ಮಕ್ಕಳ ಮಾತು

ಆಶಾ ಟೀಚರ್ ಹಾಗೆ ನಮ್ಗೆ ಯಾರು ಡ್ಯಾನ್ಸ್ ಕಲಿಸ್ತಾರಮ್ಮಾ..?

ಮಗುವಿನ ಕನಸುಗಳಿಗೆ ರೆಕ್ಕೆ ಕಟ್ಟಿ ವಾಸ್ತವ ಬದುಕಿನ ಚಿತ್ರಣದ ಜೊತೆಗೆ ಬದುಕುವ ಶಿಕ್ಷಣದ ಪಾಠ ಮಾಡಿದಾಗ ಮಕ್ಕಳು ಶಿಕ್ಷಕರಿಗೆ ತುಂಬಾ ನಿಕಟರಾಗುತ್ತಾರೆ.  ಮಗು ಬಯಸ್ಸಿದ್ದನ್ನು  ಕೊಡಲು ಸಾಧ್ಯವಾಗುವ ಶಿಕ್ಷಕರು ತಮ್ಮ ಕಾರ್ಯದಲ್ಲಿ ಸಂತೃಪ್ತಿ ಕಾಣುತ್ತಾರೆ.

 

  • ಮೌನೇಶ ವಿಶ್ವಕರ್ಮ
  • ಅಂಕಣ: ಮಕ್ಕಳ ಮಾತು

ಮಕ್ಕಳು ಚುರುಕಾಗಿ, ಲವಲವಿಕೆಯಿಂದ ಇರಬೇಕು ಎಂದಿದ್ದರೆ ಅವರು ಕಲಿಯುವ, ನಲಿಯುವ ಶಾಲೆಯ ವಾತಾವರಣ ಹಸನಾಗಿರಬೇಕು, ಅವರಿಗೆ ಕಲಿಸುವ ಶಿಕ್ಷಕರು ಒಳ್ಳೆಯವರುಆಗಿರಬೇಕು. ಇದು ನಾವು-ನೀವು ದಿನನಿತ್ಯ ಕಂಡುಕೊಳ್ಳುವ ಸತ್ಯದ ಸಂಗತಿ.

ಮಗು ಶಾಲೆಯಲ್ಲಿ ಕಲಿಯುವ ವೇಳೆ ತನ್ನದೇ ಆದ ಕನಸುಗಳನ್ನು-ಹಂಬಲಗಳನ್ನು ಇಟ್ಟುಕೊಂಡಿರುತ್ತದೆ. ಮುಗ್ಧತೆಯಿಂದ ಕೂಡಿದ ಆ ಮಗುವಿನ ಮನಸ್ಸನ್ನು ಅರ್ಥೈಸಿಕೊಂಡು ಆ ಮಗು ಕೇಳಿದ್ದನ್ನೆಲ್ಲಾ ಕೊಡುವ ಶಿಕ್ಷಕ/ಶಿಕ್ಷಕಿ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗುತ್ತಾರೆ.

ತನ್ನೆಲ್ಲಾ ಕನಸುಗಳಿಗೆ ಬಣ್ಣ ತುಂಬುವ ಶಿಕ್ಷಕರು ತನ್ನ ಶಾಲೆಯಲ್ಲಿದ್ದರೆ ಆ ಮಗು ಕಂಡುಕೊಳ್ಳುವ ಖುಷಿಗೆ ಪಾರವೇ ಇರುವುದಿಲ್ಲ. ಮಗುವಿನ ಆ ಮನಸ್ಥಿತಿ ಎಂತಹಾ ಕಠಿಣ ಪಾಠಗಳನ್ನೂ ಸುಲಭದಲ್ಲಿ ಅರಗಿಸಿಕೊಳ್ಳುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸುತ್ತದೆ.

ಇದು ಶಾಲೆಯೊಂದರಲ್ಲಿ ನಡೆದ ಘಟನೆ.

