ತ್ಯಾಗ, ಸಮರ್ಪಣೆ, ಧರ್ಮಸಂಸ್ಕೃತಿ, ಸತ್ಯ, ನ್ಯಾಯ, ದೈರ್‍ಯ ಪರಾಕ್ರಮ, ಶ್ರದ್ಧೆನಿಷ್ಠೆ ಇವುಗಳ ಬಗ್ಗೆ ತಿಳಿದು ಜೀವನ ನಡೆಸುವ ದೇಶವೆಂದರೆ ಅದು ಭಾರತ. ಎಲ್ಲಾ ಗುಣಗಳ ಸಮುಚ್ಚಯ ಪ್ರಭು ಶ್ರೀರಾಮಚಂದ್ರ. ಅಂತಹ ರಾಮನ ಧ್ಯೇಯವನ್ನು ಆಧಾರವಾಗಿಟ್ಟುಕೊಂಡು ಮುಂದುವರಿಯುತ್ತಿರುವ ಶಿಕ್ಷಣ ಸಂಸ್ಥೆಯಿದು. ಅಂತಹ ಶ್ರೀರಾಮ ಚಂದ್ರನ ಜೀವನದ ಚರಿತ್ರೆಯನ್ನು ಅನುಸರಿಸಿ ಪುಣ್ಯದ ಕೆಲಸಕ್ಕೆ ಶಕ್ತಿ ಸಮರ್ಥರಾಗಿರಿ. ಸಾಮರ್ಥ್ಯ ಚಿಂತನೆ ವಿದ್ಯಾರ್ಥಿಗಳಾದ ನಿಮ್ಮಲ್ಲಿದೆ. ಶ್ರೇಷ್ಠತೆಯನ್ನು ಸಾರುವ, ತ್ಯಾಗದ ಮನೋಭಾವವಿರುವ ಬೇರೆಯವರನ್ನು ಉತ್ತಮ ಧ್ಯೇಯಗಳಿಂದ ಬದಲು ಮಾಡುವ ಶಕ್ತಿಯೂ ನಿಮ್ಮದಾಗಲಿ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜಿನ ೨೦೧೬-೧೭ನೇ ಸಾಲಿನ ಬೀಳ್ಕೊಡುಗೆ ಸಮಾರಂಭವಾದ ದೀಪಪ್ರದಾನ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.
ಬೆಂಗಳೂರಿನ ಥಿಂಕ್ ಸ್ಟ್ರೀಟ್ ಟೆಕ್ನೋಲಜೀಸ್ ಪ್ರೈ.ಲಿ. ಇದರ ಸಹ ಸಂಸ್ಥಾಪಕರು& ನಿರ್ದೇಶಕ ಉದಯ್ ಬಿರ್ಜೆ ಮಾತನಾಡಿ ಶಿಕ್ಷಣದಲ್ಲಿ ಆಚಾರ, ವಿಚಾರಗಳನ್ನು, ಆದರ್ಶಗಳನ್ನು ಮೈಗೂಡಿಸಿ ಮಾನವೀಯ ಮೌಲ್ಯಗಳನ್ನು ಎತ್ತರಿಸುವಂತಹ ಶಿಕ್ಷಣವು ಒಳ್ಳೆಯ ಪ್ರಭಾವವನ್ನು ವಿದ್ಯಾರ್ಥಿಗಳ ಮೇಲೆ ಬೀಳುತ್ತದೆ . ಕರ್ತವ್ಯವನ್ನು ಬಂಧನವೆಂದು ತಿಳಿಯದೆ ಸವಾಲು ಎಂದು ಸ್ವೀಕರಿಸಿ ಸತ್ಪ್ರಜೆಗಳಾಗಬೇಕು ಎಂದು ಹೇಳಿದರು.
ಬೆಳಗಾವಿಯ ವೈದ್ಯ ಡಾ| ಜಗದೀಶ್ ಮಾತನಾಡಿ ವಿದ್ಯಾರ್ಥಿಗಳಿಗೆ ದೇಶಿಯ ಆಧಾರಿತ ಮಾದರಿಯ ಶಿಕ್ಷಣವು ಪೂರಕವಾಗಬೇಕು, ಪ್ರಾಯೋಗಿಕ ಶಿಕ್ಷಣವು ಮೊದಲು ನಡೆದು ಸಿದ್ಧಾಂತ ಆಧಾರಿತ ಶಿಕ್ಷಣವು ನಂತರ ನಡೆದು ಅನ್ವಯಿಕ ಶಿಕ್ಷಣದ ರೂಪುರೇಷೆಯಾಗಬೇಕು ಎಂದರು.
