ವಿಟ್ಲ ಪೇಟೆ ನಿವಾಸಿ, ವೈದ್ಯ, ಸಮಾಜಸೇವಕ ಡಾ. ಕೆ.ಮಂಜುನಾಥ ರೈ(90) ಅಸೌಖ್ಯದಿಂದ ಏ.12ರಂದು ನಿಧನ ಹೊಂದಿದರು. ಅವರು ಪತ್ನಿ, ಮೂವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ವಿಟ್ಲ ಹಿರಿಯ ನಾಗರಿಕ ಸಮಿತಿಯ ಮಾಜಿ ಅಧ್ಯಕ್ಷರಾಗಿ, ವಿಟ್ಲ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾಗಿ, ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ನಿರ್ದೇಶಕರಾಗಿ, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಮಾಜಿ ನಿರ್ದೇಶಕರಾಗಿ, ಮಾಜಿ ಕೋಶಾಧಿಕಾರಿಯಾಗಿ, ವಿಟ್ಠಲ ವಿದ್ಯಾ ಸಂಘದ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ವಿಟ್ಲ ಹಾಲು ಉತ್ಪಾದಕರ ಸಹಕಾರಿ ಸಂಘದ ಆರಂಭದ ಹಂತದಲ್ಲಿ ನಿರ್ದೇಶಕರಾಗಿದ್ದರು. ವಿಟ್ಲ ಕೋಟಿಕೆರೆ ಸ್ವಿಮ್ಮಿಂಗ್ ಕ್ಲಬ್ ಅಧ್ಯಕ್ಷರಾಗಿ, ಬೆಂಗಳೂರು ಸುಪ್ರಜಿತ್ ಫೌಂಡೇಶನ್ ಸ್ಕಾಲರ್‌ಶಿಪ್ ಸಮಿತಿಯನ್ನು ಹುಟ್ಟೂರಲ್ಲಿ ಸ್ಥಾಪಿಸಲು ಸಲಹೆ ನೀಡಿ, ನಿರ್ದೇಶಕರಾಗಿ, ವಿಟ್ಲದ ನೂರಾರು ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಿಸಲು ಕಾರಣರಾಗಿದ್ದರು. ಸುಮಾರು ೫೦ಕ್ಕೂ ಅಧಿಕ ಮಂದಿ ಬಡವರಿಗೆ ಶೌಚಾಲಯ ನಿರ್ಮಾಣಕ್ಕೆ, ಅಂಗನವಾಡಿಗಳಿಗೆ ಮುಂದಿನ ಛಾವಣಿ ಇಳಿಸುವುದಕ್ಕೆ ಧನಸಹಾಯ ಮಾಡಿದ್ದಾರೆ. ವಿಟ್ಲದಲ್ಲಿ ಸರಕಾರಿ ಆಸ್ಪತ್ರೆ ತೆರೆಯಲು ಶ್ರಮಿಸಿ, ವೇತನ ಪಡೆಯದೆ ಪ್ರಥಮ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಡಾ. ಕೆ.ಮಂಜುನಾಥ ರೈ ಅವರದು ನೇರ ನಡೆ ನುಡಿಯ ವ್ಯಕ್ತಿತ್ವ.