ಪ್ರತಿಭಾದಿನೋತ್ಸವದ ಹಿನ್ನೆಲೆಯಲ್ಲಿ ಆ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಲಾ ನಿಯಮಗಳಂತೆ ತರಗತಿಗೊಬ್ಬರು ಕ್ಲಾಸ್ ಟೀಚರ್ ಆ ಶಾಲೆಯಲ್ಲೂ ಇದ್ದರು. ಅಲ್ಲಿನ ಮೂರನೇ ತರಗತಿಯ ಕ್ಲಾಸ್ ಟೀಚರ್ ಆಶಾ, ನಾಲ್ಕನೇ ತರಗತಿ ಕ್ಲಾಸ್ ಟೀಚರ್ ಉಷಾ( ಹೆಸರುಗಳನ್ನು ಬದಲಾಯಿಸಲಾಗಿದೆ) ಆಶಾ ಟೀಚರ್ ಮಕ್ಕಳಿಗೆ ಹೆಚ್ಚು ಪ್ರಿಯವಾದ ಶಿಕ್ಷಕಿ. ಅವರ ಪಾಠದ ಶೈಲಿಯೋ ಗೊತ್ತಿಲ್ಲ, ಮಕ್ಕಳಿಗೆ ಅವರೆಂದರೆ ಪಂಚಪ್ರಾಣ. ಉಷಾ ಟೀಚರ್ ಕೂಡ ಪ್ರಬುದ್ದ ಶಿಕ್ಷಕಿ, ಅವರಿಗೂ ಮಕ್ಕಳೆಂದರೆ ತುಂಬಾ ಪ್ರೀತಿ. ಆದರೆ ಅವರ ತರಗತಿ ಮಕ್ಕಳೂ ಅವರನ್ನು ಅಷ್ಟಾಗಿ ಹಚ್ಚಿಕೊಂಡವರಲ್ಲ. ತರಗತಿ ಶಿಕ್ಷಕಿ ಎಂಬಷ್ಟೇ ಗೌರವ ಅವರಿಗಿತ್ತು.

ಶಾಲಾ ಸೂಚನೆಯಂತೆ ಶಾಲೆಯ ಎಲ್ಲಾ ಶಿಕ್ಷಕಕರಂತೆ ಈ ಇಬ್ಬರು ಶಿಕ್ಷಕಿಯರೂ ತಮ್ಮ ತರಗತಿ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ನೃತ್ಯಗಳನ್ನು ಕಲಿಸಿದ್ದರು. ಪ್ರತಿಭಾ ದಿನೋತ್ಸವದ ದಿನ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಿಯೇ ಬಿಟ್ಟಿತು.

ಒಂದನೇ ತರಗತಿಯಿಂದ ಹಿಡಿದು ಕ್ರಮ ಪ್ರಕಾರವಾಗಿ ಕಾರ್ಯಕ್ರಮ ನಡೆಯುತ್ತಿತ್ತು.  ಎಲ್ಲದಕ್ಕೂ ಪ್ರೋತ್ಸಾಹ ಸಿಕ್ಕಿದಂತೆ ೩ನೇ ತರಗತಿಯ ಮಕ್ಕಳ ನೃತ್ಯ ಮುಗಿದಾಗ ಮಕ್ಕಳಾದಿಯಾಗಿ ಎಲ್ಲಾ ಪ್ರೇಕ್ಷಕರು ಕೈಚಪ್ಪಾಳೆಯ ಮೂಲಕ ಅಭಿನಂದಿಸಿದರು. ನೃತ್ಯ ಮುಗಿದ ಬಳಿಕವೂ ಆ ಮಕ್ಕಳಿಗೆ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕ ವಲಯದಿಂದ ಗುಡ್..ಕಂಗ್ರಾಟ್ಸ್ ಗಳು ಹರಿದು ಬಂದಿತ್ತು. ಅತ್ಯುತ್ತಮವಾಗಿ ಮೂಡಿಬಂದ ಆ ನೃತ್ಯ ಕಲಿಸಿದ ಶಿಕ್ಷಕಿಗೆ ಎಲ್ಲೆಡೆಯಿಂದ ಅಭಿಮಾನದ ಮಾತು ಕೇಳಿಬಂದಾಗ ಎಲ್ಲಿಲ್ಲದ ಖುಷಿ.

