ್ರಂಥಕರ್ತ, ಯಕ್ಷಗಾನ ಅರ್ಥದಾರಿ, ಪ್ರವಚನಕಾರ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಸಿ. ಮಾತನಾಡಿ ನನ್ನ ಬರವಣಿಗೆಗೆ ನೀರ್ಪಾಜೆ ಪ್ರೇರಕರಾಗಿದ್ದರು. ಸಂಸ್ಕೃತ ವಿದ್ವಾಂಸ ಸಾಹಿತಿಯಾಗಿದ್ದು ಯಕ್ಷಗಾನ ಅರ್ಥಗಾರಿಕೆಗೆ ಸ್ಪೂರ್ತಿಯಾಗಿದ್ದರು. ಅವರ ಹೆಸರಲ್ಲಿ ನೀಡುತ್ತಿರುವ ಪ್ರಶಸ್ತಿ ಸ್ವೀಕರಿಸಲು ಸಂತಸವಾಗುತ್ತಿದೆ. ಎಂದು ಹೇಳಿದರು.
ವೇದವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ ಮಾತನಾಡಿ ಪ್ರಶಸ್ತಿ ಪುರಸ್ಕೃತ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಸಿ. ಒಬ್ಬ ಶ್ರೇಷ್ಟ ಯಕ್ಷಗಾನ ಅರ್ಥದಾರಿ, ಪ್ರವಚನಕಾರ, ಯಕ್ಷಗಾನ ಕ್ಷೇತ್ರದಲ್ಲಿ ಅವರದ್ದೇ ವಿಶೇಷ ಶೈಲಿ ರೂಢಿಸಿಕೊಂಡಿದ್ದಾರೆ. ಗಂಥಕರ್ತರಾಗಿ ಭಾಗವತಕೋಶ ರಚಿಸುವ ಮೂಲಕ ವಿಶೇಷ ಕೊಡುಗೆ ನೀಡಿದ್ದಾರೆ ಎಂದರು.
ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ. ರಾಜಮಣಿ ರಾಮಕುಂಜ ಭೀಮ ಭಟ್ಟ ಸಂಸ್ಮರಣೆ ನೆರವೇರಿಸಿದರು. ಭೀಮ ಭಟ್ಟರ ಸರಳ ವ್ಯಕ್ತಿತ್ವ, ನಡೆನುಡಿಯಲ್ಲಿ ಪ್ರಾಮಾಣಿಕತೆ, ಅನೇಕ ಸಾಹಿತಿಗಳಿಗೆ ಪ್ರೇರಕರಾಗಿ ಗುರುತಿಸಲ್ಪಟ್ಟರು. ಯುವ ಪತ್ರಕರ್ತರಿಗೆ ಮಾರ್ಗದರ್ಶಕರು, ಸ್ವತ: ತಾನೆ ಪತ್ರಕರ್ತನಾಗಿ , ಅಂಕಣಕಾರನಾಗಿ ಅವರ ಬರಹಗಳು ನಾಡಿ ನುಡಿಗೆ ಸಂದಿರುವ ದೊಡ್ಡ ಕೊಡುಗೆ ಎಂದರು. ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯ ಪ್ರಭಾಕರ ಪ್ರಭು, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ದಿ. ಭೀಮ ಭಟ್ಟರ ಪತ್ನಿ ಶಂಕರಿ ಭೀಮ ಭಟ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷ ಬಿ. ತಮ್ಮಯ ಸ್ವಾಗತಿಸಿ, ಕೋಶಾಧಿಕಾರಿ ಎಸ್. ಗಂಗಾಧರ ಭಟ್ ಕೊಳಕೆ ಪ್ರಸ್ತಾವನೆ ನೀಡಿದರು. ಕಾರ್ಯದರ್ಶಿ ಕೆ. ಮೋಹನ ರಾವ್ ವಂದಿಸಿದರು. ಕಸಾಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ಕಾರ್ಯಕ್ರಮ ನಿರ್ವಹಿಸಿದರು.