ಒಂದು ಲಾರಿ ರಸ್ತೆ ಮಧ್ಯೆ ಟಯರ್ ಬ್ಲಾಸ್ಟ್ ಆಗಿ ನಿಂತರೆ ಏನು ಮಾಡಬೇಕು?
ಅದೂ ಹೆದ್ದಾರಿ ಮಧ್ಯದಲಿ..ಉರಿಬಿಸಿಲಿನ ಜೊತೆಯಲಿ
ಇಂಥ ಸನ್ನಿವೇಶಗಳು ನಮ್ಮ ಕಣ್ಣೆದುರು ಬಹಳವಾಗಿ ಕಾಡುತ್ತದೆ. ಹೆದ್ದಾರಿ ಮಧ್ಯೆ ಏನಾದರೂ ಲಾರಿಯೋ, ಬಸ್ಸೋ ಅಥವಾ ಬೈಕೋ ಹಾಗೆಯೇ ಬೋರಲು ಬಿದ್ದರೆ ನಾವು ಅದರ ಡ್ರೈವರನ್ನು ಶಪಿಸುತ್ತೇವೆ. ಕಣ್ಣು ಕಾಣುವುದಿಲ್ಲವಾ ನಿಮಗೆ ಎಂದು ಶಪಿಸುತ್ತೇವೆ. ಎಲ್ಲಿ ನಮ್ಮ ವಾಹನ ಹೋಗಲು ಜಾಗ ಸಿಗುತ್ತದೋ ಎಂದು ನೋಡುತ್ತೇವೆ. ಕೂದಲಿನಷ್ಟು ಜಾಗ ಸಿಕ್ಕರೂ ನುಗ್ಗಿಸಿ ಜಾಗ ಖಾಲಿ ಮಾಡುತ್ತೇವೆ. ಆದರೆ ಹಿಂದೆ ಹಿಂದೆ ವಾಹನಗಳ ಸಾಲು ನಿಲ್ಲಲು ಆರಂಭಿಸುತ್ತದೆ. ಅವುಗಳ ಒಳಗೆ ಕುಳಿತವರಿಗೆ ಏನಾಗುತ್ತಿದೆ ಎಂದು ಗೊತ್ತೂ ಆಗುವುದಿಲ್ಲ. ಎಲ್ಲರಿಗೂ ಧಾವಂತ. ಭಾರೀ ಅರ್ಜಂಟು.. ಹೀಗೆ ಅರ್ಜಂಟಿನ ಮನುಷ್ಯರು ಒಂದು ನಿಮಿಷವೂ ಪುರುಸೊತ್ತಿಲ್ಲದವರಂತೆ ಚಡಪಡಿಸುತ್ತಾರೆ. ಅದರಲ್ಲೂ ಬಸ್ಸುಗಳಿಗೆ ಒಂದೊಂದು ಸೆಕೆಂಡೂ ಅಮೃತವೇ. . ಹೀಗಾಗಿ ಇನ್ನೊಂದು ವಾಹನವನ್ನು ಒರಸಿಯಾದರೂ ಮುಂದೆ ಹೋಗಬೇಕು ಎಂದು ಬಯಸುತ್ತಾರೆ. ಆಗ ಬರುವ ಮಾತು ಒಂದೇ…
ಈ ಪೊಲೀಸರು ಎಲ್ಲಿ ಹೋಗಿದ್ದಾರೆ?
ಭಾರೀ ಪ್ರಭಾವಶಾಲಿಗಳು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಬೀಳುತ್ತಾರೆ. ಜನ ಸಾಮಾನ್ಯರೂ ಅಲ್ಲಿರುತ್ತಾರೆ. ಟ್ರಾಫಿಕ್ ಜಾಮ್ ಎಂಬುದು ಮನುಷ್ಯನ ತಾಳ್ಮೆಯ ಅಳತೆಗೋಲೂ ಆಗಿಬಿಡುತ್ತದೆ. ಇಂಥ ಸನ್ನಿವೇಶದಲ್ಲೇ ಪ್ರಭಾವಶಾಲಿಗಳೂ ಹೈಯರ್ ಆಫೀಸರ್ ಗಳಿಗೆ ದೂರವಾಣಿ ಕರೆ ಮಾಡಿ ಓ ಅಲ್ಲೊಂದು ಟ್ರಾಫಿಕ್ ಜಾಮ್ ಆಗಿದೆ. ನಾನೀಗ ಸಿಲುಕಿಕೊಂಡಿದ್ದೇನೆ. ಸ್ವಲ್ಪ ಯಾರಾದರೂ ಎಸ್ಸೈನೋ, ಪೇದೆಯನ್ನೋ ಬರಹೇಳಿ, ಟ್ರಾಫಿಕ್ ಕ್ಲಿಯರ್ ಮಾಡ್ಲಿಕ್ಕೆ ತಿಳಿಸಿ ಎಂದು ಫರ್ಮಾನು ಹೊರಡಿಸುತ್ತಾರೆ. ಆದರೆ ಅದೇ ಪ್ರಭಾವಶಾಲಿಗಳು ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇದೆ, ದಿನದ ಇಪ್ಪತ್ತನಾಲ್ಕು ತಾಸು ಕೆಲಸ ಮಾಡಿದರೂ ಮುಗಿಯದಷ್ಟು ಕೆಲಸ ಅವರಿಗಿದೆ ಎಂಬುದನ್ನು ಮರೆಯುತ್ತಾರೆ. ಸಿಬ್ಬಂದಿ ನೇಮಿಸಲು ಶಿಫಾರಸು ಮಾಡುವ ಬದಲು ಇರುವ ಸಿಬ್ಬಂದಿಯ ಬಳಿಯೇ ಕೆಲಸ ಮಾಡಿಸುವ ಪ್ರಭಾವವನ್ನು ದೊಡ್ಡವರು ಬೀರುತ್ತಾರೆ.