ನಿರೀಕ್ಷೆಯಂತೆ ಆ ಬಳಿಕ ನಾಲ್ಕನೇ ತರಗತಿಯ ಮಕ್ಕಳ ನೃತ್ಯವೂ ನಡೆಯಿತು. ಶಿಕ್ಷಕಿ ನಿರ್ದೇಶಿಸಿದಂತೆ, ಮಕ್ಕಳು ತಮ್ಮ ಸಾಮರ್ಥ್ಯದ ಮಟ್ಟಿಗೆ ಮನಮೋಹಕವಾಗಿ ನೃತ್ಯಪ್ರದರ್ಶನ ನೀಡಿದರು. ಆದರೆ ಮೂರನೇ ತರಗತಿ ಮಕ್ಕಳ ನೃತ್ಯಕ್ಕೆ ದೊರಕಿದ ಪ್ರಶಂಸೆ ಈ ನೃತ್ಯಕ್ಕೆ ಸಿಕ್ಕಲಿಲ್ಲ… ಆದರೆ ಎಲ್ಲಾ ಶಿಕ್ಷಕರು ಈ ಮಕ್ಕಳನ್ನು ಪ್ರೋತ್ಸಾಹದ ಮಾತುಗಳಿಂದ ಹುರಿದುಂಬಿಸುವುದನ್ನು ಮರೆಯಲಿಲ್ಲ.

ಎಲ್ಲಾ ನೃತ್ಯಗಳು ಮುಗಿದ ಬಳಿಕ ಮಕ್ಕಳು ತಮ್ಮ ವೇಷಭೂಷಣಗಳನ್ನು ತೆಗೆಯುವ ಹೊತ್ತಿಗೆ ಮೂರನೇ ತರಗತಿ ಮಕ್ಕಳ ತಂಡದಲ್ಲಿ ನೃತ್ಯ ಮಾಡಿದ್ದ ಮಗು ತನ್ನ ತಾಯಿಯಲ್ಲಿ ಕೇಳಿದ ಮಾತಿದು ಅಮ್ಮಾ , ನಾಲ್ಕನೆಗೆ .. ಆಶಾ ಟೀಚರ್ ಹಾಗೆ ನಮ್ಗೆ ಯಾರು ಡ್ಯಾನ್ಸ್ ಕಲಿಸ್ತಾರಮ್ಮಾ..? ಆ ಮಾತು ಆ ತಾಯಿಯ ಮನಸ್ಸಿನಲ್ಲೂ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತು. ನಂತರ ಏನೋ ಆಗಿ ಅದು ಮರೆತು ಹೋಯಿತು.. ಬಿಟ್ಟು ಬಿಡಿ..

ಆದರೆ ನಾವಿಲ್ಲಿ ಯೋಚಿಸಬೇಕಾದ್ದು.. ಆ ಮಕ್ಕಳ ಮನಸ್ಥಿತಿ ಯಾವ ಬಗೆಯಲ್ಲಿ ಇರುತ್ತದೆ ಎಂಬುದನ್ನು. ಆಶಾ ಟೀಚರ್ ಅನ್ನು ಆ ಮಗು ಎಷ್ಟು ನೆಚ್ಚಿಕೊಂಡಿತ್ತು ಎಂದರೆ ಮುಂದಿನ ತರಗತಿಗೂ ಅಂತಾ ಶಿಕ್ಷಕಿಯೇ ತನಗೆ ಬೇಕು ಎಂಬ ಆಕಾಂಕ್ಷೆ ಆ ಮಗುವಿನಲ್ಲಿತ್ತು. ಅದು ನೃತ್ಯ ಕಲಿಸಿದ ಒಂದು ಕಾರಣಕ್ಕೆ ಅಲ್ಲ, ತರಗತಿಯಲ್ಲಿನ ಪಾಠದ ಶೈಲಿಯೂ ಇದಕ್ಕೆ ಕಾರಣವಿರಬಹುದು.

