ಕಳೆದ ಎಂಟು ವರ್ಷಗಳಿಂದ ಬಿ.ವಿ.ಕಾರಂತ ನೆನಪಿನ ನಾಟಕೋತ್ಸವ ಅವರ ಹುಟ್ಟೂರು ಮಂಚಿಯಲ್ಲಿ ನಡೆಯುತ್ತಿದೆ. ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಕಾರಂತರನ್ನು ನೆನಪಿಸಿಕೊಳ್ಳುವ ನಾಟಕೋತ್ಸವವನ್ನು ಪ್ರತಿ ವರ್ಷ ಮಾಡಿಕೊಂಡು ಬರುತ್ತಿದೆ. ಈ ಉತ್ಸವದಲ್ಲಿ ಕರ್ನಾಟಕದ ಶ್ರೇಷ್ಠ ತಂಡಗಳು ಭಾಗವಹಿಸಿ, ಕಾರಂತರ ಆಶಯದ ನಾಟಕಗಳನ್ನು ಪ್ರದರ್ಶಿಸಿವೆ. ಮಕ್ಕಳ ರಂಗಶಿಬಿರಗಳ ಮೂಲಕ ಕಾರಂತ ವಿಚಾರಧಾರೆಗಳನ್ನು ಪರಿಚಯಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವ ಪ್ರಯತ್ನಗಳೂ ಸಾಗಿವೆ. ವಿಚಾರಗೋಷ್ಠಿ, ಚಲನಚಿತ್ರ ಪ್ರದರ್ಶನದಂಥ ಸಾಂಸ್ಕೃತಿಕ ಚಟುವಟಿಕೆಗಳಿಗೆ ರಂಗಭೂಮಿಕಾ ಟ್ರಸ್ಟ್ ವೇದಿಕೆಯಾಗಿದೆ. ಬಿ.ವಿ.ಕಾರಂತ ಹೆಸರಲ್ಲಿ ಮಂಚಿಯನ್ನು ಸಾಂಸ್ಕೃತಿಕ ಗ್ರಾಮವೆಂದು ಗುರುತಿಸುವಂತಾಗಬೇಕು ಎಂಬ ಧ್ಯೇಯೋದ್ದೇಶದೊಂದಿಗೆ ಈ ಕಾರ್ಯಕ್ರಮಗಳನ್ನು ಕಳೆದ ಎಂಟು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ ಎನ್ನುತ್ತಾರೆ ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್.
ಈ ಬಾರಿ ಮಂಚಿ ಕೊಳ್ನಾಡು ಗ್ರಾಮದ ನೂಜಿಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏ.14, 15, 16ರಂದು ನಾಟಕೋತ್ಸವ ನಡೆಯಲಿದೆ.
ಏನೇನಿದೆ:
ಏ.14ರಂದು ಸಂಜೆ ಕಾರ್ಯಕ್ರಮವನ್ನು ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ, ಕರ್ಣಾಟಕ ಬ್ಯಾಂಕ್ ಮುಖ್ಯ ಪ್ರಬಂಧಕ ಶ್ರೀನಿವಾಸ ದೇಶಪಾಂಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಡಿ.ಎಂ. ಭಾಗವಹಿಸುವರು. ಈ ಸಂದರ್ಭ ಮಂಗಳೂರಿನ ಸುವರ್ಣ ಪ್ರತಿಷ್ಠಾನ ವತಿಯಿಂದ ಸದಾನಂದ ಸುವರ್ಣ ನಿರ್ದೇಶನದ ನಾಟಕ ಉರುಳು ಪ್ರದರ್ಶನಗೊಳ್ಳಲಿದೆ.
ಏ.15ರಂದು ಕೊಡವೂರಿನ ಸುಮನಸ ಕಲಾವಿದರಿಂದ ಮುದ್ರಾರಾಕ್ಷಸ ನಾಟಕ ಪ್ರದರ್ಶನ ನಡೆಯುವುದು.
ಏ.16ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ರಂಗನಿರ್ದೇಶಕ ಪ್ರಸಾದ್ ರಕ್ಷಿದಿ, ಕಸಾಪ ತಾಲೂಕು ಅಧ್ಯಕ್ಷ ಕೆ.ಮೋಹನ ರಾವ್, ಕೊಳ್ನಾಡು ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಭಾಗವಹಿಸುವರು. ಅಂದು ಬೆಳ್ಳೇಕೆರೆಯ ಜೈ ಕರ್ನಾಟಕ ಸಂಘ ವತಯಿಂದ ಬಹುಮಾನ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.