ಇನ್ನು ಕೆಲವರು ಟ್ರಾಫಿಕ್ ಜಾಮ್ ನ ಕಾರಣವೇನು ಎಂದು ನೋಡುತ್ತಾರೆ. ಮೊಬೈಲ್ ನಲ್ಲಿ ಫೊಟೋ ತೆಗೀತಾರೆ. ವಾಟ್ಸಾಪ್ ಗುಂಪುಗಳಿಗೆ ಹಾಕುತ್ತಾರೆ. ಒಂದಷ್ಟು ಕಮೆಂಟುಗಳು ಬರುತ್ತವೆ. ವ್ಯವಸ್ಥೆಗೆ ಹಿಡಿಶಾಪ ಹಾಕಲಾಗುತ್ತದೆ. ಭಾರತದಲ್ಲಿ ಮಾತ್ರ ಹೀಗೆ ಎಂಬ ವೇದಾಂತಗಳು ಮೆಸೇಜುರೂಪದಲ್ಲಿ ಬಂದು ಬೀಳುತ್ತವೆ. ಈಗಂತೂ ಹತ್ತಾರು ಸುದ್ದಿಮಾಧ್ಯಮಗಳು. ಟ್ರಾಫಿಕ್ ಜಾಮ್ ನಲ್ಲಿ ಕುಳಿತವರು ತಮ್ಮ ಸುದ್ದಿ ಮಾಧ್ಯಮ ಸ್ನೇಹಿತರಿಗೆ ಮಾಹಿತಿ ನೀಡುತ್ತಾರೆ. ಸ್ಕ್ರೋಲ್ ನಲ್ಲಿ ಬರುತ್ತದೆ ಬ್ರೇಕಿಂಗ್ ನ್ಯೂಸ್.
ಈಗ ವಿಷಯಕ್ಕೆ ಬರೋಣ.
ಬಿ.ಸಿ.ರೋಡಿನಲ್ಲೂ ಭಾನುವಾರ ಬೆಳಗ್ಗೆ ಸುಮಾರು ಮೂರುವರೆ ತಾಸು ಟ್ರಾಫಿಕ್ ಜಾಮ್ ಆಗಿತ್ತು. ಅದೂ ಹಳೇ ಟೋಲ್ ಗೇಟ್ ಬಳಿ (ಈಗ ಆ ಟೋಲ್ ಗೇಟ್ ಇಲ್ಲ). ರಾಷ್ಟ್ರೀಯ ಹೆದ್ದಾರಿ ೭೫ರ ಬಿ.ಸಿ.ರೋಡ್ ನ ಹೊಸ ಸೇತುವೆ ಎದುರು ಲಾರಿಯೊಂದು ಟಯರ್ ಬ್ಲಾಸ್ಟ್ ಆಗಿ ಅಲ್ಲೇ ಕುಸಿದು ಬಿದ್ದು ಆದ ಪರಿಣಾಮ ಇದು.
ಭಾನುವಾರ ಬೆಳಗ್ಗೆ ಕಬ್ಬಿಣದ ಸರಳುಗಳನ್ನು ಸಾಗಿಸುತ್ತಿದ್ದ ಲಾರಿಯೊಂದರ ಟಯರ್ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಸ್ಪೋಟಗೊಂಡು ದಿಢೀರನೆ ಕುಸಿಯಿತು. ಪರಿಣಾಮ, ಲಾರಿಯಲ್ಲಿದ್ದ ಸರಳುಗಳಲ್ಲಿ ಕೆಲವು ರಸ್ತೆಯಲ್ಲೇ ಉರುಳಿ ಬಿದ್ದವು. ಸಾಮಾನ್ಯವಾಗಿ ಹೀಗೇನಾದರೂ ಆದರೆ ಲಾರಿ ಮಾಲೀಕ, ಚಾಲಕರು ಅದರ ರಿಪೇರಿಗೆ ಹೊರಡುತ್ತಾರೆ. ಆದರೆ ಇಲ್ಲಿ ನಡೆದದ್ದೇ ಬೇರೆ. ಲಾರಿಯವರು ಅದನ್ನು ಹಾಗೆಯೇ ಬಿಟ್ಟು ಎಲ್ಲಿಗೋ ಹೋಗಿದ್ದರು.