ಚೆಂಡೆಯ ವಾದನದೊಂದಿಗೆ ಬೀಳ್ಕೊಡುವ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ತಿಲಕಧಾರಣೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಲಾಯಿತು.
ಇದೇ ಸಂದರ್ಭದಲ್ಲಿ ವರ್ಷದ ವಾರ್ಷಿಕ ಸಂಚಿಕೆ ರಾಮಧ್ವನಿ ಬಿಡುಗಡೆಗೊಂಡಿತು. ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಜಯರಾಜ್, ಶಿವಾನಂದ, ವತ್ಸಲಾ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಾದ ವಿಘ್ನೇಶ್, ಸಾಯಿಪ್ರಸಾದ್, ಶೃತಿ, ದೀಪಿಕಾ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಾದ ಕಾವ್ಯ ಮತ್ತು ಲಾವಣ್ಯ ಪ್ರೇರಣಾಗೀತೆ ಹಾಡಿದರು. ಕಾರ್ಯಕ್ರಮದ ಪ್ರಮುಖ ಅಂಗವಾದ ದೀಪಪ್ರದಾನವನ್ನು ಅಂತಿಮ ವರ್ಷದ ವಿದ್ಯಾರ್ಥಿಗಳು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಹಿರಿಯರ ಮುಖಾಂತರ ದೀಪವನ್ನು ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಸಂಗೀತ ಕಲಾವಿದರಾದ ಜಗದೀಶ್ ಪುತ್ತೂರು ಇವರು ದೇಶಭಕ್ತಿಗೀತೆ ಹಾಡಿದರು.
ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ವಹಿಸಿದ್ದರು. ವೇದಿಕೆಯಲ್ಲಿ , ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಶಿಧರ ಮಾರ್ಲ, ಪಿ.ಎ.ಸಿ.ಸದಸ್ಯ ಹಾಗೂ ರೈಲ್ವೆ ಇಲಾಖೆ ಭಾರತ ಸರಕಾರದ ಕೆ.ಬಿ. ಶ್ರೀನಿವಾಸ ರೆಡ್ಡಿ, ನವದೆಹಲಿ, ಬಾಪುಗೌಡ ಗೌಡ್ರು, ಉದ್ಯಮಿಗಳು ಹುಬ್ಬಳ್ಳಿ, ಸಂತೋಷ್ ಇಂಚಲ್, ಸಣ್ಣ ಕೈಗಾರಿಕಾ ಉದ್ಯಮಿಗಳು ಹುಬ್ಬಳ್ಳಿ, ಬೆಂಗಳೂರಿನ ಚೇರ್‌ಮಾನ್ ಜೇಸಿ ಕೋಚಿಂಗ್ ಸೆಂಟರ್, ಕಲ್ಲಪ್ಪ ವಿ. ಖಾನಗಾವಿ ಹಾಗೂ ಪದ್ಮಾವತಿ ಕಲ್ಲಪ್ಪ ವಿ ಖಾನಗಾವಿ ದಂಪತಿಗಳು, ಸರ್ವೋತ್ತಮ ಬಾಳಿಗಾ, ಮಾಲಕರು, ವಿಕ್ರಂ ಸ್ಟೀಲ್ಸ್ ಮಂಗಳೂರು, ಡಾ| ಜಗದೀಶ ವೈದ್ಯರು ಬೆಳಗಾವಿ, ದೇಸಾಯಿ ಗೌಡ್ರು ಪಾಟೀಲ್, ಗಂಡಪ್ಪ ಇನಾಮ್‌ದಾರ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಸ್ವಾಗತಿಸಿ, ಪರಿಚಯಿಸಿದರು. ವಿದ್ಯಾರ್ಥಿ ಚರಣ್ ವಂದಿಸಿ, ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.