ಕಲ್ಲಡ್ಕ ಶ್ರೀರಾಮ ಮಂದಿರ, ನಂದಾವರ ವೀರಮಾರುತಿ ದೇವಸ್ಥಾನ ಸಹಿತ ಬಂಟ್ವಾಳ ಪರಿಸರದ ಕೆಲ ಭಜನಾ ಮಂದಿರ, ದೇವಸ್ಥಾನಗಳಲ್ಲಿ ಹನುಮಜ್ಜಯಂತಿ ಪ್ರಯುಕ್ತ ಭಜನೆ, ಪೂಜಾದಿಗಳು ನಡೆದವು.
ಕಲ್ಲಡ್ಕ ಶ್ರೀರಾಮಮಂದಿರದಲ್ಲಿರುವ ಶ್ರೀರಾಮ ಸಹಿತ ಸೀತಾ, ಲಕ್ಷ್ಮಣ ಹನುಮಂತ ವಿಗ್ರಹಗಳಿಗೆ ಬೆಳಗ್ಗಿನಿಂದಲೇ ನೂರಾರು ಭಕ್ತರು ಆಗಮಿಸಿ ಸೀಯಾಳ ಅಭಿಷೇಕ ನೆರವೇರಿಸಿ, ಅವಲಕ್ಕಿಮೊಸರು ಪ್ರಸಾದ ಸ್ವೀಕರಿಸಿದರು. ಗರ್ಭಗುಡಿಯೊಳಗೆ ತೆರಳಿ, ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿ, ತಮ್ಮ ಕೈಯಾರೆ ಸೀಯಾಳಾಭಿಷೇಕ ಮಾಡುವ ಅವಕಾಶ ಇಲ್ಲಿದ್ದು, ಯಾವ ಜಾತಿ ಮತ ಭೇದವೂ ಇದಕ್ಕಿಲ್ಲ. ಹೀಗಾಗಿ ನೂರಾರು ಮಂದಿ ಖುದ್ದು ಮಂದಿರದೊಳಗೆ ತೆರಳಿ ಅಭಿಷೇಕ ಮಾಡುವ ಅವಕಾಶ ಪಡೆದರು. ರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು.
ಪಾಣೆಮಂಗಳೂರು ಪೇಟೆ ಸಮಿಪ ನಂದಾವರದಲ್ಲಿ ಶ್ರೀ ವೀರಮಾರುತಿ ದೇವಸ್ಥಾನದಲ್ಲಿ ಹನುಮಜ್ಜಯಂತಿಯನ್ನು ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು. ಬೆಳಗ್ಗೆ ಪ್ರಾರ್ಥನೆ, ಪಂಚಾಮೃತ ಅಭಿಷೇಕ, ಪವಮಾನ ಅಭಿಷೇಕ, ಸೀಯಾಳಾಭಿಷೇಕ ನಡೆಯಲಿದೆ. ಮಧ್ಯಾಹ್ನ ೧ ಗಂಟೆಗೆ ಮಹಾಪೂಜೆ, ರಾತ್ರಿ ಪಲ್ಲಕ್ಕಿ ಉತ್ಸವ, ವಸಂತ ಪೂಜೆ ನೆರವೇರಿತು. ಪಾಣೆಮಂಗಳೂರಿನ ಶ್ರೀ ವೀರಮಾರುತಿ ಮಂದಿರದಲ್ಲಿ ೧೫ನೇ ವರ್ಷದ ಹನುಮಜ್ಜಯಂತಿ ಉತ್ಸವ ಪ್ರಯುಕ್ತ ಹನುಮಾನ್ ಕಲ್ಪೋಕ್ತ ಪೂಜೆ, ವಾಯುಸ್ತುತಿ ಪಾರಾಯಣ, ಹರಿನಾಮ ಸಂಕೀರ್ತನೆ, ಭಜನಾ ಮಂಗಲೊತ್ಸವ ನಡೆಯಿತು.