ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಅಂತರದಿಂದ ಗೆಲುವು ಸಾಧಿಸಿದ್ದು, ಇದು ಮುಂದಿನ ಚುನಾವಣೆಯ ಫಲಿತಾಂಶಕ್ಕೆ ದಿಕ್ಸೂಚಿಯಾಗಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಿ.ಸಿ.ರೋಡಿನ ಫ್ಲೈಓವರ್ ಬಳಿ ಕಾಂಗ್ರೆಸ್ ನ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಆಯೋಜಿಸಿದ್ದ ವಿಜಯೋತ್ಸವದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮಾತ್ರ ಬಡವರ ನಾಡಿಮಿಡಿತ ಅರಿತಿರುವ ಪಕ್ಷವಾಗಿದ್ದು, ಕಾಂಗ್ರೆಸ್ ಮುಕ್ತ ಮಾಡುವ ಬಿಜೆಪಿ ಆಸೆ ನುಚ್ಚುನೂರಾಗಲಿದೆ, ಬಿಜೆಪಿ ಮುಕ್ತ ಕರ್ನಾಟಕದತ್ತ ಕಾಂಗ್ರೆಸ್ ಹೆಜ್ಜೆ ಇರಿಸಿದೆ ಎಂದರು.
ಬಲಾಢ್ಯರ ವಿರುದ್ಧವಾಗಿ ಕಾಂಗ್ರೆಸ್ ಪಕ್ಷ ಯಾವತ್ತೂ ಕೆಲಸ ಮಾಡಿಕೊಂಡು ಬಂದಿದೆ. ಜನರು ಅದನ್ನು ಮೆಚ್ಚಿದ್ದಾರೆ. ಯಾವ ಭರವಸೆಯನ್ನು ಕೊಟ್ಟಿದ್ದೇವೋ ಆ ಭರವಸೆಯನ್ನು ಈಡೇರಿಸುತ್ತದೆ ಎಂಬುದನ್ನು ಜನರು ಅರಿತಿದ್ದಾರೆ. ಬಿಜೆಪಿ ಮುಂದಿನ ದಿನಗಳಲ್ಲಿ ನೆಲಕಚ್ಚಲಿದೆ. ದಕ್ಷಿಣ ಭಾರತದಲ್ಲಿ ಜನರು ಕಾಂಗ್ರೆಸ್ ಗೆ ಬೆಂಬಲ ನೀಡುವ ಜನರು ಬಿಜೆಪಿ ಮುಕ್ತ ದಕ್ಷಿಣ ಭಾರತವನ್ನಾಗಿಸಲು ಕರ್ನಾಟಕದ ಜನರು ಮುನ್ನುಡಿ ಹಾಕಿದ್ದಾರೆ ಎಂದರು.
ಈ ಸಂದರ್ಭ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್. ಖಾದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಆಲಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ಸದಸ್ಯ ಆಲ್ಫೋನ್ಸ್ ಮಿನೇಜಸ್, ಪಕ್ಷ ನಾಯಕ ಮಾಧವ ಮಾವೆ, ಪಿಯುಸ್ ರೋಡ್ರಿಗಸ್, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಜಿಲ್ಲಾ ಉಪಾಧ್ಯಕ್ಷ ಲುಕ್ಮಾನ್, ಪಾಣೆಮಂಗಳೂರು ಬ್ಲಾಕ್ ಕಾರ್ಯದರ್ಶಿ ಮಹಮ್ಮದ್ ನಂದಾವರ, ರಫೀಕ್ ಮೊದಲಾದವರು ಉಪಸ್ಥಿತರಿದ್ದರು.