ರಸ್ತೆಯಲ್ಲಿ ಸರಳು ಚೆಲ್ಲಿಬಿದ್ದ ಕಾರಣ ನಿಧಾನವಾಗಿ ಒಂದರ ಹಿಂದೆ ಮತ್ತೊಂದು ವಾಹನಗಳು ನಿಲ್ಲಲು ಆರಂಭಿಸಿದವು. ಬರಬರುತ್ತಾ ಎರಡೂ ಬದಿ ಸಾಲುಗಟ್ಟಿ ವಾಹನ ನಿಲ್ಲಲು ಆರಂಭಿಸಿದವು. ಸುದ್ದಿ ತಿಳಿದ ಬಂಟ್ವಾಳ ಟ್ರಾಫಿಕ್ ಎಸ್.ಐ. ಚಂದ್ರಶೇಖರಯ್ಯ ಮತ್ತು ಅವರ ಸಿಬ್ಬಂದಿ, ಕೂಡಲೇ ಕ್ರಮಕ್ಕೆ ಮುಂದಾದರು. ಜೆಸಿಬಿ ಸಹಿತ ವಿವಿಧ ಅಗತ್ಯ ಸಲಕರಣೆಗಳನ್ನು ತರಿಸಿ, ಲಾರಿ ತೆರವಿಗೆ ಮುಂದಾದರು.
ಹಲವು ಪ್ರಯತ್ನಗಳ ಬಳಿಕ ಜೆಸಿಬಿ ಯಂತ್ರಗಳ ನೆರವಿನಿಂದ ಲಾರಿಯನ್ನು ಬದಿಗೆ ಸರಿಸಲಾಯಿತು. ಮಧ್ಯಾಹ್ನ ೧೨.೪೫ರ ಬಳಿಕ ತೆರವು ಕಾರ್ಯಾಚರಣೆ ಒಂದು ಹಂತಕ್ಕೆ ಮುಗಿಯಿತು. ಅಷ್ಟಾಗಲೇ ವಾಹನದಟ್ಟಣೆ ಜಾಸ್ತಿ ಇತ್ತು. ಕೆಲವು ವಾಹನಗಳು ಹಳೇ ಸೇತುವೆಯಲ್ಲಿ ಓಡಾಡಲು ಆರಂಭಿಸಿದವು. ಅಲ್ಲೂ ಟ್ರಾಫಿಕ್ ಜಾಮ್ ಉಂಟಾಯಿತು.
ವಾಹನಗಳು ಸಾಲುಗಟ್ಟಿ ನಿಂತಾಗ ಒಂದರ ಹಿಂದೆ ನಿಲ್ಲಬೇಕೇ ಹೊರತು ಬಲಬದಿಯಲ್ಲಾಗಲೀ, ಎಡಬದಿಯಿಂದಾಗಲೀ ಓವರ್ ಟೇಕ್ ಮಾಡಿ ಮತ್ತಷ್ಟು ಸಮಸ್ಯೆಗೆ ತಂದೊಡ್ಡುವುದು ಸರಿಯಲ್ಲ. ಆದರೆ ಅಲ್ಲಿ ಹಾಗಾಗಲಿಲ್ಲ. ಎಲ್ಲೆಲ್ಲಿ ಜಾಗವಿದೆಯೋ ಅಲ್ಲಲ್ಲಿ ವಾಹನಗಳನ್ನು ನುಗ್ಗಿಸಿ ನಿಲ್ಲಿಸಲಾಯಿತು. ಎಲ್ಲಿಯವರೆಗೆ ಎಂದರೆ ಆಂಬುಲೆನ್ಸ್ ಗಳೂ ಟ್ರಾಫಿಕ್ ಜಾಮ್ ಗೆ ಸಿಲುಕಿ ಕೆಲಕಾಲ ತೊಂದರೆ ಅನುಭವಿಸಿದವು. ಕೊನೆಗೂ ಬಂಟ್ವಾಳ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ವಾಹನ ಸಂಚಾರವನ್ನ ತಹಬಂದಿಗೆ ತಂದರು.
ಬಿ.ಸಿ.ರೋಡಿನಲ್ಲಿ ಇಂದು ಸುಮಾರು ಮೂರುವರೆ ತಾಸು ವಾಹನ ದಟ್ಟಣೆ ಟ್ರಾಫಿಕ್ ಜಾಮ್ ಇತ್ತು. ಶಿಸ್ತಿನಲ್ಲಿ ವಾಹನ ಸವಾರರು ನಿಲ್ಲುತ್ತಿದ್ದರೆ ಇದು ಎರಡೂವರೆ ತಾಸಿನಲ್ಲೇ ಕ್ಲಿಯರ್ ಆಗುತ್ತಿತ್ತು. ಇಂಧನವೂ ಉಳಿತಾಯವಾಗುತ್ತಿತ್ತು.