ಈ ಘಟನೆಯನ್ನು ನಾವು ಆಳವಾಗಿ ಅವಲೋಕಿಸಿದರೆ ಇದರಿಂದ ನಾವು ಕಲಿಯಬೇಕಾದ್ದು ತುಂಬಾ ಇದೆ ಎಂದೆನ್ನಿಸುತ್ತದೆ. ಮಗುವಿನ ಕನಸುಗಳಿಗೆ ರೆಕ್ಕೆ ಕಟ್ಟಿ ವಾಸ್ತವ ಬದುಕಿನ ಚಿತ್ರಣದ ಜೊತೆಗೆ ಬದುಕುವ ಶಿಕ್ಷಣದ ಪಾಠ ಮಾಡಿದಾಗ ಮಕ್ಕಳು ಶಿಕ್ಷಕರಿಗೆ ತುಂಬಾ ನಿಕಟರಾಗುತ್ತಾರೆ.  ಕೊಡಲು ಸಾಧ್ಯವಾಗುವ ಶಿಕ್ಷಕರು ತಮ್ಮ ಕಾರ್ಯದಲ್ಲಿ ಸಂತೃಪ್ತಿ ಕಾಣುತ್ತಾರೆ. ಈ ಸತ್ಯ ಎಲ್ಲಾ ಶಿಕ್ಷಕರಿಗೂ ತಲುಪಬೇಕು.

ಆದರೆ ವ್ಯವಸ್ಥೆಯೂ ಇದಕ್ಕೆ ವ್ಯತಿರಿಕ್ತವಾಗಿದೆ. ಇಲಾಖೆಯೂ ಒಳ್ಳೆಯ ಶಿಕ್ಷಕರಿಗೆ ನೀಡುವ ಪ್ರಶಸ್ತಿಗಳೂ ಉತ್ತಮ ಶಿಕ್ಷಕ/ಕಿ ಅಥವಾ ಜನಮೆಚ್ಚಿದ ಶಿಕ್ಷಕ/ಕಿ ಎಂಬೆಲ್ಲಾ ಹೆಸರಿನಲ್ಲಿ ನೀಡುತ್ತಾರೆ. ಆದರೆ ಯಾವತ್ತೂ ಮಗು ಮೆಚ್ಚಿದ ಶಿಕ್ಷಕ/ಕಿ, ಮಕ್ಕಳು ಮೆಚ್ಚಿದ ಶಿಕ್ಷಕ/ಕಿ ಎಂಬ ಶೀರ್ಷಿಕೆಯಲ್ಲಿ ನೀಡುತ್ತಿಲ್ಲ. ಈ ಎಲ್ಲಾ ಕಾರಣಕ್ಕೆ  ಸರ್ಕಾರ ನೀಡುವ ಪ್ರಶಸ್ತಿಗಳು ಅರ್ಹ ಶಿಕ್ಷಕರಿಗೆ ಅಪರೂಪಕ್ಕೆ ಮಾತ್ರ ತಲುಪುತ್ತದೆ ಆದರೆ ಬಹುತೇಕ ಸಂದರ್ಭಗಳಲ್ಲಿ ಇಂತಹಾ ಪ್ರಶಸ್ತಿಗಳನ್ನು ಪಡೆಯುವ ಶಿಕ್ಷಕರು ಜನ ಮೆಚ್ಚಿದ ಶಿಕ್ಷಕರಾಗಿರುತ್ತಾರೆ ಅಥವಾ ಜನಪ್ರತಿನಿಧಿ ಮೆಚ್ಚಿದ ಶಿಕ್ಷಕರಾಗಿರುತ್ತಾರೆ.  ಇದು ನಮ್ಮ ವ್ಯವಸ್ಥೆಯ ದುರಂತ ಎಂದಷ್ಟೇ ಹೇಳಬೇಕು.

ಅದೇನೇ ಇರಲಿ ಶಿಕ್ಷಕರು ಯಾವತ್ತೂ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿಯೇ ಇರಬೇಕು ಅಂದಿದ್ದರೆ ಮಕ್ಕಳಜೊತೆ ಚೆನ್ನಾಗಿ ಬೆರೆಯಬೇಕು, ಶಿಕ್ಷಕರು ಮಕ್ಕಳೊಂದಿಗೆ ಆಡಿ-ಕುಣಿದು-ನಲಿದಾಗ ಮಾತ್ರ ಅವರು  ಮಾಡುವ ಪಾಠಗಳೂ, ಎಲ್ಲಾ ಮಕ್ಕಳ ಭವಿಷ್ಯವೂ ಸುಂದರವಾಗಿರುತ್ತದೆ. ನೀವೇನ್ ಹೇಳ್ತೀರಿ..?

Mounesh Vishwakarma

ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Share
Published by
Mounesh Vishwakarma

Recent Posts